ಶುಭಾಶಯ ಹೊತ್ತು ಲಾಹೋರಿನಲ್ಲಿಳಿದಿದ್ದ ಪ್ರಧಾನಿ ಮೋದಿ ಶರತ್ತುರಹಿತ ಮಿತ್ರತ್ವಕ್ಕೆ ಸಿಕ್ಕಿದ್ದು ಪಠಾನ್ಕೋಟ್, ಉರಿ ದಾಳಿಗಳ ಉಡುಗೊರೆ- ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಸುಷ್ಮಾ ಪ್ರಹಾರ, ಭಾರತದ ಘನತೆಯ ಪ್ರಚಾರ

ಡಿಜಿಟಲ್ ಕನ್ನಡ ಟೀಮ್:

ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನಿರೀಕ್ಷೆಯಂತೆಯೇ ಪಾಕಿಸ್ತಾನಕ್ಕೆ ಭರ್ಜರಿ ತಿರುಗೇಟು ಕೊಟ್ಟರು.

ವಿಷಯ ಅದಲ್ಲ… ಹಾಗೆ ಪಾಕಿಸ್ತಾನಕ್ಕೆ ಪ್ರಹಾರ ನೀಡುವುದಕ್ಕೂ ಮುಂಚೆ ಕಟ್ಟಿದ ಮಾತಿನ ಅಡಿಪಾಯ,ಪಾಕಿಸ್ತಾನದ ಜತೆ ಭಾರತದ ಮಿತ್ರತ್ವ ಉದ್ದೇಶಗಳನ್ನು ವಿವರಿಸಿದ ರೀತಿ, ಪಾಕಿಸ್ತಾನವನ್ನು ಉಗ್ರವಾದಕ್ಕೆ ಸಮೀಕರಿಸಿದ ನಮೂನೆ, ಮಾನವ ಹಕ್ಕುಗಳ ಉಲ್ಲಂಘನೆ ವಿಷಯದಲ್ಲಿ ಭಾರತವನ್ನು ಗುರಿಯಾಗಿಸಲು ಪ್ರಯತ್ನಿಸಿದ್ದ ಪಾಕಿಸ್ತಾನಕ್ಕೆ ಬಿಟ್ಟ ತಿರುಗುಬಾಣ…. ಇವೆಲ್ಲ ಮತ್ತೆ ಮತ್ತೆ ಕೇಳಿ ಆನಂದಿಸುವಷ್ಟರಮಟ್ಟಿಗಿನ ಉತ್ಕೃಷ್ಟ ಮಾತಿನ ಮಾದರಿಯಾಗಿ ಹೋಯಿತು. ಸರಳ ಮಾತುಗಳಲ್ಲಿ ಕಟ್ಟಿಕೊಟ್ಟ ತಾರ್ಕಿಕ ವ್ಯಾಖ್ಯಾನ, ಭಾವೋದ್ರೇಕವೇನೂ ಇರದ, ಆದರೆ ಅದೇ ವೇಳೆ ಭಾವನೆಗಳನ್ನು ಮೀಟುವ ಸ್ಪಷ್ಟ ಧ್ವನಿಯ ಸುಷ್ಮಾ ವಾಗ್ಝರಿ ಅನನ್ಯವಾಗಿತ್ತು.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಭಾಷಣವನ್ನಿಡೀ ಕಾಶ್ಮೀರವೇ ಆವರಿಸಿಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಸುಷ್ಮಾ ಸ್ವರಾಜ್ ಏಕಾಏಕಿ ಪಾಕಿಸ್ತಾನದ ಮೇಲೆ ಮುಗಿಬೀಳಲಿಲ್ಲ… ಹಾಗಾಗಿಬಿಟ್ಟಿದ್ದರೆ, ಅವರಿಗೂ ನಮಗೂ ವ್ಯತ್ಯಾಸವೇನು ಅಲ್ಲವೇ?

