ಭಾರತದ ಗುರಿ ನಿರ್ದಿಷ್ಟ ದಾಳಿಯ ಮರುದಿನದ ಚಿತ್ರಣವೇನು? ಚೀನಾ ಸೇರಿದಂತೆ ಯಾರೂ ಪಾಕ್ ಪರ ಸೊಲ್ಲೆತ್ತಲಿಲ್ಲ…

ಡಿಜಿಟಲ್ ಕನ್ನಡ ಟೀಮ್:

ಭಾರತದ ಅತ್ಯಂತ ಕಟ್ಟೆಚ್ಚರದ ಪರಿಣಾಮ, ಪಾಕಿಸ್ತಾನದಿಂದ ಯಾವುದೇ ಮರುಘಾತ ಸಾಧ್ಯವಾಗಿಲ್ಲ. ಆದರೆ ಗಡಿ ನಿಯಂತ್ರಣ ರೇಖೆಯ ಬಳಿ ಅಲ್ಲಲ್ಲಿ ಗುಂಡಿನ ಚಕಮಕಿ ವರದಿಯಾಗುತ್ತಿದೆ.

  •  37 ರಾಷ್ಟ್ರೀಯ ರೈಫಲ್ಸ್ ಸೈನಿಕನೊಬ್ಬ ಎಲ್ಒಸಿಯನ್ನು ದಾಟಿದ್ದರಿಂದ ಪಾಕಿಸ್ತಾನದ ಸೆರೆಯಾಗಿದ್ದಾರೆ. ಇದಕ್ಕೂ ಸರ್ಜಿಕಲ್ ಸ್ಟ್ರೈಕ್ ಗೂ ಯಾವುದೇ ಸಂಬಂಧ ಇಲ್ಲ. ಉದ್ದೇಶರಹಿತವಾಗಿ ಆಕಸ್ಮಿಕವಾಗಿ ಗಡಿ ದಾಟಿದ ಪ್ರಕರಣ ಇದಾಗಿದ್ದು, ಪಾಕಿಸ್ತಾನಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಡಿಜಿಎಂಒ ತಿಳಿಸಿದೆ. ಯೋಧನ ಬಿಡುಗಡೆಗಾಗಿ ಎಲ್ಲ ಬಗೆಯ ಪ್ರಯತ್ನ ಮಾಡಲಾಗುತ್ತಿದೆ.
  •  ಭಾರತದಿಂದ ಗುರಿ ನಿರ್ದಿಷ್ಟ ದಾಳಿಗಳೇನೂ ಆಗಿಲ್ಲ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನಕ್ಕೆ ಆ ಬಗ್ಗೆ ತಾನು ಸಾಕ್ಷ್ಯ ನೀಡಬೇಕಾದ ಅಗತ್ಯವಿಲ್ಲ ಎಂದಿದೆ ಭಾರತ. ಅರ್ಥಾತ್, ದಾಳಿಯ ಬಗ್ಗೆ ಜಾಗತಿಕ ಸಮುದಾಯ ಖಾತ್ರಿಪಡಿಸಿಕೊಂಡಿರುವಾಗ ನಿಮ್ಮ ಮಾತಿಗೆ ಬೆಲೆಯಿಲ್ಲ ಎಂಬಂತಿದೆ ಈ ಪ್ರತಿಕ್ರಿಯೆ.
  • ಶುಕ್ರವಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಬಿಸಿನೆಸ್ ಆ್ಯಸ್ ಯೂಸುವಲ್’ ಎಂಬಂತೆ ಪ್ರಾರಂಭಿಸಿದರು. ಸ್ವಚ್ಛ ಭಾರತ ಸಂಬಂಧದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಸೇನಾ ಕಾರ್ಯಾಚರಣೆ ಕುರಿತೇನೂ ವಿವರಕ್ಕಿಳಿಯದೇ ವಿಷಯಕ್ಕೆ ಬದ್ಧರಾಗಿ ಸ್ವಚ್ಛ ಭಾರತ ಅಭಿಯಾನವು ಭಾರತೀಯರಲ್ಲಿ ಬಿತ್ತಿರುವ ಬದಲಾವಣೆಯ ಮನಸ್ಥಿತಿಯನ್ನು ಉತ್ಸುಕವಾಗಿ ವಿವರಿಸಿದರು.
