ಕಾವೇರಿ ನಿರ್ವಹಣಾ ಮಂಡಳಿಗೆ ಆದೇಶ, ಅ. 1ರಿಂದ 6ರವರೆಗೆ 6 ಸಾವಿರ ಕ್ಯುಸೆಕ್ಸ್ ನೀರು ಬಿಡಿ… ವಾದಕ್ಕೆ ನಾರಿಮನ್ ಹಿಂದೇಟು… ಕರ್ನಾಟಕಕ್ಕೆ ಶುಕ್ರವಾರ ಸಿಕ್ಕ ಮಹಾಘಾತಗಳು

ಡಿಜಿಟಲ್ ಕನ್ನಡ ಟೀಮ್:

ಇದು ಕರ್ನಾಟಕಕ್ಕೆ ಕೊನೆ ಎಚ್ಚರಿಕೆ, ಅಕ್ಟೋಬರ್ 1ರಿಂದ ಆರರವರೆಗೆ ಪ್ರತಿದಿನ 6 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂದಿದೆ ಸುಪ್ರೀಂಕೋರ್ಟ್. ಅಲ್ಲದೇ ಮೂರೇ ದಿನಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರಕ್ಕೆ ಸೂಚಿಸುವ ಮೂಲಕ ಜಲಾಶಯಗಳನ್ನು ರಾಜ್ಯದ ಹಿಡಿತದಿಂದಲೇ ತಪ್ಪಿಸುವ ಹೆಜ್ಜೆ ಇಟ್ಟಿದೆ.

ಇದಕ್ಕೆಲ್ಲ ಕಲಶವಿಟ್ಟಂತೆ ನಾರಿಮನ್ ನೇತೃತ್ವದ ವಕೀಲರ ತಂಡದ ನಿರಾಕರಣ ಧೋರಣೆಯೂ ಪ್ರಕಟವಾಗಿ, ಕರ್ನಾಟಕಕ್ಕೆ ನಡುನೀರಿನಲ್ಲಿ ಪರದೇಸಿಯಾದ ಅನುಭವವಾಯಿತು. ತಮ್ಮ ವಾದ ಮಂಡಿಸುವಾಗ ನಾರಿಮನ್ ಅವರು, ತಮ್ಮ ವಾದದ ವ್ಯಾಪ್ತಿ ಕರ್ನಾಟಕ ಸರ್ಕಾರ ಒದಗಿಸಿರುವ ಟಿಪ್ಪಣಿಗಳ ಮಿತಿಯಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಈ ಹಂತದಲ್ಲಿ, ತಾವು ಈ ಹಿಂದೆ ವಾದದದಿಂದ ಹಿಂದೆ ಸರಿಯುವುದಾಗಿ ಎರಡು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಗಿ ಅವರು ತಿಳಿಸಿದರು. ಅಲ್ಲಿಗೇ ಕರ್ನಾಟಕದ ವಾದ ಮುಕ್ಕಾಲು ಸತ್ತು ಮಲಗಿತು.

ಇದೀಗ ಸಾರಾಂಶವೇನೆಂದರೆ, ಕರ್ನಾಟಕ ಮತ್ತು ತಮಿಳುನಾಡುಗಳು ತಕ್ಷಣಕ್ಕೆ ಮಂಡಳಿಗೆ ತಮ್ಮ ಪ್ರತಿನಿಧಿಗಳ ಹೆಸರು ಸೂಚಿಸಬೇಕು. ಅದು ಆರನೇ ತಾರೀಕಿಗೆ ಕಾವೇರಿ ಕೊಳ್ಳದ ವಸ್ತುಸ್ಥಿತಿ ವರದಿ ನೀಡಬೇಕು. ಹಾಗಂತ ಅಲ್ಲಿಯವರೆಗೆ ನೀರು ಬಿಡುವುದರಿಂದ ದೂರವಿರುವಂತೇನೂ ಇಲ್ಲ. ಸುಪ್ರೀಂ ತೀರ್ಮಾನ ಹೇಗಿದೆ ಎಂದರೆ- ಇನ್ನು ಮುಂದೆ ನೀರಿನ ವಿಚಾರದಲ್ಲಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ; ಅದನ್ನು ಮಂಡಳಿಯಲ್ಲೇ ಬಗೆಹರಿಸಿಕೊಳ್ಳಿ; ಇನ್ನು ಮಂದೆ ನ್ಯಾಯಾಂಗ ನಿಂದನೆ ಆಯಾಮವನ್ನು ಮಾತ್ರವೇ ಸುಪ್ರೀಂ ಕೋರ್ಟ್ ನೋಡಿಕೊಳ್ಳಲಿದೆ ಎನ್ನುವಂಥ ಆಘಾತಕಾರಿ ನಡೆ.

