ಅಂತೂ ಪಾಕಿಸ್ತಾನದ ಹಿಂದುಗಳಿಗೆ ಸಿಕ್ಕಿತು ವಿವಾಹ ಕಾಯ್ದೆ, ಆದರೆ ಬಲವಂತದ ಮದುವೆ-ಮತಾಂತರಗಳಿಗೆ ಇಲ್ಲ ತಡೆ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದುಗಳಿಗೆ ಮದುವೆ ನೋಂದಣಿಗೆ ಅವಕಾಶ ಮಾಡಿಕೊಡುವ ಕಾನೂನೊಂದನ್ನು ಪಾಕಿಸ್ತಾನ ಸಂಸತ್ತು ಅನುಮೋದಿಸಿದೆ. ಇದೊಂದು ಐತಿಹಾಸಿಕ ನಡೆ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸುತ್ತಿವೆಯಾದರೂ ಕೆಲ ಮುಖ್ಯ ಆತಂಕಗಳನ್ನು ನಿವಾರಿಸುವಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ಸ್ಪಷ್ಟ.

19 ಕೋಟಿ ಮುಸ್ಲಿಂ ಬಹುಸಂಖ್ಯಾತ ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆಯ ಪ್ರಮಾಣ ಶೇ. 1.6ರಷ್ಟು ಮಾತ್ರ. ಸ್ವಾತಂತ್ರ್ಯದ ಲಾಗಾಯ್ತು ಈ ಹಿಂದು ಸಮುದಾಯಕ್ಕೆ ವಿವಾಹ ರಕ್ಷಿಸುವ ಕಾಯ್ದೆಯೇ ಇರಲಿಲ್ಲ ಎಂಬುದು ಅಚ್ಚರಿ ಎನಿಸಿದರೂ ಸತ್ಯ. ಇದೀಗ ಹಿಂದುಗಳಿಗೆ ಮದುವೆ ವಯಸ್ಸನ್ನು 18ಕ್ಕೆ ಮಿತಿಗೊಳಿಸಲಾಗಿದೆ. ಉಳಿದ ಧರ್ಮಗಳ ವಿಷಯದಲ್ಲಿ ಪುರುಷರಿಗೆ 18 ಮತ್ತು ಮಹಿಳೆಯರಿಗೆ 16 ವರ್ಷ ಪೂರೈಸಿರಬೇಕೆಂಬ ಮಿತಿ ಇದೆ.

ಹಿಂದು ವಿವಾಹಗಳಿಗೆ ನೋಂದಣಿ ವ್ಯವಸ್ಥೆ ಕಲ್ಪಿಸಿರುವುದರಿಂದ ಕಾನೂನು ಪರಿಹಾರಗಳನ್ನು ಕೇಳುವುದಕ್ಕೆ ಅನುಕೂಲ ಒದಗಲಿದೆ. ವಿಧವೆಯರು ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ವಿವಾಹವಾಗಿದ್ದರ ಬಗ್ಗೆ ಸಾಬೀತು ಮಾಡುವುದೇ ಕಷ್ಟವಾಗಿತ್ತು. ವಿಚ್ಛೇದನ, ಮರುವಿವಾಹ ಇಂಥ ಸಂದರ್ಭಗಳಲ್ಲೂ ಅಧಿಕೃತತೆ ವರದಾನವಾಗುತ್ತದೆ. ದಾಂಪತ್ಯದಲ್ಲಿ ಅಲಕ್ಷ್ಯ, ಇಬ್ಬರು ಸಂಗಾತಿ ಹೊಂದಿರುವುದು ಇಂಥ ಪ್ರಕರಣಗಳಲ್ಲಿ ವಿಚ್ಛೇದನ ಕೇಳಬಹುದಾಗಿದೆ.

ಕನಿಷ್ಟ ವಯೋಮಿತಿ ನಿಯಮ ಉಲ್ಲಂಘಿಸಿದವರಿಗೆ ಮಹಾಶಿಕ್ಷೆಯೇನೂ ಇಲ್ಲ. ಆರು ತಿಂಗಳ ಜೈಲು, 5 ಸಾವಿರ ರುಪಾಯಿ ದಂಡ. ಆದರೆ, ಪಾಕಿಸ್ತಾನದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವು ಹಿಂದು ಹುಡುಗಿಯರನ್ನು ಮುಸ್ಲಿಮರು ಬಲವಂತವಾಗಿ ಮತಾಂತರಿಸಿ ಮದುವೆ ಆಗುವುದು ದೊಡ್ಡ ಪಿಡುಗು. ಇದನ್ನು ತಡೆಗಟ್ಟುವುದಕ್ಕೆ ಯಾವ ಪ್ರತಿಬಂಧಕ ಕ್ರಮಗಳನ್ನೂ ಕಾಯ್ದೆ ಹೊಂದಿಲ್ಲ.

ವಿಶ್ವಸಂಸ್ಥೆಯನ್ನು ಮೆಚ್ಚಿಸುವುದಕ್ಕೆ ಕೈಗೊಂಡಿರುವ ಅನಿವಾರ್ಯವಾಗಿ ಕೈಗೊಂಡಿರಬಹುದಾದ ಕೆಲವು ಕ್ರಮಗಳು ಇವಾಗಿರಬಹುದು. ಏಕೆಂದರೆ ಪಾಕಿಸ್ತಾನದಲ್ಲಿ 20 ಮತ್ತು 24 ವಯೋಮಾನದ ಯುವತಿಯರ ಪೈಕಿ ಮಾಡಿದ ಸಮೀಕ್ಷೆಯಲ್ಲಿ ಶೇ. 21 ಮಂದಿ 18ರ ವಯೋಮಾನದ ಒಳಗೇ ಮದುವೆ ಆಗಿರುವುದು ಬೆಳಕಿಗೆ ಬಂದಿತ್ತು. ಈ ಮಾನವ ಹಕ್ಕು ಉಲ್ಲಂಘನೆ ಸರಿಪಡಿಸುವ ನಿಟ್ಟಿನಲ್ಲಿ, ಹಿಂದುಗಳಿಗೆ ಸಹ ನಿರಾಳ ತರುತ್ತಿದ್ದೇವೆ ಎಂಬ ಭಾವನೆ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸಿದೆ.

Leave a Reply