9/11 ದಾಳಿ ಪ್ರಕರಣ: ಸೌದಿಗಳ ರಕ್ಷಣೆಗೆ ಬಂತು ಒಬಾಮಾ ವೆಟೊ ಅಧಿಕಾರ, ಗೊತ್ತೇ ಉಗ್ರವಾದದಲ್ಲಿ ಸೌದಿ ಪಾಲ್ಗೊಳ್ಳುವಿಕೆ ವಿವರ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಮೆರಿಕದ ಸಂಸತ್ತಿನಲ್ಲಿ 9/11 ದಾಳಿಗೆ ಸಂಬಂಧಿಸಿದಂತೆ ಒಂದು ಮಸೂದೆ ಮಂಡನೆಯಾಗುವ ಹಂತದಲ್ಲಿತ್ತು. ಆದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವೆಟೊ ಅಧಿಕಾರವನ್ನು ಬಳಸಿಕೊಂಡು ಈ ಮಸೂದೆಯನ್ನು ಅಸಿಂಧುಗೊಳಿಸಿದ್ದಾರೆ.

9/11ರ ದಾಳಿಯಲ್ಲಿ ಸೌದಿ ಅರೆಬಿಯಾ ಪ್ರಜೆಗಳ ಕೈವಾಡವಿತ್ತು ಎಂಬ ಶಂಕೆಗಳಿರುವುದರಿಂದ, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸುವುದಕ್ಕೆ ದಾಳಿ ಸಂತ್ರಸ್ತರಿಗೆ ಮಸೂದೆ ಅನುವು ಮಾಡಿಕೊಡುತ್ತಿತ್ತು. ಆದರೆ ತಮ್ಮ ವೆಟೊ ಚಲಾವಣೆಯಿಂದಾಗಿ ಒಬಾಮಾ ಈ ದಾಳಿಯಲ್ಲಿ ಭಾಗಿಯಾಗಿದ್ದ ಸೌದಿಗಳ ರಕ್ಷಣೆಗೆ ನಿಂತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.

ಅಂದಹಾಗೆ ಒಬಾಮಾ ಇದೇ ಮೊದಲ ಬಾರಿಗೆ ವಿಟೊ ಅಧಿಕಾರವನ್ನು ಬಳಸಿರುವುದು ಗಮನಾರ್ಹ. ಹಾಗಾದರೆ, ಒಬಾಮಾ ವೆಟೊ ಅಧಿಕಾರ ಬಳಸಿ ಈ ಮಸೂದೆ ತಡೆದಿರುವುದೇಕೆ? ಸೌದಿಗಳ ರಕ್ಷಣೆಗಾಗಿಯೇ ಈ ಮಸೂದೆ ತಡೆದರೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ.

ಇದಕ್ಕೆ ಒಬಾಮಾ ಸಮರ್ಥನೆ ಏನೆಂದರೆ- ನಾವು ಇಂಥದೊಂದು ಕಾಯ್ದೆ ಮಾಡಿದರೆ, ನಮ್ಮ ವಿರುದ್ಧವೂ ಬೇರೆಯವರು ಈ ನೀತಿ ಅನುಸರಿಸಿ ಸಂಕೀರ್ಣ ಸಮಸ್ಯೆಗಳು ಬರಬಹುದು ಎನ್ನುವಂಥದ್ದು. ಆದರೆ ಈ ಮಸೂದೆ ಸಿಂಧುವಾಗಿದ್ದೇ ಹೌದಾದರೆ ತಾವು ಅಮೆರಿಕದಲ್ಲಿ ಬಾಂಡ್ ಮೂಲಕ ಹೂಡಿಕೆಯನ್ನೆಲ್ಲ ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಸೌದಿ ರಾಜಮನೆತನ ಈ ಹಿಂದೆಯೇ ಹೆದರಿಸಿತ್ತು ಎಂಬುದು ಗಮನಾರ್ಹ.

‘9/11ರ ದಾಳಿಯ ಕರಾಳ ನೆನಪು ಎಂದಿಗೂ ಮಾಸುವುದಿಲ್ಲ. ನನ್ನ ಆಡಳಿತ ವರ್ಗವು ಈ ದಾಳಿಯ ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸುತ್ತಲೇ ಇರುತ್ತದೆ. ಅಲ್ಲದೆ ಅವರಿಗೆ ನ್ಯಾಯ ಒದಗಿಸುವ ಬಗ್ಗೆ ಹಾಗೂ ಮತ್ತೆ ಇಂತಹ ದಾಳಿಗಳು ನಡೆಯದಂತೆ ಎಚ್ಚರಿಕೆ ವಹಿಸಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಇದೇ ವೇಳೆ ಈ ಮಸೂದೆ ಮಂಡನೆಯಿಂದ ಅಮೆರಿಕವನ್ನು ಸಂಪೂರ್ಣವಾಗಿ ಉಗ್ರರ ದಾಳಿಯಿಂದ ರಕ್ಷಿಸಲಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಅಥವಾ ಇಂತಹ ದಾಳಿಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡಲಾಗುವುದು ಎಂಬ ಖಚಿತತೆ ಇಲ್ಲ. ಹೀಗಾಗಿ ಈ ಮಸೂದೆಯನ್ನು ತಡೆ ಹಿಡಿಯಲಾಗಿದೆ…’ ಇದು ಬರಾಕ್ ಒಬಾಮಾ ತಮ್ಮ ವಿಟೊ ಅಧಿಕಾರ ಬಳಕೆ ಮಾಡಿಕೊಂಡ ಸಂದರ್ಭದಲ್ಲಿ ನೀಡಿರುವ ವಿವರಣೆ.

