ಅಹಂಕಾರ ಮೀರಿ ಅಮರರಾದ ಡಾ.ಪಿ.ಬಿ.ಶ್ರೀನಿವಾಸ್

author-ssreedhra-murthyಕೆಲವು ಗಾಯಕರು ಮಂದರದಲ್ಲಿ ಕಾಡುತ್ತಾರೆ, ಇನ್ನು ಕೆಲವರು ತಾರಕದಲ್ಲಿ.. ಅಪರೂಪದಲ್ಲಿ ಮಧ್ಯಮದಲ್ಲಿ ಮಿಂಚುವವರೂ ಇದ್ದಾರೆ. ಆದರೆ ಎಲ್ಲಾ ಸ್ಥಾಯಿಗಳಲ್ಲೂ ಮಧುರತೆಯ ಹೊಳೆಯನ್ನೇ ಹರಿಸಿದ ಅಪರೂಪದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‍. ಅವರ ಹಾಡನ್ನು ಕೇಳುತ್ತಿದ್ದಂತೆ ಮನಸ್ಸು ರಿಲ್ಯಾಕ್ಸ್ ಆಗಿ ಬಿಡುತ್ತಿತ್ತು. ಪಂಚೇದ್ರಿಯಗಳು ಅವರಿಗೆ ಶರಣಾಗಿ ಬಿಡುತ್ತಿದ್ದವು. ಭಾಷೆ ಮತ್ತು ಭಾವ ಸ್ಪಷ್ಟತೆ ಅವರ ದೊಡ್ಡ ಶಕ್ತಿ. ಅವರೇನು ಅಸಾಮಾನ್ಯರಾಗಿರಲಿಲ್ಲ. ಆದರೆ ತಮ್ಮ ಸಾಮಾನ್ಯತೆ ಅರಿವಿದ್ದಿದ್ದರಿಂದ ಅಸಾಮಾನ್ಯತೆಯ ಭಾವ ಮೂಡಿಸಿದರು. ಇದಕ್ಕಾಗಿಯೇ ಇಂದು ಮತ್ತೆ ಮತ್ತೆ ಪಿ.ಬಿ.ಎಸ್ ನಮ್ಮನ್ನು ಕಾಡುತ್ತಾರೆ.

ಪಿ.ಬಿ.ಎಸ್ ಅವರಿಗಿರುವ ಪದವಿಗಳ ಪಟ್ಟಿಯಲ್ಲಿ ಎಲ್.ಓ.ಎಲ್ ಕೂಡ ಸೇರಿದೆ. ಅದು ಯಾವ ವಿಶ್ವವಿದ್ಯಾಲಯವೂ ಕೊಟ್ಟ ಬಿರುದಲ್ಲ ‘ಲವ್ವರ್ ಆಫ್ ಲಾಂಗ್ವೇಜಸ್‍’ ಎಂದು ಅವರೇ ಕೊಟ್ಟುಕೊಂಡ ಬಿರುದು. ಎರಡೂವರೆ ಲಕ್ಷ ಕವಿತೆಗಳನ್ನು ಬರೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳತ್ತಿದ್ದ ಅವರೇನು ಬೆರಗು ಮೂಡಿಸುವ ಕವಿತೆಗಳನ್ನು ಬರೆದ ಪ್ರತಿಭಾವಂತರಾಗಿರಲಿಲ್ಲ. ವರ್ಣನಾತ್ಮಕ ನೆಲೆಯ ಬರವಣಿಗೆಯನ್ನು ಮಾಡುತ್ತಿದ್ದರು. ಈ ಮಿತಿ ಅವರಿಗೂ ಗೊತ್ತಿತ್ತು ಎನ್ನುವುದು ಮಹತ್ವದ ಸಂಗತಿ. ‘ಮಹಾತ್ಮರ ಬರವಣಿಗೆಗಳೇ ಉಳಿಯಲಿಲ್ಲ ನನ್ನದೇನು ಮಹಾ’ ಎನ್ನುತ್ತಿದ್ದ ಅವರಿಗೆ ಭ್ರಮೆಗಳಿರಲಿಲ್ಲ. ವಾಸ್ತವದ ಅರಿವಿನ ಸಾಹಿತ್ಯದ ಪ್ರೀತಿ ಅವರ ಗಾಯನಕ್ಕೆ ವಿಶೇಷ ಮೆರಗನ್ನು ನೀಡಿತು ಎನ್ನುವುದು ಗಮನಿಸಬೇಕಾದ ಸಂಗತಿ.  ಪುರಂದರ ದಾಸರ. ಕನಕ ದಾಸರ ಕೀರ್ತನೆಗಳನ್ನು ಅವರ ಕಂಠದಲ್ಲಿ ಕೇಳುವುದೇ ವಿಶೇಷ ಅನುಭೂತಿ. ‘ಇವಳು ಯಾರು ಬಲ್ಲೆಯೇನು’ ‘ಇಳಿದು ಬಾ ತಾಯೇ’ ‘ಜೈ ಭಾರತ ಜನನಿಯೇ’  ‘ಎಂಥಾ ಕಣ್ಣು ಎಂಥಾ ಕಣ್ಣು’  ‘ವೇದಾಂತಿ ಹೇಳಿದನು’ ಮೊದಲಾದ ಕವಿಗೀತೆಗಳನ್ನು ಅವರು ಭಾವಪೂರ್ಣವಾಗಿ ಹಾಡಿರುವುದನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ.

