ಬಾಂಬ್ ದಾಳಿ ಮಾಡಿದರೂ ಸ್ವಾಲ್‍ಬರ್ಡ್ ನ ಜಗತ್ತಿನ ಅತಿದೊಡ್ಡ ಬೀಜಭಂಡಾರ ನಾಶವಾಗದು – ನಾಳಿನ ಭಯಕ್ಕೆ ಇಂದೇ ಸಿದ್ಧತೆ

author-ananthramuಒಂದು ಸಣ್ಣ ಸಂಗತಿಯನ್ನು ಮೊದಲೇ ಹೇಳಿದರೆ ನಾರ್ವೆ ದೇಶದ ಸ್ವಾಲ್‍ಬರ್ಡ್’ನ ಬೀಜ ಸಂಗ್ರಹಣೆಯ ಪ್ರಾಮುಖ್ಯ ಅರಿವಾಗುತ್ತದೆ. ಈಗ್ಗೆ ಸುಮಾರು ಅರವತ್ತು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಒಣಬೇಸಾಯ ಮಾಡುವ ರೈತರು ನವಣೆ, ಕೊರಲೆ, ಹಾರಕ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಬೆಳೆ ಹೆಚ್ಚೇನೂ ನೀರು ಬಯಸದು. ಆಗ ಬಡವರಿಗೆ ಇದೇ ಮುಖ್ಯ ಆಹಾರ. `ಅನ್ನ ಭಾಗ್ಯ’ ಹೆಚ್ಚಿನವರಿಗೆ ಇರಲಿಲ್ಲ. ಬರುಬರುತ್ತ ಈ ಬೆಳೆ ಬೆಳೆಯುವುದೇ ನಿಂತುಹೋಯಿತು. ಈಗ ಎಲ್ಲೆಲ್ಲಿ ನೋಡಿದರೂ ಈ ಮಿಲ್ಲೆಟ್‍ಗಳದೇ ಕಾರುಬಾರು. ಇದರಲ್ಲಿ `ಬಿ’ ಬಿಟಮಿನ್ ಜೊತೆಗೆ ಕ್ಯಾಲ್ಸಿಯಮ್, ಐರನ್, ಪೊಟಾಸಿಯಂ ಮುಂತಾದ ಅಂಶಗಳಲ್ಲದೆ ಪ್ರೊಟೀನ್ ಸಮೃದ್ಧವಾಗಿರುತ್ತದೆಂದು ಕಂಡುಬಂದಿರುವುದರಿಂದ ಭಾರಿ ಬೇಡಿಕೆ ಇದೆ. ಅರವತ್ತು ವರ್ಷಗಳ ನಂತರ ಇದ್ದಕ್ಕಿದ್ದಂತೆ ಇವಕ್ಕೆ ಡಿಮ್ಯಾಂಡ್. ಯಾವ ರೈತ ಹೇಗೆ ಇದನ್ನು ರಕ್ಷಿಸುತ್ತಿದ್ದನೋ ತಿಳಿಯದು. ಮತ್ತೆ ಮರುಜೀವವಂತೂ ಇವು ಪಡೆದಿವೆ. ಅವುಗಳನ್ನು ಸಂಗ್ರಹಿಸಿದೆ ಎಡವಟ್ಟು ಮಾಡಿದ್ದರೇ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದವೋ ಏನೋ – ಭೂಮಿಯ ಮೇಲೆ ಡೈನೋಸಾರ್ ನಿರ್ವಂಶವಾದಂತೆ.

ಒಮ್ಮೆ ಹೀಗೆ ಯೋಚಿಸಿ – ಯಾವನೋ ತಲೆಕೆಟ್ಟ ಉಗ್ರವಾದಿಗೆ ಪರಮಾಣು ಬಾಂಬು ಸ್ಫೋಟಿಸುವ ರಹಸ್ಯವೂ ತಿಳಿದು ಅದನ್ನು ಕಾರ್ಯರೂಪಕ್ಕೆ ತರುತ್ತಾನೆ ಎನ್ನೋಣ. ಜನ ಸಾಯುವುದು ಗ್ಯಾರಂಟಿ. ಜೊತೆಗೆ ಬೀಜಕ್ಕೆಂದು ಇಟ್ಟುಕೊಂಡಿದ್ದ ದವಸ ಧಾನ್ಯಗಳೂ ನಾಶವಾಗುತ್ತವೆ. ಪರಮಾಣು ಸ್ಥಾವರ ಸೋರಿತು ಎನ್ನಿ, ಆಗಲೂ ವಿಕಿರಣ ಬೆಳೆಗಳಿಗೆ ಹಬ್ಬುತ್ತದೆ. ಇಂಥ ದುರ್ಬರ ಸನ್ನಿವೇಶ ಎದುರಾಗುತ್ತದೆಂದು ಇಂದಿನ ದಿನಮಾನಗಳಲ್ಲಿ ಊಹಿಸುವುದು ತಪ್ಪೇನಲ್ಲ. ಯಾವುದೋ ಒಂದು ವಿಚಿತ್ರ ರೋಗ ಬಂದು ಜಗತ್ತಿನ ಬಹುತೇಕ ಬೆಳೆಗಳನ್ನೂ ನಾಶಮಾಡಬಹುದು ಅಥವಾ ಬಡ ದೇಶಗಳು ಬೀಜ ದಾಸ್ತಾನು ಮಾಡುವಾಗ ಎಡವಟ್ಟು ಮಾಡಿಕೊಂಡರೆ ಸಾವಿರಾರು ವರ್ಷಗಳಿಂದ ಕಾಡು ಬೆಳೆಯನ್ನು ನಾಡ ಬೆಳೆಯನ್ನಾಗಿಸಿ ಪರಿವರ್ತಿಸಿದ ಫಲವೆಲ್ಲ ಏಕ್‍ದಂ ಸರ್ವನಾಶವಾಗಿಬಿಡುತ್ತದೆ.

