
ಡಿಜಿಟಲ್ ಕನ್ನಡ ಟೀಮ್:
ಅಂತೂ ಇಂತೂ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆ ಒಂದೊಂದಾಗೆ ಈಡೇರುವ ಸೂಚನೆಗಳು ವ್ಯಕ್ತವಾಗುತ್ತಿದೆ. ಕೆಲ ವಾರಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಈಗ ಹಿರಿಯ ಅಧಿಕಾರಿಗಳ ಸಮಿತಿಯು ಪೊಲೀಸ್ ಸಿಬ್ಬಂದಿ ವೇತವನ್ನು ಶೇ.30 ರಿಂದ 35 ರಷ್ಟು ಹೆಚ್ಚಳ ಮಾಡಬೇಕು ಎಂಬ ಶಿಫಾರಸ್ಸನ್ನು ಸರ್ಕಾರದ ಮುಂದೆ ಇಟ್ಟಿದೆ.
ಈ ಶಿಫಾರಸ್ಸಿಗೆ ಸರ್ಕಾರದ ಅಂತಿಮ ಒಪ್ಪಿಗೆ ಬೀಳುತ್ತಿದ್ದಂತೆ ಪೊಲೀಸರ ಮಾಸಿಕ ವೇತನ ₹ 6500 ರೂ.ನಿಂದ ₹ 8500 ವರೆಗೂ ಹೆಚ್ಚಳವಾಗಲಿದೆ. ಕಳೆದ ಜೂನ್ ತಿಂಗಳಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ಪೊಲೀಸರು ಮುಷ್ಕರಕ್ಕೆ ಮುಂದಾಗಿದ್ದರು. ಆಗ ಬಿಗಿ ನಿಲುವು ತಾಳುವ ಮೂಲಕ ಸರ್ಕಾರ ಪೊಲೀಸರ ಪ್ರತಿಭಟನೆಗೆ ಬ್ರೇಕ್ ಹಾಕಿತ್ತು. ಈಗ ಎಚ್ಚೆತ್ತುಕೊಂಡಿರುವ ಸರ್ಕಾರ ಹಂತ ಹಂತವಾಗಿ ಅವರ ಬೇಡಿಕೆಗಳ ಈಡೇರಿಕೆಗೆ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಪೊಲೀಸ್ ಪೇದೆಯಿಂದ ಸುಪರಿಟೆಂಡೆಂಟ್ ಪೊಲೀಸ್ (ನಾನ್ ಐಪಿಎಸ್ ಎಸ್ಪಿ) ವರೆಗಿನ ಇತರ ವರ್ಗದ ಸಿಬ್ಬಂದಿಗಳಿಗೆ ಈ ವೇತನ ಹೆಚ್ಚಳ ಮಾಡುವಂತೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ ನೇತೃತ್ವದ ಸಮಿತಿ ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಈ ಶಿಫಾರಸ್ಸನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಹಣಕಾಸು ಇಲಾಖೆ ಅನುಮೋದನೆ ಪಡೆದು, ಜಾರಿಗೊಳಿಸಲಾಗುವುದು. ಈ ಶಿಫಾರಸ್ಸಿಗೆ ಒಪ್ಪಿಗೆ ನೀಡಿದರೆ ಪೇದೆಗಳಿಗೆ ಪ್ರಸ್ತುತ ದೊರೆಯುತ್ತಿರುವ ವೇತನ ಹಿರಿಯ ಪೇದೆಗಳ ವೇತನಕ್ಕೆ ಸಮನಾಗಿರುತ್ತದೆ. ಅಂದರೆ ಪ್ರಸ್ತುತ ಇವರಿಗೆ ಮಾಸಿಕ ವೇತನ ಹಾಗೂ ಸವಲತ್ತು ಸೇರಿ ₹ 19,606 ದೊರೆಯುತ್ತಿದೆ. ವೇತನ ಹೆಚ್ಚಳವಾದ್ರೆ ಪ್ರತಿಯೊಬ್ಬರಿಗೂ ₹ 25,350 ದೊರೆಯಲಿದೆ. ಪೇದೆಗಳಿಗಿಂತ ಕೆಳ ಹಂತದಲ್ಲಿ ದುಡಿಯುವ ಹಿಂಬದಿ ಪೊಲೀಸರಿಗೆ ಮಾಸಿಕ ₹ 17,616 ದಿಂದ ₹ 22,360 ಕ್ಕೆ ಹೆಚ್ಚಳವಾಗಲಿದೆ ಎಂದರು.
ಮೂಲ ಶ್ರೇಣಿಯಲ್ಲದೆ, ಇತರ ಸೌವಲತ್ತುಗಳಲ್ಲಿ ಫಿಟ್ನೆಸ್ ಗಾಗಿ ಮಾಸಿಕ ₹ 500, ವಿಶ್ರಾಂತಿ ಇಲ್ಲದೆ ಸತತ ಮೂರು ದಿನ ಕರ್ತವ್ಯ ನಿರ್ವಹಿಸಿದರೆ ₹ 2500, ಯುನಿಫಾರಂ ಅಲೆಯನ್ಸ್ ಅನ್ನು ₹ 100 ರಿಂದ ₹ 500 ಕ್ಕೆ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. ಪೊಲೀಸರ ವೇತನ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ವಾರ್ಷಿಕ ₹ 600 ಕೋಟಿ ಹೊರೆ ಬಿಳಲಿದೆ. ಇನ್ನು ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಿದರೆ ವಾರ್ಷಿಕ ₹ 875 ಕೋಟಿ ಹೆಚ್ಚಳವಾಗಲಿದೆ.