ವಿಧಾನಸಭೆ ನಿರ್ಣಯ ಪಕ್ಕಕ್ಕಿಟ್ಟು ನೀರು ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಆಘಾತ, ಕೇಂದ್ರ ಮಧ್ಯಪ್ರವೇಶಕ್ಕೆ ಅಟಾರ್ನಿ, ಕರ್ನಾಟಕ ಸಮ್ಮತಿಸಿದರೂ ಸೊಪ್ಪು ಹಾಕದ ತಮಿಳುನಾಡು

ಡಿಜಿಟಲ್ ಕನ್ನಡ ಟೀಮ್:

‘ನಿಮ್ಮ ಸದನದ ನಿರ್ಣಯ ಏನೇ ಇರಬಹುದು. ಕೋರ್ಟ್ ಆದೇಶದಂತೆ ಕುಡಿಯುವ ಉದ್ದೇಶಕ್ಕೆ ತಮಿಳುನಾಡಿಗೆ ಮೊದಲು ನೀರು ಬಿಡಿ…’ ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ಕುರಿತ ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿರುವ ನ್ಯಾಯಾಲಯ ನಾಳೆಯಿಂದ ಮೂರು ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು, ಅಲ್ಲದೆ, ಶುಕ್ರವಾರವೇ ಎರಡು ರಾಜ್ಯಗಳ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಬೇಕು. ಈ ಸಭೆಯ ನಂತರ ನ್ಯಾಯಾಲಯ ಈ ವಿಚಾರಣೆ ಮುಂದುವರಿಸಲಿದೆ ಎಂದು ಸುಪ್ರೀಂ ಕೋರ್ಟ್ ತಾಕಿತು ಮಾಡಿದೆ.

ಸೆ.20 ರಂದು ತಮಿಳುನಾಡಿಗೆ ಏಳು ದಿನಗಳ ಕಾಲ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಬಿಡಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಕರ್ನಾಟಕ ಸರ್ಕಾರ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆದು ಕಾವೇರಿ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ನಿರ್ಣಯವನ್ನು ಉಭಯ ಸದನಗಳಲ್ಲಿ ಕೊಗೊಳ್ಳಲಾಗಿತ್ತು. ಈ ನಿರ್ಣಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಸುಪ್ರೀಂ ಕೋರ್ಟ್ ಮೂರು ದಿನಗಳ ಕಾಲ ಒಟ್ಟು 18 ಸಾವಿರ ಕ್ಯುಸೆಕ್ಸ್ ನೀರು ಹರಿಸಲೇಬೇಕು ಎಂದು ಸ್ಪಷ್ಟ ಸೂಚನೆಯನ್ನು ನೀಡಿದೆ. ಇದರೊಂದಿಗೆ ಕರ್ನಾಟಕ ಸರ್ಕಾರ ಸಾಂವಿಧಾನಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ರಾಜ್ಯ ಸರ್ಕಾರ ಮುಂದೆ ಯಾವ ರೀತಿಯ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕ ಸರ್ಕಾರದ ನಿರ್ಣಯಕ ಹೊರತಾಗಿಯೂ ಮತ್ತೆ ತಮಿಳುನಾಡಿಗೆ ನೀರು ಬಿಡಿ ಎಂದು ಕೋರ್ಟ್ ಆದೇಶ ನೀಡಿರುವುದು ಸದನದ ನಿರ್ಣಯದ ವಿರುದ್ಧವಾಗಲಿದೆ. ಹೀಗಾಗಿ ಈ ಪರಿಸ್ಥಿತಿ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಣ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.

ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ ತಮಿಳುನಾಡು ಪರ ವಕೀಲರು ಕರ್ನಾಟಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ‘ಸುಪ್ರೀ ಕೋರ್ಟ್ ಸೆ.20 ರಂದು ನೀಡಿದ ತೀರ್ಪನ್ನು ಪಾಲಿಸಿಲ್ಲ. ಹೀಗಾಗಿ 142 ಸೆಕ್ಷನ್ ಅಡಿಯಲ್ಲಿ ಕರ್ನಾಟಕದ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ನಂತರ ಅವರ ಅರ್ಜಿ ವಿಚಾರಣೆ ನಡೆಸಿ’ ಎಂದು ವಾದಿಸಿತು.

