ಬ್ರಹ್ಮಪುತ್ರ ಉಪನದಿಗೆ ಟಿಬೆಟಿನಲ್ಲಿ ಚೀನಾದ ಮಹಾ ಆಣೆಕಟ್ಟು, ಸಿಂಧು ವಿಷಯದಲ್ಲೂ ಇದೇ ನೀತಿ ಎನ್ನುವ ಅವಕಾಶ ಭಾರತಕ್ಕೆಷ್ಟು?

ಡಿಜಿಟಲ್ ಕನ್ನಡ ವಿಶೇಷ:

ಬ್ರಹ್ಮಪುತ್ರ ನದಿಯ ಉಪನದಿಯೊಂದನ್ನು ಚೀನಾವು ಆಣೆಕಟ್ಟು ನಿರ್ಮಾಣಕ್ಕಾಗಿ ತಡೆಯೊಡ್ಡಿರುವ ವಿದ್ಯಮಾನ ವರದಿಯಾಗಿದೆ.

ಟಿಬೆಟ್ ನಲ್ಲಿ ಕ್ಸಿಬಾಹುಕ್ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಇದು 4.95 ಬಿಲಿಯನ್ ಯುವಾನ್ ಗಳ ಈ ಮಹಾ ಯೋಜನೆ 2019ರಲ್ಲಿ ಪೂರ್ಣಗೊಳ್ಳಲಿದ್ದು, ಆಣೆಕಟ್ಟು ಯೋಜನೆ ಆರಂಭಕ್ಕೆಂದು ನದಿ ಹರಿವನ್ನು ನಿಲ್ಲಿಸಲಾಗಿದೆ. ಚೀನಾದಲ್ಲಿ ಯಾರ್ಲೂಂಗ್ ಝಂಗ್ಬಾ ಎಂದು ಕರೆಸಿಕೊಳ್ಳುವ ಬ್ರಹ್ಮಪುತ್ರಕ್ಕೆ ಸೇರಿಕೊಳ್ಳುವ ಉಪನದಿ ಇದಾಗಿದ್ದು, ಚೀನಾದ ಈ ಕ್ರಮದಿಂದ ಕೆಳಹಂತದ ದೇಶವಾದ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಬ್ರಹ್ಮಪುತ್ರ ಹರಿವಿನಲ್ಲಿ ಯಾವ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದು ಈಗಿರುವ ಆತಂಕ.

ಚೀನಾ ಮಾತ್ರ ತಣ್ಣಗಿನ ಧ್ವನಿಯಲ್ಲಿ, ಈ ಯೋಜನೆಯಿಂದ ಕೆಳಹಂತದ ದೇಶಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಹೇಳುತ್ತ, ಅಂತಾರಾಷ್ಟ್ರೀಯ ಅಭಿಪ್ರಾಯಗಳಿಗೆಲ್ಲ ಒಂದಿನಿತೂ ತಲೆಕೆಡಿಸಿಕೊಳ್ಳದೇ ಮುಂದುವರಿದಿದೆ.

ಇತ್ತ ಭಾರತದಲ್ಲಿ ಈ ವಿದ್ಯಮಾನವನ್ನು ರೋಚಕವಾಗಿ ವರದಿ ಮಾಡುವ ಉತ್ಸಾಹದಲ್ಲಿ ಕೆಲವು ವಾಹಿನಿಗಳು, ‘ಪಾಕಿಸ್ತಾನವು ಚೀನಾವನ್ನು ಉಪಯೋಗಿಸಿಕೊಂಡು ಭಾರತಕ್ಕೆ ಉತ್ತರಿಸುತ್ತಿದೆ’ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

ಆದರೆ, ಗಮನಿಸಬೇಕಾದ ಸಂಗತಿ ಎಂದರೆ, ಚೀನಾ ತನ್ನ ಆಣೆಕಟ್ಟು ಕಾರ್ಯವನ್ನು ಭಾರತ-ಪಾಕಿಸ್ತಾನ ಸಮೀಕರಣಕ್ಕೆ ಒಗ್ಗಿಸಿಕೊಂಡು ಮಾಡುತ್ತ ಬಂದಿಲ್ಲ. ಈ ಹಿಂದೆಯೂ ನದಿ ಹರಿವಿನ ಅಂತಾರಾಷ್ಟ್ರೀಯ ನಿಯಮಗಳಿಗೆ ಕ್ಯಾರೆ ಎನ್ನದೇ ತನ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.

ಭಾರತ- ಪಾಕಿಸ್ತಾನದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸುತ್ತ ಅಲ್ಲಿನ ವಿದೇಶ ಸಚಿವಾಲಯದ ವಕ್ತಾರ, ‘ಭಾರತ- ಪಾಕಿಸ್ತಾನಗಳು ತಮ್ಮ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಇಬ್ಬರಿಗೂ ನೆರೆಯ ಮಿತ್ರನಾಗಿರುವ ಚೀನಾ ಬಯಸುತ್ತದೆ’ ಎಂದಿದ್ದರು.

