ಒದೆಸಿಕೊಂಡ ಪಾಕಿಸ್ತಾನದ ಪ್ರತಿಕ್ರಿಯೆ ಹೇಗಿದೆ ನೋಡಿ… ನವಾಜ್ ಶರೀಫ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸೇನೆ ದಾಳಿ ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ಮೊದಲ ಬಾರಿಗೆ ಪ್ರತಿಕ್ರಿಯೆ ಬಂದಿದೆ. ಭಾರತದ ಸೇನಾ ಕಾರ್ಯಾಚರಣೆಯನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಖಂಡಿಸಿದ್ದು, ಈ ದಾಳಿಯಿಂದ ಪಾಕಿಸ್ತಾನದ ಇಬ್ಬರು ಯೋಧರು ಸತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿರುವುದು ಪಾಕಿಸ್ತಾನವು ಧೃಡಪಡಿಸಿದೆ.

ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿರುವ ನವಾಜ್ ಶರೀಫ್, ‘ಈ ದಾಳಿಯನ್ನು ನಾವು ಖಂಡಿಸುತ್ತೇವೆ. ಶಾಂತಿಯನ್ನು ಕಾಪಾಡುವ ನಮ್ಮ ಇಚ್ಛಾಶಕ್ತಿಯನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು’ ಎಂದು ಹೇಳಿದ್ದಾರೆ. ಉಗ್ರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪಾಕಿಸ್ತಾನ, ಭಾರತದ ದಾಳಿಯ ನಂತರ ಶಾಂತಿಯ ಮಂತ್ರ ಪಠಿಸುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಇನ್ನು ಈ ದಾಳಿಯ ಬಗ್ಗೆ ಪಾಕಿಸ್ತಾನ ಸೇನೆಯು ಪ್ರತಿಕ್ರಿಯೆ ನೀಡಿದ್ದು, ‘ಭಾರತ ಮಾಧ್ಯಮಗಳಲ್ಲಿ ವೈಭವೀಕರಣ ಮಾಡುವ ನಿಟ್ಟಿನಲ್ಲಿ ಈ ದಾಳಿ ನಡೆಸಿದ್ದು, ಇದನ್ನು ರಕ್ಷಣಾತ್ಮ ದಾಳಿ ಎಂದು ಹೇಳಿರುವುದು ಹುಸಿ ಸುಳ್ಳು. ಪಾಕಿಸ್ತಾನ ನೆಲದ ಮೇಲೆ ದಾಳಿ ಮಾಡಿದರೆ, ನಮ್ಮಿಂದಲೂ ಅದೇ ರೀತಿಯ ಉತ್ತರ ಬರಲಿದೆ’ ಎಂದಿದೆ.

ಭಾರತೀಯ ಸೇನೆ ಮಧ್ಯರಾತ್ರಿ 12.30ರಿಂದ ಬೆಳಗಿನಜಾವ 4.30ರವರೆಗೂ ಭಾರತದ ಗಡಿಯಿಂದ ಪಾಕ್ ಆಕ್ರಮಿತ ಪ್ರದೇಶದ 500 ಮೀ ನಿಂದ 2 ಕಿ.ಮೀ ವ್ಯಾಪ್ತಿಯಲ್ಲಿರುವ ಭಿಂಬೆರ್, ಹಾಟ್ ಸ್ಪ್ರಿಂಗ್, ಖೆಲ್ ಅಂಡ್ ಲಿಪಾ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಾರತೀಯ ಸೇನಾ ದಾಳಿಯಲ್ಲಿ ಇಬ್ಬರು ಯೋಧರು ಸತ್ತಿದ್ದಾರೆ ಎಂಬ ಮಾಹಿತಿ ನೀಡಿರುವ ಪಾಕ್ ಸರ್ಕಾರ, ಉಗ್ರರ ನೆಲೆಗಳಲ್ಲಿ ಅವರ ಯೋಧರು ಏನು ಮಾಡುತ್ತಿದ್ದರು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಭಾರತದ ಸೇನಾ ದಾಳಿಯಿಂದ ಬಿದ್ದಿರುವ ಹೊಡೆತವನ್ನು ಮುಟ್ಟಿ ನೋಡಿಕೊಳ್ಳುತ್ತಿರುವ ಪಾಕಿಸ್ತಾನ ಈಗ ಏನೇ ಹೇಳಿದರು, ಪ್ರತಿ ದಾಳಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪಾಕ್ ಪ್ರಧಾನಿ ಶಾಂತಿ ರಾಗ ಹಾಡುತ್ತಿದ್ದು, ಅದನ್ನು ಬಿಟ್ಟರೆ ಅವರಿಗೆ ಬೇರೆ ಮಾರ್ಗ ಇಲ್ಲ ಎಂಬುದು ಸ್ಪಷ್ಟ.

Leave a Reply