ಪಾಕಿಸ್ತಾನದ್ದು ಈಗಲೂ ಒಸಾಮಾನನ್ನು ಅಮೆರಿಕ ಹೊಡೆದಾಗ ತೋರಿದ ಎಡಬಿಡಂಗಿ ವರ್ತನೆಯೇ…

ಡಿಜಿಟಲ್ ಕನ್ನಡ ಟೀಮ್:

‘ಭಾರತದ ಆಕ್ರಮಣಕಾರಿ ಧೋರಣೆ ಖಂಡಿಸುತ್ತೇವೆ. ಗಡಿ ಉಲ್ಲಂಘಿಸಿದ ದಾಳಿಯಿಂದ ನಮ್ಮ ಇಬ್ಬರು ಯೋಧರು ಮೃತರಾಗಿದ್ದಾರೆ’ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ ಬೆನ್ನಲ್ಲೇ, ಭಾರತ ಹೇಳುತ್ತಿರುವಂತೆ ಇದೇನೂ ‘ನಿರ್ದಿಷ್ಟ ಗುರಿಯ ದಾಳಿ’ ಅಲ್ಲ ಎನ್ನುವ ವಿರೋಧಾಭಾಸ ಹೇಳಿಕೆಯನ್ನೂ ಅಲ್ಲಿನ ಸರ್ಕಾರ ನೀಡಿದೆ.

ಪಾಕಿಸ್ತಾನದ ಈ ದ್ವಂದ್ವ ಜಗತ್ತಿಗೆ ಹೊಸತೇನೂ ಅಲ್ಲ. ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕವು ಪಾಕಿಸ್ತಾನದ ನೆಲದಲ್ಲೇ ಹೊಡೆದು ಹಾಕಿತ್ತು. ಆಗಲೂ ಪಾಕಿಸ್ತಾನ, ‘ತನ್ನ ಸಾರ್ವಭೌಮತೆ ಮೇಲೆ ದಾಳಿಯಾಗಿದೆ’ ಎಂದು ಬೊಬ್ಬೆ ಹೊಡೆಯುತ್ತಲೇ, ಒಸಾಮಾ ನಮ್ಮ ನೆಲದಲ್ಲಿದ್ದದ್ದು ಗೊತ್ತೇ ಇರಲಿಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆಯನ್ನೂ ನೀಡಿತ್ತು.

ಪಾಕಿಸ್ತಾನದ ಪ್ರಮುಖ ಮಾಧ್ಯಮಗಳಾದ ‘ಡಾನ್’, ‘ದಿ ನೇಷನ್’ ಇವುಗಳ ಡಿಜಿಟಲ್ ಆವೃತ್ತಿಗೆ ಭೇಟಿ ನೀಡಿದರೂ ಅವು ಇದೇ ಹೇಳಿಕೆಗೆ ಒತ್ತು ನೀಡಿವೆ. ‘ಪಾಕಿಸ್ತಾನದ ಇಬ್ಬರು ಯೋಧರ ಸಾವು, ಆದರೆ ಸರ್ಜಿಕಲ್ ಸ್ಟ್ರೈಕ್ ಎಂಬುದು ಭಾರತದ ಸುಳ್ಳು’ ಎಂದು ವರದಿ ಮಾಡುತ್ತಿವೆ. ಇದು ಭಾರತವು ತನ್ನ ಜನರನ್ನು ಸಂತುಷ್ಟಗೊಳಿಸುವುದಕ್ಕೆ ನೀಡುತ್ತಿರುವ ಹೇಳಿಕೆ ಎಂಬ ಪ್ರತಿಪಾದನೆ ವರದಿಗಳಲ್ಲಿದೆ.

