ರೈತರಿಗಿಲ್ಲ ನೀರು, ನಳನಳಿಸುವ ರೆಸಾರ್ಟು: ಜಲವಷ್ಟೇ ಅಲ್ಲ ಜವಾಬ್ದಾರಿಯೂ ಬತ್ತಿತೇ?

author-geetha‘ಕಾವೇರಿ.. ನೀರೇ ಇಲ್ಲ ಅಕ್ಕ..! ನಮ್ಮ ಹಳ್ಳಿ ಕಡೆ ರೈತರಿಗೆ ಕೆಲಸವೇ ಇಲ್ಲ..’

‘ಕೆಲಸವೇ ಇಲ್ಲವೇ?’

‘ಏನೇ ಬೆಳೆ ಬೆಳೀಬೇಕು ಅಂದರೂ ನೀರು ಬೇಕಲ್ಲ ಅಕ್ಕ. ರೈತರಿಗೆ ನೀರೇ ಬಿಡಲ್ಲ… ತಮಿಳುನಾಡಿಗೆ ನೀರು ಹೋಗುತ್ತೆ.. ದೊಡ್ಡ ದೊಡ್ಡ ಪೈಪುಗಳಲ್ಲಿ ಬೆಂಗಳೂರಿಗೆ ನೀರು ಹೋಗತ್ತೆ… ನಮ್ಮ ಹಳ್ಳಿ ಜನಕ್ಕೆ ನೀರೂ ಇಲ್ಲ ಕೆಲಸವೂ ಇಲ್ಲ… ಹೊಲ ಗದ್ದೆ ಬರಡು ಬಿದ್ದಿದೆ… ಕೇಳಿದರೆ… ಕೋರ್ಟ್ ಹೇಳಿದೆ ತಮಿಳುನಾಡಿಗೆ ನೀರು ಬಿಡಬೇಕು, ಬೆಂಗಳೂರಿನ ಜನ ಕುಡಿಯಲು ನೀರು ಬೇಕು.. ಅಂತಾರಂತೆ.. ನಾಳೆ ತಿನ್ನೊಕ್ಕೆ ಅನ್ನ ಬೇಡವೇ? ಬರೀ ನೀರು ಕುಡ್ಕೊಂಡು ಇರ್ತಾರಾ ಬೆಂಗಳೂರು ಜನ? ಅಂತ ನನ್ನ ತಮ್ಮನ ಹೆಂಡತಿ ಚೆನ್ನಾಗಿ ಬೈದ್ಲು..’

ಒಂದು ವಾರ ರಜ ಹಾಕಿ ಹೋದ ನನ್ನ ಮನೆ ಕೆಲಸದ ಸಹಾಯಕಿ ಬಲು ಬೇಸರದಲ್ಲಿ ಇದ್ದಳು. ಅವಳು ಬಂದಿದ್ದು ನನಗೆ ಬಲಗೈ ಬಂದಂತೆ ನೆಮ್ಮದಿ.

‘ಬೆಂಗಳೂರಿನಲ್ಲೂ ಬಂದ್ ಮಾಡಿ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮಂಡ್ಯ, ಮದ್ದೂರು ರೈತರ ಹಿತಾಸಕ್ತಿ ಕಾಪಾಡಿ ಅಂತ ಸರ್ಕಾರವನ್ನು ಒತ್ತಾಯಿಸಿದರು..’

‘ಅದೇನು ಒತ್ತಾಯವೋ ಅಕ್ಕ… ರೈತರಿಗೆ ನೀರು ಕೇಳುತ್ತಿಲ್ಲ… ಬೆಂಗಳೂರಿನಲ್ಲಿ ಇರುವ ಜನಕ್ಕೆ ಕುಡಿಯುವ ನೀರು ಇರೊಲ್ಲ ಈಗ ನೀರು ಬಿಟ್ಟರೆ ಅಂತ ನಮ್ಮ ಸರ್ಕಾರ ಹೇಳಿದೆಯಂತೆ .. ಹಳ್ಳೀಲಿ ಮಾತಾಡ್ಕೊತಾ ಇದ್ರು… ಈಗ ನಾನು ಬೆಂಗಳೂರಿನವಳು ಅಂತ ನನ್ನ ಮೇಲೂ ಮುನಿಸಿಕೊಂಡ್ರು… ಉತ್ತಲ್ಲ, ಗೇಯ್ಯಲ್ಲ… ವರ್ಷಕ್ಕೆ ರಾಗಿ ಕೊಡು ಮೆಣಸಿನಕಾಯಿ ಕೊಡು ಅಂದ್ರೆ ಹೆಂಗವ್ವ ಅಂದ್ರು ನಮ್ಮ ಭಾವ.’

