ಗಾಂಧಿನಗರದಲ್ಲೀಗ ಕೇಳಿ ಬರುತ್ತಿದೆ ಪಾರ್ಟ್ ಟೂನ ಕಲರವ

author-ssreedhra-murthy‘ಮುಂಗಾರು ಮಳೆ’ ಕನ್ನಡದಲ್ಲಿ ಟ್ರೆಂಡ್ ಸೆಟ್ ಮಾಡಿದ ಚಿತ್ರ. 2006ರಲ್ಲಿ ತೆರೆ ಕಂಡ ಚಿತ್ರ ಹಲವು ಕಲಾವಿದರ ವೃತ್ತಿ ಜೀವನಕ್ಕೆ ತಿರುವು ನೀಡಿದ್ದರ ಜೊತೆಗೆ ಯೋಗರಾಜ ಭಟ್ಟರ ವಿನೂತನ ಪ್ರಯೋಗಗಳಿಗೂ ಆರಂಭಿಕ ಬಿಂದುವಾಗಿತ್ತು. ಇತ್ತೀಚೆಗೆ ‘ಮುಂಗಾರು ಮಳೆ-2’ಎನ್ನುವ ಚಿತ್ರ ತೆರೆ ಕಂಡಿತು. ಅದರು ಸರಣಿ ಚಿತ್ರವಿರ ಬಹುದೆ ಎಂದು ನಿರೀಕ್ಷಿಸಿ ಚಿತ್ರಮಂದಿರಕ್ಕೆ ಹೋದವರಿಗೆ ನಿರಾಶೆ ಕಾದಿತ್ತು. ಮೊದಲ ಚಿತ್ರಕ್ಕೂ ಇದಕ್ಕೂ ಸಂಬಂಧವೇ ಇರಲಿಲ್ಲ. ಎರಡೂ ಚಿತ್ರಗಳಿಗೂ ಗಣೇಶ್ ನಾಯಕರಾಗಿದ್ದರು ಎನ್ನುವುದೊಂದೇ ಹೋಲಿಕೆಯಾಗಿತ್ತು. ಈ ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಿತ್ರ ಹೋಲಿಕೆ ಇತ್ತು. ಮೊದಲ ‘ಮುಂಗಾರು ಮಳೆ’ ಚಿತ್ರೀಕರಣ ಆರಂಭಿಸಿದ ಜುಲೈ 28ರಿಂದಲೇ ಎರಡನೇ ಭಾಗದ ಚಿತ್ರೀಕರಣವೂ ಆರಂಭವಾಗಿ ಮೊದಲ ಭಾಗ ಮುಗಿದ ಡಿಸಂಬರ್ 26ರಂದೇ ಚಿತ್ರೀಕರಣ ಮುಗಿಸಿತ್ತು. ಈ ಮೂಢ ನಂಬಿಕೆಯೂ ಸೇರಿ ಯಾವ ತಂತ್ರವೂ ನೆರವಿಗೆ ಬಾರದೆ ಮುಂಗಾರು ಮಳೆ-2 ಸೋಲನ್ನು ಕಂಡಿದೆ. ಆದರೆ ಇಂತಹ ಪ್ರಯೋಗಗಳು ಮಾತ್ರ ಗಾಂಧಿನಗರದಲ್ಲಿ ಹೆಚ್ಚಾಗುತ್ತಿವೆ.  ದುನಿಯಾ-2 ನಿರ್ಮಾಣದ ಸುದ್ದಿಯಲ್ಲಿದೆ. ಚಲಪತಿ ಇದನ್ನು ನೊಂದಣಿ ಮಾಡಿಸಿದ್ದರಾದರೂ ಸಿದ್ದರಾಜು ಈಗ ಇದರ ಹಕ್ಕುದಾರರಾಗಿದ್ದಾರೆ. ಎಸ್.ಮಹೇಂದರ್ ‘ಒನ್ಸ್‍ಮೋರ್ ಕೌರವ’ಎನ್ನುವ ಚಿತ್ರವನ್ನು ನಿರ್ದೇಶಿಸುವ ಸುದ್ದಿ ಇದೆ. 2002ರಲ್ಲಿ ತೆರೆ ಕಂಡು ಭರ್ಜರಿ ಜಯವನ್ನು ದಾಖಲಿಸಿದ್ದ ‘ಸಿಂಹಾದ್ರಿಯ ಸಿಂಹ’ದ ಭಾಗ ಎರಡು ಕೂಡ ನಿರ್ಮಾಣವಾಗಲಿದೆ. ಮೊದಲ ಭಾಗ ನಿರ್ಮಿಸಿದ್ದ ಪ್ರಭಾವತಿ ವಿಜಯಕುಮಾರ್ ಅವರೇ ಇದನ್ನು ನಿರ್ಮಿಸಲಿದ್ದು ಎಸ್.ನಾರಾಯಣ್ ಅವರೇ ನಿರ್ದೇಶಿಸಲಿದ್ದಾರಂತೆ. ಸುದೀಪ್ ಚಿತ್ರದ ನಾಯಕರಾಗುತ್ತಾರೆ ಎನ್ನುವ ಸುದ್ದಿ ಇದೆ. ಇದರ ಜೊತೆಗೆ ‘ಸಿಪಾಯಿ ರಾಮು-2’ ಕೂಡ ಸಿದ್ದತೆಯ ಹಂತದಲ್ಲಿದೆ.