ಪಾಕಿಸ್ತಾನವನ್ನು ಭಾರತ ಮುದ್ದಿಸಿದರೂ, ದ್ವೇಷಿಸಿದರೂ ಚೀನಾ ತನ್ನ ಕಾರ್ಯತಂತ್ರದಂತೆ ಮುನ್ನಡೆಯುತ್ತದೆ ಅಷ್ಟೆ. ಈ ಹಂತದಲ್ಲಿ ಪಾಕಿಸ್ತಾನಕ್ಕೆ ಪೂರಕ ಅಂಶಗಳಿದ್ದರೆ ಅದನ್ನು ಭಾರತದ ವಿರುದ್ಧ ಬಳಸೀತೇ ವಿನಃ, ಪಾಕಿಸ್ತಾನಕ್ಕೋಸ್ಕರ ಅದು ಕಾರ್ಯತಂತ್ರ ಹಮ್ಮಿಕೊಳ್ಳುವುದಿಲ್ಲ.

ಹೀಗಾಗಿ ಭಾರತದ ಗುರಿ ನಿರ್ದಿಷ್ಟ ದಾಳಿಗೂ, ಇಂಡಸ್ ಒಪ್ಪಂದದ ಮರುವಿಮರ್ಶೆ ಪ್ರಸ್ತಾವಕ್ಕೂ ಈಗಿನ ಚೀನಾ ನಿಲುವಿಗೆ ಯಾವ ಕೊಂಡಿಗಳೂ ಇಲ್ಲ. ಅಲ್ಲದೇ ಆಣೆಕಟ್ಟು ನಿರ್ಮಾಣದಂಥ ಸಂಗತಿಗಳು ದೀರ್ಘ ಕಾಲದಿಂದ ರೂಪುಗೊಂಡಿರುತ್ತವೆಯೇ ಹೊರತು, ಅಗೋ ಭಾರತವು ಪಾಕಿಸ್ತಾನಕ್ಕೆ ತಿವಿದಿದೆ- ನಾವು ಆಣೆಕಟ್ಟು ಕಟ್ಟಿ ಉತ್ತರ ಕೊಡುತ್ತೇವೆ ಅಂತ ಮಂತ್ರದಂಡ ಬೀಸಲಾಗದು.

ಆದರ ಚೀನಾದ ಈ ನಡೆಯನ್ನು ದೀರ್ಘಾವಧಿಯಲ್ಲಿ ಭಾರತವು ಇಂಡಸ್ ನೀರು ಒಪ್ಪಂದದ ಮೇಲುಗೈಗೆ ಬಳಸಿಕೊಳ್ಳಬಹುದೇ ಎಂಬುದು ಈಗಿರುವ ಪ್ರಶ್ನೆ. 1960ರಲ್ಲಿ ಈ ಒಪ್ಪಂದವು ವಿಶ್ವಬ್ಯಾಂಕ್ ಪೌರೋಹಿತ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಾಕಾರವಾಗಿತ್ತು. ಸಿಂಧುವಿನ ಪೂರ್ವದ ಉಪನದಿಗಳನ್ನು (ಸಟ್ಲೆಜ್, ಬಿಯಾಸ್, ರಾವಿ) ಭಾರತ ತನ್ನ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಪಶ್ಚಿಮದ ಪಂಜಾಬ್, ಚಿನಾಬ್, ಜೇಲಂ ನದಿಗಳ ಶೇ.20ನ್ನು ಮಾತ್ರವೇ ಬಳಸಿಕೊಳ್ಳಬಹುದು ಎಂಬುದು ಒಪ್ಪಂದದ ಸ್ಥೂಲ ರೂಪ.

ಇದೀಗ ಸಿಂಧು ನದಿಯ ಒಪ್ಪಂದವನ್ನು ಮರು ವಿಮರ್ಶೆಗೆ ಒಳಪಡಿಸಲು ಹೊರಟಿರುವ ಭಾರತದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗುವುದಾಗಿ ಪಾಕಿಸ್ತಾನ ವರಾತ ತೆಗೆದಿದೆ. ಈ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಕಾನೂನಿಗೆ ಚೀನಾವನ್ನು ಪ್ರತಿಬಂಧಿಸುವ ಶಕ್ತಿ ಇಲ್ಲದಿದ್ದ ಮೇಲೆ, ಭಾರತಕ್ಕೆ ಮಾತ್ರ ನಿರ್ದೇಶನ ನೀಡುವಂತಿಲ್ಲ ಎಂಬ ವಾದ ನಿರ್ಮಿತಿಗೆ ಅವಕಾಶ ತೆರೆದುಕೊಳ್ಳುತ್ತಿದೆ. ಬ್ರಹ್ಮಪುತ್ರದ ಸಹಜ ಹರಿವನ್ನು ಭಾರತ ಮತ್ತು ಬಾಂಗ್ಲಾದೇಶಗಳಿಗೆ ಬಿಡುವಂತೆ ಚೀನಾವನ್ನು ಕೇಳಲಾಗದ ಅಂತಾರಾಷ್ಟ್ರೀಯ ವೇದಿಕೆ ಸಿಂಧು ವಿಚಾರದಲ್ಲಿ ಮಾತ್ರ ಹೇಗೆ ಫರ್ಮಾನು ಹೊರಡಿಸಬಲ್ಲದು ಎಂಬುದು ಬಳಸಿಕೊಳ್ಳಬಹುದಾದ ಅಸ್ತ್ರ.