ಪಿ.ಬಿ.ಎಸ್ ಕನ್ನಡ ಮಾತ್ರವಲ್ಲ ಹಾಡಿದ ಹತ್ತು ಭಾಷೆಗಳಲ್ಲೂ ಇಂತಹ ಸಾಮರ್ಥ್ಯವನ್ನು ತೋರಿಸಿದ್ದಾರೆ. ಮಿರ್ಜಾ ಗಾಲಿಬ್‍ ಗಜಲ್‍ಗಳನ್ನು ಕೇಳುತ್ತಾ ಅವರು ಗಜಲ್ ಗಾಯನಕ್ಕೆ ಮಾತ್ರವಲ್ಲ ಬರಹಕ್ಕೂ ಒಲವನ್ನು ತೋರಿಸಿದರು. ಒಮ್ಮೆ ಜೆಮಿನಿ ಗಣೇಶನ್ ಅವರ ಜೊತೆ ದಕ್ಷಿಣ ಭಾರತ ಪ್ರವಾಸಕ್ಕೆ ಹೋಗಿದ್ದವರು ಹಿಂದಿರುಗುವಾಗ ಮುಂಬೈ ದೂರ ದರ್ಶನದ ನಿರ್ದೇಶಕರಾಗಿದ್ದ ಕೃಷ್ಣಮೂರ್ತಿಯವರು ಗಜಲ್ ಹಾಡುವಂತೆ ಸೂಚಿಸಿದ್ದರು. ಆದರೆ ದೂರದರ್ಶನದ ಅಧಿಕಾರಿಗಳು ತಾತ್ಸರ ತೋರಿಸಿದ್ದರು. ಆದರೆ ಪಿ.ಬಿ.ಎಸ್. ‘ಯಾರೋ ಮುಝೆ ಮಾಫ್ ಕರೋ ಮೈ ನಶೇ ಮೇ ಹೂಂ’ ಎಂದು  ಹಾಡಲು ಆರಂಭಿಸುತ್ತಿದ್ದಂತೆ ಅವರು ದಕ್ಷಿಣ ಭಾರತದವರು ಎಂದು ಹೇಳಲು ಸಾಧ್ಯವಿಲ್ಲದಂತಹ ಉಚ್ಚಾರಣೆ ಕೇಳಿ ಬೆರಗಾಗಿದ್ದರು. ಇದು ಪಿ.ಬಿ.ಎಸ್ ಅವರು ಸಾಧಿಸಿದ ಭಾಷಾ ಪರಿಣತಿಗೆ ಇದೊಂದು ಉದಾಹರಣೆ.

