ಸ್ವೀಡನ್ನಿನ `ಐಸಾರಾಮ’ ಹೋಟೆಲ್: ಆರ್ಕ್ ಟಿಕ್ ವೃತ್ತದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಧ್ರುವ ಕರಡಿಗಳು– ಎತ್ತಣಿಂದೆತ್ತ?

author-ananthramuಸ್ವೀಡನ್ನಿನ ಹೆಸರು ಕೇಳಿದರೆ ಸಾಕು ಥಟ್ಟನೆ ಕಣ್ಣಮುಂದೆ ಮೂಡುವುದು ನೊಬೆಲ್ ಪ್ರಶಸ್ತಿ ಸ್ಥಾಪಿಸಿದ ಆಲ್ಫ್ರೆಡ್ ನೊಬೆಲ್ ನ ಹೆಸರು. ವಿಜ್ಞಾನ ತಂತ್ರಜ್ಞಾನದಲ್ಲಿ ಈಗಲೂ ಸ್ವೀಡನ್ ಮುಂಚೂಣಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಅಮೆರಿಕದ ಹಕ್ಕು ವಿತರಣ ಸಂಸ್ಥೆಗೆ ಪೇಟೆಂಟ್ ಗೆಂದು 14,000 ಅರ್ಜಿಗಳು ಈ ದೇಶದಿಂದಲೇ ಬಂದಿದ್ದವು. ಆದರೆ ಈಗ ಸ್ವೀಡನ್ ಪ್ರಸ್ತಾಪ ಮಾಡುತ್ತಿರುವುದು ಈ ಕಾರಣಕ್ಕಲ್ಲ. ಐಷಾರಾಮ ಜೀವನಕ್ಕೆ ಇಂಬುಗೊಟ್ಟಂತೆ ಐಸ್ ನಲ್ಲೇ ಹೋಟೆಲ್ ನಿರ್ಮಾಣವನ್ನು ಮಾಡುತ್ತಿರುವ ಕಾರಣಕ್ಕಾಗಿ. ಚಳಿಗಾಲ ಬಂತೆಂದರೆ ಸಾಕು ಉತ್ತರ ಸ್ವೀಡನ್ನಿನ ಜುಕಾಸ್ ಜಾಸಿ ಹಳ್ಳಿಯ ಚಹರೆಯೇ ಬದಲಾಗುತ್ತದೆ. ಈ ಹಳ್ಳಿಗೆ ಹೊಂದಿಕೊಂಡಂತಿರುವ ಟೋರ್ನ್ ಎಂಬ ನದಿ ಸುಮಾರು 500 ಕಿಲೋ ಮೀಟರ್ ಉದ್ದಕ್ಕೂ ಹೆಪ್ಪುಗಟ್ಟಿಬಿಡುತ್ತದೆ, ಥೇಟ್ ನಮ್ಮ ಕಾಶ್ಮೀರದ ದಾಲ್ ಸರೋವರದಂತೆ.

