ಜಲ ಸಂಘರ್ಷದಲ್ಲಿ ಮೋದಿ ಮೇಲೆ ಹೊಣೆ ಹಾಕಲು ಮುಂದಾದ ರಾಜ್ಯ ಕಾಂಗ್ರೆಸ್, ಬಿಬಿಎಂಪಿ ಮೇಯರ್ ಚುನಾವಣೇಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ? ಶಿಕ್ಷಕನನ್ನೆ ಕೊಂದ ದೆಹಲಿ ವಿದ್ಯಾರ್ಥಿಗಳು

ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.

ಡಿಜಿಟಲ್ ಕನ್ನಡ ಟೀಮ್:

ಮೋದಿಯವರನ್ನು ಕಟಕಟೆಯಲ್ಲಿ ನಿಲ್ಲಿಸಲು ರಾಜ್ಯ ಕಾಂಗ್ರೆಸ್ ತಂತ್ರ

ಕಾವೇರಿ-ಮಹದಾಯಿ ನದಿ ನೀರಿನ ವಿವಾದದ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂಬ ಒತ್ತಾಯ… ಸರ್ಕಾರ ಹೋದರೂ ಚಿಂತೆಯಿಲ್ಲ ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಗೆ ಹೋಗೋಣ… ಈ ಎರಡು ಪ್ರಮುಖ ವಿಷಯಗಳ ಚರ್ಚೆಗೆ ವೇದಿಕೆಯಾಯ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ. ಆ ಮೂಲಕ ಸದ್ಯ ಉದ್ಭವಿಸಿರುವ ಜಲ ಸಂಘರ್ಷದಲ್ಲಿ ನೇರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾಕಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ರಾಜ್ಯ ಕಾಂಗ್ರೆಸ್ ಪಕ್ಷದಿಂದ ನಡೆದಿದೆ.

ಈ ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೇಳಿದ್ದು ಹೀಗೆ…‘ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿದರೂ ಪ್ರಧಾನಿ ಸುಮ್ಮನಿರುವುದರ ಅರ್ಥ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಹೊರತು ಬೇರೆ ಯಾವುದೇ ಕಾರಣವಿಲ್ಲ. ಕಾವೇರಿ,ಮಹದಾಯಿ ನದಿ ನೀರಿನ ವಿವಾದದ ಪರಿಹಾರಕ್ಕೆ ಪ್ರಧಾನಿ ನರೇಂದ್ರಮೋದಿ ಮಧ್ಯೆ ಪ್ರವೇಶಿಸಬೇಕು ಎಂದು ಕಾರ್ಯಕಾರಿಣಿ ಸಭೆ ಒತ್ತಾಯಿಸಿದೆ. ಪಕ್ಷದ ಸಂಘಟನೆಯನ್ನು ಈಗಿನಿಂದಲೇ ತಳಮಟ್ಟದಲ್ಲಿ ಬಲಪಡಿಸಲು ಪಕ್ಷ ಮುಂದಾಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಅಕ್ಟೋಬರ್ ತಿಂಗಳಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ನಡಿಗೆ ಜನರ ಕಡೆಗೆ ಹೋಗಲಿದೆ. ಇದಕ್ಕಾಗಿ ರಾಜ್ಯಾದ್ಯಂತ ಸಮಾವೇಶಗಳನ್ನು ಅಕ್ಟೋಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಸಿಎಂ ಸಿದ್ಧರಾಮಯ್ಯ, ಹಿರಿಯ ನಾಯಕ ಖರ್ಗೆ ಸೇರಿದಂತೆ ಹಲ ಪ್ರಮುಖ ನಾಯಕರಿದ್ದ ಕೆಪಿಸಿಸಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರೇ 2018 ರ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಲಿದ್ದಾರೆ. ಉಳಿದ ನಾಯಕರೆಲ್ಲ ಅವರಿಗೆ ಸಾಥ್ ನೀಡಲಿದ್ದಾರೆ. ಸಿಎಂ ನೇತೃತ್ವದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಗ್ಗೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಹಾಗೂ ದಲಿತ ಸಿಎಂ ಕೂಗಿಗೂ ಪ್ರಮುಖ ಕಾರಣರಾಗಿರುವ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡದೇ ಮೌನಕ್ಕೆ ಶರಣಾದರು.

ಮೇಯರ್ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಮೈತ್ರಿಯೇ ಬಹುತೇಕ ಖಚಿತ, ಪ್ರಯತ್ನ ಬಿಡದ ಬಿಜೆಪಿ

ಬಿಬಿಎಂಪಿ ಮೇಯರ್ ಆಯ್ಕೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವಾದರೂ ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಅಭ್ಯರ್ಥಿಯೇ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಸದ್ಯ ಬಿಬಿಎಂಪಿ ಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹೋರಾಟ ನೀಡಲೇಬೇಕು ಎಂಬ ಕಾರಣಕ್ಕೆ ತನ್ನ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸಲು ನಿರ್ಧರಿಸಿದೆ. ಕೊನೆ ಕ್ಷಣದಲ್ಲೂ ಏನಾದರೂ ಪವಾಡ ಜರುಗಬಹುದು. ಜೆಡಿಎಸ್ ಬಂಡಾಯ ಶಾಸಕರು ಅಥವಾ ದೇವೇಗೌಡರ ಮನಸ್ಸು ಬದಲಾಗಬಹುದು ಎಂದು ಬಿಜೆಪಿ ನಾಯಕರು ನಿರೀಕ್ಷಿಸುತ್ತಿದ್ದಾರೆ.

