ಜಾಗತಿಕ ಆರ್ಥಿಕ ಸ್ಪರ್ಧೆಯಲ್ಲಿ ಭಾರತ ಭಾರಿ ಜಿಗಿತ, ಡಬ್ಲ್ಯೂಎಎಫ್ ವರದಿಯಲ್ಲಿ 55ನೇ ಸ್ಥಾನದಿಂದ 39ನೇ ಸ್ಥಾನಕ್ಕೆ ಬಡ್ತಿ

ಡಿಜಿಟಲ್ ಕನ್ನಡ ಟೀಮ್:

ಭಾರತ ಜಾಗತಿಕ ಮಟ್ಟದ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಾಣ್ತಿದೆ. ಕಾರಣ, ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಂ) ಬಿಡುಗಡೆ ಮಾಡಿರುವ 2016-17ನೇ ಸಾಲಿನ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕ ಸೂಚ್ಯಾಂಕದಲ್ಲಿ ಭಾರತ ಭರ್ಜರಿ ಜಿಗಿತ ಕಂಡಿದೆ. ಆ ಮೂಲಕ ಬ್ರಿಕ್ಸ್ ರಾಷ್ಟ್ರಗಳ ಪೈಕಿ ವೇಗದ ಆರ್ಥಿಕ ಪ್ರಗತಿಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದ್ದು, ಚೀನಾಗಿಂತ ಹೆಚ್ಚಿನ ವೇಗದಲ್ಲಿ ಭಾರತ ಆರ್ಥಿಕ ಸುಧಾರಣೆ ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.

ಅಕ್ಟೋಬರ್ 6 ಮತ್ತು 7ರಂದು ‘ಇಂಡಿಯಾ ಎಕನಾಮಿಕ್ ಸಮಿಟ್’ ನವದೆಹಲಿಯಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಡಬ್ಲ್ಯೂಎಎಫ್ ತನ್ನ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ 2015-16ನೇ ಸಾಲಿನಲ್ಲಿ 55ನೇ ಸ್ಥಾನ ಪಡೆದಿದ್ದ ಭಾರತ, ಈ ವರ್ಷ ಮತ್ತಷ್ಟು ಪ್ರಗತಿ ಹೊಂದಿದ್ದು, 138 ರಾಷ್ಟ್ರಗಳ ಪಟ್ಟಿಯಲ್ಲಿ 16 ಸ್ಥಾನಗಳ ಜಿಗಿತದೊಂದಿಗೆ 39ನೇ ಸ್ಥಾನ ಪಡೆದಿದೆ.

‘ಸರ್ಕಾರ ಸಾರ್ವಜನಿಕ ಸಂಸ್ಥೆಗಳು ಹಾಗೂ ಪಾರದರ್ಶಕತೆಯಲ್ಲಿ ಹಾಕಿರುವ ಶ್ರಮದಿಂದಾಗಿ ಭಾರತ 16 ಸ್ಥಾನಗಳ ಏರಿಕೆಯಾಗಲು ಸಾಧ್ಯವಾಗಿದೆ. ಭಾರತ ಸರಕು ಮಾರುಕಟ್ಟೆ, ವ್ಯವಹಾರದಲ್ಲಿ ನುರಿತತೆ ಮತ್ತು ಆವಿಷ್ಕಾರದ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಂಡಿದೆ. ತೈಲ ಬೆಲೆ ಕಡಿಮೆಯಾಗಿರೋದು, ಉತ್ತಮ ಆರ್ಥಿಕತೆ ಮತ್ತು ಆರ್ಥಿಕ ನೀತಿಯ ಫಲವಾಗಿ ಈ ಬೆಳವಣಿಗೆ ಕಂಡಿದೆ. ಅಲ್ಲದೆ ಈ ಎಲ್ಲ ಅಂಶಗಳಿಂದ ಜಿ20 ರಾಷ್ಟ್ರಗಳ ಪೈಕಿ ಭಾರತ ಅತಿ ಹೆಚ್ಚು ಪ್ರಗತಿ ಹೊಂದಿದ ರಾಷ್ಟ್ರವಾಗಲು ನೆರವಾಗಿದೆ’  ಎಂದು ಡಬ್ಲ್ಯೂಎಎಫ್ ತನ್ನ ವರದಿಯಲ್ಲಿ ತಿಳಿಸಿದೆ.

ಭಾರತ 2013-13ನೇ ಸಾಲಿನಲ್ಲಿ 59ನೇ, 2013-14ರಲ್ಲಿ 60, 2014-15ರಲ್ಲಿ 71 ನೇ ಸ್ಥಾನ ಪಡೆಯುತ್ತಾ ಕುಸಿತವನ್ನೇ ಕಂಡಿತ್ತು. ಆದರೆ ಕಳೆದ ವರ್ಷ 55ನೇ ಸ್ಥಾನಕ್ಕೆ ಜಿಗಿದಿದ್ದ ಭಾರತ ಈ ವರ್ಷವೂ ಅದೇ ಪ್ರದರ್ಶನ ಮುಂದುವರಿಸಿದ್ದು, 39ನೇ ಸ್ಥಾನಕ್ಕೆ ಬಂದಿದೆ. ಈ ವರದಿಯ ಪ್ರಕಾರ ಭಾರತ ಈ ವರ್ಷ ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟರ ಮಟ್ಟಿಗೆ ಪ್ರಗತಿ ಕಂಡಿದೆ ಎಂದು ನೋಡುವುದಾದ್ರೆ, ಮೂಲಭೂತ ಬೇಡಿಕೆಗಳಲ್ಲಿ 80ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ವಿಭಾಗದ ಪೈಕಿ ಸಂಸ್ಥೆಗಳ ಅಭಿವೃದ್ಧಿಯಲ್ಲಿ 60 ರಿಂದ 42ಕ್ಕೆ, ಮೂಲಭೂತ ಸೌಕರ್ಯದಲ್ಲಿ 81ರಿಂದ 68ಕ್ಕೆ, ದೀರ್ಘ ಆರ್ಥಿಕ ಪರಿಸ್ಥಿತಿ ನಿರ್ಮಾಣದಲ್ಲಿ 91ರಿಂದ 75ನೇ ಸ್ಥಾನಕ್ಕೆ ಜಿಗಿದಿದೆ. ಆದರೆ, ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ 84ರಿಂದ 85ನೇ ಸ್ಥಾನ ಪಡೆದಿದ್ದು, ಒಂದು ಸ್ಥಾನ ಕುಸಿದಿದೆ.

