ಸಚಿವ ಸಂಪುಟಕ್ಕೆ ಜಾರ್ಜ್ ರಿಎಂಟ್ರಿ, ರಕ್ತ- ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ: ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ, ಕಿಸಾನ್ ಯಾತ್ರೆಯಲ್ಲಿ ರಾಹುಲ್ ಮೇಲೆ ಶೂ ಎಸೆತ, ಮಾರ್ಚ್ ವೇಳೆಗೆ ಸಾರಿಗೆ ಇಲಾಖೆಗೆ 6 ಸಾವಿರ ಹೊಸ ಬಸ್ಸುಗಳು ಸೇರ್ಪಡೆ

ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳಿಂದ ಕ್ಲೀನ್ ಚಿಟ್ ಪಡೆದ ನಂತರ ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿದ ಕಾಂಗ್ರೆಸ್ ನಾಯಕ ಕೆ.ಜೆ ಜಾರ್ಜ್ ಸೋಮವಾರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಉಪಸ್ಥಿತರಿದ್ದರು.

ಡಿಜಿಟಲ್ ಕನ್ನಡ ಟೀಮ್:

ಪ್ರತಿಪಕ್ಷಗಳ ವಿರೋಧದ ನಡುವೆಯೂ ಕೆ.ಜೆ.ಜಾರ್ಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ರಾಜಭವನದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಜಾರ್ಜ್ ಅವರಿಗೆ ಗೌಪ್ಯತ ಪ್ರತಿಜ್ಞಾವಿಧಿ ಭೋದಿಸಿದರು.

ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಜಾರ್ಜ್, ಸಿದ್ದರಾಮಯ್ಯ ಸಂಪುಟದಲ್ಲಿ ಎರಡನೇ ಭಾರಿಗೆ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇವರ ನೇಮಕಾತಿಯಿಂದ ರಾಜ್ಯ ಸಂಪುಟದ ಎಲ್ಲಾ ಸ್ಥಾನಗಳು ಭರ್ತಿಯಾಗಿವೆ. ಮುಂದಿನ ದಿನಗಳಲ್ಲಿ ಬೇರೆ ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಬೇಕಾದರೆ ಮತ್ತೊಬ್ಬರ ಸ್ಥಾನಕ್ಕೆ ಕುತ್ತು ಬರುವುದು ಖಚಿತ. ರಾಜ್ಯಪಾಲರ ಆದೇಶದಂತೆ ಸಚಿವರು, ಅಧಿಕಾರಿಗಳು ಸೇರಿದಂತೆ ಆಯ್ದ ನೂರು ಮಂದಿಗೆ ಮಾತ್ರ ರಾಜಭವನದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಡಿವೈಎಸ್ ಪಿ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಸಾವಿಗೆ ಸಚಿವರಾಗಿರುವ ಜಾರ್ಜ್, ಅಧಿಕಾರಿಗಳಾದ ಪ್ರಸಾದ್, ಮೊಹಂತಿ ಅವರೇ ಕಾರಣರು ಎಂದು ಆರೋಪಿಸಿ ಹೇಳಿಕೆ ನೀಡಿದ್ದರು. ಈ ಪ್ರಕರಣದಿಂದ ಜಾರ್ಜ್ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನ್ಯಾಯಾಲಯ, ಈ ಮೂವರ ವಿರುದ್ದ ಎಫ್ಐಆರ್ ದಾಖಲಿಸುವಂತೆ ಸೂಚನೆ ಬಂದಿತ್ತು. ಹೀಗೆ ಪ್ರಕರಣದಲ್ಲಿ ತಮ್ಮ ವಿರುದ್ಧ ತೀವ್ರವಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ನಂತರ ಪ್ರಕರಣದ ತನಿಖೆ ನಡೆಸಿದ ಸಿಐಡಿ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಮೂವರಿಗೆ ಕ್ಲೀನ್ ಚಿಟ್ ನೀಡಿದ್ದು, ಜಾರ್ಜ್ ಮತ್ತೆ ಸಂಪುಟ ಸೇರ್ಪಡೆಗೆ ಹಾದಿ ಕಲ್ಪಿಸಿತು.

