ಸೇನಾಶೌರ್ಯ, ರಾಜಕೀಯ ಇಚ್ಛಾಶಕ್ತಿ, ಚಾಣಾಕ್ಷ್ಯತೆಯ ಸಂಗಮ – ಇದೇ ಪಾಕ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬಹಿರಂಗವಾದ ಭಾರತದ ವಿರಾಟ ರೂಪ!

 

ಡಿಜಿಟಲ್ ಕನ್ನಡ ವಿಶೇಷ:

  • ‘ರಾಜಕಾರಣಿಗಳು ಮತ್ತು ನಾಗರಿಕರಂತೆ ಸೇನೆ ಮಾತಾಡುವುದಿಲ್ಲ. ತಮ್ಮ ಕಾರ್ಯದ ಮೂಲಕವೇ ಉತ್ತರ ಕೊಡುತ್ತವೆ’ ಅಂತ ಪ್ರಧಾನಿ ನರೇಂದ್ರ ಮೋದಿ ಕೇರಳದ ಸಮಾವೇಶದಲ್ಲಿ ಹೇಳಿದ್ದರು. ಆ ಮೂಲಕ ಸೇನೆಗೆ ಈ ವಿಷಯದಲ್ಲಿ ಸಂಪೂರ್ಣ ಅಧಿಕಾರ ಕೊಡುತ್ತಿರುವ ಸೂಚನೆ ಇದೆ ಎಂದು ಡಿಜಿಟಲ್ ಕನ್ನಡ ಬರೆದಿತ್ತು. ರಾತ್ರಿ 12.30 ನಂತರ ಬೆಳಗಿನ ನಾಲ್ಕರವರೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ನಡೆಸಿರುವ ಕಾರ್ಯಾಚರಣೆ ಇದನ್ನು ಹೌದಾಗಿಸಿದೆ. ಅದಕ್ಕೂ ಮೊದಲೇ, ಉರಿ ದಾಳಿಯ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್, ‘ನಮ್ಮಿಷ್ಟದ ಸ್ಥಳ ಮತ್ತು ಸಮಯದಲ್ಲಿ ಉತ್ತರ ಹೇಳುವ ಅಧಿಕಾರವನ್ನು ಸೇನೆ ಹೊಂದಿದೆ’ ಎಂದಿದ್ದರು. ದೇಶದ ರಾಜಕೀಯ ನಾಯಕತ್ವವು ಈ ವಿಷಯದಲ್ಲಿ ಸೇನೆಗೆ ನೀಡಿದ್ದ ಬಲವನ್ನು ಸೂಚಿಸುವ ನಡೆಗಳಾಗಿದ್ದವು ಇವು.
  • ಸೇನೆ ತನ್ನ ಕೆಲಸವನ್ನೂ, ರಾಜಕೀಯ ನಾಯಕತ್ವ ತನ್ನ ಕೆಲಸವನ್ನೂ ಮಾಡಿದಾಗ ದೇಶ ಹೆಮ್ಮೆ ಪಡುವ ಇಂಥ ದಿನಗಳು ಸಾಕಾರವಾಗುತ್ತವೆ. ಗುರುವಾರ ವಿದ್ಯಮಾನಗಳು ತೆರೆದುಕೊಂಡ ರೀತಿಯನ್ನು ಗಮನಿಸಿ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರವಾದಿ ಗುರಿಗಳ ಮೇಲೆ ದಾಳಿ ಮಾಡಿದ್ದನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದು ಡಿಜಿಎಂಒ. ಪ್ರಧಾನಿ ನರೇಂದ್ರ ಮೋದಿಯವರಾಗಲೀ, ಪ್ರಮುಖ ನಾಯಕರಾಗಲೀ ಈ ಬಗ್ಗೆ ಎದೆ ತಟ್ಟಿಕೊಳ್ಳುತ್ತ ಸಮಯಹರಣ ಮಾಡಲಿಲ್ಲ. ಬದಲಿಗೆ ತಮ್ಮ ರಾಜಕೀಯ ಹೊಣೆಗಾರಿಕೆ ನಿಭಾಯಿಸುವಲ್ಲಿ ತೊಡಗಿಸಿಕೊಂಡರು?