ಆದರೆ ಈ ಬೆಳವಣಿಗೆಯನ್ನು ಆರೋಗ್ಯಕರ ಎಂದು ಖಂಡಿತ ಕರೆಯಲು ಸಾಧ್ಯವಿಲ್ಲ. ಸರಣಿ ಚಿತ್ರ ಎಂದರೆ ಕನಿಷ್ಠ ಮೂಲಕಥೆಯ ಎಳೆಯಾದರೂ ಮುಂದುವರೆಯ ಬೇಕು. ಆದರೆ ಕನ್ನಡದಲ್ಲಿ ಇಂತಹ ಪ್ರಯೋಗಗಳು ಸಂಪೂರ್ಣ ಹಳಿ ತಪ್ಪಿವೆ. ಮೂಲಚಿತ್ರದ ಹೆಸರಿನ ಖ್ಯಾತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಅದರ ಜನಪ್ರಿಯತೆಯ ಕಾರಣಗಳನ್ನು ಹುಡುಕಲು ಹೋಗುತ್ತಿಲ್ಲ. ವಾಣಿಜ್ಯ  ಮಂಡಳಿ ನಿಯಮಗಳಂತೆ ಒಂದು ಸಲ ಬಂದ ಟೈಟಲನ್ನು ಹತ್ತು ವರ್ಷಗಳವರೆಗೆ ಪುನರಾರ್ತಿಸುವಂತಿಲ್ಲ. ಈ ನಿಯಮದಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಕೂಡ ಈ ಭಾಗ ಎರಡರ ನಿರ್ಮಾಣದಲ್ಲಿದೆ. ಸರಣಿ ಚಿತ್ರಗಳ ಕಲ್ಪನೆ ಆರಂಭವಾಗಿದ್ದು ಹಾಲಿವುಡ್‍ನಲ್ಲಿ. ಸ್ಟಾರ್‍ ವಾರ್ಸ್‍, ಸ್ಟಾರ್ ಟ್ರಕ್‍, ಬ್ಯಾಕ್‍ ಟು ಪ್ಯೂಚರ್, ಟಾಯ್ ‍ಸ್ಟೋರಿ, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್‍,  ದಿ ಮ್ಯಾಟ್ರಿಕ್ಸ್‍, ಏಲಿಯನ್‍, ಜುರಾಸಿಕ್ ಪಾರ್ಕ್, ಲೆಥೆಲ್ ವೆಪನ್, ಜಾಸ್, ಬ್ಲಾಡ್, ರಾಂಬೋ ಹೀಗೆ ಕನಿಷ್ಠ ಅರವತ್ತು ಸರಣಿ ಚಿತ್ರಗಳು ಅಲ್ಲಿ ಬಂದಿವೆ. ಅವುಗಳಲ್ಲಿ ಬಹುತೇಕ ಗೆಲುವನ್ನೂ ಕಂಡಿವೆ. ಗಮನಿಸ ಬೇಕಾದ ಸಂಗತಿ ಎಂದರೆ  ಈ ಎಲ್ಲಾ ಚಿತ್ರಗಳಲ್ಲು ಕಥೆಯ ಸಾರ ಮುಂದುವರೆದಿತ್ತು.