  • ಗಡಿಯಂಚಿಗಿನ ಹಳ್ಳಿಗಳು ತೆರವಾಗಿದ್ದು, ಅಗತ್ಯವಿದ್ದಲೆಲ್ಲ ಜನರಿಗೆ ಆಶ್ರಯ ಶಿಬಿರಗಳನ್ನು ನಿರ್ಮಿಸಲಾಗಿದೆ.
  • ಅಫಘಾನಿಸ್ತಾನ, ಬಾಂಗ್ಲಾದೇಶದಂಥ ಮುಸ್ಲಿಂ ರಾಷ್ಟ್ರಗಳು ಅದಾಗಲೇ ಭಾರತದ ಗುರಿ ನಿರ್ದಿಷ್ಟ ದಾಳಿಗೆ ಬೆಂಬಲ ವ್ಯಕ್ತಪಡಿಸಿವೆ. ‘ತಮ್ಮ ನೆರೆಯವರ ಮೇಲೆ ದಾಳಿಗೆ ಉಗ್ರರಿಗೆ ಯಾರೂ ತಮ್ಮ ನೆಲದಲ್ಲಿ ಸ್ವರ್ಗ ಒದಗಿಸಬಾರದು’ಅಂತ ಭಾರತಕ್ಕೆ ಅಫ್ಘನ್ ರಾಯಭಾರಿಯಾಗಿರುವ ಶೈದಾ ಅಬ್ದಾಲಿ ಹೇಳಿರುವುದು ಗಮನಾರ್ಹ.
  • ಅಮೆರಿಕ ಸಂಸತ್ತಿನ ಹಲವು ಸಂಸದರು ಈ ನಡೆ ಸಮರ್ಥನೀಯ ಎಂದಿದ್ದಾರೆ. ಭಾರತವು ಇಂಥ ದಾಳಿ ನಡೆಸುತ್ತಿರುವ ಮಾಹಿತಿ ಅಮೆರಿಕಕ್ಕೆ ಮೊದಲೇ ಇತ್ತೇ ಎಂಬ ಪ್ರಶ್ನೆ ಅಲ್ಲಿನ ವಿದೇಶ ವ್ಯವಹಾರದ ಅಧಿಕಾರಿಗಳಿಗೆ ಎದುರಾದಾಗ, ಅದನ್ನವರು ನಿರಾಕರಿಸಿಯೂ ಇಲ್ಲ- ಹೌದೆನ್ನಲೂ ಇಲ್ಲ. ಈ ಬಗ್ಗೆ ಹೆಚ್ಚು ಮಾತಾಡುವುದಿಲ್ಲ ಎಂದಿದ್ದಾರೆ. ಅತ್ತ, ಪಾಕಿಸ್ತಾನದ ಪ್ರಿಯ ಮಿತ್ರ ಚೀನಾ ಸಹ ಈ ಬಗ್ಗೆ ಯಾವ ಆಕ್ಷೇಪವನ್ನೂ ನೀಡಿಲ್ಲ ಹಾಗೂ ಪಾಕಿಸ್ತಾನದ ಪರ ನಿರೀಕ್ಷಿತ ಸಮರ್ಥನೆಗೆ ಬಂದಿಲ್ಲ ಎಂಬುದು ಈ ವಿಷಯದಲ್ಲಿ ಜಾಗತಿಕವಾಗಿ ಪಾಕಿಸ್ತಾನ ಏಕಾಂಗಿ ಎಂಬುದನ್ನು ನಿರೂಪಿಸಿದೆ.
  • ಗೃಹ ಸಚಿವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಶುಕ್ರವಾರ ಭದ್ರತಾ ಸಭೆ ನಡೆಯಿತು.

Leave a Reply