ಹಾಗೆಂದೇ ವಿಶ್ವಸಂಸ್ಥೆಯ ಘನ ವೇದಿಕೆ ಮೇಲೆ ಮೊದಲಿಗೆ ಭಾರತವು ಎಂಥ ಜವಾಬ್ದಾರಿಯುತ ಜಾಗತಿಕ ಸದಸ್ಯ ಎಂಬುದನ್ನು ಸ್ಪಷ್ಟಪಡಿಸಿದರು. ಅದಕ್ಕೆ ಅವರು ಮೋದಿ ಸರ್ಕಾರದ ಈ ಎರಡು ವರ್ಷಗಳ ಯೋಜನೆಗಳನ್ನು ತುಂಬ ಚೆನ್ನಾಗಿ ಬಳಸಿಕೊಂಡರು. ಆರೋಗ್ಯ, ಸ್ವಚ್ಛತೆ, ಲಿಂಗ ಸಮಾನತೆ, ಪರಿಸರ ಕಾಳಜಿ ಇಂಥ ಮಾನವ ಕಲ್ಯಾಣ ವಿಷಯಗಳು ಜಗತ್ತಿನ ಚರ್ಚೆಯ ಮುಖ್ಯ ಅಂಶಗಳಾಗಿರುವಾಗ, ಭಾರತ ಆ ಎಲ್ಲ ಅಂಶಗಳ ಬಗ್ಗೆ ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂಬುದನ್ನು ಸುಷ್ಮಾ ಮೊದಲಿಗೆ ಮನದಟ್ಟು ಮಾಡಿಸಿದರು.

ಸ್ವಚ್ಛ ಭಾರತ ಯೋಜನೆ ಅಡಿ 2 ಲಕ್ಷ ಶಾಲೆಗಳಲ್ಲಿ 6 ಲಕ್ಷ ಶೌಚಾಲಯಗಳನ್ನುಕಟ್ಟಿಸಿರುವುದನ್ನು ಜಾಹೀರು ಮಾಡುತ್ತ, ಆ ಮೂಲಕ ಸ್ವಚ್ಛತೆ ಮತ್ತು ಶಿಕ್ಷಣ ಸುಧಾರಣೆ ಇವೆರಡಕ್ಕೂ ಭಾರತ ಹೇಗೆ ವಿಶ್ವದ ಜವಾಬ್ದಾರಿ ರಾಷ್ಟ್ರವಾಗಿ ಕಾರ್ಯೋನ್ಮುಖವಾಗಿದೆ ಎಂಬುದನ್ನು ಸೂಚಿಸಿದರು. ಭೇಟಿ ಬಚಾವ್- ಭೇಟಿ ಪಡಾವ್ ಯೋಜನೆಯನ್ನು ಜಗತ್ತಿನೆದುರು ಹರಡಿಟ್ಟಂತೆಯೂ ಆಯಿತು, ಆ ಮೂಲಕ ಲಿಂಗ ತಾರತಮ್ಯ ನಿವಾರಣೆಗೆ ಭಾರತ ಪ್ರಯತ್ನಿಸುತ್ತಿರುವ ಪರಿಯನ್ನೂ ಹೇಳಿದಂತಾಯಿತು.

ಇಂಗಾಲ ವಿಸರ್ಜನೆ ಕಡಿಮೆಗೊಳಿಸುವ ಪ್ಯಾರಿಸ್ ಒಪ್ಪಂದಕ್ಕೆ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದಾರಷ್ಟೆ. ಇದನ್ನೇ ವಿಶ್ವ ಸಮುದಾಯದೆದುರು ಹೇಳುತ್ತ, ‘ನಾವು ಈ ಒಪ್ಪಂದ ಪರವಾದ ನಿರ್ಣಯವನ್ನು ಅಕ್ಟೋಬರ್ 2ರಂಜು ತೆಗೆದುಕೊಳ್ಳುತ್ತೇವೆ. ಏಕೆಂದರೆ
ತನ್ನ ಜೀವನವನ್ನು ಪರಿಸರ ಪ್ರಜ್ಞೆಯಿಂದ ಕಳೆದ ಮಹಾತ್ಮನ ಜನ್ಮದಿನವದು’ ಎನ್ನುತ್ತ ಭಾರತವು ಎಂಥ ಘನ ಮೌಲ್ಯ ಪಾಲನೆಗೆ ಬದ್ಧವಾಗಿದೆಯೆಂಬುದನ್ನು ನಿರೂಪಿಸಿದರು.