ಈಗಲೂ ಜಾರ್ಜ್ ಅವರ ವಿರುದ್ಧ ಸರಿಯಾದ ರೀತಿಯಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಇದಾವುದಕ್ಕೂ ಕ್ಯಾರೆ ಅನ್ನದೇ ಜಾರ್ಜ್ ಅವರನ್ನು ಮಂತ್ರಿಸ್ಥಾನಕ್ಕೆ ತಂದು ಕೂರಿಸಿಯಾಗಿದೆ.

ರಾಜ್ಯ ಸಾರಿಗೆಗೆ 6 ಸಾವಿರ ಬಸ್ ಸೇರ್ಪಡೆ

ಮುಂದಿನ ವರ್ಷ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಹೊಸದಾಗಿ 6 ಸಾವಿರ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದಿದ್ದಾರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 340 ನೂತನ ವೇಗದೂತ ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಮಂತ್ರಿಗಳು, ‘ಇದೇ ಮೊದಲ ಬಾರಿಗೆ ಸಾಮಾನ್ಯ ಸಾರಿಗೆ ವಿಭಾಗದಲ್ಲಿ ಟಾಟಾ ಹಾಗೂ ಅಶೋಕ್ ಲೈಲ್ಯಾಂಡ್ ಬಸ್ ಗಳನ್ನು ಹೊರತುಪಡಿಸಿ ಐಷರ್ ಹಾಗೂ ಓಲ್ವೋ ಕಂಪೆನಿಯಿಂದ ಜಂಟಿಯಾಗಿ ನಿರ್ಮಿಸಿರುವ ಬಸ್ ಗಳನ್ನು ಖರೀದಿಸಲಾಗಿದೆ ಎಂದರು.

ಪ್ರತಿ ಬಸ್ಸಿಗೆ ₹ 19.2 ಲಕ್ಷ ವೆಚ್ಚವಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಕೆಎಸ್ಆರ್ ಟಿಸಿಗೆ 1594 ಬಸ್ ಗಳು ಸೇರ್ಪಡೆಯಾಗಲಿವೆ. ನಾಲ್ಕೂ ನಿಗಮಗಳಿಂದ ಒಟ್ಟು 6 ಸಾವಿರ ಹಳೆ ಬಸ್ ಗಳನ್ನು ಸ್ಕ್ರ್ಯಾಪಿಗೆ ಹಾಕಲಾಗುತ್ತಿದ್ದು, ಆ ಬಸ್ ಗಳ ಬದಲಿಗೆ ಈ ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತದೆ.

