ಪಾಕಿಸ್ತಾನ ಮತ್ತು ಭಾರತಗಳೆರಡರ ಜತೆಯೂ ಜಂಟಿ ಸಮರಾಭ್ಯಾಸ, ಸಮತೋಲನ ಸಾಧನೆಗೆ ರಷ್ಯದ ಸರ್ಕಸ್ಸು

 

(ಚಿತ್ರಕೃಪೆ- ಭಾರತೀಯ ಸೇನೆ ಟ್ವಿಟ್ಟರ್ ಖಾತೆ)

ಚೈತನ್ಯ ಹೆಗಡೆ

ಅಮೆರಿಕವನ್ನು ಆಲಂಗಿಸಿಕೊಳ್ಳುವ ಭರದಲ್ಲಿ ಭಾರತ ರಷ್ಯಾವನ್ನು ದೂರ ಮಾಡಿಕೊಳ್ಳುತ್ತಿದೆಯೇ ಎಂಬ ವಿಶ್ಲೇಷಣಾತ್ಮಕ ಲೇಖನದಲ್ಲಿ, ‘ಉರಿ ಘಟನೆ ಹಿನ್ನೆಲೆಯಲ್ಲಿ ರಷ್ಯವು ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ’ ಎಂದು ಬರೆಯಲಾಗಿತ್ತು. ಆಗಿನ ಲಭ್ಯ ಮಾಹಿತಿಗಳು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಆದ ವರದಿ ಹಿನ್ನೆಲೆಯಲ್ಲಿ ಬರೆದಿದ್ದಾಗಿತ್ತಿದು. ಆದರೆ ಈಗಿನ ಮಾಹಿತಿ ಪ್ರಕಾರ ರಷ್ಯ ಆ ಸಮರಾಭ್ಯಾಸವನ್ನು ರದ್ದುಗೊಳಿಸಿಲ್ಲ, ಬದಲಿಗೆ ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿಗದಿಗೊಳಿಸಿದ್ದ ಅಭ್ಯಾಸವನ್ನು, ಭಾರತದ ಆಕ್ಷೇಪಕ್ಕೆ ಮನ್ನಣೆ ನೀಡಿ, ಪಿಒಕೆ ಆಚೆಗಿನ ಹೆರಾತ್ ಪ್ರಾಂತ್ಯದಲ್ಲಿ ನಡೆಸುತ್ತಿದೆ.

ಉಳಿದಂತೆ ಲೇಖನದಲ್ಲಿ, ಭಾರತದಿಂದ ರಷ್ಯಾ ವಿಮುಖವಾಗಿ ಪಾಕಿಸ್ತಾನ-ಚೀನಾ ತೆಕ್ಕೆಗೆ ಸೇರಿದೆ ಎಂದುಕೊಳ್ಳುವುದು ಹೇಗೆ ತಪ್ಪಾಗುತ್ತದೆ ಹಾಗೂ ಭಾರತ-ರಷ್ಯಾ ಮಿತ್ರತ್ವದ ಮಿತಿಗಳೇನು ಎಂಬುದನ್ನು ವಿವರಿಸಲಾಗಿತ್ತು.

ಈ ಮಿಲಿಟರಿ ಅಭ್ಯಾಸದ ಸಂದರ್ಭದಲ್ಲೂ ರಷ್ಯಾ ಇದೇ ನಾಜೂಕುತನವನ್ನು ಮೆರೆದಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ನಡೆಸುತ್ತಿರುವುದು ಭಾರತದ ಪಾಲಿಗೆ ಆತಂಕದ ವಿದ್ಯಮಾನವೇ ಹೌದು. ಇದು ಭಾರತದ ವಿರುದ್ಧವಲ್ಲ, ಉಗ್ರ ನಿಗ್ರಹದ ಒಂದು ಭಾಗ ಎಂದೇ ವಿವರಿಸಲಾಗಿದೆಯಾದರೂ ಒಟ್ಟಾರೆ ಎದುರಾಗುವುದು ಈ ಹಿಂದಿನ ಲೇಖನದಲ್ಲಿ ಪ್ರತಿಪಾದಿಸಿದ ವಾಸ್ತವವೇ. ಅದೇನೆಂದರೆ, ರಕ್ಷಣಾ ವಹಿವಾಟಿನಲ್ಲಿ ಅಮೆರಿಕ-ಫ್ರಾನ್ಸ್ ಹೀಗೆ ವೈವಿಧ್ಯ ಮಾರುಕಟ್ಟೆಯನ್ನು ಭಾರತ ಅವಲಂಬಿಸುತ್ತಿರುವ ಹೊತ್ತಿನಲ್ಲಿ, ಪಾಕಿಸ್ತಾನದಲ್ಲಿ ಅಮೆರಿಕವು ಭಾಗಶಃ ಬರಿದುಮಾಡುತ್ತಿರುವ ಶಸ್ತ್ರ ಮಾರುಕಟ್ಟೆಯನ್ನು ರಷ್ಯ ತನ್ನದಾಗಿಸಿಕೊಳ್ಳುವುದಕ್ಕೆ ಸಹಜ ನಡೆ ಇಟ್ಟಿದೆ.