  • ಏನದು ರಾಜಕೀಯ ಹೊಣೆಗಾರಿಕೆ? ಸರ್ವಪಕ್ಷಗಳನ್ನು ಈ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಮಾಜಿ ಪ್ರಧಾನಿ ದೇವೇಗೌಡರು ಸುದ್ದಿವಾಹಿನಿಗಳ ಜತೆ ಮಾತನಾಡುತ್ತ, ‘ಗೃಹ ಸಚಿವ ರಾಜನಾಥ ಸಿಂಗ್ ಅವರು ಪರಿಸ್ಥಿತಿ ವಿವರಿಸಿ ನನಗೆ ಕರೆ ಮಾಡಿದ್ದರು. ಪ್ರಧಾನಿ ಮೋದಿ ಅವರು ಕೈಗೊಳ್ಳುವ ಇಂಥ ಯಾವುದೇ ಕ್ರಮಗಳಿಗೆ ನಮ್ಮ ಬೆಂಬಲವಿರುತ್ತದೆ’ ಎಂದರು. ಅರ್ಥಾತ್, ದೇಶ ಪುಳಕಗೊಂಡು ಪ್ರತಿಕ್ರಿಯೆ ನೀಡುತ್ತಿದ್ದ ವೇಳೆಗೆ ರಾಜಕೀಯ ನಾಯಕತ್ವವು ಮುಂದಿನ ಹೊಣೆಗಾರಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಸರ್ವಪಕ್ಷಗಳ ಸಭೆ ಕರೆದು ಸಹಕಾರ ಕೋರಿತು. ಈ ವಿಷಯದಲ್ಲಿ ಜೆಡಿಯುದ ಶರದ್ ಪವಾರ್, ಕಾಂಗ್ರೆಸ್ ನ ಗುಲಾಂ ನಬಿ ಆಜಾದ್ ಎಲ್ಲರೂ ಏಕಧ್ವನಿಯಲ್ಲಿ ಮಾತನಾಡಿ, ಭಾರತೀಯ ಸೇನೆ ಹಾಗೂ ರಾಜಕೀಯ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದದ್ದನ್ನು ಟಿವಿ ಪರದೆಗಳಲ್ಲಿ ಕಾಣುತ್ತ ಭಾರತ ಧನ್ಯವಾಯಿತು.
  • ಹೊಡೆದಿದ್ದಾಯಿತು, ಉದ್ದೇಶ ಈಡೇರಿಕೆಯಾಯಿತು. ಹಾಗಂತ ಈ ಬಗ್ಗೆ ಭಾರತದ ನಾಗರಿಕರು ಗರ್ವ ಪಟ್ಟುಕೊಳ್ಳುತ್ತ ಸಂಭ್ರಮಿಸಬಹುದಾಗಲೀ, ಸರ್ಕಾರಕ್ಕೆ ಅದರಲ್ಲಿ ಮೈಮರೆಯುವುದಕ್ಕೆ ಸಮಯವಿರುವುದಿಲ್ಲ. ಗುರುವಾರ ನಡೆದ ವಿದ್ಯಮಾನ ಗಮನಿಸಿ… ಗಡಿಯಂಚಿನ ಎಲ್ಲ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಕಂಪನ ಎಬ್ಬಿಸುವ ಶಕ್ತಿ ಇದೆ ಎಂದರಷ್ಟೇ ಸಾಲದು, ಅದರ ಅಲೆಗಳನ್ನು ತಾಳುವುದಕ್ಕೂ ತಯಾರಿ ಇರಬೇಕು. ಅದೇ ತಯಾರಿಯನ್ನೇ ಮೋದಿ ಸರ್ಕಾರ ಈ 11 ದಿನಗಳಲ್ಲಿ ಮಾಡಿತ್ತೆಂಬುದು ಸ್ಪಷ್ಟ. ಜಾಗತಿಕವಾಗಿ ಪಾಕಿಸ್ತಾನವನ್ನು ಇನ್ನಷ್ಟು-ಮತ್ತಷ್ಟು ಏಕಾಂಗಿಯಾಗಿಸಿದ ನಂತರವೇ ಇಂಥ ಸಾಹಸ ಮಾಡಿತು.
