ಕಲಾವಿದರಿಗೆ ಗಡಿಗಳಿಲ್ಲ… ಹಾಗಂತ ತಮಗೆ ಅನ್ನ- ಅವಕಾಶ ಸಿಕ್ಕ ನೆಲದ ಮೇಲಿನ ಉಗ್ರವಾದ ಖಂಡಿಸುವ ನೈತಿಕತೆಯೂ ಬೇಕಾಗಿಲ್ಲವೇ?

ಪ್ರವೀಣ್ ಕುಮಾರ್

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಉಗ್ರಸ್ವರೂಪವನ್ನು ಬಹಳಷ್ಟು ವಿಷಯಗಳಲ್ಲಿ ಒಪ್ಪಲಾಗದು. ಆದರೆ, ಪಾಕಿಸ್ತಾನಿ ನಟರಿಗೆ ಇಲ್ಲಿ ನಿಷೇಧ ಪರಿಸ್ಥಿತಿ ರೂಪುಗೊಳ್ಳುತ್ತಿರುವ ಕುರಿತ ಆಕ್ಷೇಪದ ಬೊಬ್ಬೆಗೆ ಅನನ್ಯವಾಗಿ ಪ್ರತಿಕ್ರಿಯಿಸಿದ ಖ್ಯಾತಿ ರಾಜ್ ಠಾಕ್ರೆಗೆ ಸಲ್ಲಬೇಕು.

ಇಷ್ಟಕ್ಕೂ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದದ್ದು ಸಲ್ಮಾನ್ ಖಾನ್ ಹೇಳಿಕೆಗೆ. ‘ಪಾಕಿಸ್ತಾನಿ ನಟರೆಲ್ಲ ಉಗ್ರವಾದಿಗಳಲ್ಲ, ಅವರಿಗೆ ಭಾರತದಲ್ಲಿ ಅವಕಾಶ ನಿಷೇಧಿಸಬಾರದು’ ಅಂತ ಬ್ಯಾಟ್ ಮಾಡಿದ್ದು ಸಲ್ಮಾನ್ ಖಾನ್. ಮಿದುಳನ್ನು ಕಿಸೆಯಲ್ಲಿಟ್ಟುಕೊಂಡವರು ನೋಡಬಹುದಾದ ಚಿತ್ರಗಳನ್ನಷ್ಟೇ ಸೃಜಿಸಿರುವ ಸಲ್ಮಾನ್ ಖಾನ್ ಹೇಳಿಕೆಗಳೆಲ್ಲ ರಾಷ್ಟ್ರೀಯ ಚರ್ಚೆಯ ವಿಷಯವಾಗಬೇಕಿರಲಿಲ್ಲ. ಆದರೇನು ಮಾಡುವುದು, ಈ ದೇಶದ ಜನಪ್ರಿಯ ಮಾದರಿ ರೂಪುಗೊಂಡಿರುವುದೇ ಹೀಗೆ. ಹಾಗಾಗಿಯೇ ತಮ್ಮನ್ನು ರಾಷ್ಟ್ರವಾದಿಗಳು ಎಂದು ಕರೆದುಕೊಳ್ಳುವ ಬುದ್ಧಿ ಬೆಳೆಯದ ಸಮೂಹವೂ ಈತನ ಭಜರಂಗಿ ಭಾಯಿಜಾನ್ ಚಿತ್ರ ನೋಡುತ್ತಲೇ ಪರಮ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಕೊಟ್ಟುಕೊಂಡಿತ್ತು. ಮೋದಿ ಪಕ್ಕ ನಿಂತುಕೊಂಡು ಫೋಟೊ ತೆಗೆಸಿಕೊಂಡಿದ್ದಾನೆಂದಮೇಲೆ ಸಲ್ಮಾನ್ ಒಬ್ಬ ಮಿನಿ ದೇವತೆಯೇ ಎಂಬುದು ಭಕ್ತಗಣದ ಸರಳ ಸುಂದರ ಲೆಕ್ಕಾಚಾರ. ಯಾವುದು ಭಾರತ- ಪಾಕಿಸ್ತಾನಗಳೆರಡರ ಮಾರುಕಟ್ಟೆಯಲ್ಲೂ ಒಪ್ಪಿತವೋ ಅಂಥ ಸೂತ್ರವನ್ನಷ್ಟೇ ಇಟ್ಟುಕೊಂಡು ಸಿನಿಮಾ ಮಾಡಿ ಲಾಭ ಗಳಿಸುವುದು ಬಾಲಿವುಡ್ ಖಾನ್ದಾನ್ ಗಳ ಬುದ್ಧಿವಂತಿಕೆ ಸೂತ್ರ. ಅಷ್ಟರಮಟ್ಟಿಗೆ ಅವರ ವೃತ್ತಿಪರತೆ ಒಪ್ಪಬಹುದೇ ಹೊರತು, ಅವರಿಂದ ಪಿಲಾಸಫಿ ಕೇಳಿಸಿಕೊಳ್ಳಲಾದೀತೇ?