ಇಂಥ ಪ್ರಶ್ನೆಗಳನ್ನೆಲ್ಲ ಮುಂದಿಟ್ಟುಕೊಂಡೇ ಸಾಗಬೇಕಾದ ಸಂದರ್ಭ ಇದು. ಇಂಥ ಸಾಧ್ಯತೆಗಳನ್ನು ಪರಿಗಣಿಸಿ, ನಾರ್ವೆ ದೇಶ ಜಗತ್ತಿನ ಬಹುತೇಕ ಎಲ್ಲ ಬಗೆಯ ಧಾನ್ಯಗಳ ಜೀಜಗಳನ್ನು ತನ್ನ ದೇಶದಲ್ಲಿ ಅತ್ಯಂತ ಜತನವಾಗಿ ಶೇಖರಿಸಿಟ್ಟಿದೆ. ಅದೂ ಎಂಥ ಜಾಗದಲ್ಲಿ? ಸದಾ ಹಿಮದ ಹೊದಿಕೆಯಿರುವ ಬೆಟ್ಟದಲ್ಲಿ, ಆಳ ಮಾಳಿಗೆ ತೆರೆದು ಸುಭದ್ರವಾಗಿಟ್ಟಿದೆ. 2008ರಲ್ಲಿ ಸ್ವಾಲ್‍ಬರ್ಡ್ `ಸೀಡ್ ಬ್ಯಾಂಕ್’ ಇದರ ಬಗ್ಗೆ ಮುತುವರ್ಜಿ ತೆಗೆದುಕೊಂಡಿತು. ಜಗತ್ತಿನಲ್ಲಿ ಸದ್ಯ 1700 ಜೀನ್ ಬ್ಯಾಂಕುಗಳಿವೆ. ಅಂದರೆ ಆಯಾ ದೇಶದ ರೈತರು ಬೆಳೆಯುವ ಧಾನ್ಯಗಳ ಜೀಜಗಳು ಅಲ್ಲಿರುತ್ತವೆ. ಅನಿವಾರ್ಯವಾದಾಗ ಅವನ್ನು ಬಳಸಿಕೊಳ್ಳಬಹುದು. ಇಡೀ ಜಗತ್ತಿಗೇ ಇದನ್ನು ವಿಸ್ತರಿಸಿದರೆ ಹೇಗೆ ಎಂದು ಯೋಚಿಸಿ ನಾರ್ವೆ ಆಯಾ ದೇಶದ ಧಾನ್ಯದ ಬೀಜಗಳನ್ನು ತರಿಸಿಕೊಂಡು ಜನನಿಬಿಡ ಜಾಗದಿಂದ ದೂರವಿರುವ ದ್ವೀಪಸ್ತೋಮದ ಒಂದು ಬೆಟ್ಟದಲ್ಲಿ 130 ಮೀಟರ್ ಆಳದಲ್ಲಿ ದೊಡ್ಡ ನೆಲಮಾಳಿಗೆ ತೆಗೆದು ಸಂಗ್ರಹಿಸಿ ಇಟ್ಟಿದೆ. ವಾಸ್ತವವಾಗಿ ಇದು ನೈಸರ್ಗಿಕ ರೆಫ್ರಿಜಿರೇಟರ್‍ನಂತೆ ವರ್ತಿಸುತ್ತಿದೆ.