ಇದೊಂದೇ ಸಾಕು ಇಡೀ ಹಳ್ಳಿಯ ಚಹರೆಯನ್ನು ಬದಲಾಯಿಸಲು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಳ್ಳಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರತಿ ಚಳಿಗಾಲದಲ್ಲಿ ಹೊಸತಾಗಿ ಹೋಟೆಲ್ ನಿರ್ಮಾಣ ನಡೆಯುತ್ತದೆ ಇಲ್ಲಿ. ನಿರ್ಮಾಣವೆಂದರೆ ಇಟ್ಟಿಗೆ, ಸಿಮೆಂಟು, ಕಬ್ಬಿಣವಲ್ಲ. ಮರ ಕೂಡ ಬಳಸುವುದಿಲ್ಲ. ನೆಲ, ಗೋಡೆ, ಚಾವಣಿ, ಬಾಗಿಲು, ಬಾರ್ ಮತ್ತು ಒಳಾಂಗಣದ ಚರ್ಚು ಕೂಡ ಸಂಪೂರ್ಣ ಹಿಮಗಡ್ಡೆಯಿಂದಲೇ ರೂಪಿತವಾಗುತ್ತದೆ. ನಮ್ಮ ಕರಾವಳಿಯ ಕರ್ನಾಟಕದ ಭಾಗದಲ್ಲಿ ಜಂಬಿಟ್ಟಿಗೆಯನ್ನು ಕೊಯ್ದಂತೆ ಆ ಜನ ಅಲ್ಲಿನ ಐಸ್ ನದಿಯನ್ನೇ ಕತ್ತರಿಸುತ್ತಾರೆ, ದೊಡ್ಡ ದೊಡ್ಡ ಬ್ಲಾಕ್ ಮಾಡಿ ತರುತ್ತಾರೆ. ಎಷ್ಟೆಂದರೆ ಪ್ರತಿವರ್ಷ ಕನಿಷ್ಟ 10,000 ಟನ್ನು ಹಿಮಗಡ್ಡೆ ಖರ್ಚು ಆಗುತ್ತದೆ. ಇದನ್ನು ಬಳಸಿ 6000 ಚದರ ಮೀಟರ್ ವಿಸ್ತೀರ್ಣದ ಭವ್ಯವಾದ ಹೋಟೆಲ್ ತಲೆ ಎತ್ತುತ್ತದೆ. ಇಲ್ಲಿನ ಬಾರ್‍ನಲ್ಲಿ ಬೀರ್ ಕುಡಿಯುವ ಮಗ್ ಕೂಡ ಹಿಮದ ಗಡ್ಡೆಯಿಂದಲೇ ಮಾಡಿದ್ದು. ಪ್ರತಿವರ್ಷ ಇಲ್ಲಿ ಹೊಸ ಶಿಲ್ಪಕಲೆಗೆ ಅವಕಾಶವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 50 ಮಂದಿ ಶಿಲ್ಪಿಗಳ ಆಯ್ಕೆಯಾಗುತ್ತದೆ. ಇವರು ಹೊಸ ಬಗೆಯ ಶಿಲ್ಪವನ್ನು ಹಿಮದ ಗಡ್ಡೆಗಳಲ್ಲೇ ಸೃಷ್ಟಿಸುತ್ತಾರೆ. ಒಂದು ವರ್ಷದಂತೆ ಮತ್ತೊಂದು ವರ್ಷದ ಶಿಲ್ಪ ಇರುವುದಿಲ್ಲ. ಅತಿಥಿಗಳು ಉಳಿದುಕೊಳ್ಳಲು ನೂರು ಕೊಠಡಿ, ಪಡಸಾಲೆ, ಸ್ವಾಗತ ಕೋರುವ ಹಾಲ್ ಎಲ್ಲವೂ ಹಿಮಗಡ್ಡೆಯ ಪ್ರಪಂಚವೇ. ಯಾವುದು ಒಡೆದು ಹೋದರೂ ಯೋಚನೆಯಿಲ್ಲ, ಹೊಸ ಹಿಮದಗಡ್ಡೆ ಆ ಜಾಗದಲ್ಲಿ ಬಂದು ಕೂರುತ್ತದೆ. ಮಂಚ, ಕೂಡಲು ಕುರ್ಚಿ ಅವೂ ಹಿಮಗಡ್ಡೆಯಿಂದಾದುವೆ.