ಹಾಲಿವುಡ್‍ನ  ಈ ಸೂತ್ರವನ್ನು ಬಾಲಿವುಡ್‍ ಕೂಡ ಅನುಸರಿಸಿತು. ಇತ್ತೀಚಿನ ವರ್ಷಗಳಲ್ಲೇ ಧೂಮ್, ಕ್ರಿಷ್, ಮುನ್ನಬಾಯಿ ಸರಣಿ ಚಿತ್ರಗಳು ಯಶಸ್ಸನ್ನು ಕಂಡವು. ಇಲ್ಲಿ ಕೂಡ ಕಥೆಯ ಸಾರ ಮುಂದುವರೆದಿತ್ತು. ಡಾನ್, ಗೋಲ್‍ಮಾಲ್‍, ದಬಂಗ್‍, ಹೇರಾಫೇರಿ, ಜಿಸ್ಮ, ಮರ್ಡರ್ ಹೀಗೆ ಬಾಲಿವುಡ್‍ನಲ್ಲಿ ಕೂಡ ಸರಣಿ ಚಿತ್ರಗಳ ಪರಂಪರೆ ದೀರ್ಘವಾಗಿಯೇ ಇದೆ. ಚಿತ್ರದ ಕಥಾನಕದಲ್ಲಿ ಇನ್ನೂ ಬೆಳೆಸ ಬಹುದಾದ ಎಳೆಗಳು ಇದ್ದಾಗ ಮಾತ್ರ ಸರಣಿ ಚಿತ್ರಗಳು ರೂಪುಗೊಂಡಿದ್ದನ್ನು ಬಾಲಿವುಡ್‍ನಲ್ಲಿ ಕೂಡ ನಾವು ಗಮನಿಸ ಬಹುದು. ಆದರೆ ಇದನ್ನು ಅನುಸರಿಸಲು ಹೋದ ಕನ್ನಡದಲ್ಲಿ ಸರಣಿ ಚಿತ್ರಗಳು ಗಟ್ಟಿಯಾಗಿ ರೂಪಗೊಂಡ ಉದಾಹರಣೆಗಳು ಬೆರಳೆಣಿಕೆಯಷ್ಟು. ಬಾಂಡ್ ಚಿತ್ರಗಳ ಸರಣಿಯಂತೆ ಬಂದ  ಜೇಡರ ಬಲೆ, ಗೋವಾದಲ್ಲಿ ಸಿ.ಐ.ಡಿ 999, ಅಪರೇಷನ್ ಜಾಕ್‍ಪಾಟ್, ಅಪರೇಷನ್ ಡೈಮಂಡ್ ರಾಕೆಟ್ ಸರಣಿ ಚಿತ್ರಗಳು ಎಂದು ಕರೆಯ ಬಹುದಾದ ಉದಾಹರಣೆ. ಈ ಎಲ್ಲಾ ಚಿತ್ರಗಳನ್ನು ದೊರೈ-ಭಗವಾನ್ ಅವರೇ ನಿರ್ದೇಶಿಸಿದ್ದರು. ಮೊದಲ ಚಿತ್ರ ಹೊರತು ಪಡಿಸಿ ಉಳಿದ ಎಲ್ಲಾ ಚಿತ್ರಗಳಿಗೂ ಉದಯಶಂಕರ್ ಅವರ ಸಾಹಿತ್ಯವಿದ್ದರೆ ಎಲ್ಲಾ ಚಿತ್ರಗಳಿಗೂ ಜಿ.ಕೆ.ವೆಂಕಟೇಶ್ ಸಂಗೀತವಿತ್ತು. ರಾಜ್ ಕುಮಾರ್ ಅವರ ಜೊತೆಗಿನ ನಾಯಕಿಯರು ಮಾತ್ರ ಬದಲಾಗುತ್ತಾ ಬಂದಿದ್ದರು. ಇಂತಹ ಇನ್ನೊಂದು ಗೆದ್ದ ಉದಾಹರಣೆ ಕಂಡದ್ದು ಸಾಂಗ್ಲಿಯಾನ ಭಾಗ ಒಂದು ಮತ್ತು ಎರಡು ಚಿತ್ರಗಳಲ್ಲಿ ಮಾತ್ರ. ಈ ಎರಡೂ ಚಿತ್ರಗಳ ನಿರ್ದೇಶಕರು ಪಿ.