‘ಅವರಿಗೇ ಕೆಲಸ ಇಲ್ಲ ಅಂದೀ…’

‘ಹೂಂ.. ಆದ್ರೆ ನಮ್ಮನ್ನು ಕಂಡ್ರೆ ಕ್ವಾಪ!’

ಭಾವ ಹಂಗಂದ್ರಾ… ಅಕ್ಕ ಯಾರೂ ಇಲ್ಲದ್ದು ನೋಡಿಕೊಂಡು, ನಾವೂ ಬೆಂಗ್ಳೂರಿಗೇ ಬತ್ತೀವಿ.. ನಾನೂ ಮನೆ ಕೆಲ್ಸ ಮಾಡ್ತೀನಿ… ನೋಡಿ ಹೇಳು ಅಂದ್ಲು.. ನನ್ನ ಗಂಡ ಡ್ರೈವಿಂಗ್ ಕೆಲಸ ಮಾಡ್ತಾನೆ. ಭಾವ ಬೆಂಗ್ಳೂರಿಗೆ ಬಂದ್ರೆ ಏನು ಮಾಡಿಯಾರು? ರೈತರು ಕಣಕ್ಕಾ ಅವ್ರು.. ನೀರು ಕೊಟ್ರೆ, ದುಡಿದು ಭೂಮಿಯಿಂದ ಅನ್ನ ತೆಗಿತ್ತಾರೆ… ಬೆಂಗಳೂರಿಗೆ ಬಂದ್ರೆ ಮಾಲಿ ಕೆಲಸವೂ ಮಾಡಕ್ಕೆ ಆಗಾಕಿಲ್ಲ ಅವರ್ಗೆ…

‘ನನ್ನ ಫ್ರೆಂಡ್ ಒಬ್ಬರಿಗೆ ಮನೆಯಲ್ಲೇ..’ ನನ್ನ ಮಾತು ಪೂರ್ತಿಗೊಳಿಸಲು ಬಿಡಲಿಲ್ಲ ಅವಳು.

‘ಬೇಡಕ್ಕ… ನಾನೇನೋ ಬಡವರ ಮನೆ ಹೆಣ್ಣುಮಗಳು.. ನಾಲ್ಕು ಮನೆ ಮುಸುರೆ ಬಳಿದರೂ ಬೇಸರವಿಲ್ಲ. ನನ್ನಕ್ಕ ಇಪ್ಪತ್ತು ಎಕರೆ ಹೊಲವಿದ್ದವರ ಮನೆ ಮಗಳು. ನಮ್ಮ ಭಾವ ಕೂಡ ಮನ್ಯಾಗೆ ಆಳಿಟ್ಟು ಆಕೇನ ಚೆಂದಾಗಿ ನೋಡಿಕೊಂಡಾರೆ. ಈಗ ಹೊಲ ಇದೆ, ಮನೆ ಇದೆ. ನೀರಿಲ್ಲ… ವರ್ಷಕ್ಕೆ ಒಂದು ಬೆಳೆಬೆಳೆದರೆ, ಬದುಕು ನಡ್ಯೊದಿಲ್ಲ… ಅಕ್ಕ ಅಳ್ತಾಳೆ.. ಭಾವ ರೇಗ್ತಾನೆ… ಮಕ್ಳು ಸೊರಗ್ಯಾವೆ… ಕಷ್ಟ ಕಣಕ್ಕ.. ಇದ್ರ ಮ್ಯಾಕೆ ಜಮೀನು ಮಾರ್ತಿರಾ ಅಂತ ಕೇಳ್ಕೊಂಡು ಜನ ಬರಕ್ಕೆ ಹತ್ಯಾರೆ..’

‘ಅಯ್ಯೊ ಜಮೀನು, ಹೊಲ ಕೊಂಡುಕೊಂಡು ಏನು ಮಾಡ್ತಾರಂತೆ? ನೀರೇ ಇಲ್ಲ ಅಂತಿ…’