  • ಜಾಗತಿಕ ರಾಜಕಾರಣದ ನಿಭಾವಣೆ ಪೂರ್ವ ತಾಲೀಮು ಇದರಲ್ಲಿ ಸ್ಪಷ್ಟವಾಗಿದೆ. ಸಚಿವ ರಾಜವರ್ಧನ ರಾಥೋಡ್ ಅವರ ಹೇಳಿಕೆ ಗಮನಾರ್ಹ. ‘ನಾವು ಪಾಕಿಸ್ತಾನದ ಗಡಿಯನ್ನು ಉಲ್ಲಂಘಿಸಲೇ ಇಲ್ಲ. ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಅಧಿಕೃತವಾಗಿ ಭಾರತದ್ದೇ. ಅಲ್ಲಿನ ಉಗ್ರರನ್ನು ಭಾರತದ ಮಿಲಿಟರಿ ಸಂಹರಿಸಿದೆ ಅಷ್ಟೆ’. ಎಲ್ಲ ಸಮಯದಲ್ಲೂ ಆಕ್ರೋಶದ ಹೇಳಿಕೆಗಳು, ಅತಿ ಜಂಬ ಕೆಲಸಕ್ಕೆ ಬರುವುದಿಲ್ಲ. ಜಾಗತಿಕ ವೇದಿಕೆಯಲ್ಲಿ ನಿಸ್ಸಂಶಯವಾಗಿ ಭಾರತಕ್ಕೆ ಸಹಕರಿಸುವ ವಾದ ಈ ಪಿಒಕೆ ವ್ಯಾಖ್ಯಾನ.
  • ಅಂದಹಾಗೆ, ಗುರುವಾರ ಬೆಳಗ್ಗೆ, ಸೇನೆಯು ಪಿಒಕೆ ದಾಳಿಯನ್ನು ಬಹಿರಂಗಪಡಿಸುವುದಕ್ಕೂ ಮುಂಚೆ ಬಂದ ಸುದ್ದಿಯೊಂದು ಹೀಗಿತ್ತು. ‘ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರಿಗೆ ಕರೆ ಮಾಡಿ ಉರಿ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದರು’ ಎಂಬುದು. ಹಾಗೆಯೇ ಅಣ್ವಸ್ತ್ರದ ವಿಷಯದಲ್ಲಿ ಭಾರತದ ಜವಾಬ್ದಾರಿ ಬಗ್ಗೆ ಜಗತ್ತಿಗೆ ವಿಶ್ವಾಸವಿದೆ, ಆತಂಕವಿರುವುದು ಪಾಕಿಸ್ತಾನದ ಬಗ್ಗೆಯೇ ಎಂಬ ಅಭಿಪ್ರಾಯವೂ ಹೊರಬಂದು ಅಲ್ಲೂ ಭಾರತ ಬೆಂಬಲ ಧ್ವನಿಸಿತು. ಒಮ್ಮೆ ಯೋಚಿಸೋಣ… ಉರಿ ದಾಳಿ ನಡೆದ 11 ದಿನಗಳ ನಂತರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅದಕ್ಕೆ ಸಂತಾಪ ವ್ಯಕ್ತಪಡಿಸುವುದಕ್ಕೆ ಅಜಿತ್ ದೊವಲ್ ಬಳಿ ಮಾತನಾಡುತ್ತಾರೆ ಎಂಬುದು ನಂಬಲರ್ಹವೇ? ವಾಸ್ತವದಲ್ಲಿ ಇಲ್ಲಿ ವಿನಿಮಯವಾದ ವಿಷಯವೇ ಬೇರೆ ಇದ್ದಿರಬಹುದಲ್ಲವೇ? ಪಿಒಕೆ ದಾಳಿಯೇ ವಿಷಯವಾಗಿರಲಿಕ್ಕೆ ಸಾಕಲ್ಲವೇ? ಇಂಥ ಸಾಧ್ಯತೆಗಳನ್ನು ಗಮನಿಸಿದಾಗ ಈ ದೇಶದ ರಾಜಕೀಯ ನಾಯಕತ್ವದ ತಯಾರಿ ಎಂಥದ್ದಿತ್ತು ಎಂಬುದು ನಿಚ್ಚಳವಾಗುತ್ತದೆ.