ಇನ್ನು ಸಾಮರ್ಥ್ಯ ಹೆಚ್ಚಿಸುವಿಕೆಯಲ್ಲಿ ವಿಭಾಗದಲ್ಲಿ ಭಾರತ ಒಟ್ಟಾರೆಯಾಗಿ 58ರಿಂದ 46ನೇ ಸ್ಥಾನಕ್ಕೆ ಜಿಗಿದಿದೆ. ಈ ವಿಭಾಗದಲ್ಲಿ ಬರುವ ಉನ್ನತ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ 90 ರಿಂದ 81ನೇ, ಸರಕು ಮಾರುಕಟ್ಟೆ ಸರಳತೆಯಲ್ಲಿ 91 ರಿಂದ 60ಕ್ಕೆ, ಕಾರ್ಮಿಕ ಮಾರುಕಟ್ಟೆ ಸರಳತೆಯಲ್ಲಿ 103 ರಿಂದ 84ನೇ ಸ್ಥಾನಕ್ಕೆ ಹಣಕಾಸು ಮಾರುಕಟ್ಟೆ ಅಭಿವೃದ್ಧಿಯಲ್ಲಿ 53 ರಿಂದ 38ಕ್ಕೆ, ತಂತ್ರಜ್ಞಾನ ಸಿದ್ಧತೆ ಕ್ಷೇತ್ರದಲ್ಲಿ 120 ರಿಂದ 110ಕ್ಕೆ ಬಡ್ತಿ ಪಡೆದರೆ, ಮಾರುಕಟ್ಟೆ ವಿಸ್ತರಣೆಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಆವಿಷ್ಕಾರ ಮತ್ತು ವ್ಯವಹಾರ ನುರಿತತೆ ಸೇರಿದಂತೆ ಭಾರತ 46ನೇ ಸ್ಥಾನದಿಂದ 30ಕ್ಕೆ ಏರಿಕೆ ಕಂಡಿದೆ. ಆ ಪೈಕಿ ವ್ಯವಹಾರ ನುರಿತತೆಯಲ್ಲಿ 52ನೇ ಸ್ಥಾನದಿಂದ 35ಕ್ಕೆ ಹಾಗೂ ಆವಿಷ್ಕಾರದಲ್ಲಿ 42ರಿಂದ 29ನೇ ಸ್ಥಾನಕ್ಕೆ ಮೇಲೇರಿದೆ.

ಈ ಸಮಿತಿಯ ವಿಶ್ಲೇಷಕರ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಭಾರತ ಅತ್ಯುತ್ತಮ ಬೆಳವಣಿಗೆ ಕಂಡಿದೆ. ಇನ್ನು ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇ ಆದರೆ, ಭಾರತದ ಪಾಲಿಗೆ ಗೇಮ್ ಚೇಂಜರ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಆರ್ಥಿಕ ಪಂಡಿತರು.

ಚೀನಾ 28ನೇ ಸ್ಥಾನದಲ್ಲಿ ಮುಂದುವರೆದಿದ್ದು, ಬ್ರಿಕ್ಸ್ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಭಾರತ ಏಕಾಏಕಿ 16 ಸ್ಥಾನಗಳ ಜಿಗಿತ ಕಂಡಿತ್ತು, ತನ್ನ ಪ್ರತಿಸ್ಪರ್ಧಿ ರಾಷ್ಟ್ರಗಳ ನಡುವಿನ ಅಂತರವನ್ನು ತಗ್ಗಿಸಿಕೊಳ್ಳುತ್ತಿದೆ. ಇನ್ನು ಈ ವರದಿಯಲ್ಲಿ ಭಾರತದ ಋಣಾತ್ಮಕ ಅಂಶವನ್ನು ತಿಳಿಸಿದ್ದು, ಆ ಪೈಕಿ ಕಾರ್ಮಿಕ ವರ್ಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಅಂತರ್ಜಾಲ ಸಂಪರ್ಕ ಕೊರತೆ ಪ್ರಮುಖವಾಗಿವೆ. ಇನ್ನು ಭಾರತ ಕಾರ್ಮಿಕರ ಮಾರುಕಟ್ಟೆಯಲ್ಲಿ, ದೊಡ್ಡ ಪ್ರಮಾಣದ ಸಾರ್ವಜನಿಕ ಉದ್ಯಮಗಳಲ್ಲಿ ಪರಿಣಾಮವನ್ನು ಕಾಯ್ದುಕೊಳ್ಳುವುದು ಹಾಗೂ ಆರ್ಥಿಕ ಮಾರುಕಟ್ಟೆಯಲ್ಲಿನ ಮೂಲಭೂತ ಸೌಕರ್ಯಗಳಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

Leave a Reply