ತಡೆಯಿಲ್ಲದ ಇಸ್ರೊ ಯಶೋಗಾಥೆ, ಭವಿಷ್ಯದ ಕುರಿತೂ ಭರವಸೆ ಗಟ್ಟಿ ಮಾಡಿದೆ ವಿದ್ಯಾರ್ಥಿಗಳ ಈ ಯಶೋಗಾಥೆ!

ಡಿಜಿಟಲ್ ಕನ್ನಡ ಟೀಮ್:

‘ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಇತಿಹಾಸ ಬರೆಯುತ್ತಲೇ ಸಾಗಿದ್ದಾರೆ. ಇವರ ಅನ್ವೇಷಕ ಉತ್ಸಾಹವು 125 ಕೋಟಿ ಭಾರತೀಯರಿಗೆ ಹೆಮ್ಮೆ ತಂದಿದೆಯಲ್ಲದೇ ವಿಶ್ವದಲ್ಲಿ ಭಾರತಕ್ಕೆ ಹೆಮ್ಮೆ ತಂದಿದೆ.’ ಇಸ್ರೊದ ಯಶಸ್ವಿ ಉಡ್ಡಯನವನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಹೀಗೆ ಟ್ವೀಟಿಸಿದ್ದಾರೆ.

ಸ್ಕಾಟ್ ಸ್ಯಾಟ್ ಎಂಬ ಮುಖ್ಯ ಉಪಗ್ರಹದ ಜತೆ ಪ್ರಯಾಣಿಸುತ್ತಿರುವ ವಿದೇಶಿ ಮತ್ತು ವಿದ್ಯಾರ್ಥಿ ಉಪಗ್ರಹಗಳ ಬಗ್ಗೆ ಅದಾಗಲೇ ಡಿಜಿಟಲ್ ಕನ್ನಡದ ಲೇಖನದಲ್ಲಿ ವಿವರಿಸಲಾಗಿದೆ. ಕಕ್ಷೆಗೆ ಸೇರಿಸುವಲ್ಲಿ ಅತಿ ಹೆಚ್ಚಿನ ಸಮಯ ತೆಗೆದುಕೊಂಡ, ಎರಡು ಕಕ್ಷೆಗಳಿಗೆ ಸೇರಿಸಬೇಕಾದ ಸವಾಲಿನ ಹಾದಿಯಲ್ಲಿ ಎಲ್ಲ 8 ಉಪಗ್ರಹಗಳೂ ಯಶಸ್ವಿಯಾಗಿ ಗಮ್ಯ ಸೇರಿರುವ ಸಂಭ್ರಮದ ಸಂದರ್ಭದಲ್ಲಿ, ಈ ಯಾನದಲ್ಲಿ ಪಾಲ್ಗೊಂಡ ಎರಡು ವಿದ್ಯಾರ್ಥಿ ಉಪಗ್ರಹಗಳ ಬಗ್ಗೆ ನಾವು ಗಮನಹರಿಸುವುದು ಉಚಿತ.

ಬೆಂಗಳೂರಿನ ಪಿಇಎಸ್ ಯುನಿವರ್ಸಿಟಿಯ ಪಿಸ್ಯಾಟ್ ಉಪಗ್ರಹ ಹಾಗೂ ಐಐಟಿ ಬಾಂಬೆಯ ಪ್ರಥಮ್ ಉಪಗ್ರಹ ಕಕ್ಷೆಗೇರಿವೆ. 5.25 ಕೆಜಿ ಪಿಸ್ಯಾಟ್ ಉಪಗ್ರಹವು ಭೂಮಿಯ ಚಿತ್ರಗಳನ್ನು ತೆಗೆಯುತ್ತದೆ. 10 ಕೆಜಿಯ ಪ್ರಥಮ್, ಎಲೆಕ್ಟ್ರಾನ್ ಗಳ ಸಂಖ್ಯೆ ಅಳೆಯುವುದಕ್ಕೆ ವಿನ್ಯಾಸಗೊಂಡಿದ್ದು, ಭಾರತದ ಜಾಗತಿಕ ನಕ್ಷಾ ವ್ಯವಸ್ಥೆ ಬಲಪಡಿಸುವುದಕ್ಕೆ ಹಾಗೂ ಸುನಾಮಿ ಎಚ್ಚರಿಕೆ ನೀಡುವುದಕ್ಕೆ ವಿದ್ಯಾರ್ಥಿಗಳು ಮಾಡಿರುವ ಪ್ರಯತ್ನವಿದು!