ಹೀಗಾಗಿಯೇ ರಾಜ್ ಠಾಕ್ರೆ ಕೊಟ್ಟ ಉತ್ತರದಲ್ಲಿ ಒಂದಂಶವಂತೂ ಬಹಳ ಪ್ರಮುಖವೆನಿಸುತ್ತದೆ. ‘ಈ ಪಾಕಿಸ್ತಾನಿ ನಟರಿಗೆ ಉರಿ ಮೇಲಿನ ಉಗ್ರದಾಳಿಯನ್ನು ಖಂಡಿಸಿ ಎಂಬ ಒತ್ತಡ ಹೇರಲಾಗಿತ್ತು. ಅವರೇನು ಮಾಡಿದರು? ಅದಕ್ಕೆ ನಿರಾಕರಿಸಿ ಪಾಕಿಸ್ತಾನಕ್ಕೆ ಹಿಂತಿರುಗಿದರು. ಕಲಾಕಾರರಿಗೆ ಗಡಿಗಳಿರುವುದಿಲ್ಲ ಎಂಬ ಬಕ್ವಾಸುಗಳನ್ನೆಲ್ಲ ಕೇಳಿ ಸಾಕಾಗಿದೆ. ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ನಾವೂ ಗುಲಾಂ ಅಲಿ ಸಂಗೀತ ಕಛೇರಿ ಕೇಳ್ತೆವೆ ಅಂತ ಶಸ್ತ್ರ ಪಕ್ಕಕ್ಕಿಟ್ಟು ಬರಬಹುದಲ್ಲವೇ? ಅವರೇನು ನಮ್ಮ ಕೂಲಿಯೇ? ಅವರಲ್ಲಿ ತಿನ್ನುತ್ತಿರುವುದು ಸಲ್ಮಾನ್ ಖಾನ್ ತಿಂದಂತೆ ಫಿಲ್ಮಿ ಗುಂಡುಗಳನ್ನಲ್ಲ. ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ ಅಂತ ಪದೇ ಪದೆ ನಮಗೆ ಹೇಳುತ್ತಾರೆ. ಅದನ್ನು ಕಟ್ಟಿಕೊಂಡು ನಾವೇನು ಮಾಡೋಣ? ನಮಗೆ ಸಿಗುತ್ತಿರುವುದು ಕೇವಲ ಭಯೋತ್ಪಾದನೆ ಮಾತ್ರ ತಾನೇ? ಇನ್ನು, ಇಷ್ಟು ದೊಡ್ಡ ಜನಸಂಖ್ಯೆಯ ದೇಶದಲ್ಲಿ ಕಲಾಕಾರರಿಗೆ, ಪ್ರತಿಭೆಗಳಿಗೇನು ಬರವೇ?’

ಸಲ್ಮಾನ್ ಖಾನ್ ಗೆ ಅರ್ಥವಾಗುವ ಭಾಷೆಯಲ್ಲೇ ರಾಜ್ ಠಾಕ್ರೆ ಡೈಲಾಗ್ ಉರುಳಿಸಿದ್ದಾರೆ.