101 ಸದಸ್ಯ ಬಲದ ಬಿಜೆಪಿಗೆ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಗುವ ಅವಕಾಶ ಸಿಗುತ್ತಿಲ್ಲ. ಬಿಜೆಪಿಯೊಂದಿಗೆ ಮೈತ್ರಿಗೆ ಒಲವು ತೋರಿಸಿದ್ದ ಜೆಡಿಎಸ್ ನಾಯಕರು, ಮನಸ್ಸು ಬದಲಾಯಿಸಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅಂತಿಮ ಕ್ಷಣದ ಬದಲಾವಣೆ ನಿರೀಕ್ಷೆ ಹೊತ್ತಿರುವ ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನೇತೃತ್ವದಲ್ಲಿ ತಮ್ಮ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಬಿಬಿಎಂಪಿ ಸದಸ್ಯರ ತುರ್ತು ಸಭೆ ನಡೆಸಿತು.

ಗಣೇಶ ಮಂದಿರ ವಾರ್ಡ ಸದಸ್ಯೆ ಲಕ್ಷ್ಮೀ ಉಮೇಶ್ ಕಬ್ಬಾಳ್ಕರ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಹಾಗೂ ಹೆಚ್ ಎಸ್ ಆರ್ ಬಡಾವಣೆ ವಾರ್ಡ ನ ಗುರುಮೂರ್ತಿ ರೆಡ್ಡಿಯವರನ್ನು ಉಪಮೇಯರ್ ಅಭ್ಯರ್ಥಿತಯಾಗಿ ಆಯ್ಕೆ ಮಾಡಲಾಯ್ತು. ನಾಳೆ ಯಾವುದೇ ಕಾರಣಕ್ಕೂ ಒಂದೇ ಒಂದು ಮತ ಅತ್ತಿತ್ತ ಹೋಗದಂತೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಮೂವರು ಸಂಸದರು, ರಾಜ್ಯಸಬಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಬಿಎಂಪಿಯ 101 ಸದಸ್ಯರಿಗೆ ಕಡ್ಡಾಯವಾಗಿ ನಾಳೆ ಮತದಾನದಲ್ಲಿ ಪಾಲ್ಗೊಳ್ಳಲೇ ಬೇಕು ಎಂದು ಸೂಚಿಸಲಾಗಿದೆ.

ಹಾಜರಾತಿ ಕಡಿಮೆ ಎಂದು ವಜಾ ಮಾಡಿದ್ದಕ್ಕೆ ಶಿಕ್ಷಕರನ್ನೆ ಕೊಂದ ದೆಹಲಿ ವಿದ್ಯಾರ್ಥಿಗಳು

ದೆಹಲಿಯ ನಂಗೊಲಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಹಾಜರಾತಿ ಕಡಿಮೆ ಹೊಂದಿದ್ದ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ವಜಾ ಮಾಡಿದ್ದಕ್ಕೆ ಆ ವಿದ್ಯಾರ್ಥಿಗಳು ತಮ್ಮ ಶಿಕ್ಷಕ ಮುಖೇಶ್ ಕುಮಾರ್ ಅವರನ್ನು ಚಾಕುವಿನಿಂದ ಹಿರಿದು ಕೊಂದಿದ್ದಾರೆ. ಸೋಮವಾರ ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಶಿಕ್ಷಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಂಗಳವಾರ ಶಿಕ್ಷಕ ಮುಖೇಶ್ ಮೃತಪಟ್ಟಿದ್ದಾರೆ. ‘ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದ್ದು, ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ ದೆಹಲಿ ಸರ್ಕಾರ ₹ 1 ಕೋಟಿ ನೆರವು ನೀಡಲು ಮುಂದಾಗಿದೆ’ ಎಂದು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ತಿಳಿಸಿದ್ದಾರೆ.

ಭ್ರಷ್ಟಾರೋಪಿ ಅಧಿಕಾರಿ ಮಗನೊಂದಿಗೆ ಆತ್ಮಹತ್ಯೆ, ಮಾಡಿದ ಕೆಲಸಕ್ಕಲ್ಲದಿದ್ದರೂ ಈ ದುರಂತ ಮರುಕಕ್ಕೆ ಅರ್ಹ…

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ಕಾರ್ಪೊರೇಟ್ ವ್ಯವಹಾರಗಳ ಪ್ರಧಾನ ನಿರ್ದೇಶಕ ಆಗಿದ್ದ ಬಿ.ಕೆ. ಬನ್ಸಾಲ್ ಹೊಸದೆಹಲಿಯ ಮಧುರ ವಿಹಾರದ ತಮ್ಮ ಅಪಾರ್ಟ್ಮೆಂಟ್ ನಲ್ಲಿ ತಮ್ಮ ಮಗನೊಂದಿಗೆ ನೇಣಿಗೆ ಶರಣಾಗಿದ್ದಾರೆ. ಬನ್ಸಾಲ್ 9 ಲಕ್ಷ ಲಂಚ ಸ್ವೀಕರಿಸುತ್ತಿರುವಾಗ ಸಿಬಿಐ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದರು. ಜಾಮೀನು ಮೇಲೆ ಮನೆಗೆ ಬಂದಾಗಲೇ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಂತ ಏನೆಂದರೆ, ಎರಡು ತಿಂಗಳ ಹಿಂದೆ ಇವರ ಹೆಂಡತಿ ಹಾಗೂ ಮಗಳೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಚೀಟಿಯ ಅಂಶಗಳನ್ನು ಬಹಿರಂಗಪಡಿಸದ ಪೊಲೀಸರು ಅದನ್ನು ಸಿಬಿಐಗೆ ಕಳುಹಿಸಿದ್ದಾರೆ.

Leave a Reply