ಪಿ.ಬಿ.ಎಸ್ ಅವರದ್ದು ಸೃಜನಶೀಲತೆಗಿಂತಲೂ ಶಬ್ದ ಚಮತ್ಕಾರದಲ್ಲಿ ಮಿಂಚಿದ ಪ್ರತಿಭೆ. ತೆಲುಗಿನಲ್ಲಿ ಅವರು ರಚಿಸಿದ ‘ದಶಗೀತ ಸಂಗೀತ’ ಎನ್ನುವ ಕವನ ಸಂಕಲನದಲ್ಲಿ ಪ್ರತಿ ಸಾಲಿನ ಮೊದಲ ಪದಗಳನ್ನು ಕೂಡಿಸುತ್ತಾ ಹನ್ನೊಂದನೇ ಸಾಲನ್ನು ಪಡೆಯಬಹುದು. ಛಂದಸ್ಸಿನ ಕುರಿತು ಅವರಿಗೆ ವಿಶೇಷ ಆಸಕ್ತಿ. ಶ್ರೀನಿವಾಸ ವೃತ್ತ ಗಾಯತ್ರಿ ವೃತ್ತ ಎನ್ನುವ ಛಂದೋ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ‘ಭಾಗ್ಯಜ್ಯೋತಿ’ ಚಿತ್ರದಲ್ಲಿ ಅವರು ರಚಿಸಿ ವಾಣಿ ಜಯರಾಂ ಅವರೊಡನೆ ಹಾಡಿದ ‘ದಿವ್ಯ ಗಗನ ನಿವಾಸಿನಿ’ ಎನ್ನುವ ಗೀತೆ ಅವರಿಗೆ ಸಂಸ್ಕೃತದಲ್ಲಿಯೂ ಇದ್ದ ಪರಿಣತಿಗೆ ನಿದರ್ಶನ. ಅವರು ಸಂಶೋಧಿಸಿದ ಎಂದು ಹೇಳಿಕೊಳ್ಳುತ್ತಿದ್ದ ‘ನವನೀತ ಸುಮಸುಧಾ’ವನ್ನು ಹೊಸ ರಾಗ ಎನ್ನುವದಕ್ಕಿಂತ 40ನೇ ಮೇಳಕರ್ತ ರಾಗ ನವನೀತದ ಆರೋಹಣದಲ್ಲಿ ಶುದ್ದ ದೈವತ ಸೇರಿಸಿ ಮಾಡಿದ ಪ್ರಯೋಗ ಎನ್ನುವುದು ಸೂಕ್ತ ಆದರೆ ಈ ಸ್ವರವನ್ನು ಸೇರಿಸಿದ್ದು ರಾಗಕ್ಕೆ ಹೊಸ ವಿನ್ಯಾಸ ನೀಡಿತ್ತು.. ಇದರಂತೆ ಅವರ ‘ಡೈಮಂಡ್ ಕೀ’ ಪ್ರಯೋಗ ಕೂಡ ಕೇರಳಾದ ಸಿದ್ಧಾಂತಕಾರರು ಬಳಸುತ್ತಿದ್ದ ‘ಕಟಪಯಾದಿ’ ಅಕ್ಷರ ಸಂಖ್ಯಾ ಪದ್ದತಿಯ ಸುಧಾರಿತ ರೂಪ. ಇಂತಹ ಪ್ರಯೋಗಗಳು ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎನ್ನಿಸಿಕೊಳ್ಳದಿದ್ದರೂ ಅವರ ಗಾಯನಕ್ಕೆ ವಿಶೇಷ ಸಾಧ್ಯತೆಗಳನ್ನು ಕಲ್ಪಿಸಿತು. ಉದಾಹರಣೆಗೆ ‘ದಾರಿ ತಪ್ಪಿದ ಮಗ’ ಚಿತ್ರದ ‘ಕಣ್ಣಂಚಿನ  ಈ ಮಾತಲಿ’ ಗೀತೆ ಭೀಮ್‍ ಪಲಾಸ್ ರಾಗದಲ್ಲಿ ರೂಪಿತವಾಗಿದ್ದರೂ ಪಟದೀಪ್‍ ರಾಗದ ಕೈಕಯೀ ನಿಷಾದದ ಪ್ರಯೋಗವನ್ನು ಹೊಂದಿದೆ. ಈ ವಿಜಾತಿ ಸ್ವರವನ್ನು ಬಳಸಿ ಮಾಧುರ್ಯವನ್ನು ಉಳಿಸಿಕೊಂಡಿರುವುದು ಪಿ.ಬಿ.