ಅದಿರಲಿ…

ಈ ಹಂತದಲ್ಲಿ ಚಿಂತಕ ತಾರೇಕ್ ಫತೇಹ್, ಉಪನ್ಯಾಸವೊಂದರಲ್ಲಿ ಮಂಡಿಸಿದ ವಾದವೊಂದು ಉಲ್ಲೇಖಾರ್ಹ. ‘ಭಾರತ- ಪಾಕಿಸ್ತಾನಗಳ ನಡುವೆ ವಿನಿಮಯಗಳು ಬೇಡ ಎಂದಲ್ಲ. ಆದರೆ ಪಾಕಿಸ್ತಾನಿಗೆ ವೀಸಾ ಕೊಡುವುದಕ್ಕೆ ಮುಂಚೆ ಘೋಷಣಾಪತ್ರವೊಂದಕ್ಕೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಬೇಕು. ‘ಜಿನ್ನಾನ ಮತೀಯವಾದಿ ದ್ವಿರಾಷ್ಟ್ರ ಸಿದ್ಧಾಂತದ ಮೇಲೆ ನನಗೆ ನಂಬಿಕೆ ಇಲ್ಲ, ಅದನ್ನು ವಿರೋಧಿಸುತ್ತೇನೆ’ ಎಂದು ಹೇಳುವುದನ್ನು ಕಡ್ಡಾಯಗೊಳಿಸಿ. ಇದೇನೂ ಹೊಸದಲ್ಲ. ಹಲವು ದೇಶಗಳು ತಮ್ಮೊಳಗೆ ವಿದೇಶಿಗರನ್ನು ಬಿಟ್ಟುಕೊಳ್ಳುವ ಮುನ್ನ ಹಲಬಗೆಯ ಘೋಷಣೆಗಳಿಗೆ ಸಹಿ ಮಾಡಿಸಿಕೊಳ್ಳುತ್ತವೆ’  ಎಂಬರ್ಥದಲ್ಲಿ ವಾದ ಮಂಡಿಸಿದ್ದರು ತಾರೇಕ್.

ಉದಾರವಾದಿಗಳ ಸಮಸ್ಯೆ ಏನೆಂದರೆ, ಉಳಿದೆಲ್ಲ ದಿನಗಳಲ್ಲಿ ಸಹಿಷ್ಣುತೆ- ಧರ್ಮನಿರಪೇಕ್ಷತೆಗಳ ಬಗ್ಗೆ ಭಾಷಣ ಮಾಡಿಕೊಂಡಿರುವ ಈ ವರ್ಗ, ಯಾವಾಗ ಈ ಗುಣಗಳನ್ನು ಪಾಕಿಸ್ತಾನಿಯರು ಇಲ್ಲವೇ ಇಸ್ಲಾಂವಾದಿಗಳು ಅನುಸರಿಸಬೇಕಾದ ಅಗತ್ಯ ಬರುತ್ತದೆಯೋ ಆಗ ತಮ್ಮ ವಾದವನ್ನೇ ಬದಲಿಸಿಕೊಳ್ಳುತ್ತಾರೆ. ‘ಬಿಡಿ, ನಾವೇಕೆ ಪಾಕಿಸ್ತಾನಿಗಳಂತೆ ಯೋಚಿಸಬೇಕು? ಅವರಂತಾಗುವುದು ನಮ್ಮ ಗುರಿ ಅಲ್ಲವಲ್ಲ? ನಮ್ಮ ಪರಂಪರೆ- ಮೌಲ್ಯಗಳೇ ಬೇರೆ’ ಅಂತೆಲ್ಲ ಉಪದೇಶಕ್ಕೆ ಕೂರುತ್ತಾರೆ. ಉಳಿದ ದಿನಗಳಲ್ಲಿ ಭಾರತಕ್ಕೆ ಪರಂಪರೆ- ಮೌಲ್ಯಗಳೇ ಇಲ್ಲ ಅಂತ ನಿಂದಿಸಿಕೊಂಡು ಅನ್ನ ಹುಡುಕಿಕೊಳ್ಳುವವರು ಇವರೇ!

ಇವರನ್ನು ತೃಪ್ತಿಪಡಿಸುವುದಕ್ಕಾಗಿ ಭಾರತ ಸಹಿಷ್ಣುತನ ತೋರಬೇಕಾದ, ತಾನು ಭಿನ್ನ ಎಂದು ತೋರಿಸಿಕೊಳ್ಳಬೇಕಾದ ದರ್ದೇನಿದೆ?