1

1890ರಲ್ಲಿ ಜಪಾನ್ ನಿಂದ ಒಬ್ಬ ಶಿಲ್ಪಿ ಬಂದು ಎಸ್ಕಿಮೋಗಳು ವಾಸಕ್ಕೆ ಬಳಸುವ ಇಗ್ಲೂ ಮನೆಯಂತೆ ಒಂದು ಕಟ್ಟಡ ರಚಿಸಿದ. ಇದೇ ಮುಂದೆ ಐಸ್ ಹೋಟೆಲ್ ತೆರೆಯಲು ಹೊಸ ಐಡಿಯಾ ಕೊಟ್ಟದ್ದು. ಅದು ಕೋಟಿ ಕೋಟಿ ರೂಪಾಯಿಯ ಬೃಹತ್ ಯೋಜನೆಯಾಗಿ ಇಂದು ಸ್ವೀಡನ್ನಿನ ಭಂಡಾರ ತುಂಬುತ್ತಿದೆ. ಈ ಹಿಮಗಡ್ಡೆಯನ್ನು ಕರಗದೇ ಉಳಿಸಿಕೊಳ್ಳುವುದು ಹೇಗೆ? ಅದಕ್ಕೂ ಇಲ್ಲಿ ಉಪಾಯ ಕಂಡಿಕೊಂಡಿದ್ದಾರೆ. -5 ಡಿಗ್ರಿ ಸೆಂ. ಉಷ್ಣತೆಯಲ್ಲಿ ಇಡುವುದು. ಇದು ಅಲ್ಲಿ ಸುಲಭ. ಏಕೆಂದರೆ ಸೌರಶಕ್ತಿ 24 ಗಂಟೆಯೂ ಲಭ್ಯ. ಏಕೆಂದರೆ ಅಲ್ಲಿ ನಡುರಾತ್ರಿಯಲ್ಲೂ ಸೂರ್ಯ ಮುಳುಗುವುದಿಲ್ಲ. ಭೂಮಿಯ ಅಕ್ಷ 23.5 ಡಿಗ್ರಿ ವಾಲಿರುವುದರಿಂದ ಚಳಿಗಾಲದಲ್ಲಿ ಸೂರ್ಯ ದಿಗಂತದಲ್ಲೇ ಇರುತ್ತದೆ. ಆ ಶಕ್ತಿ ಬಳಸಿಕೊಂಡು ರೆಫ್ರಿಜಿರೇಟರ್ ಹೇಗೆ ಕೆಲಸಮಾಡುತ್ತದೋ ಹಾಗೆ ಇಡೀ ಕಟ್ಟಡವನ್ನೇ ಶೈತ್ಯಗೊಳಿಸಿ ಇಡುತ್ತಿದ್ದಾರೆ. ಭೌಗೋಳಿಕವಾದ ಈ ವಿಶೇಷವೇ ಐಸ್ ಹೋಟೆಲಿನ ಆಕರ್ಷಣೆ. ಮೋಜು ಮಾಡುವವರು ಹತ್ತಿರದ ಬೆಟ್ಟಗಳಿಗೆ ಹೋಗಿ ಸ್ಕೇಟಿಂಗ್ ಮಾಡಬಹುದು. ಕಲ್ಲು, ಮಣ್ಣು, ಸಸ್ಯಗಳೆಲ್ಲವೂ ತಮ್ಮ ಅಸ್ತಿತ್ವ ಕಳೆದುಕೊಂಡು ಜಾರುಬಂಡೆಯಾಗಿ ಬಿಡುತ್ತವೆ. ಮಂದ ಬೆಳಕಿದ್ದಾಗ ಧ್ರುವಪ್ರಭೆಯನ್ನು ಕಂಡು ಬದುಕು ಪಾವನವಾದಂತೆ ಯಾತ್ರಿಗಳು ಸಡಗರ ಪಡುವುದುಂಟು. ಧ್ರುವಪ್ರಭೆಯೆಂದರೆ ಅಂತರಿಕ್ಷದಿಂದ ತೂರಿಬರುವ ಎಲೆಕ್ಟ್ರಾನ್ ಸಮೂಹ ಧ್ರುವದ ಬಳಿ ಕೊಡೆಯಂತೆ ಬಾಗಿರುವ ಕಾಂತಗೋಳದ ಮೇಲೆ ಉರುಳಿ ಕಾಮನಬಿಲ್ಲಿನ ಬಣ್ಣವೆಲ್ಲವನ್ನೂ ಚೆಲ್ಲಿಬಿಡುತ್ತದೆ. ಇಡೀ ಗಗನವೇ ಓಕೋಳಿಯಾಡಿದಂತೆ. ಇದೂ ಕೂಡ ಅಲ್ಲಿನ ಆಕರ್ಷಣೆಯಲ್ಲಿ ಒಂದು.

ನಿಧಾನವಾಗಿ ವಸಂತ ಪ್ರವೇಶಿಸುತ್ತಲೇ ಮತ್ತೊಮ್ಮೆ ಇಡೀ ಭೂಮಿಯೇ ಬದಲಾದಂತೆ ಹಿಮದ ಹೊದಿಕೆ ಕರಗಿ, ಮೆಲ್ಲನೆ ನೀರಾಗಿ ನದಿಗೆ ಹರಿಯುತ್ತದೆ. ಆಗ ಐಸ್ ಹೋಟೆಲ್ ಕೂಡ ಕರಗಿ ಹೋಗಿಬಿಡುತ್ತದೆ. ಬರೀ ನೆನಪುಗಳನ್ನು ಉಳಿಸಿ. ಮತ್ತೆ ಮುಂದಿನ ವರ್ಷಕ್ಕೆ ಅದೇ ತಯಾರಿ. ಈಗ ಸ್ವೀಡನ್ ತನ್ನ ರಾಷ್ಟ್ರದ ಏಳು ಅದ್ಭುತಗಳಲ್ಲಿ ಐಸ್ ಹೋಟೆಲನ್ನೂ ಸೇರಿಸಿದೆ. ಡಿಸ್ಕವರಿ ಚಾನೆಲ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಈ ಐಸ್ ಹೋಟೆಲ್‍ಗೆ ಭರ್ಜರಿ ಪ್ರಚಾರ ಕೊಡುತ್ತಿವೆ.