ಮುಖ್ಯವಾಗಿ, ತ್ರಿಸದಸ್ಯ ಪೀಠದ ಮುಂದೆ ಕಾವೇರಿ ನಿರ್ವಹಣೆ ಮಂಡಳಿ ರಚನೆ ಸಂಬಂಧದ ಪ್ರಶ್ನೆ ಬಾಕಿ ಇರುವಾಗ, ಈ ದ್ವಿಸದಸ್ಯ ಪೀಠವೇಕೆ ತನ್ನ ವ್ಯಾಪ್ತಿಯಲ್ಲಿಲ್ಲದ ಆದೇಶ ಮಾಡಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮಾಜಿ ಪ್ರಧಾನಿ ದೇವೇಗೌಡರೂ ಸಹ ತಮ್ಮ ಪ್ರತಿಕ್ರಿಯೆಯಲ್ಲಿ ಇದನ್ನೇ ಹೇಳಿದ್ದಾರೆ- ‘ಕೊನೆಪಕ್ಷ, ನಾರಿಮನ್ ಅವರು ಸ್ಪೆಷಲ್ ಲೀವ್ ಪಿಟೀಷನ್ ನಲ್ಲಿ ಮಂಡಳಿ ರಚನೆ ಪ್ರಶ್ನೆ ಬಾಕಿ ಇದೆ ಎಂಬ ಆಕ್ಷೇಪವನ್ನಾದರೂ ಆ ಸಂದರ್ಭದಲ್ಲಿ ಹೇಳಬಹುದಿತ್ತು’ ಎಂದಿರುವ ಗೌಡರು ಸುಪ್ರೀಂ ಕೋರ್ಟಿನ ದುರಂತ ಆದೇಶವಿದು ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದೇನು?

ರಾಜ್ಯದ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲರು ಸುದ್ದಿವಾಹಿನಿಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಕೊಟ್ಟಿಲ್ಲ. ದೆಹಲಿಯಲ್ಲೇ ಇರುವ ಮುಖ್ಯಮಂತ್ರಿ ಜತೆಗೆ ಫಾಲಿ ನಾರಿಮನ್ ಅವರ ನಿವಾಸಕ್ಕೆ ತೆರಳಿ ಆದೇಶದ ಸ್ಪಷ್ಟ ಪರಿಣಾಮ ತಿಳಿದ ನಂತರವೇ ಮುಂದಿನ ಕ್ರಮದ ಬಗ್ಗೆ ಪ್ರತಿಕ್ರಿಯಿಸುವುದಾಗಿ ಅವರು ಹೇಳಿದ್ದಾರೆ. ಶನಿವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ರಾಜ್ಯದ ಸಂಸದರೆಲ್ಲ ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ, ಕಾವೇರಿ ಮಂಡಳಿಯ ರಚನೆ ಮುಂದಕ್ಕೆ ಹಾಕಬಹುದೆಂಬ ಅಭಿಪ್ರಾಯ ಕಾನೂನು ವಲಯದಲ್ಲಿ ವ್ಯಕ್ತವಾಗಿದೆ. ಕೇಂದ್ರವು ತರಾತುರಿಯಲ್ಲಿ ಇದಕ್ಕೆ ಏಕೆ ಒಪ್ಪಿಕೊಂಡಿತು ಎಂಬ ಪ್ರಶ್ನೆ ಎದ್ದಿದೆ. ಕೇಂದ್ರದ ಕರ್ನಾಟಕ ಪರ ನಿಷ್ಕಾಳಜಿ ಬಗ್ಗೆ ಆಕ್ರೋಶ ಒಂದೆಡೆಯಾದರೆ, ನಾರಿಮನ್ ಅವರು ರಾಜ್ಯದ ಪರ ಆಕ್ಷೇಪವನ್ನೇ ಎತ್ತದಿದ್ದರೆ ಇನ್ಯಾರೋ ನಮ್ಮನ್ನು ಕೈಹಿಡಿಯಬೇಕು ಎಂದು ಬಯಸುವುದು ಹೇಗೆ?

ಇತ್ತ ಬ್ರಿಜೇಶ್ ಕಾಳಪ್ಪ ಸೇರಿದಂತೆ ಆ ತಂಡದಲ್ಲಿದ್ದ ಯಾವ ವಕೀಲರೂ ಸಹ, ನಾರಿಮನ್ ಅವರು ನಿರಾಕರಣೆ ತೋರುತ್ತಿರುವುದರಿಂದ ಕರ್ನಾಟಕಕ್ಕೆ ಇನ್ನಷ್ಟು ಸಮಯ ಬೇಕೆಂದು ಕೇಳಲಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತ ನಮ್ಮ ಆಕ್ಷೇಪಗಳನ್ನು ಪೀಠದ ಮುಂದಿರಿಸಬೇಕಿರುವುದರಿಂದ ಸಮಯ ಬೇಕು ಎಂದೂ ಕೇಳಲಿಲ್ಲ. ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಗೌರವ ಸಲ್ಲಿಸಬೇಕು ಎಂಬ ಸುಪ್ರೀಂ ಉಪದೇಶವನ್ನು ಕೇಳಿಕೊಂಡುಬಂದಿದ್ದಷ್ಟೇ ಇವರೆಲ್ಲರ ಸಾಧನೆ.

ನೀರು ಬಿಡುವುದಲ್ಲದೇ, ನಮ್ಮ ಜಲಾಶಯದ ಕೀಲಿಕೈ ಅನ್ನು ಸಹ ಬೇರೆಯವರಿಗೊಪ್ಪಿಸುವ ಕೆಟ್ಟ ಸ್ಥಿತಿಯಲ್ಲಿ ಕರ್ನಾಟಕ ನಿಂತಿದೆ. ಪರಿಹಾರವೇನಿದ್ದರೂ ಸಿಗುವುದಿದ್ದರೆ ಅದು ರಾಜಕೀಯವಾಗಿಯೇ ಹೊರತು, ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎಂಬುದನ್ನು ಶುಕ್ರವಾರದ ಸುಪ್ರೀಂ ಆದೇಶ ಸ್ಪಷ್ಟಪಡಿಸಿದೆ.

Leave a Reply