ಉಗ್ರವಾದದ ವಿಷಯದಲ್ಲಿ ತೋರುವ ನೀತಿಯನ್ನೇ ಇಲ್ಲೂ ಅನುಸರಿಸುತ್ತಿರುವುದು ಸ್ಪಷ್ಟ. ಉಗ್ರರನ್ನು ನಾವು ಕಳುಹಿಸಿರಲಿಲಲ್ಲ, ಅವರು ದೇಶವಿರದೇ ಕೃತ್ಯ ಎಸಗುವವರು ಎಂಬ ಮಾತಾಡುತ್ತ ಬಂದಿದ್ದ ಪಾಕಿಸ್ತಾನ, ಈಗ… ಭಾರತದಿಂದ ಹೊಡೆಸಿಕೊಂಡಿರುವು ಹೌದು ಆದರೆ ದೊಡ್ಡ ಹೊಡೆತ ಎನ್ನಲಾಗದು ಎಂಬಂತೆ ಮಾತಾಡುತ್ತಿದೆ.

ವಾಸ್ತವ ಏನೆಂದರೆ ಪಾಕಿಸ್ತಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಗಿದೆ. ಪ್ರಧಾನಿ ನವಾಜ್ ಷರೀಫ್ ಆಡಳಿತಾತ್ಮಕ ಮುಖ್ಯಸ್ಥನಾಗಿ ಪ್ರತಿಕ್ರಿಯೆ ಕೊಟ್ಟುಬಿಟ್ಟರು. ನಂತರ ಅಲ್ಲಿನ ಸೇನೆ ಇದನ್ನು ಮರೆಮಾಚುವುದಕ್ಕೆ ಕಣಕ್ಕಿಳಿಯಿತು. ಏಕೆಂದರೆ ಭಾರತವು ದಾಳಿ ನಡೆಸಿದ್ದನ್ನು ಸಂಪೂರ್ಣವಾಗಿ ಒಪ್ಪಿಕೊಂಡರೆ ಅದಕ್ಕೆ ಉತ್ತರ ಕೊಡಬೇಕಾದ ಒತ್ತಡ ಸೇನೆಯ ಮೇಲೆ ಬೀಳುತ್ತದೆ. ಹಾಗೆಂದೇ, ಇದು ಭಾರತೀಯ ಸೇನೆಯಿಂದ ಗಡಿಯಾಚೆಗಿಂದ ತೂರಿಬಂದ ಗುಂಡಷ್ಟೇ ಅಂತ ಬಿಂಬಿಸುವುದಕ್ಕೆ ಪಾಕ್ ಸೇನೆ ಹಾಗೂ ಐಎಸ್ಐ ಪ್ರಯತ್ನಿಸುತ್ತಿವೆಯಾದರೂ ಇವರ ಕತೆ ನಂಬಲು ಸಿದ್ಧರಿರುವವರು ಕಡಿಮೆ.

ಕಾರ್ಗಿಲ್ ಕದನದಲ್ಲೂ ಪಾಕಿಸ್ತಾನಕ್ಕೆ ನೇರವಂತಿಕೆ ಇರಲಿಲ್ಲ. ಪ್ರಾರಂಭದಲ್ಲಿ ಅವತ್ತಿನ ಪಾಕ್ ಮುಖ್ಯಸ್ಥ ಪರ್ವೇಜ್ ಮುಶರಫ್- ‘ಅವರೇನೂ ನಮ್ಮ ಸೈನಿಕರಲ್ಲ. ನಮ್ಮ ವ್ಯಕ್ತಿಗಳಷ್ಟೇ’ ಅಂತೆಲ್ಲ ಹೇಳುವ ಪ್ರಯತ್ನ ಮಾಡಿ, ಕೊನೆಗೆ ಅಧಿಕೃತ ಆಕ್ರಮಣ ಒಪ್ಪಿಕೊಂಡಿದ್ದರು.

ಹಾಗಾಗಿಯೇ, ನಿನ್ನೆಯ ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿಗೂ ಸಹ ಪಾಕಿಸ್ತಾನದ ಗೊಂದಲಕಾರಿ, ಮೀಸೆ ಮಣ್ಣಾಗಿಲ್ಲವೆಂಬ ರೀತಿಯ ಹೇಳಿಕೆಗಳು ಅದರ ಜಾಯಮಾನಕ್ಕೆ ತಕ್ಕುದಾಗಿಯೇ ಇವೆ.

Leave a Reply