ಸಿಂಧು ಸಹ ಚೀನಾ ನಿಯಂತ್ರಣದ ಟಿಬೆಟ್ ನಲ್ಲಿ ಹುಟ್ಟುತ್ತದೆಯಾದರೂ ಭಾರತದ ಉಪನದಿಗಳಿಂದಲೇ ಅದು ಬಲ ಪಡೆದುಕೊಳ್ಳುತ್ತದೆ. ಮೂಲದಲ್ಲಿ ಸಿಂಧು ಹರಿವನ್ನು ತಡೆಯುವುದಕ್ಕೆ ಪ್ರಾಕೃತಿಕವಾಗಿ ಚೀನಾಕ್ಕಿರುವ ಅವಕಾಶವೂ ಕಡಿಮೆ. ಹೀಗಾಗಿ ಚೀನಾದ ನಡೆಯನ್ನೇ ‘ಸಿಂಧು ಒಪ್ಪಂದ’ ರದ್ದಿಗೆ ಭಾರತ ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ.

ಈ ಮೊದಲಿನ ಲೇಖನವೊಂದರಲ್ಲಿ ಹೇಳಿದಂತೆ, ಸಿಂಧು ಹರಿವನ್ನು ತಕ್ಷಣಕ್ಕೆ ನಿಲ್ಲಿಸುವುದು ಭಾರತಕ್ಕೂ ಸಾಧ್ಯವಲ್ಲದ ಮಾರ್ಗ. ಆದರೆ ತನ್ನ ಪಾಲಿನ ನೀರನ್ನು ಅತಿಹೆಚ್ಚು ಬಳಸಿಕೊಳ್ಳುವುದಕ್ಕೆ ಭಾರತ ಅದಾಗಲೇ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪಕಾಲ್ ದುಲ್, ಸ್ವಾಲ್ಕೊಟ್, ಬುರ್ಸಾರ್ ಆಣೆಕಟ್ಟುಗಳ ಮೂಲಕ ಉತ್ಪಾದನೆಯಾಗುತ್ತಿರುವ ಒಟ್ಟೂ 11,406 ಮೆಗಾವ್ಯಾಟ್ ಗಳ ಸಾಮರ್ಥ್ಯವನ್ನು 18,600 ಮೆಗಾವ್ಯಾಟ್ ಗೆ ಏರಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಟುಲ್ಬುಲ್ ನಲ್ಲಿ ಜಲಸಾರಿಗೆ ಮಾರ್ಗವೊಂದನ್ನು ಅಭಿವೃದ್ಧಿಪಡಿಸುವ ಯೋಚನೆಯನ್ನು ಭಾರತವು ಪಾಕಿಸ್ತಾನದ ಆಕ್ಷೇಪಕ್ಕೆ ಮಣಿದು 1987ರಲ್ಲಿ ಕೈಬಿಟ್ಟಿತ್ತು. ಅದನ್ನು ಪುನರಾರಂಭಿಸುವ ಕುರಿತೂ ಚಿಂತನೆ ಮಾಡಲಾಗಿದೆ.  ಇಂಥ ಅಡಿಪಾಯಗಳ ಮೂಲಕ ದೀರ್ಘಾವಧಿಯಲ್ಲಿ ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ನೀರಿನ ಘಾತ ನೀಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಲನಕ್ಷೆ ಹರವಿರುವುದು ಸ್ಪಷ್ಟ.

ಈಗ ಆತಂಕವಾಗಿರುವ ಚೀನಾ ನಡೆಯನ್ನೇ ಮುಂದೆ ಪಾಕಿಸ್ತಾನದ ಎಲ್ಲ ಆಕ್ಷೇಪಗಳನ್ನು ಹೊಡೆಯುವುದಕ್ಕೆ ಬಳಸಿಕೊಳ್ಳುವ ಅವಕಾಶ ಭಾರತಕ್ಕಿದೆಯಾ ಎಂಬುದು ಸದ್ಯದ ಪ್ರಶ್ನೆ.

Leave a Reply