ಇವೆಲ್ಲ ಮುಗಿಯುತ್ತಿದ್ದಂತೆ….. ತುಂಬ ಶಿಸ್ತುಬದ್ಧವಾಗಿ ಪಾಕಿಸ್ತಾನಕ್ಕೆ ಕ್ಲಾಸ್ ತೆಗೆದುಕೊಂಡರು. ಆ ಮಾತುಗಳನ್ನೂ ನ್ಯೂಯಾರ್ಕ್ ಮೂಲಕವೇ ಪ್ರಾರಂಭಿಸಿದರು.

ಅಧ್ಯಕ್ಷರೇ ಈ ನಗರದ ಮೇಲಾಗಿರುವ ಉಗ್ರದಾಳಿಯ ನೋವು ನಮಗೆ ಗೊತ್ತು. ಏಕೆಂದರೆ ನಾವು ಅನುಭವಿಸಿದವರೇ… ಎಂದು ಹೇಳುತ್ತ ಉಗ್ರವಾದದ ದಾಳಿಗಳನ್ನು ಪಟ್ಟಿ ಮಾಡುತ್ತ, ಪ್ಯಾರಿಸ್, ಇಸ್ತಾನಬುಲ್, ಪಠಾಣ್ಕೋಟ್, ಉರಿ… ಎನ್ನುತ್ತ ಭಾರತದ ಉಗ್ರ ಸಂತ್ರಸ್ತ ನೋವನ್ನು ಜಗತ್ತಿನ ಇತರ ರಾಷ್ಟ್ರಗಳ ನೋವಿಗೆ ಸಮೀಕರಿಸಿದರು ಸುಷ್ಮ ಸ್ವರಾಜ್. ಅಲ್ಲಿಂದಲೇ, ಉಗ್ರವಾದದ ವಿರುದ್ಧ ಯುದ್ಧ ಎಂದರೆ ಅದು ಭಾರತ ವರ್ಸಸ್ ಪಾಕಿಸ್ತಾನ ಎಂದು ಸುಮ್ಮನೇ ಕೂರಬೇಡಿ ಎಂಬ ಪರೋಕ್ಷ ಎಚ್ಚರಿಕೆ ಹಾಗೂ ವಿನಂತಿಯನ್ನು ಜಗತ್ತಿಗೆ ರವಾನಿಸಿದ್ದರಲ್ಲಿ ಸುಷ್ಮ ಸ್ವರಾಜ್ ಹಾಗೂ ಭಾರತದ ವಿದೇಶ ನಿಯೋಗದ ಜಾಣ್ಮೆಯ ನಡೆ ಇತ್ತು.