ಈ ಹಂತದಲ್ಲೂ ತಾನು ಭಾರತ ವಿರೋಧಿ ನೀತಿ ಅನುಸರಿಸಿದ್ದೇನೆಂದು ಜಗತ್ತು ಅರ್ಥಮಾಡಿಕೊಳ್ಳಬಾರದೆಂದೇ ರಷ್ಯಾ ಇಲ್ಲೂ ಟೈಮಿಂಗ್ ಒಂದನ್ನು ಸಾಧಿಸಿದೆ. ಅದೆಂದರೆ, ಅತ್ತ ಪಾಕಿಸ್ತಾನದೊಂದಿಗೆ ಮಿಲಿಟರಿ ಅಭ್ಯಾಸ ತೆರೆದುಕೊಳ್ಳುತ್ತಿದ್ದಂತೆಯೇ, ಶುಕ್ರವಾರ ರಷ್ಯಾದ ವ್ಲಾಡಿವೊಸ್ತೊಕ್ ನಲ್ಲಿ ಭಾರತ- ರಷ್ಯಾ ಸಮರಾಭ್ಯಾಸವೂ ತೆರೆದುಕೊಂಡಿದೆ! ಭಾರತ ಮತ್ತು ರಷ್ಯಾಗಳು 2003ರಿಂದ ಮಾಡಿಕೊಂಡು ಬಂದ ‘ಇಂದ್ರ 2016’ರ ಎಂಟನೇ ಅವತರಣಿಕೆ ಇದೇ ಸಂದರ್ಭದಲ್ಲಿ ನಡೆಯುತ್ತಿದೆ. ಅರ್ಥಾತ್, ರಷ್ಯಾವು ಭಾರತ ಮತ್ತು ಪಾಕಿಸ್ತಾನಗಳೆರಡರ ಜತೆಗೂ ಏಕಕಾಲದಲ್ಲಿ ಜಂಟಿ ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿದೆ.

ಭಾರತದ ಜತೆಗಿನ ಸಮರಾಭ್ಯಾಸ ಸಹ ವಿಶ್ವಸಂಸ್ಥೆ ಆಶಯಕ್ಕನುಗುಣವಾಗಿ, ಅರೆ ಪರ್ವತ ಪ್ರದೇಶಗಳಲ್ಲಿ ಉಗ್ರವಾದ ವಿರೋಧಿ ಕಾರ್ಯಾಚರಣೆಗೆ ತಾಲೀಮು ನಡೆಸುವುದಾಗಿದೆ. ಭಾರತದ ಕುಮಾಂವ್ ರೆಜಿಮೆಂಟಿನ 250 ಟ್ರೂಪ್ ಹಾಗೂ ಇಷ್ಟೇ ಸಂಖ್ಯೆಯಲ್ಲಿ ರಷ್ಯದ ಟ್ರೂಪ್ ಸೇರಿಕೊಂಡು 11 ದಿನ ಈ ಅಭ್ಯಾಸ ನಡೆಸುತ್ತಿವೆ.

ಭಾರತವು ರಷ್ಯಾದ ಸಾಂಪ್ರದಾಯಿಕ ಸ್ನೇಹಿತ. ಶೀತಲ ಯುದ್ಧದಲ್ಲಿ ಪಾಕಿಸ್ತಾನವು ರಷ್ಯಾದ ವಿರುದ್ಧವಿತ್ತು. ಅಲ್ಲದೇ ಇತ್ತೀಚಿನವರೆಗೂ ಪಾಕ್ ಅಮೆರಿಕದ ಸ್ನೇಹಿತನಾಗಿದ್ದರಿಂದ ರಷ್ಯದಿಂದ ದೂರವಿತ್ತು. ಇದೀಗ ಅಮೆರಿಕವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಸಹಾಯಧನ ಕಡಿತಗೊಳಿಸುತ್ತಲೇ, ರಷ್ಯ ತನ್ನ ಶಸ್ತ್ರಗಳನ್ನು ಮಾರುವುದಕ್ಕೆ ಪಾಕಿಸ್ತಾನದ ಮೇಲೆ ಅಕ್ಕರೆ ಮೆರೆದಿದೆ.

ರಷ್ಯದ ಈ ಸಮತೋಲನದ ಸರ್ಕಸ್ಸಿಗೆ ಅದರ ಮೇಲಿರುವ ಒತ್ತಡಗಳೇನು ಎಂಬುದನ್ನು ಈ ಹಳೆಯ ಲೇಖನ ವಿವರಿಸುತ್ತದೆ. ಓದಿ

Leave a Reply