‘ಈ ಸಿಟಿ ಜನ ಹಳ್ಳಿ ವಾತಾವರಣದಲ್ಲಿ ಇರೋಕ್ಕೆ ಇಷ್ಟಪಡ್ತಾರಂತೆ. ಅದಕ್ಕೆ ಅಲ್ಲಿ ಪುಟ್ಟ ಪುಟ್ಟ ಮನೆ ಕಟ್ಟಿ ರಿಸಾರ್ಟೊ ಎಂತದೋ ಕಟ್ತಾರಂತೆ… ಐದೋ ಆರೋ.. ಬೋರು ಕೊರೆಸಿ ನೀರು ತೆಗಿತಾರಂತೆ. ನಮ್ಮ ಭಾವಂಗೆ ಬ್ಯಾಂಕಿನಾಗೂ ಸಾಲ ಕೊಡಲ್ಲ. ಆದ್ರೆ ಅವರಿಗೆ ಲಕ್ಷ ಲಕ್ಷ ಸಾಲ ಕೊಟ್ಟಾರಂತೆ… ಆಮೇಲೆ ಅಲ್ಲಿ ಇರೋಕ್ಕೆ ಬರೋ ಜನ ದಿನಕ್ಕೆ ಆರೋ ಏಳೋ ಸಾವಿರ ಕೊಡ್ತಾರಂತೆ… ನೆಲ ತೋಡಿ ಈಜು ಕೊಳ ಕೂಡ ಮಾಡ್ತಾರಂತೆ. ನಮ್ಮ ದೊಡ್ಡಪ್ಪನ ಮಗ ಯಾರಿಗೆ ಬೇಕು ಈ ಮಣ್ಣಿನ ಗೊಡವೆ ಅಂತ ಮಾರಿ ದುಡ್ಡು ಏಣಿಸಿಕೊಂಡು ಬೆಂಗ್ಳೂರಿಗೆ ಬಂದಿದಾನೆ… ನಮ್ಮ ಭಾವನ್ನೂ ಕೇಳ್ತಾ ಅವ್ರೆ…’

‘ಓ’

‘ಅಲ್ಲ ಅಕ್ಕ… ದುಡ್ಡು ಪ್ರಿಂಟ್ ಮಾಡಬಹುದು. ಚಿನ್ನ ಇಲ್ಲದೆ ಬದುಕಬಹುದು… ಆದ್ರೆ ಅನ್ನ ಇಲ್ಲದೆ ಹ್ಯಂಗೆ ಬದುಕೋದು? ಭತ್ತ, ಕಬ್ಬು ಬೆಳೆಯೋ ಭೂಮಿನ ಬರಡು ಮಾಡಿ, ಈಜುಕೊಳ ಕಟ್ಟಿ ರಿಸಾರ್ಟು ಮಾಡಿದರೆ… ರೈತನಿಗೆ ಕೆಲಸ ಇಲ್ಲದ ಹಾಗೆ ಮಾಡಿದರೆ ಹೇಗೆ ಅಕ್ಕ?’

ನನಗೆ ಉತ್ತರ ಗೊತ್ತಿಲ್ಲ ಎಂದು ಅವಳಿಗೂ ಗೊತ್ತು. ಪೊರಕೆ, ಮೊರ ತೆಗೆದುಕೊಂಡು ಕೊಣೆಯೊಳಗೆ ಹೋದಳು.

‘ವಿಶ್ವ ಪ್ರವಾಸೋದ್ಯಮ ದಿನ’ದ ವಿಚಾರವಾಗಿ ಲೇಖನ ಬರೆಯಬೇಕೆಂದುಕೊಂಡವಳು ಅವಳ ಮಾತುಗಳನ್ನೇ ಬರೆದೆ. ಇವಳನ್ನೇ ಕಳಿಸಬೇಕು ಕೋರ್ಟಿನಲ್ಲಿ ವಾದ ಮಾಡಲು, ಒಂದೊಂದೇ ಪಾಯಿಂಟ್ ಹಾಕುತ್ತಾ ಹೋದರೆ ನಾವೆಲ್ಲಾ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕು.

ಕಾವೇರಿ ಹುಟ್ಟಿದ ನಾಡಲ್ಲಿ ಅದು ಹರಿವ ಎಡೆಯಲ್ಲಿ ನರಳುವ ರೈತಾಪಿ ಜನ, ನೀರಿಲ್ಲದ ಬವಣೆಯಲ್ಲಿ ಮುಳುಗಿರುವ, ಕೆಲಸವಿಲ್ಲದೆ ಮುಂದಿನ ಭವಿಷ್ಯದ ಬಗ್ಗೆ ಭೀತರಾಗಿರುವ ಜನ. ನಗರಗಳಲ್ಲಿ ಕುಳಿತು, ಕುಡಿಯಲು ಬಾಟಲಿ ನೀರು ಬಳಸುತ್ತಾ… ಕಾಲು ತೊಳೆಯಲು, ಹುಲ್ಲು ಬೆಳೆಯಲು (lawn!) ನೀರನ್ನು ಧಾರಾಳವಾಗಿ ಹರಿಸುವ ಜನ. ಇವರಿಬ್ಬರನ್ನು ಎದುರಾಬದುರಾ ಕೂಡಿಸಬೇಕು. ನೀರಿನ ಪೈಪು ಒಡೆದು ರಸ್ತೆಯ ನೀರು ಹರಿದು ಹೋಗುತ್ತಿದ್ದರೂ, ಅದೇ ರಸ್ತೆಯಲ್ಲಿ ದೊಡ್ಡ ದೊಡ್ಡ ಕಾರುಗಳನ್ನು ಭರ್ರನೆ ಓಡಿಸಿಕೊಂಡು ಹೋಗುವ ಮಂದಿ.. ಕರೆ ಮಾಡಿ ಹೇಳಿದರೆ… (ಕರೆ ಸ್ವೀಕರಿಸಿದರೆ!) ‘ಹೂಂ ಬರ್ತೀವಿ’ ಎಂದು ಹೇಳಿ ತಿರುಗಿಯೂ ನೋಡದ ಆಡಳಿತ.

