ಪಾಕಿಸ್ತಾನಕ್ಕೆ ಆಪ್ತ ದೇಶವೆಂಬ ಪಟ್ಟ ರದ್ದು? ಗಡಿಯುದ್ದಕ್ಕೂ ಭದ್ರತೆಗೆ ಇನ್ನಷ್ಟು ಒತ್ತು…

ಡಿಜಿಟಲ್ ಕನ್ನಡ ಟೀಮ್:

ಉರಿಯ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರ ದಾಳಿಯ ನಂತರ ಭಾರತವು ಪಾಕಿಸ್ತಾನ ವಿರುದ್ಧ ಹಲವು ಕ್ರಮ ಕೈಗೊಳ್ಳುವತ್ತ ಗಂಭೀರ ಚಿಂತನೆ ನಡೆಸಿದೆ. ಪಾಕಿಸ್ತಾನವನ್ನು ಧಿಕ್ಕರಿಸುವ ನಿರ್ಧಾರಗಳ ಪೈಕಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದ ಬಗ್ಗೆ ಸಭೆ ನಡೆಸಿದ್ದು, ಪಾಕಿಸ್ತಾನ ಹೆಚ್ಚು ಆಪ್ತ ದೇಶ ಎಂಬ ಸ್ಥಾನಮಾನ ತೆಗೆದುಹಾಕುವ ಬಗ್ಗೆ ವಿಮರ್ಶೆ ನಡೆಸಲು ಮಂಗಳವಾರ ಉನ್ನತ ಮಟ್ಟದ ಸಭೆ ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳ ಜತೆಗೆ ಭಾರತ ಮತ್ತು ಪಾಕಿಸ್ತಾನ ಗಡಿ ವಿಭಾಗದಲ್ಲೂ ಹಲವು ಬದಲಾವಣೆಗಳಾಗುವ ಸೂಚನೆಗಳು ಸಿಕ್ಕಿವೆ.

ಹೌದು, ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಭಾರತ ಈಗ ಗಂಭೀರ ಚಿಂತನೆ ನಡೆಸಿದೆ. ಕಳೆದ ಜನವರಿಯಲ್ಲಿ ಪಠಾನ್ಕೋಟ್ ವಾಯು ನೆಲೆ ಮೇಲೆ ದಾಳಿಯಾದ ನಂತರ ಮಾಜಿ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಮಧುಕರ್ ಗುಪ್ತಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗಡಿಯಲ್ಲಿನ ಭದ್ರತೆ ಹೆಚ್ಚಳದ ಬಗ್ಗೆ ಅಧ್ಯಯನ ನಡೆಸಿದ್ದು, ಈ ಸಮಿತಿ ಕಳೆದ ವಾರ ತನ್ನ ಶಿಫಾರಸ್ಸನ್ನು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದ್ದಾರೆ. ಈ ಸಮಿತಿಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉನ್ನತ ಪಹರೆ ವ್ಯವಸ್ಥೆ ಹಾಗೂ ನದಿ ತೀರದ ಗಡಿ ಪ್ರದೇಶಗಳಲ್ಲಿ ಕಾಯ್ದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹಲವು ಶಿಫಾರಸ್ಸುಗಳನ್ನು ನೀಡಿದೆ.

ಈ ಶಿಫಾರಸ್ಸುಗಳ ಪೈಕಿ ನದಿ ತೀರದ ಗಡಿಗಳಲ್ಲಿ ನೀರಿನ ಸೆನ್ಸಾರ್ ತಂತ್ರಜ್ಞಾನ ಅಳವಡಿಕೆ, ಭಾರತ ಪಾಕ್ ಗಡಿಯಲ್ಲಿ ಬೇಲಿ ಹಾಗೂ ತಡೆ ಗೋಡೆಗಳ ನಿರ್ಮಾಣದ ಜತೆಗೆ ಎಲೆಕ್ಟ್ರಾನಿಕ್ ಸೆನ್ಸಾರ್ ಅಳವಡಿಕೆ. ಕಾಡು ಹಾಗೂ ದಟ್ಟ ಅರಣ್ಯ ಪ್ರದೇಶಗಳ ಗಡಿಯಲ್ಲಿ ಅಂತರ್ ಭೂಮಿ ಸೆನ್ಸಾರ್ ಅಳವಡಿಕೆ ಮಾಡುವುದು ಈ ಸಮಿತಿಯ ಪ್ರಮುಖ ಶಿಫಾರಸ್ಸು ಎಂದು ಮೂಲಗಳಿಂದ ಬಂದಿರುವ ಮಾಹಿತಿ. ಈ ಸಮಿತಿಯು ಗುಜರಾತ್ ನಿಂದ ಜಮ್ಮುವರೆಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆಸಿದ ಅಧ್ಯಯನದ ಮೂಲಕ ಈ ಶಿಫಾರಸ್ಸುಗಳನ್ನು ಮಾಡಿದೆ. ಇದೇ ಶಿಫಾರಸ್ಸುಗಳನ್ನು ಕಾಶ್ಮೀರದ ಗಡಿ ಪ್ರದೇಶಗಳಲ್ಲೂ ಕೈಗೊಳ್ಳುವ ಸಾಧ್ಯತೆ ಇದೆ.

ಭಾರತ ಹಾಗೂ ಪಾಕಿಸ್ತಾನ ಗಡಿ ಪ್ರದೇಶದ ಉದ್ದ 3,323 ಕಿ.ಮೀ ದೂರವಿದ್ದು, ಆ ಪೈಕಿ 1,225 ಕಿ.ಮೀ ಜಮ್ಮು ಮತ್ತು ಕಾಶ್ಮೀರ, 553 ಕಿ.ಮೀ ಪಂಜಾಬ್, 1,037 ಕಿ.ಮೀ ರಾಜಸ್ಥಾನ ಹಾಗೂ 508 ಕಿ.ಮೀ ಗುಜರಾತ್ ರಾಜ್ಯಗಳಲ್ಲಿವೆ. ಈ ಪ್ರದೇಶಗಳಲ್ಲಿ ಬರುವ ಎಲ್ಲಾ ರೀತಿಯ ತೆರವು ಪ್ರದೇಶಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿ ಶಾಶ್ವತವಾಗಿ ಮುಚ್ಚುವ ಕ್ರಮಗಳ ಬಗ್ಗೆ ಶಿಫಾರಸ್ಸು ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು, ‘ಮಧುಕರ್ ಗುಪ್ತಾ ಅವರ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ’ ಎಂದಿದ್ದಾರೆ.

Leave a Reply