ಎಸ್ ಅವರು ಪ್ರಯೋಗಗಳಿಂದ ಪಡೆದ ಪರಿಣತಿಯಿಂದಲೇ. ‘ಕಸ್ತೂರಿ ನಿವಾಸ’ಚಿತ್ರದ ಸುಪ್ರಸಿದ್ಧ ‘ಆಡಿಸಿ ನೋಡು ಬೀಳಿಸಿ ನೋಡು’ ಗೀತೆಯಲ್ಲಿ ಸಿಂಧು ಭೈರವಿಯಲ್ಲಿ ಒಂದಲ್ಲ ಎರಡು ವಿಜಾತಿ ರಾಗಗಳು ಬಳಕೆಯಾಗಿವೆ. ಆದರೂ ಮಧುರತೆಯ ಮೆರಗು ಕೊಂಚವೂ ಕುಗ್ಗಿಲ್ಲ. ‘ಬಂಗಾರದ ಮನುಷ್ಯ’ಚಿತ್ರದ ‘ನಗುನಗುತಾ ನಲೀ ನಲೀ’ಗೀತೆ ಕೂಡ ಭೀಮ್ ಪಲಾಸ್‍ನಲ್ಲಿ ಆರಂಭವಾದರೂ ಹಲವು ರಾಗದಲ್ಲಿ ಸಂಚರಿಸುತ್ತದೆ. ಹೀಗೆ  ವಿಜಾತಿ ಸ್ವರ ಪ್ರಯೋಗ ಮಾಡುವುದರಲ್ಲಿ ಜಿ.ಕೆ.ವೆಂಕಟೇಶ್ ಸಿದ್ದ ಹಸ್ತರು. ಅವರ ಇಂತಹ ಪ್ರಯೋಗಗಳು ಸಾರ್ಥಕತೆಯನ್ನು ಪಡೆದಿದ್ದು ಪಿ.ಬಿ.ಎಸ್ ಗಾಯನದಲ್ಲೇ ಅದಕ್ಕಾಗಿ ಜಿ.ಕೆ.ವೆಂಕಟೇಶ್ ಹೇಳುತ್ತಿದ್ದರು ‘ಮೊದಲು ನನ್ನ ಜನ್ಮದಿನ (ಸೆಪ್ಟಂಬರ್ 21) ನಂತರ ಅವನದು(22) ಇಬ್ಬರದೂ ಒಂದೇ ದೇವರ ಹೆಸರೇ… ಹೀಗಾಗಿ ನಮ್ಮದು ಅಲೌಕಿಕ ಸಂಬಂಧ’

ಪಿ.ಬಿ.ಶ್ರೀನಿವಾಸ್ ಅವರ ಒಂದು ಗಜಲ್ ಹೀಗಿದೆ ‘ಚಾರ್ ದಿನ್‍ಕೀ ಜಿಂದಗಾನಿ/ಕ್ಯೋಂ ಕಿಸೀಸೆ ದುಷ್ಮನಿ/ದುಷ್ಮನಿ ಚಾಹೆ ಕರ್‍ಲೆ/ದುಷ್ಮನೀಸೆ ದುಷ್ಮನೀ’ ಅವರು ಯಾವುದೇ ಊರಿಗೆ ಹೋಗಿದ್ದರೂ ವಿದೇಶಕ್ಕೆ ಹೋದರೂ ಈ ರಚನೆಯನ್ನು ಸಹ ಪ್ರಯಾಣಿಕರಿಗೆ ವಿವರಿಸುತ್ತಿದ್ದರು. ಪ್ರೀತಿಯನ್ನು ಹರಡುವ ಅದಮ್ಯ ತುಡಿತ ಅವರ ವ್ಯಕ್ತಿತ್ವದಲ್ಲೇ ಇತ್ತು. ಗಾಯನ ಅದಕ್ಕೊಂದು ಮಾಧ್ಯಮವಾಯಿತು ಎನ್ನಬಹುದು. ‘ಬ್ರಹ್ಮನಿಗೆ ಮೊದಲು ಐದು ತಲೆಗಳಿದ್ದವಂತೆ ಐದನೇ ತಲೆ ಅಹಂಕಾರದಿಂದ ಕೂಡಿದ್ದರಿಂದ ಸೃಷ್ಟಿಯ ಕೆಲಸ ಸಾಧ್ಯವಾಗಲೇ ಇಲ್ಲ. ಅದನ್ನು ಶಿವ ಕತ್ತರಿಸಿದ ನಂತರವೇ ಸೃಷ್ಟಿ ಆರಂಭವಾಯಿತು’ ಎಂದಿದ್ದ ಪಿ.ಬಿ.ಎಸ್ ಅಹಂಕಾರ ಮೀರಿದ್ದಲಿಂದಲೇ ಅಮರರಾದರು.  ಅವರ ಜನ್ಮದಿನ(ಸೆಪ್ಟಂಬರ್ 22)ದ ಸಂದೇಶ ನನ್ನ ಮಟ್ಟಿಗೆ ಇದೇ!

Leave a Reply