*        *          *

ಇತ್ತ ಉತ್ತರ ಧ್ರುವದಲ್ಲಿ ಭಾರಿ ಬದಲಾವಣೆಗಳು ಎದುರಾಗಿವೆ. ಇದರ ತಕ್ಷಣದ ಪರಿಣಾಮ ತಟ್ಟಿರುವುದು ಹಿಮದ ಕರಡಿಗಳ ಮೇಲೆ. ಭೂಮಿಯಲ್ಲಿ ಉಷ್ಣತೆ ನಿಧಾನ ಗತಿಯಲ್ಲಿ ಏರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಿಮಗಡ್ಡೆಗಳೂ ಕರಗುತ್ತಿವೆ, ಅಂದರೆ ಹಿಮಕರಡಿಗಳ ಆವಾಸಕ್ಕೆ ಕುತ್ತುಬಂದಿದೆ. ಸುಮಾರು 60 ಲಕ್ಷ ವರ್ಷಗಳ ಹಿಂದೆ ಧ್ರುವಪ್ರದೇಶವನ್ನೇ ನೆಲೆಯಾಗಿಸಿಕೊಂಡ ಈ ಕರಡಿಗಳು ಈಗ ಅಳಿವಿನಂಚಿಗೆ ಸಾಗುತ್ತಿವೆ. ಅವು ಹೇಗೆ ಸಂತಾನ ಬೆಳೆಸುತ್ತವೆ? ಎತ್ತ ಹೋಗುತ್ತವೆ? ಅವುಗಳ ಆಹಾರದ ಪಾಡು? ಇವೆಲ್ಲವನ್ನೂ ಅಧ್ಯಯನ ಮಾಡಲೆಂದೇ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಈಗ ಉತ್ತರ ಧ್ರುವದಲ್ಲಿ ಕೆಲಸಮಾಡುತ್ತಿದೆ.

5

ಧ್ರುವಪ್ರದೇಶದಲ್ಲಿ ಜೌಗಿನಲ್ಲಿ ಕೊಳೆತ ಸಸ್ಯಗಳು, ದೊಡ್ಡ ಪ್ರಮಾಣದಲ್ಲಿ ಮೀಥೇನ್ ಸೂಸುತ್ತಿರುವುದೂ, ಅದರಿಂದಾಗಿ ಮತ್ತಷ್ಟು ಶಾಖ ಏರುತ್ತಿರುವುದು ಕಳವಳ ಸ್ಥಿತಿಗೆ ತಲಪಿದೆ. ಸದ್ಯದಲ್ಲಿ ಇಡೀ ಜಗತ್ತಿನಲ್ಲಿ ಅಂದರೆ ಆರ್ಟಿಕ್ ವೃತ್ತದ ಸುತ್ತಮುತ್ತ ಗರಿಷ್ಠ ಎಂದರೆ 26,000 ಹಿಮಕರಿಡಿಗಳಿವೆಯಂತೆ. ಮುಂದಿನ 35 ವರ್ಷಗಳಲ್ಲಿ ಇವುಗಳ ನೆಲೆ ಸಂಪೂರ್ಣವಾಗಿ ಮಾಯವಾಗಬಹುದು ಎಂಬ ಅಂದಾಜಿದೆ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ಹಿಮಕರಡಿಗಳಿಗೆ ಅದು ತಟ್ಟಿ ಪ್ರಜ್ಞೆ ತಪ್ಪುತ್ತಿವೆಯಂತೆ. ಇವುಗಳನ್ನು ಉಪಚರಿಸಲೆಂದೇ ವೈದ್ಯರು ಹೆಲಿಕಾಪ್ಟರಿನಲ್ಲಿ ಧಾವಿಸಿ ಈಗಲೂ ಬರುತ್ತಿದ್ದಾರೆ. ಅವುಗಳ ಚಲನವಲನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು `ಕ್ಯಾಮೆರಾ ಕಾಲರಿಂಗ್’ ಎಂಬ ತಂತ್ರ ಬಳಸುತ್ತಿದ್ದಾರೆ (ನಮ್ಮಲ್ಲಿ ಹುಲಿಗಳ ಚಲನವಲನದ ಮೇಲೆ ನಿಗಾ ಇಡಲು ರೇಡಿಯೋ ಕಾಲರಿಂಗ್ ಬಳಸಿದಂತೆ). ಆದರೆ ಇದೇನೂ ಸುಲಭದ ಕೆಲಸವಲ್ಲ.

ಆರ್ಟಿಕ್ ವೃತ್ತದ ತೀರ ಒಳಭಾಗದಲ್ಲಿ ಹೆಚ್ಚಿನ ಪಾಲು ಒಂಟಿಯಾಗಿ ಸಾಗುವುದೇ ಹಿಮಕರಡಿಗಳ ಪರಿ. ಒಂದೊಂದಕ್ಕೂ ಕ್ಯಾಮೆರಾ ಕಾಲರಿಂಗ್ ಮಾಡಬೇಕೆಂದರೆ ಸದ್ಯದಲ್ಲಿ 4,500 ಸಾವಿರ ಡಾಲರ್ ಖರ್ಚಾಗುತ್ತದೆಂದು ಅಂದಾಜು. `ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ ಸರ್ವೇಷನ್ ಆಫ್ ನೇಚರ್’ ಎಂಬ ಸಂಸ್ಥೆಯ ಈಗಿನ ಆದ್ಯತೆ ಹೇಗಾದರೂ ಮಾಡಿ ಹಿಮಕರಡಿಗಳ ಸಂತಾನ ವೃದ್ಧಿಸುವಂತೆ ಮಾಡುವುದು.

Leave a Reply