ನಂಜುಂಡಪ್ಪನವರೇ ಆಗಿದ್ದರು. ಶಂಕರ್ ನಾಗ್, ಭವ್ಯ ಸೇರಿದಂತೆ ತಾರಾಗಣ ಕೂಡ ಮುಂದುವರೆದಿತ್ತು. ಎರಡೂ ಚಿತ್ರಗಳು ಗೆಲುವನ್ನು ಕಂಡಿದ್ದು. ನಂಜುಂಡಪ್ಪ ಮತ್ತು ಶಂಕರ್ ನಾಗ್ ಅವರ ಅಕಾಲಿಕ ಮರಣದಿಂದ ಸರಣಿ ಮುಂದುವರೆಯಲ್ಲಿಲ್ಲ. ಬಹಳ ವರ್ಷಗಳ ನಂತರ ಭಾಗ ಮೂರು ಬಂದರೂ ಕಥೆಯಲ್ಲಾಗಲಿ, ಪಾತ್ರ ಪೋಷಣೆಯಲ್ಲಾಗಲಿ ಮೂಲದ ಜೊತೆಗೆ ಸಂಬಂಧವಿಲ್ಲದ ಕಾರಣ ಸೋಲನ್ನು ಕಂಡಿತು. ಗಂಧದ ಗುಡಿ ಚಿತ್ರದ ಎರಡನೇ ಭಾಗವನ್ನು ಮೊದಲ ಚಿತ್ರವನ್ನು ನಿರ್ಮಿಸಿದ್ದ ಎಂ.ಪಿ.ಶಂಕರ್ ಅವರೇ ನಿರ್ಮಿಸಿದ್ದರು. ಈ ಪ್ರಯತ್ನ ಕೂಡ ಯಶಸ್ಸನ್ನು ಕಂಡಿರಲಿಲ್ಲ.

 1974ರಲ್ಲಿ ಮಲೆಯಾಳಂ ಚಿತ್ರ ‘ಚಿತ್ತಕಾರಿ’ ಭಾರತೀಯ ಚಿತ್ರರಂಗದಲ್ಲೇ ಟ್ರೆಂಡ್ ಸೆಟರ್ ಎನ್ನಿಸಿಕೊಳ್ಳುವ ಯಶಸ್ಸನ್ನು ಪಡೆಯಿತು. ಇದು ಹಿಂದಿಯಲ್ಲಿ ‘ಜ್ಯೂಲಿ’ಯಾದಾಗಲೂ ಗೆಲುವನ್ನು ಕಂಡಿತ್ತು. 2012ರಲ್ಲಿ ಮೂಲ ಚಿತ್ರ ನಿರ್ದೇಶಿಸಿದ್ದ ಸೇತು ಮಾಧವನ್ ಅವರ ಮಗ ಸಂತೋಷ್ ಸೇತು ಮಾಧವನ್  ಅದೇ ಹೆಸರಿನಲ್ಲಿ ಚಿತ್ರವನ್ನು ಮತ್ತೆ ನಿರ್ದೇಶಿಸಿದ್ದರು. ಆಗ ಜ್ಯೂಲಿ ಲಕ್ಷ್ಮಿಯವರನ್ನು ಜ್ಯೂಲಿಯ ತಾಯಿಯ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಲಾಗಿತ್ತು. ಆಗ ಅವರು ‘ಕೆಲವು ಚಿತ್ರಗಳು ಮೈಲುಗಲ್ಲಾಗಲು ಚಾರಿತ್ರಿಕ, ಸಾಂಸ್ಕೃತಿಕ ಕಾರಣಗಳಿರುತ್ತವೆ. ಯಾರೂ ಅದನ್ನು ಮತ್ತೆ ರೂಪಿಸಲು ಸಾಧ್ಯವಿಲ್ಲ. ಮೂಲವೆಂದಿದ್ದರೂ ಮೂಲವೇ. ಅನುಕರಣೆ ಸೃಜನಶೀಲತೆಯಲ್ಲ’ ಎಂದಿದ್ದರು. ಈಗ ಕನ್ನಡದಲ್ಲಿ ಪಾರ್ಟ್ ಟೂ ಚಿತ್ರಗಳನ್ನು ನಿರ್ಮಿಸಲು ಹೊರಟಿರುವ ನಿರ್ಮಾಪಕರು ಕೇಳಿಸಿಕೊಳ್ಳ ಬೇಕಾದ ಮಾತಿದು.

Leave a Reply