ಭದ್ರತೆ, ಮಿಲಿಟರಿ ಕಾರ್ಯಾಚರಣೆಗಳ ಚರ್ಚೆಯ ನಡುವೊಂದು ಪ್ರಶ್ನೆ: ಇಂದಿರಾ ಯುಗದ ‘ರಾ’ ಗೂಢ ಕಾರ್ಯಾಚರಣೆಗಳ ವೈಭವವನ್ನು ಮೋದಿ ಸರ್ಕಾರ ಮರುಸ್ಥಾಪಿಸೀತಾ?

ರಾಮೇಶ್ವರನಾಥ ಕಾವೊ ನೇತೃತ್ವದಲ್ಲಿ ಶುರುವಾಗಿದ್ದು ಈ ‘ರಾ’…

ಡಿಜಿಟಲ್ ಕನ್ನಡ ವಿಶೇಷ:

ಇದೀಗ ಪಾಕಿಸ್ತಾನದ ನೆಲದಿಂದ ಏಳುವ ಉಗ್ರವಾದದ ದಾಳಿಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂಬುದರಿಂದ ಹಿಡಿದು, ಪಾಕಿಸ್ತಾನದೊಳಗೆ ನುಗ್ಗಿ ಗುರಿಬದ್ಧ ಕಾರ್ಯಾಚರಣೆಗಳನ್ನು ಮಾಡಬೇಕು ಎಂಬುವವರೆಗೆ ಹಲವು ಹಕ್ಕೊತ್ತಾಯಗಳು ಬರುತ್ತಿವೆ. ಇವೆರಡೂ ಕಾರ್ಯಕ್ಕೂ ಮೂಲವಾಗಿ ಬೇಕಿರುವುದು ಇಂಟಲಿಜೆನ್ಸ್. ಗುಪ್ತಚರ ಮಾಹಿತಿಗಳು. ಅವಿಲ್ಲದೇ ದಾಳಿಯನ್ನೂ ಮಾಡಲಾಗದು, ಆಗುವ ದಾಳಿಯನ್ನೂ ತಡೆಯಲಾಗದು. ದೇಶವೀಗ ಇಂಥದೊಂದು  ಸ್ಥಿತಿಯಲ್ಲಿರುವಾಗ ನಿನ್ನೆ (ಸೆ. 22)ಕ್ಕೆ ‘ರಾ’ (ರೀಸರ್ಚ್ ಆಂಡ್ ಅನಾಲಿಸಿಸ್ವಿಂಗ್) ತನ್ನ 48ನೇ ಸ್ಥಾಪನಾ ದಿನವನ್ನು ಆಚರಿಸಿಕೊಂಡಿತು. ಉಗ್ರವಾದ ಮತ್ತು ಅದನ್ನು ಎದುರಿಸುವಲ್ಲಿ ಬೇಕಾಗುವ ಮಿಲಿಟರಿ ಕಾರ್ಯತಂತ್ರ, ಕೊನೆಪಕ್ಷ ವಿಶ್ವವೇದಿಕೆಗಳಲ್ಲಿ ಮಾಹಿತಿಯುದ್ಧ ಮಾಡುವುದಕ್ಕಾದರೂ ಇಂಟೆಲಿಜೆನ್ಸ್ ತುಂಬ ಮಹತ್ವದ ಪಾತ್ರ ವಹಿಸುತ್ತಿರುವ ಸನ್ನಿವೇಶದಲ್ಲಿ, ಭಾರತದ ವಿದೇಶಿ ಗುಪ್ತಚರ ವಿಭಾಗ ‘ರಾ’ದ ವೈಭವದ ದಿನಗಳನ್ನು ನೆನಪಿಸಿಕೊಳ್ಳಲೇಬೇಕಾಗುತ್ತದೆ.

ರಾದಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರು ಸಂಪಾದಿಸಿರುವ ಆರ್ ಕೆ ಯಾದವ್, ದಿವಂಗತ ರಾಮನ್, ಸಂಸ್ಥೆಯನ್ನು ಮುನ್ನೆಡಸಿ ಈಗ ತಮ್ಮ ಅಮೂಲ್ಯ ಅಂಕಣಗಳ ಮೂಲಕ ಜ್ಞಾನ ನೀಡುತ್ತಿರುವ ವಿಕ್ರಂ ಸೂದ್ ಇಂಥವರೆಲ್ಲರ ಬರಹಗಳ ಮೂಲಕ ರಾ ಸಂಸ್ಥೆಯ ಚಿತ್ರಣ ನಮಗೆ ಸಿಗುತ್ತದೆ. ರಾಮನ್ ಅವರು ‘ಕಾವೊ ಬಾಯ್ಸ್ ಆಫ್ ಆರ್ ಅಂಡ್ ಎಡಬ್ಲ್ಯು’ ಅಂತ ಪುಸ್ತಕವನ್ನೇ ಬರೆದಿದ್ದಾರೆ. ಈ ಎಲ್ಲ ಮೂಲಗಳಿಂದ ನಾವು ಕಟ್ಟಿಕೊಳ್ಳಬಹುದಾದ ಚಿತ್ರಣಗಳು.