9/11ರ ದಾಳಿಗೆ ವಿಮಾನ ಅಪಹರಣ ಮಾಡಿದ 19 ಅಪಹರಣಕಾರರಲ್ಲಿ 15 ಮಂದಿ ಸೌದಿ ಪ್ರಜೆಗಳಾಗಿದ್ದರು. ಈ ಉಗ್ರಕೃತ್ಯ ನಡೆಯುತ್ತಲೇ ಅಮೆರಿಕವು ಹೊರಜಗತ್ತಿನ ಪಾಲಿಗೆ ಮುಚ್ಚಿಕೊಂಡಿತಾದರೂ, ಅಮೆರಿಕ ನೆಲದಲ್ಲಿದ್ದ, ಮುಂದೆ ವಿಚಾರಣೆಗೆ ಅನುಕೂಲವಾಗಬಹುದಿದ್ದ ಹಲವು ಸೌದಿಗಳನ್ನು ರಾತ್ರೋರಾತ್ರಿ ಅವರ ದೇಶಕ್ಕೆ ಕಳುಹಿಸಿಕೊಡಲಾಯಿತು ಅನ್ನೋದು ಗುರುತರ ಆರೋಪ. ಹಾಗಂತ ಇದು ಯಾವ ನ್ಯಾಯಾಲಯದಲ್ಲೂ ಸಾಬೀತಾಗಿಲ್ಲ. ಸೌದಿ ವಿಚಾರಣೆಗೆ ಒಳಪಟ್ಟರೆ ತಾನೇ ಸಾಬೀತಾಗೋದು?

ಹೀಗೊಂದು ಪರಾರಿ ಪ್ರಕರಣಕ್ಕೆ ಆಗಿನ ಅಮೆರಿಕದ ಜಾರ್ಜ್ ಬುಷ್ ಆಡಳಿತ ಸಹಕರಿಸಿದ್ದಿರಬಹುದು ಅಂತ ಅನುಮಾನಿಸುವುದಕ್ಕೂ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಸೌದಿ ರಾಜಮನೆತನದೊಂದಿಗೆ ಬುಷ್ ಕುಟುಂಬ ಹೊಂದಿರುವ ಹಳೆಯ ಉದ್ಯಮ ಸಂಬಂಧ. ಜಾರ್ಜ್ ಬುಷ್ ಅಪ್ಪ ಎಚ್. ಡಬ್ಲ್ಯು. ಬುಷ್ 1971-73ರ ಅವಧಿಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿ ಆಗಿದ್ದರು. 1976-77ರಲ್ಲಿ ಗೂಢಚರ ಸಂಸ್ಥೆ ಸಿಐಎ ನೇತೃತ್ವ ವಹಿಸಿದ್ದರು. ಸೌದಿಗಳೊಂದಿಗೆ ಅಮೆರಿಕದ ಸಲ್ಲಾಪ ಶುರುವಾಗಿದ್ದು ಇದೇ ಸಂದರ್ಭದಲ್ಲಿ ಹಾಗೂ ಸಿಐಎ- ರಾಯಭಾರತ್ವದಂಥ ಅಂಶಗಳ ಮೂಲಕವೇ ಅದನ್ನು ಸಾಕಾರಗೊಳಿಸಿಕೊಳ್ಳಲಾಯಿತೆಂಬುದನ್ನು ಗಮನಿಸಬೇಕು. ನಂತರ ಸೌದಿಗಳ ಬೆಂಬಲದ ಹಾರ್ಕಿನ್ ಎನರ್ಜಿ ಕಂಪನಿಗೆ ಬುಷ್ ಒಬ್ಬ ಹೂಡಿಕೆದಾರರಾಗಿದ್ದರು.  ಕಾರ್ಲೈಲ್ ಗ್ರೂಪ್ ಎಂಬ ದೈತ್ಯ ಮ್ಯುಚುವಲ್ ಫಂಡ್ ಕಂಪನಿ ಪರವಾಗಿ ಜಾರ್ಜ್ ಬುಷ್ ಮತ್ತು ಅವರ ಸಹವರ್ತಿ ಮತ್ತು ಗೃಹಖಾತೆ ಸಚಿವರಾಗಿದ್ದ ಜೇಮ್ಸ್ ಬೇಕರ್, ಸೌದಿಯಲ್ಲಿ ಹಣ ಎತ್ತಿದ ಉದಾಹರಣೆಗಳಿವೆ. ನಿವೃತ್ತಿ ನಂತರ ಬುಷ್ ಇದರ ಸಲಹೆಗಾರರಾಗಿಯೂ ಇದ್ದಾರೆ. ಈ ಕಂಪನಿ ಉಗ್ರವಾದಿಗಳಿಗೆ ಹಣ ಹರಿಸಿದ ಶಂಕೆಯನ್ನು ಹೊದ್ದಿದೆ.

ಇಂಥ ಎಲ್ಲ ಸೂತ್ರಗಳನ್ನು ಹರವಿಟ್ಟು ಅಮೆರಿಕದ ವ್ಯಾನಿಟಿ ಫೇರ್ ನಿಯತಕಾಲಿಕವು ‘ಸೌದಿಗಳನ್ನು ರಕ್ಷಿಸಿದ್ದು ಹೇಗೆ’ ಎಂಬ ಬಗ್ಗೆ ತನಿಖಾ ವರದಿಯನ್ನೂ ಪ್ರಕಟಿಸಿತು.

ಈ ಕುರಿತ ಲೇಖನವನ್ನು ಇಲ್ಲಿ ಓದಬಹುದು.

Leave a Reply