ಎತ್ತ ನೋಡಿದರೂ ಬೇಜವಾಬ್ದಾರಿಯೇ.. ನಮ್ಮ ಪರ ವಾದ ಮಾಡಲು ನಿಂತ ಲಾಯರ್ರು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ‘ನೀರು ಬಿಡುತ್ತೇವೆ’ ಎನ್ನುವುದು… ನಮ್ಮ ಮುಖ್ಯಮಂತ್ರಿಗಳು.. ‘ಹಾಗೆ ಹೇಳಿದರೆ ಅವರು? ನನಗೆ ಗೊತ್ತಿಲ್ಲ’ ಎನ್ನುವುದು… ನಮ್ಮ ಎಂ.ಎಲ್.ಎಗಳು ಬಾಯಿಬಿಡದೆ ಇರುವುದು, ಬಂದ್ ಎಂದು ಹೇಳಿ ಹಿಂಸಾಚಾರ ಹಾಗೂ ಲೂಟಿಯಲ್ಲಿ ತೊಡಗುವ ಗೂಂಡಾಗಳು… ನಮ್ಮ ದೃಶ್ಯಮಾಧ್ಯಮಗಳು ಅದನ್ನು ಕನ್ನಡಿಗರ ಆಕ್ರೋಶ ಎಂದು ಬಿಂಬಿಸುವುದು. ವಿರೋಧ ಪಕ್ಷದವರು ಅವರೇನು ಮಾಡುವ ಅವಶ್ಯಕತೆಯಿಲ್ಲ ಎಂಬಂತೆ ಸುಮ್ಮನಿರುವುದು…

ಇದಕ್ಕೆಲ್ಲಾ ಕಳಶವಿಟ್ಟಂತೆ ನಮ್ಮ ಎಂ.ಪಿಗಳು ಒಟ್ಟು 28 ಮಂದಿ… ಕಾಂಗ್ರೆಸ್ಸಿನಿಂದ ಒಂಬತ್ತು, ಬಿಜೆಪಿಯಿಂದ ಹದಿನೇಳು, ಜನತಾ ದಳದಿಂದ ಇಬ್ಬರು ಮಂದಿಯನ್ನು ನಮ್ಮ ರಾಜ್ಯದ ಹಿತಾಸಕ್ತಿಯನ್ನು ನೋಡಿಕೊಳ್ಳಲು ಚುನಾಯಿಸಿ ಕಳುಹಿಸಿದೇವಲ್ಲಾ… ಅವರೆಲ್ಲಾ ಏನು ಮಾಡುತ್ತಿದ್ದಾರೆ? ಪಕ್ಷದ ಭೇದ ಮರೆತು ಅವರೆಲ್ಲಾ ಒಟ್ಟಾಗಿ ಪ್ರಧಾನಿಯವರನ್ನು ರಾಷ್ಟ್ರಾಧ್ಯಕ್ಷರನ್ನು ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬೇಕಲ್ಲವೇ? ಶ್ರೇಷ್ಠ ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಹೋದರೆ ಹೇಗೆ ಎಂದು ಪ್ರಶ್ನಿಸಬೇಕಲ್ಲವೇ?

ನಮ್ಮ ಒಗ್ಗಟ್ಟು ತೋರಿಸಲು ಇದೊಂದು ಅವಕಾಶ ಎಂದು ಭಾವಿಸಿ ಮುಂದುವರಿಯಬೇಕು.. ರಾಜ್ಯದ ಜನತೆಗೆ ನಾವಿದ್ದೇವೆ ಎಂಬ ಆಶ್ವಾಸನೆ ನೀಡಬೇಕಲ್ಲವೇ? ಈಗ ಕೇಳುತ್ತಿರುವುದು ಕುಡಿಯುವ ನೀರಷ್ಟೇ. ರೈತರ ಪಾಡೇನು? ಹೊಲ, ಗದ್ದೆ ತೋಟಗಳೆಲ್ಲಾ ಫಾರ್ಮ್ ಹೌಸ್ ರಿಸಾರ್ಟುಗಳಾದರೆ ನಾವು ತಿನ್ನುವುದೇನು?

ಯಾಕೋ ಹೆದರಿಕೆಯಾಗುತ್ತದೆ. ಚೌಕಟ್ಟಿನೊಳಗೆ ಹುದುಗಿಕೊಳ್ಳಲೇ ಎನ್ನಿಸುತ್ತಿದೆ.

Leave a Reply