ಪಾಕಿಸ್ತಾನದ ವಿರೋದಾಭಾಸವನ್ನೂ ಗಮನಿಸಬೇಕು. ಕಲೆಗೆ ಗಡಿ ಮೀರಿದ ಬೆಲೆ ಇರಬೇಕು ಎನ್ನುವವರು ಸ್ವಂತ ನೆಲದಲ್ಲಿ ಆ ಆದರ್ಶ ಪಾಲಿಸಬೇಕಾಗುತ್ತದೆ. ಭಾರತ- ಪಾಕಿಸ್ತಾನದ ರೊಮ್ಯಾಂಟಿಕ್ ಕಲ್ಪನೆಗಳನ್ನು ಕಟ್ಟಿಕೊಡುವ, ಉಳಿದಂತೆ ಲಲ್ಲೆಗರೆಯುವ ಸಿನಿಮಾಗಳಿಗೆ ಅಲ್ಲಿ ಸ್ವಾಗತವಿರುವುದು ಬಿಟ್ಟರೆ, ಅಕ್ಷಯ್ ಕುಮಾರ್ ಅಭಿನಯದ ಬೇಬಿ ಚಿತ್ರವನ್ನು ಆ ದೇಶ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅಲ್ಲಿ ಉಗ್ರವಾದ ನಿಗ್ರಹದ ಮಾತಿದೆಯಲ್ಲ? ಇಂಥ ನಿಲುವುಗಳೇನೂ ಇಲ್ಲದ ಮಸಾಲೆ ವೀರ ಸಲ್ಮಾನ್ ಖಾನ್, ಶಾರುಖ್ ರೆಲ್ಲ ಪಾಕಿಸ್ತಾನದ ಪರ ಬ್ಯಾಟ್ ಮಾಡುವುದು ಸಹಜವೇ. ನಿಷೇಧ ಪ್ರಕ್ರಿಯೆಗಳಿಂದ ತಮ್ಮ ಮಾರುಕಟ್ಟೆಗೆ ಕುತ್ತು ಬರುವ ಸಹಜ ಹೆದರಿಕೆ ಇದು.

ಆದರೆ ಈ ಬಗ್ಗೆ ‘ಕಲಾವಿದರಿಗೆ ಗಡಿಯಿಲ್ಲ’ ಎಂದು ಉಪದೇಶ ಕೊಡುವುದಕ್ಕೆ ಮೊದಲು ಬಾಲಿವುಡ್ ಖಾನ್ದಾನ್ ಕೆಲ ಅರ್ಹತೆ ತೋರಬೇಕಾಗುತ್ತದೆ. ಮುಂಬೈನಲ್ಲಿ ಪತ್ರಿಕಾಗೋಷ್ಟಿ ನಡೆಸುವುದಲ್ಲ, ಪಾಕಿಸ್ತಾನಕ್ಕೆ ಹೋಗಿ ಸಹಿಷ್ಣುತೆಯ ಪಾಠ ಮಾಡಲಿ. ಭಾರತೀಯ ವಾಹಿನಿಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸಿರುವ ಸುದ್ದಿ ಶನಿವಾರ ಬಂದಿದೆ. ಕರಾಚಿಗೆ ಹೋಗಿ ಭಾರತದ ಪರ ಕಲೆ- ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಧ್ವನಿ ಎತ್ತಲಿ. ಭಾರತದ ಚಿತ್ರಗಳೆಲ್ಲ ಯಾವುದೇ ಅಡೆತಡೆಯಿಲ್ಲದೇ ಪಾಕಿಸ್ತಾನದಲ್ಲಿ ಪ್ರದರ್ಶನಗೊಳ್ಳಲಿ ಎಂದು ಈ ಸಲ್ಮಾನ್ ಯಾವತ್ತಾದರೂ ಒತ್ತಾಯಿಸಿದ್ದಿದೆಯಾ?

ಇಂಥ ಯಾವ ಹೊಣೆಗಾರಿಕೆಯೂ ಇಲ್ಲದೇ ಕೇವಲ, ‘ಕಲಾವಿದರು ಭಯೋತ್ಪಾದಕರೇ?’ ಅಂತ ಡೈಲಾಗ್ ಉದುರಿಸಿದರಾಯಿತಾ?

Leave a Reply