ಇಲ್ಲಿಂದ ಮುಂದೆ ವ್ಯಕ್ತವಾಗಿದ್ದೆಲ್ಲ ಉಗ್ರವಾದದ ವಿರುದ್ಧ ಮಾತು ಹಾಗೂ ಉಗ್ರವಾದದೊಂದಿಗೆ ಪಾಕಿಸ್ತಾನದ ನಂಟಿನ ವಿವರಣೆ. ‘ಆತಂಕವಾದಿಗಳಿಗೆ ಅವರದ್ದೇ ಆದ ಪ್ರದೇಶ, ಆಯುಧಾಗಾರಗಳೇನಿಲ್ಲ. ಹಾಗಾದರೆ ಇವರಿಗೆ ಶಸ್ತ್ರ- ಹಣ- ಸವಲತ್ತು ರೂಪಿಸುತ್ತಿರುವ ದೇಶ ಯಾವುದು? ಚಿಕ್ಕ-ಪುಟ್ಟ ಗುಂಪುಗಳಲ್ಲಿ ಶುರುವಾಗಿದ್ದ ಉಗ್ರವಾದ ಈಗ ರಾಕ್ಷಸ ರೂಪದಲ್ಲಿ ಬೆಳೆದಿರುವುದಕ್ಕೆ ಯಾರ ಬೆಂಬಲ ಇದೆ? ಈ ನಿಟ್ಟಿನಲ್ಲಿ ನಾವೆಲ್ಲ ಮತಭೇದ ಬಿಟ್ಟು ಒಟ್ಟಾಗಬೇಕಿದೆ. ಹಳೆ ಸಮಿಕರಣಗಳನ್ನು ಮುರಿಯಬೇಕು. ಉಗ್ರವಾದ ನಿಗ್ರಹಿಸುವುದಕ್ಕೆ ಯಾವ ದೇಶ ತಯಾರಾಗುವುದಿಲ್ಲವೋ ಅದನ್ನು ವಿಶ್ವ ಸಮುದಾಯದಿಂದ ದೂರವಾಗಿಸಬೇಕು. ವಿಶ್ವಸಂಸ್ಥೆಯ ಘೋಷಿತ ಉಗ್ರರ ಪಟ್ಟಿಯಲ್ಲಿರುವವರು ಯಾವ ದೇಶದಲ್ಲಿ ಮೆರವಣಿಗೆ- ಸಭೆ ಮಾಡಿಕೊಂಡಿದ್ದಾರೆಯೋ ಅಂಥ ದೇಶವನ್ನು ವಿಶ್ವ ಸಮುದಾಯ ಗುರಿಯಾಗಿಸಿಕೊಳ್ಳಬೇಕು’ ಎನ್ನುವ ಮೂಲಕ ಪಾಕಿಸ್ತಾನದ ವಿರುದ್ಧ ಜಾಗತಿಕ ಸಮುದಾಯ ಒಂದಾಗುವುದಕ್ಕೆ ಕರೆ ನೀಡಿದರು.

ಇವೆಲ್ಲ ಮುಗಿಸಿದ ನಂತರ, ಕೆಲವೇ ಖಡಕ್ ಮಾತುಗಳಲ್ಲಿ ಮೊನ್ನೆ ನವಾಜ್ ಷರೀಫ್ ಅರ್ಧತಾಸು ಒದರಿದ ಎಲ್ಲ ವಿಷಯಗಳನ್ನೂ ನಿವಾಳಿಸಿ ಒಗೆದರು ಸುಷ್ಮಾ.‘ಅಧ್ಯಕ್ಷರೇ.. ಇದೇ ವೇದಿಕೆಯಲ್ಲಿ ಪಾಕಿಸ್ತಾನದ ಪ್ರಧಾನಿ ನನ್ನ ದೇಶದ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಅವಕ್ಕೆ ಉತ್ತರ ಕೊಡಬೇಕಿದೆ. ಮೊದಲಿಗೆ ಹೇಳಬೇಕಿರುವ ವಿಷಯವೆಂದರೆ ಗಾಜಿನ ಮನೆಯಲ್ಲಿ ಕುಳಿತವರು ಬೇರೆಯವರತ್ತ ಕಲ್ಲೆಸೆಯಬಾರದು! ಮಾನವ ಹಕ್ಕುಗಳ ವಿಷಯದಲ್ಲಿ ಭಾರತವನ್ನು ದೂರುತ್ತಿರುವ ಪಾಕಿಸ್ತಾನದ ಬಲೊಚಿಸ್ತಾನದಲ್ಲಿ ಆಗುತ್ತಿರುವುದೇನು?’ ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನದ ದೌರ್ಬಲ್ಯದ ಮೇಲೆ ಜಾಗತಿಕ ಮಟ್ಟದಲ್ಲಿ ಅಧಿಕೃತ ಪ್ರಹಾರ ನೀಡಿದರು ಸುಷ್ಮ.