SEED9

ಇಲ್ಲಿ ನಮ್ಮ ಗೋದಾಮುಗಳಲ್ಲಿ ಮಾಡುವಂತೆ ಮೂಟೆಗಟ್ಟಳೆ ಧಾನ್ಯ ಸಂಗ್ರಹಿಸುವುದಿಲ್ಲ. ಬದಲು ಒಂದು ಧಾನ್ಯದ 500 ಬೀಜಗಳನ್ನು ಸಂಗ್ರಹಿಸುತ್ತದೆ. ನೀಟಾಗಿ ಅಲ್ಯೂಮಿನಿಯಂ ಹಾಳೆಗಳಲ್ಲಿ ಸುತ್ತಿ ಗಾಳಿ ತೂರದಂತೆ ಬಂಧಿಸಿ ಪ್ಲಾಸ್ಟಿಕ್ ಟ್ರೇನಲ್ಲಿ ಜೋಪಾನ ಪಡಿಸುತ್ತಾರೆ. ಕೋಳಿಮೊಟ್ಟೆಯನ್ನು ಟ್ರೇಯಲ್ಲಿಡುವಂತೆ. ಈಗಾಗಲೇ 232 ದೇಶಗಳ 66 ಜೀನ್ ಬ್ಯಾಂಕಿನಿಂದ ತರಿಸಿಕೊಂಡ 8,37,937 ಬೀಜದ ಮಾದರಿಗಳು ಶೈತ್ಯಾಗಾರದಲ್ಲಿ ಹಾಯಾಗಿ ಕುಳಿತಿವೆ. ಇನ್ನೂ ನಾಲ್ಕೂವರೆ ದಶಲಕ್ಷ ಬೀಜಗಳನ್ನು ದಾಸ್ತಾನು ಮಾಡಲು ಜಾಗವಿದೆ. ನೆಲಮಾಳಿಗೆಯ ವಿಸ್ತೀರ್ಣವೇ 1000 ಚದರ ಮೀಟರ್. ಅಲ್ಲಿ ಸದಾ ಮೈನಸ್ 19 ಡಿಗ್ರಿ ಸೆ. ಉಷ್ಣತೆ ಇರುತ್ತದೆ. ಒಂದೇ ಒಂದು ಅಸಮಾಧಾನದ ವಿಚಾರವೆಂದರೆ ಇಡೀ ನೆಲಮಾಳಿಗೆಯನ್ನು ಶೈತ್ಯದಲ್ಲಿಡಲು ಬೇಕಾದ ವಿದ್ಯುತ್ ಬಳಸುವುದು ಕಲ್ಲಿದ್ದಲು ಬಳಸಿದ ಉಷ್ಣಸ್ಥಾವರದಿಂದ.