ಪಾಕಿಸ್ತಾನಕ್ಕೆ ಮತ್ತೆ ಬಿಸಿ ಮುಟ್ಟಿಸಿದ ಮೋದಿ

‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ…’ ಇಂತಹದೊಂದು ಕಠಿಣ ಹೇಳಿಕೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರ ದಾಳಿಯ ನಂತರ ಪಾಕಿಸ್ತಾನ ಜತೆಗೆ ಭಾರತ ನೀರು ಹಂಚಿಕೆ ವಿಷಯದಲ್ಲಿರುವ ಒಪ್ಪಂದ ತೆಗೆದು ಹಾಕಬೇಕು. ಆ ಮೂಲಕ ಪಾಕಿಸ್ತಾನಕ್ಕೆ ಭಾರತದ ಮಹತ್ವ ಅರಿವಾಗುವಂತೆ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಸಿಂಧು ನದಿ ನೀರು ಹಂಚಿಕೆ ಸಂಬಂಧ 1960ರಲ್ಲಿ ಉಭಯ ದೇಶಗಳ ನಡುವೆ ನಡೆದಿದ್ದ ಒಪ್ಪಂದದ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಪ್ರಧಾನಿ ಮುಖ್ಯಸ್ಥಿಕೆಯಲ್ಲಿ ನಡೆದ ಈ ಸಭೆಯಲ್ಲಿ ಪ್ರಧಾನಿ ಅವರ ಕಾರ್ಯದರ್ಶಿ ನ್ರಿಪೇಂದ್ರ ಮಿಶ್ರಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಭಾರತದ ಮೇಲೆ ದಾಳಿ ನಡೆಸುವ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಭಾರತ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಈ ಸಭೆಯಲ್ಲಿ ಸಿಂಧು ನದಿ ನೀರು ಹಂಚಿಕೆ ವಿಷಯದ ಜತೆಗೆ 2007 ರಲ್ಲಿ ಕೈಬಿಡಲಾಗಿದ್ದ ಟುಲ್ ಬುಲ್ ನೇವಿಗೇಷನ್ ಯೋಜನೆಯ ಮಹತ್ವದ ಬಗ್ಗೆಯು ಪ್ರಧಾನಿ ಚರ್ಚೆ ನಡೆಸಿದರು. ಈ ಎಲ್ಲ ಬೆಳವಣಿಗೆಗಳ ನಂತರ ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿ ನಿರ್ಣಯ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಇತ್ತ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಸಂವಿಧಾನಾತ್ಮಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಸದ್ಯ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಗಾಗಿ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದ್ದಾರೆ. ಸೋಮವಾರ ಕಿಸಾನ್ ಯಾತ್ರೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರ ಮೇಲೆ ಯುವಕನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿದ್ದಾನೆ. ಸೋಮವಾರ ಸೀತಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಕಾಟ್ ಪಂಚಾಯತ್ ಕಾರ್ಯಕ್ರಮದಲ್ಲಿ ಬಂದಿದ್ದ ಜನರು ಬಡಿದಾಡಿಕೊಂಡು ಮಂಚವನ್ನು ತಮ್ಮ ಮನೆಗೆ ಹೊತ್ತುಕೊಂಡು ಹೋಗಿದ್ದ ನಂತರ ಮತ್ತೆ ಇಂತಹ ಘಟನೆಯೊಂದು ನಡೆದಿದೆ. ಈ ಕೃತ್ಯ ಆರ್ಎಸ್ಎಸ್ ನವರೆ ನಡೆಸಿದ್ದಾರೆ ಎಂದು ಆರೋಪಿಸಿರುವ ರಾಹುಲ್, ‘ಎಷ್ಟು ಶೂ ಎಸೆಯಲು ಇಚ್ಛಿಸುತ್ತೀರೊ ಅಷ್ಟು ಎಸೆಯಿರಿ. ನಾನು ಹೆದರಿ ಹಿಂತಿರುಗಿ ಹೋಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
  • ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ವಿಷಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರ ನಡುವಣ ತಿಕ್ಕಾಟ ಬಿಜೆಪಿ ವರಿಷ್ಟರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಮಾಹಿತಿ ತರಿಸಿಕೊಂಡಿದ್ದಾರೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದ್ದಂತೆ ರಾಜ್ಯ ನಾಯಕರಲ್ಲಿ ಉದ್ಭವಿಸಿರೋ ಕಲಹವನ್ನು ಶಮನ ಮಾಡಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ರಾಮಲಾಲ್ ಅವರಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 3 ಮತ್ತು 4ರಂದು ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಣಿಯಲ್ಲಿ ಭಾಗವಹಿಸಲಿದ್ದು, ನಂತರ ಉಭಯ ನಾಯಕರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿಗಳು ಬಂದಿವೆ.
  • ‘ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ನೀರು ಬಿಡಲು ಸಾಧ್ಯವಾಗುವುದಿಲ್ಲ…’ ಇದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕರ್ನಾಟಕ ತನ್ನ ಪರಿಸ್ಥಿತಿಯನ್ನು ವಿವರಿಸಿದ ಮನವಿ ಮಾಡಿಕೊಂಡ ಪರಿ. ಇದರ ಪೂರ್ಣ ವರದಿಗೆ ಇಲ್ಲಿದೆ ನೋಡಿ.

Leave a Reply