 • ರಾ ಸಂಸ್ಥೆ ಜತೆ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿರುವ ಹೆಸರು ರಾಮೇಶ್ವರನಾಥ ಕಾವೊ, ಆರ್ ಎನ್ ಕಾವೊ. 1968ರಲ್ಲಿ ಇವರ ನೇತೃತ್ವದಲ್ಲಿಯೇ ರಾ ಶುರುವಾಗಿದ್ದು. ಇದಕ್ಕೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಅನನ್ಯ ಬೆಂಬಲವಿತ್ತು. ಕಾವೊ ನೇರವಾಗಿ ಪ್ರಧಾನಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದರು (ಇದು ಎಲ್ಲ ಕಾಲದಲ್ಲೂ ಮುಂದುವರಿದಿದೆ). ಇಂಟಲಿಜೆನ್ಸ್ ಬ್ಯೂರೊದ 250 ಮಂದಿಯೊಂದಿಗೆ ರಾ ಪ್ರಾರಂಭವಾದಾಗ, ಉನ್ನತ ಪೊಲೀಸ್ ವಲಯದ ಹಲವರು ಕಾಲೆಳೆಯುವುದರಲ್ಲಿ ಮಗ್ನರಾಗಿದ್ದರಂತೆ. ಅವನ್ನೆಲ್ಲ ಮೀರಿ ರಾ ಬಲಪಡಿಸಿದ ಕಾವೊ ಸಾಧನೆ ಅಸಾಮಾನ್ಯ.
 • ಪಾಕಿಸ್ತಾನದ ವಿರುದ್ಧ ಭಾರತದ ಬಹುದೊಡ್ಡ ಸ್ಫೂರ್ತಿಗಾಥೆ ಬಾಂಗ್ಲಾ ವಿಮೋಚನೆ. ಆ ಯುದ್ಧದಲ್ಲಿ ಭಾರತಕ್ಕೆ ತೀರ ನಿಖರವಾಗಿ ಸಹಾಯ ಮಾಡಿದ್ದು ರಾ ಸಂಸ್ಥೆಯ ಗೂಢಚಾರಿಕೆ ಕೆಲಸಗಳು. ಬಂಡುಕೋರ ಮುಕ್ತಿವಾಹಿನಿಯನ್ನು ಪಾಕಿಸ್ತಾನದ ವಿರುದ್ಧ ನಿಲ್ಲಿಸುವುದಕ್ಕೆ ರಾದ ನೇಪಥ್ಯದ ಕೆಲಸಗಳೇ ಸಹಕರಿಸಿದವು. ಇಂಥ ಗುಪ್ತಚರ ಬಲವಿದ್ದಿದ್ದರಿಂದಲೇ ಅಮೆರಿಕ- ಚೀನಾಗಳು ನಮ್ಮ ಮೇಲೆ ನಿರ್ಣಾಯಕ ಒತ್ತಡ ಹೇರುವುದಕ್ಕೂ ಮುಂಚೆ ಯುದ್ಧ ಗೆದ್ದಾಗಿತ್ತು.
 • ಬಂಡುಕೋರ ಸಂತ್ರಸ್ತ ಸಿಕ್ಕಿಂ ರಾಜ್ಯವು ಭಾರತದೊಳಗೆ ವಿಲೀನವಾಗುವುದಕ್ಕೂ ರಾ ಪಾತ್ರ ಗುರುತರವಾಗಿತ್ತು.
 • ಅಮೆರಿಕದ ಸಿಐಎ, ಇಸ್ರೇಲಿನ ಮೊಸಾದ್ ಗಳಿಗೆ ಸರಿಸಮನಾಗಿ ರಾ ಬೆಳವಣಿಗೆಗೆ ಆಸರೆಯಾದ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲುವುದಾದರೆ, ಇದನ್ನು ಹಾಳುಗೆಡವಿದ ಅಪಖ್ಯಾತಿ 1977ರ ಮೊರಾರ್ಜಿ ನೇತೃತ್ವದ ಜನತಾ ಸರ್ಕಾರಕ್ಕೆ ಸಲ್ಲುತ್ತದೆ. ಇಂದಿರಾ ಇವೆಲ್ಲವನ್ನೂ ಸೃಷ್ಟಿಸಿರುವುದೇ ರಾಜಕೀಯ ವಿರೋಧಿಗಳನ್ನು ಹಣಿಯುವುದಕ್ಕೆ ಎಂಬ ಸಂಕುಚಿತ ಅರ್ಥಕ್ಕೆ ಶರಣಾದ ಮೊರಾರ್ಜಿ, ರಾ ರೆಕ್ಕೆಗಳನ್ನು ಕತ್ತರಿಸಿ, ವಿದೇಶಗಳಲ್ಲಿ ನಡೆಯುತ್ತಿದ್ದ ಹಲವು ರಹಸ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿಬಿಟ್ಟರು. ಕಾವೊ ರಾಜಿನಾಮೆ ಕೊಟ್ಟು ಹೊರನಡೆದಿದ್ದರು. ರಾದಲ್ಲಿ ಮತ್ತೆ ಪೊಲೀಸ್ ಲಾಬಿ ಚಿಗಿತುಕೊಂಡಿತ್ತು.
 • 1980ರಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದಾಗ ಕಾವೊ ಅವರ ಸಲಹೆಗಾರರಾದರು. ಆದರೆ ರಾ ಮಾತ್ರ ದಾಡಸಿ ನೇತೃತ್ವದಿಂದ ದೂರ ಉಳಿಯಿತು.