2008ರಲ್ಲೇ ಪ್ರಥಮ್ ಪರಿಕಲ್ಪನೆ ಅಂಕುರವಾಗಿ, ಐಐಟಿ ಬಾಂಬೆ ಇದರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿತ್ತು. ಸುಮಾರು ಏಳು ಬ್ಯಾಚುಗಳು ಇದರ ವಿನ್ಯಾಸದಲ್ಲಿ ಕೆಲಸ ಮಾಡಿವೆ. 1.5 ಕೋಟಿ ರುಪಾಯಿಗಳ ವೆಚ್ಚದಲ್ಲಿ ರೂಪುಗೊಂಡ ಯೋಜನೆಯನ್ನು ಪರಿಣತರು ಹೀಗೆ ವಿವರಿಸುತ್ತಾರೆ. ‘ಉಪಗ್ರಹಗಳಿಂದ ಭೂಮಿಗೆ ಕಳುಹಿಸಲಾಗುವ ಸಿಗ್ನಲ್ ಗಳು ವಾತಾವರಣದ ನೆಗೆಟಿವ್ ಪಾರ್ಟಿಕಲ್ ಗಳಾದ ಎಲೆಕ್ಟ್ರಾನ್ ಲೇಯರ್ ಗಳ ಜತೆ ಸಂವಹಿಸುತ್ತವೆ. ಸುನಾಮಿ ಏಳುವುದಕ್ಕೆ ಮುಂಚೆ ಅದಕ್ಕೆ ಕಾರಣವಾಗುವ ಭೂಕಂಪನ ಸಾಗರದಾಳದಲ್ಲಿ ಸಂಭವಿಸುತ್ತದಲ್ಲ… ಆಗ ಅತಿ ಸಾಂದ್ರವಾಗಿ ಏಳುವ ಗುರುತ್ವಾಕರ್ಷಣಾ ಅಲೆಗಳು ಎಲೆಕ್ಟ್ರಾನ್ ಗಳ ವರ್ತನೆಯನ್ನು ಪ್ರಭಾವಿಸುತ್ತವೆ. ಇದನ್ನು ಅಳೆದು ಸುನಾಮಿ ಮುನ್ನೆಚ್ಚರಿಕೆ ನೀಡುವ ಉಪಗ್ರಹವಾಗಿದೆ ಪ್ರಥಮ್.’ ಈ ಉಪಗ್ರಹದ ಸಂದೇಶಗಳ ನಿಯಂತ್ರಣ ಮತ್ತು ಅಧ್ಯಯನಕ್ಕೆ ಭಾರತದ ಅಥರ್ವ ಕಾಲೇಜ್, ಮಲಾಡ್ ಹಾಗೂ ಯುನಿವರ್ಸಿಟಿ ಕಾಲೇಜ್ ಲಂಡನ್, ಪ್ಯಾರಿಸ್ ನ ಭೂಮಿ ಭೌತ ಸಂಸ್ಥೆಗಳ ಜತೆ ಸಮನ್ವಯ ರೂಪಿಸಿಕೊಳ್ಳಲಾಗಿದೆ.

ಜಾಗತಿಕವಾಗಿ ಉಪಗ್ರಹ ಉಡ್ಡಯನಕ್ಕೆ ವ್ಯಾವಹಾರಿಕ ಲಾಭದ ಜಾಗವಾಗಿ ಬದಲಾಗಿರುವ ಭಾರತದ ಬಾಹ್ಯಾಕಾಶ ಭವಿಷ್ಯ ಉತ್ತಮವಾಗಿದೆ ಎಂಬ ಭರವಸೆ ಹುಟ್ಟುವುದು ಇಂಥ ಪ್ರಯತ್ನಗಳನ್ನು ನೋಡಿದಾಗಲೇ.

Leave a Reply