ಜಾರ್ಜ್ ಸಂಪುಟ ಸೇರ್ಪಡೆಗೆ ಮುಹೂರ್ತ ಫಿಕ್ಸ್, ಉರಿ ಪ್ರಕರಣ- ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿ ಸಮಾಲೋಚನೆ, ರೈತರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಭರವಸೆ, ಕಾವೇರಿ ವಿಚಾರದಲ್ಲಿ ಮೋದಿ ಮಧ್ಯಪ್ರವೇಶ- ದಿನೇಶ್ ವಿಶ್ವಾಸ

JD(S) rebel MLA's stage protest for Cauvery Verdict issue at Vishveshwarayya Statue,Vidhan Soudha in Bengaluru on Friday.

ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ನಿಂದ ಅಮಾನತುಗೊಂಡಿರುವ ಶಾಸಕರು ಶನಿವಾರ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿದರು..

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ಜಾರ್ಜ್ ಸಂಪುಟಕ್ಕೆ

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಕಳಂಕ ಹೊತ್ತಿದ್ದ ಮಾಜಿ ಸಚಿವ ಕೆ.ಜೆ ಜಾರ್ಜ್ ಈಗ ಮತ್ತೆ ರಾಜ್ಯ ಸಚಿವ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಸೆ.26 ರಂದು ಜಾರ್ಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಸೋಮವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಜಾರ್ಜ್ ಅವರಿಗೆ ಪ್ರಮಾಣ ವಚನ ಭೋದಿಸಲಿದ್ದಾರೆ.

ಮಂತ್ರಿಮಂಡಲದಲ್ಲಿ ಖಾಲಿ ಇರುವ ಒಂದು ಸ್ಥಾನವನ್ನು ಜಾರ್ಜ್ ಅವರಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಟ್ಟಿಗೆ ಸಮಾಲೋಚನೆ ನಡೆಸಿದರು. ಸಮಾಲೋಚನೆ ನಂತರ ಸೋಮವಾರವೇ ಸಂಪುಟವನ್ನು ವಿಸ್ತರಿಸಿ, ಖಾಲಿ ಇರುವ ಸ್ಥಾನವನ್ನು ತುಂಬುವ ನಿರ್ಧಾರ ಕೈಗೊಂಡಿದ್ದಲ್ಲದೆ, ರಾಜ್ಯಪಾಲರ ಸಮಯ ಅವಕಾಶ ಕೋರಿ ರಾಜಭವನಕ್ಕೆ ಪತ್ರ ರವಾನೆ ಮಾಡಿದರು.

ಉರಿ: ಕೇರಳದಲ್ಲಿ ಮೌನ ಮುರಿದಾರೆಯೇ ಪ್ರಧಾನಿ?

ಉರಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೇನಾಪಡೆಯ ಮೂರು ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

7 ಲೋಕಕಲ್ಯಾಣಮಾರ್ಗದ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಭೂಸೇನೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ನೌಕಾಸೇನೆ ಉಪ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹಾಗೂ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಹಾಜರಿದ್ದರು.

ಈ ಸಭೆ ಮುಗಿಸಿ ಪಕ್ಷದ ಕಾರ್ಯಕರ್ತರ ಸಭೆಗೆ ಕೇರಳದ ಕೊಯಿಕ್ಕೊಡಿಗೆ ಪ್ರಯಾಣಿಸಿದ್ದಾರೆ ಪ್ರಧಾನಿ. ಇಲ್ಲಿ ಅವರು ಉರಿ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ. ‘ಈ ಘಟನೆಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರಾದರೂ, ಸಾರ್ವಜನಿಕವಾಗಿ ಈ ಕುರಿತು ಏನನ್ನೂ ಮಾತನಾಡಿಲ್ಲ.

ಉಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು

  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ, ಮಂಡ್ಯದಲ್ಲಿ ನಡೆಯುತ್ತಿರುವ ಚಳುವಳಿಯನ್ನು ಕೈಬಿಡುವಂತೆ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಸಿಎಂ ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ.
  • ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಲು ಅವಕಾಶವಿದ್ದು, ಅವರು ಸಮಸ್ಯೆ ಬಗೆಹರಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್. ಕಾಂಗ್ರೆಸ್ ಕಚೇರಿಯಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಹಿ ಚಳುವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ, ರಾಜೀವ್‍ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್, ಹೆಚ್.ಡಿ.ದೇವೇಗೌಡ, ಅಟಲ್ ಬಿಹಾರ್ ವಾಜಪೇಯಿ, ಅಂತರರಾಜ್ಯ ನದಿ ನೀರು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಕರ್ನಾಟಕದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
  • ಅಮೆರಿಕದಲ್ಲಿ ಮತ್ತೆ ಶೂಟೌಟ್ ಸಂಭವಿಸಿದ್ದು, ಐವರನ್ನು ಬಲಿ ಪಡೆದಿದೆ. ಶುಕ್ರವಾರ ರಾತ್ರಿ ವಾಶಿಗ್ಟನ್ನಿನ ಮಾಲ್ ಒಂದರಲ್ಲಿ ಈ ಶೂಟೌಟ್ ನಡೆದಿದ್ದು, ನಾಲ್ವರು ಮಹಿಳೆಯರು ಹಾಗೂ ಒಬ್ಬ ಪುರುಷ ಸತ್ತಿದ್ದಾನೆ. ಶೂಟೌಟ್ ನಡೆದಾಗ ನಾಲ್ವರು ಮೃತಪಟ್ಟಿದ್ದು, ಆಸ್ಪತ್ರೆಗೆ ಸೇರಿಸಿದ ನಂತರ ಮತ್ತೊಬ್ಬ ಸತ್ತಿದ್ದಾನೆ. ಕೇವಲ ಒಬ್ಬ ವ್ಯಕ್ತಿ ಈ ದಾಳಿ ನಡೆಸಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Leave a Reply