 • ಆದಾಗ್ಯೂ 1984ರಲ್ಲಿ ಸಿಯಾಚಿನ್ ನ ಸಾಲ್ತ್ರೂ ಕೊಂಡಿ ವಶಪಡಿಸಿಕೊಳ್ಳುವ ಪಾಕಿಸ್ತಾನದ ಕಾರ್ಯಾಚರಣೆ ಬಗ್ಗೆ ಮಿಲಿಟರಿಯನ್ನು ಎಚ್ಚರಿಸಿತು ರಾ. ಪರಿಣಾಮವಾಗಿ ಭಾರತೀಯ ವಾಯುಸೇನೆ ಕೈಗೊಂಡ ಆಪರೇಷನ್ ಮೇಘದೂತವು ಪಾಕಿಸ್ತಾನಿಯರನ್ನು ಹಿಂದೆ
  ಸರಿಯುವಂತೆ ಮಾಡಿತು.
 • ಪಾಕಿಸ್ತಾನಿ ನೆಲದಲ್ಲಿ ಗುರುತುಮರೆಸಿಕೊಂಡು ಕಾರ್ಯಾಚರಣೆ ಮಾಡಿದ ರವೀಂದ್ರ ಕೌಶಿಕ್ ವೀರಗಾಥೆ ಇಲ್ಲಿದೆ. ಹಾಗೆಯೇ, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭಾರತದಿಂದ ಕಳುಹಿಸಿದ್ದ ಕುರೇಶಿ ಎಂಬ ಏಜೆಂಟ್ ಅಲ್ಲಿ ಪಾಕ್ ಜತೆ ಕೈಜೋಡಿಸಿದ, ಅದನ್ನು ಪತ್ತೆ ಹಚ್ಚಿ ಭಾರತಕ್ಕೆ ಮರಳಿದಾಗಲೇ ಆತನನ್ನು ಬಂಧಿಸಿದ ಕತೆಗಳನ್ನೂ ರಾ ಹೊದ್ದುಕೊಂಡಿದೆ.
 • ನಂತರ ಬಂದವರಲ್ಲಿ ವಿಕ್ರಂ ಸೂದ್ ಅವರಂಥ ಅಗಾಧ ಜ್ಞಾನ- ವಿವೇಚನೆಯ ಮುಖ್ಯಸ್ಥರು ಬಿಟ್ಟರೆ, ಮತ್ತೆ ಗತವೈಭವ ಮರಳಲೇ ಇಲ್ಲ. 2004ರಲ್ಲಿ ರವೀಂದ್ರ ಸಿಂಗ್ ಎಂಬ ರಾ ದ ಉನ್ನತಾಧಿಕಾರಿ, ಹಲವು ಸೂಕ್ಷ್ಮಮಾಹಿತಿಗಳೊಂದಿಗೆ ಅಮೆರಿಕ ಸೇರಿಕೊಂಡ ಆಘಾತಕಾರಿ ವಿದ್ಯಮಾನ ನಡೆಯಿತು. ಇವತ್ತು ಪುಸ್ತಕ ಬರೆದುಕೊಂಡು ವಿವಾದ ಸೃಷ್ಟಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುವ ಎಎಸ್ ದೌಲತ್, ರಾ ಮುಖ್ಯಸ್ಥನಾಗಿ ಸಂಸ್ಥೆಯನ್ನು ಪಾತಾಳಕ್ಕೆ ನಡೆಸಿದ್ದಷ್ಟೇ ಹೆಚ್ಚುಗಾರಿಕೆ. ಕಂದಹಾರ್ ವಿಮಾನ ಪ್ರಕರಣದಲ್ಲಿ ಭಾರತ ದಿಕ್ಕೆಟ್ಟು ಕುಳಿತಿದ್ದು ಇದೇ ದೌಲತ್ ಮಹಾಶಯನ ಅವಧಿಯಲ್ಲೇ.
 • ಯುಪಿಎ ಸರ್ಕಾರವಂತೂ ಎಸ್ ಕೆ ತ್ರಿಪಾಠಿಯಂಥ ವ್ಯಕ್ತಿಗಳನ್ನು ರಾಜಕೀಯ ಸಂಪರ್ಕದ ಆಧಾರದ ಮೇಲೆ ನೇಮಿಸಿತು ಎಂದು ರಾ ದ ಮಾಜಿ ಅಧಿಕಾರಿ ಆರ್. ಕೆಯ ಯಾದವ್ ಅವರು ‘ಡೇಲಿಒ’ ಜಾಲತಾಣಕ್ಕೆ ಬರೆದ ಲೇಖನದಲ್ಲಿ ಆರೋಪಿಸಿದ್ದಾರೆ. ರಾದ ವಾಯುಯಾನ ಸಂಶೋಧನಾ ಕೇಂದ್ರದ ಹಗರಣವೊಂದರಲ್ಲಿ ಕಳಂಕಿತನಾಗಿರುವ ಈ ವ್ಯಕ್ತಿ, ಈಗ ಬಿಜೆಪಿ ಸೇರಿಕೊಂಡು, ರಾಜ್ಯಪಾಲ ಹುದ್ದೆಗೆ ಲಾಬಿ ಮಾಡುತ್ತಿದ್ದಾನೆ ಎಂದು ಅವರು ಬರೆದಿದ್ದಾರೆ.
 • 2015ರಲ್ಲಿ ಮೋದಿ ಸರ್ಕಾರ ರಾದ ಕಾರ್ಯದರ್ಶಿ ಆಗಿ ನೇಮಿಸಿರುವ ರಾಜಿಂದರ್ ಖನ್ನ ಸಾಮರ್ಥ್ಯದ ಬಗ್ಗೆ ಒಳ್ಳೆ ಮಾತುಗಳಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಆಯ್ಕೆ ಈ ವ್ಯಕ್ತಿ.

ರಾಜತಾಂತ್ರಿಕತೆಯಲ್ಲಿ ಭಾರತದ ನಡೆಗಳು ಪ್ರಖರವಾಗಿವೆ. ಗೂಢಚಾರಿಕೆ ವಿಷಯದಲ್ಲೂ ಸರ್ಕಾರ ಮರು ವಿನ್ಯಾಸದ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ ಎಂದು ನಂಬೋಣ.

Leave a Reply