ಎಷ್ಟು ವರ್ಷ ಕಾಲ ಈ ಬೀಜಗಳು ಹಾಗೆಯೇ ಉಳಿದಿರುತ್ತವೆ? ಒಂದು ಸಾವಿರ ವರ್ಷ ಅವು ತಾಜಾ ಬೀಜವಾಗಿಯೇ ಉಳಿಯುತ್ತವೆ. ಒಂದುಪಕ್ಷ ವಿದ್ಯುತ್ ಕೈಕೊಟ್ಟರೂ ತೊಂದರೆ ಇಲ್ಲ. ನೆಲಮಾಳಿಗೆ ಇರುವುದು ಬರ್ಫ ಮುಚ್ಚಿದ ಮರಳುಗಲ್ಲಿನಲ್ಲಿ. ಒಂದು ದೃಷಿಯಿಂದ ಇಲ್ಲಿನ ಸಂಗ್ರಹವನ್ನು ಕಂಪ್ಯೂಟರ್ಗೆ ಹೋಲಿಸಬಹುದು. ಕಂಪ್ಯೂಟರ್ ಕ್ರಾಷ್ ಆಯಿತು ಎನ್ನಿ, ಡೇಟಾ ಕೂಡ ಹೋಗುತ್ತದೆ ತಾನೆ? ಆ ಕುರಿತು ನಿಮಗೆ ಗೊತ್ತಿರುವುದರಿಂದ ಬ್ಯಾಕ್ ಅಪ್ ತೆಗೆದುಕೊಳ್ಳುತ್ತೀರಿ ತಾನೇ? ಈ ನೆಲಮಾಳಿಗೆಯ ಉದ್ದೇಶವೂ ಅದೇ. ಯಾವ ದೇಶದ ಬೀಜವಾದೂ ಸರಿಯೇ, ಇಲ್ಲಿ ಅವು ಸುರಕ್ಷಿತವಾಗಿರುತ್ತವೆ. ಸ್ವಾಲ್‍ಬರ್ಡ್’ನ  ಪ್ರಾಮುಖ್ಯ ಏನೆಂಬುದು ಇತ್ತೀಚೆಗಷ್ಟೇ ಜಗತ್ತಿಗೆ ಪರಿಚಯವಾಯಿತು. ಸಿರಿಯ ದೇಶ ಈಗಲೂ ಆಂತರಿಕ ಯುದ್ಧದಿಂದ ನಲಿದುಹೋಗಿದೆ. ಅಲೆಪ್ಪೋ ಎಂಬಲ್ಲಿ ಅದು ಬೀಜ ಸಂಗ್ರಹ ಮಾಡಿ ಇಟ್ಟಿದೆ. ಯುದ್ಧದ ಸಂದರ್ಭದಲ್ಲಿ ಇದು ಸೇಫ್ ಅಲ್ಲ ಎಂಬ ಅಂಶವೂ ಗೊತ್ತಿದೆ. ಬೈರುತ್‍ಗೆ ಈ ಸಂಗ್ರಹಣಾ ಕೇಂದ್ರವನ್ನು ವರ್ಗಾಯಿಸುವಂತೆಯೂ ಇಲ್ಲ. ತಕ್ಷಣ ಸಿರಿಯಾಕ್ಕೆ ನೆನಪಿಗೆ ಬಂದದ್ದು ಸ್ವಾಲ್‍ಬರ್ಡ್‍ನಲ್ಲಿ ಇಟ್ಟಿದ್ದ ದಾಸ್ತಾನು. ಅಲ್ಲಿಗೆ ದೌಡಾಯಿಸಿ 130 ಟ್ರೇಗಳಲ್ಲಿ ಇಟ್ಟಿದ್ದ ಆ ದೇಶದ ಬೀಜಗಳನ್ನು ಹಿಂತಿರುಗಿಸಲು ಕೇಳಿತು. ಈಗ ಅದನ್ನೇ ಬೈರುತ್‍ನ ಬೀಜಸಂಗ್ರಹಣ ಕೇಂದ್ರದಲ್ಲಿ ಇಡುತ್ತಿದೆ. ವಾಸ್ತವವಾಗಿ ಈ ಹಕ್ಕು ಎಲ್ಲ ದೇಶಕ್ಕೂ ಇದೆ. ಬೇಕೆಂದಾಗ ಮರಳಿ ಪಡೆಯಬಹುದು. ಇದು ಹೇಗೆಂದರೆ ಬ್ಯಾಂಕ್ ಲಾಕರ್‍ನಲ್ಲಿ ನೀವು ಒಡವೆ, ವಸ್ತುಗಳನ್ನು ಇಟ್ಟಹಾಗೆ. ಲಾಕರ್ ಬ್ಯಾಂಕಿನದು, ಅದರೊಳಗಿರುವ ವಸ್ತುಗಳು ನಿಮ್ಮವು ಹಾಗೆ.

SEED 10

ವಿಶೇಷವೆಂದರೆ ಬೀಜ ಸಂಗ್ರಹಕ್ಕೆ ಯಾವ ದೇಶವೂ ಒಂದು ಕಾಸೂ ಕೊಡಬೇಕಾಗಿಲ್ಲ. ಅದನ್ನು ನಾರ್ವೆ ನಿಭಾಯಿಸುತ್ತದೆ. ಮನುಕುಲದ ಒಳಿತಿಗಾಗಿ ಮತ್ತು ನಾಳಿನ ಭರವಸೆಗಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ ಎನ್ನುತ್ತದೆ ನಾರ್ವೆ. ಭಾರತ ಕೂಡ ಇಲ್ಲಿ ಬಟಾಣಿ ಬೀಜವನ್ನು ಭದ್ರಪಡಿಸಿದೆ. ಅಷ್ಟೇ ಅಲ್ಲ, 50,000 ಡಾಲರ್ ದೇಣಿಗೆಯನ್ನೂ ಕೊಟ್ಟಿದೆ.

ಬಿಲ್ ಗೇಟ್ ಫೌಂಡೇಶನ್ ಕೂಡ ದೊಡ್ಡ ಮೊತ್ತದ ಧನಸಹಾಯ ಮಾಡಿದೆ. ನಾರ್ವೆ, ಸ್ವೀಡನ್, ಫಿನ್ಲೆಂಡ್, ಡೆನ್ಮಾರ್ಕ್, ಐಸ್ಲೆಂಡ್ ದೇಶದ ಪ್ರಧಾನ ಮಂತ್ರಿಗಳೆಲ್ಲ ಒಟ್ಟಿಗೇ ಈ ಬೀಜ ಕೇಂದ್ರದ ಕಟ್ಟಡಕ್ಕೆ ಅಸ್ತಿಭಾರ ಹಾಕಿದ್ದೂ ಕೂಡ ಒಂದು ವಿಶೇಷವೇ.

ಕೆಳಗಿನ ದೃಶ್ಯ ವರದಿ ಕೃಪೆ- ಸಿಎನ್ಎನ್

Leave a Reply