ಈ ವಿಚಾರಣೆ ವೇಳೆ ವಾದ ಮಾಡಿದ ಅಟಾರ್ನಿ ಜೆನರಲ್ ಮುಕುಲ್ ರೊಹ್ಟಗಿ, ‘ನ್ಯಾಯಾಲಯ ಕರ್ನಾಟಕದ ವಾದ ಆಲಿಸಬೇಕು. ಅಲ್ಲದೆ ಈವರೆಗೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಸೂಚನೆ ನೀಡಿಲ್ಲ. ಹೀಗಾಗಿ ಕೇಂದ್ರ ಮಧ್ಯ ಪ್ರವೇಶಿಸುವಂತೆ ಸೂಚನೆ ನೀಡಿ’ ಎಂದು ಮನವಿ ಮಾಡಿದರು. ಆಗ ಕೇಂದ್ರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುತ್ತದೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಅಟಾರ್ನಿ ಜೆನರಲ್, ಹೌದು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲಿದೆ ಎಂದು ಉತ್ತರಿಸಿದರು.

ಆಗ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ‘ಕರ್ನಾಟಕದ ವಾದ ಕೇಳದೆ ಏಕಾಏಕಿ ಅವರ ವಿರುದ್ಧ ಕ್ರಮಕೈಗೊಳ್ಳುವುದು ಹೇಗೆ ಎಂದು ತಮಿಳುನಾಡು ವಕೀಲರನ್ನು ಪ್ರಶ್ನಿಸಿತು. ಅಲ್ಲದೆ ಎರಡು ರಾಜ್ಯಗಳು ಈ ಬಗ್ಗೆ ಶುಕ್ರವಾರ ಸಭೆ ನಡೆಸಬೇಕು’ ಎಂದು ಸೂಚನೆ ನೀಡಿತು.

ಇನ್ನು ಕರ್ನಾಟಕ ಪರ ವಕೀಲರಾದ ಫಾಲಿ ಎಸ್ ನಾರಿಮನ್ ಅವರು ವಾದ ಮಂಡಿಸಿದರು. ‘ನಮಗೆ ಕುಡಿಯಲು ನೀರಿಲ್ಲ. ಹೀಗಾಗಿ ನ್ಯಾಯಾಲಯ ತಮ್ಮ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಬೇಕು. ಸದನದ ನಿರ್ಣಯ ಸುಪ್ರೀಂ ಕೋರ್ಟ್ ವಿರುದ್ಧವಾಗಿಲ್ಲ. ಈ ತೀರ್ಪನ್ನು ಪಕ್ಕಕ್ಕಿಟ್ಟು ರಾಜ್ಯದಲ್ಲಿನ ವಸ್ತು ಸ್ಥಿತಿಯ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡಿ.’ ಎಂದರು.

ಆಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕರ್ನಾಟಕ ವಕೀಲರಿಗೆ ಕೆಲವು ಪ್ರಶ್ನೆ ಹಾಕಿದರು. ಯಾವ ಕಾನೂನಿನ ಆಧಾರದ ಮೇಲೆ ಸದನದಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದೀರಿ? ನಮ್ಮ ಆದೇಶವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಪಾಲಿಸುತ್ತೀರಿ? ಎಂದು ಪ್ರಶ್ನಿಸಿದ ಕೋರ್ಟ್, ಕರ್ನಾಟಕ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕು ಎಂಬ ಎಚ್ಚರಿಕೆಯನ್ನು ನೀಡಿತು.