ಭಾರತದ ರಾಜಕೀಯ ಮತ್ತು ಸೇನಾ ನಾಯಕತ್ವಗಳಲ್ಲಿ ಧಾಡಸಿ ಮತ್ತು ಸಮನ್ವಯತೆ ಇದ್ದಾಗ ಪವಾಡಗಳೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇಂದಿರಾ ಗಾಂಧಿ ನೇತೃತ್ವದಲ್ಲಿ 1971ರಲ್ಲಿ ಗೆದ್ದ ಬಾಂಗ್ಲಾ ವಿಮೋಚನೆ ಹೋರಾಟ ಮತ್ತೆ ನೆನಪಾಗುತ್ತದೆ. ಇಂದಿರಾ ಅವರ ಧಾಡಸಿತನ, ನಮ್ಮ ಗುಪ್ತಚರ ವಿಭಾಗದ ಪರಿಶ್ರಮ, ಮಿಲಿಟರಿ ಶೌರ್ಯಗಳೆಲ್ಲ ಮೇಳೈಸಿದ್ದ ಉದಾಹರಣೆ ಅದು. ಹಾಗೆಂದೇ ಅಮೆರಿಕ, ಚೀನಾಗಳು ವಿರುದ್ಧ ನಿಂತರೂ ರಷ್ಯ ಸಹಕಾರದೊಂದಿಗೆ ಭಾರತ ಸಮರ ಗೆದ್ದಿತು. ಆ ಸಮಯದಲ್ಲಿ ಇಂದಿರಾ ಅವರಿಗೆ, ‘ಸ್ವಲ್ಪ ತಾಳಿ. ಉತ್ತರದಲ್ಲಿ ಹಿಮಪಾತ ಶುರುವಾದೊಡನೆ ಇಲ್ಲಿ ದಾಳಿ ಆರಂಭಿಸೋಣ. ಆಗ ಅಲ್ಲಿನ ಗಡಿಯಲ್ಲಿ ಚೀನಾ ನಮ್ಮನ್ನು ಹೆದರಿಸುವುದಕ್ಕೆ ಸಾಧ್ಯವಾಗುವುದಿಲ್ಲ’ ಅಂತ ಸೇನಾ ಮುಖ್ಯಸ್ಥ ಸ್ಯಾಮ್ ಮಾಣೆಕ್ ಶಾ ಸಲಹೆ ನೀಡಿ ಕಾರ್ಯತಂತ್ರ ಹೆಣೆದಿದ್ದರು ಎಂಬುದೆಲ್ಲ ದಂತಕತೆಯಾಗಿ ಉಳಿದಿದೆ.

ವಸಾಹತು ಕಾಲದಿಂದಲೂ ಶೌರ್ಯಕ್ಕೆ ಹೆಸರಾದ ಭಾರತೀಯ ಪಡೆ, ನರೇಂದ್ರ ಮೋದಿಯಂಥ ನಿರ್ಣಾಯಕ ನಾಯಕ ಹಾಗೂ ಅಜಿತ್ ದೊವಲ್ ರಂಥ ಚಾಣಾಕ್ಷ್ಯ ಕಾರ್ಯತಂತ್ರ ಪರಿಣತ ಇಂಥವರೆಲ್ಲ ಸಂಗಮಿಸಿರುವ ಈ ಕಾಲಘಟ್ಟವೂ ಸಹ ಸಮನ್ವಯತೆಯೊಂದಿಗೆ ವಿರಾಟ ಸ್ವರೂಪವೊಂದನ್ನು ತಾಳುತ್ತಿರುವುದರ ಸೂಚನೆಗಳು ಸಿಗುತ್ತಿವೆ.

Leave a Reply