ಭಾರತದ ಜತೆ ಮಾತುಕತೆಗೆ ಸಿದ್ಧ, ಆದರೆ ಭಾರತವೇ ಶರತ್ತು ವಿಧಿಸುತ್ತಿದೆ ಎಂಬ ಪಾಕಿಸ್ತಾನದ ಸೋಗಿಗೆ ಬಿತ್ತೊಂದು ಬಲವಾದ ಹೊಡೆತ. ‘ಪಾಕಿಸ್ತಾನ ಯಾವ ಶರತ್ತಿನ ಬಗ್ಗೆ ಮಾತನಾಡುತ್ತಿದೆ? ಈ ಸರ್ಕಾರದ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಪಾಕಿಸ್ತಾನವನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದೆವಲ್ಲ… ಅದಕ್ಕೇನು ಶರತ್ತು ವಿಧಿಸಿದ್ದೆವೇ? ನಾನೂ ಪಾಕಿಸ್ತಾನಕ್ಕೆ ಭೇಟಿ ನೀಡಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದೆ. ಅಲ್ಲಿ ಯಾವ
ಶರತ್ತಿತ್ತು? ಪ್ರಧಾನಿ ಮೋದಿ ಲಾಹೋರಿನಲ್ಲಿಳಿದು ನವಾಜ್ ಹುಟ್ಟಿದ ದಿನಕ್ಕೆ ಶುಭ ಕೋರಿದಾಗ ಯಾವ ಶರತ್ತಿತ್ತು? ಭಾರತ ಯಾವತ್ತೂ ಮಿತ್ರತ್ವದ ಆಧಾರದ ಮೇಲೆಯೇ ಪಾಕಿಸ್ತಾನದ ಜತೆ ವ್ಯವಹರಿಸಿದೆ. ಆದರೆ ಈ 2 ವರ್ಷಗಳಲ್ಲಿ ನಮಗೆ ಪ್ರತಿಯಾಗಿ ಸಿಕ್ಕಿದ್ದೇನು?
ಪಠಾಣ್ಕೋಟ್, ಉರಿ ಮತ್ತು ಬಹಾದ್ದೂರ್ ಅಲಿ.. ಪಾಕಿಸ್ತಾನದಿಂದ ಗಡಿ ದಾಟಿ ಬಂದು ಉಗ್ರಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹವಣಿಸಿದ್ದ ಬಹಾದ್ದೂರ್ ಅಲಿ ಜೀವಂತ ಸಾಕ್ಷ್ಯವಾಗಿ ನಮ್ಮ ಬಳಿ ಲಭ್ಯ.’ ಎಂದು ಪಾಕಿಸ್ತಾನವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ್ದಲ್ಲದೇ ಇಲ್ಲೂ ಭಾರತದ ನೈತಿಕ ಮೇಲುಗಾರಿಕೆ ಮೆರೆಯುವುದರಲ್ಲಿ ಸುಷ್ಮ ಸ್ವರಾಜ್ ಯಶಸ್ವಿಯಾದರು.

ಕೊನೆ ಹೊಡೆತ ಭಾರತೀಯರಿಗೆ ಕರ್ಣಾನಂದಕರವಾಗಿತ್ತು. ‘ಈ ಎಲ್ಲ ದುಸ್ಸಾಹಸಗಳ ಮೂಲಕ ಭಾರತದ ಭಾಗವನ್ನು ಪಾಕಿಸ್ತಾನ ಪಡೆಯುವ ಆಸೆ ಎಂದಿಗೂ ಫಲಿಸದು. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಎಂದಿಗೂ ಹಾಗೆಯೇ ಉಳಿಯುತ್ತದೆ..’

Leave a Reply