ಈ ವೇಳೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ ಹಳೇ ಆದೇಶವನ್ನು ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಎರಡು ದಿನಗಳ ಕಾಲ ನಿತ್ಯ 6 ಸಾವಿರ ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿತ್ತು. ಈ ವೇಳೆ ಮತ್ತೆ ವಾದ ಮುಂದುವರಿಸಿದ ನಾರಿಮನ್, ‘ನ್ಯಾಯಾಲಯದ ಈ ಆದೇಶ ಪಾಲನೆ ಸಾಧ್ಯವಿಲ್ಲ. ನೀರು ಬಿಟ್ಟರೆ ಹಕ್ಕುಚ್ಯುತಿಯಾಗಲಿದೆ. ನಾವು ನೀರು ಬಿಡಲು ಸಾಧ್ಯವಿಲ್ಲ. ನೀರು ಬಿಡುವುದು ಇಲ್ಲ. ಈ ರೀತಿಯಾದ ಆದೇಶದಿಂದ ಕರ್ನಾಟಕದ ಮೇಲೆ ಅನಗತ್ಯವಾಗಿ ಒತ್ತಡ ಹೇರಬೇಡಿ. ಕರ್ನಾಟಕದಲ್ಲಿ ಕುಡಿಯುವ ಉದ್ದೇಶಕ್ಕೆ ನೀರು ಬೇಕಿದೆ. ಹೀಗಾಗಿ ತಮಿಳುನಾಡಿನ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ’ ಎಂದು ವಾದಿಸಿದರು.

ಆಗ ಮತ್ತೆ ವಾದಕ್ಕೆ ಮುಂದಾದ ತಮಿಳುನಾಡು ಪರ ವಕೀಲರಾದ ಶೇಖರ್ ನಾಪ್ಡೆ, ‘ಬೆಂಗಳೂರು ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡುವುದಿಲ್ಲ. ಹಾಗಾಗಿ ಬೆಂಗಳೂರಿನ ಕುಡಿಯುವ ನೀರು ಪೂರೈಕೆಗೆ ನೀರು ಕೇಳುವುದು ಸರಿಯಲ್ಲ. ನಮಗೆ ಕೃಷಿಗೆ ನೀರು ಬಿಡದಿದ್ದರೂ ಪರವಾಗಿಲ್ಲ ಕುಡಿಯಲು ಅಗತ್ಯವಿರುವ ನೀರನ್ನು ಕೊಡಿಸಿ’ ಎಂದು ತಮ್ಮ ರಾಗವನ್ನೇ ಬದಲಿಸಿದರು.

ಆನಂತರ ನ್ಯಾಯಾಲಯದ ದ್ವಿಸದಸ್ಯ ಪೀಠವು. ‘ನಿರ್ಣಯ ಏನೇ ಇದ್ದರು ತಮಿಳುನಾಡಿಗೆ ಕುಡಿಯುವ ಸಲುವಾಗಿ ಮೂರು ದಿನಗಳ ಕಾಲ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಬಿಡಲೇಬೇಕು’ ಎಂದು ಆದೇಶ ನೀಡಿತು.

ಅಂದಹಾಗೆ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ನಡುವೆ ಸಭೆ ನಡೆಸಿ ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದು, ಈ ಸಭೆ ಯಾವ ಮಟ್ಟದ್ದು, ಸಭೆಯಲ್ಲಿ ಯಾರು ಭಾಗವಹಿಸಬೇಕು? ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಈ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಬೇಕೆ ಅಥವಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಂಧಾನ ಸಭೆಯಲ್ಲಿ ಹಾಜರಾಗಬೇಕೆ ಎಂಬ ಪ್ರಶ್ನೆಯೂ ಇದೆ. ಒಂದು ವೇಳೆ ಮುಖ್ಯಮಂತ್ರಿಗಳ ನಡುವೆ ಸಭೆ ನಡೆಯುವುದೇ ಆದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಬದಲಿಗೆ ಬೇರೆ ಯಾರು ಹಾಜರಾಗಬೇಕು ಎಂಬುದರ ಬಗ್ಗೆಯೂ ಗೊಂದಲ ಇದೆ. ಅಲ್ಲದೆ ಈ ವಿಚಾರದಲ್ಲಿ ಕೇಂದ್ರದ ಮಧ್ಯಸ್ಥಿಕೆಯ ಬಗ್ಗೆ ತಮಿಳುನಾಡು ಒಪ್ಪಲಿಲ್ಲ. ಈ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Leave a Reply