ನಾವು ಚಲನಚಿತ್ರ, ಮಾತುಕತೆ, ಕ್ರಿಕೆಟ್ ಅಂತ ಹಾಯಾಗಿರುವುದಾದರೆ ಭಾರತ- ಪಾಕ್ ಸಂಘರ್ಷವೇನು ಯೋಧರ ಖಾಸಗಿ ಸಮರವೇ?- ಓದಲೇಬೇಕಿರುವ ಮೇಜರ್ ಬರಹ..

 

ಡಿಜಿಟಲ್ ಕನ್ನಡ ಟೀಮ್:

ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರಿಗೆ ಮುಂಬೈನ ಕೆಲ ಸಂಸ್ಥೆಗಳು, ಪಕ್ಷಗಳು ಹೇರಿರುವ ನಿಷೇಧವನ್ನಿಟ್ಟುಕೊಂಡು ಬಾಲಿವುಡ್ ನ ಒಂದು ವರ್ಗ ಭಾರತಕ್ಕೆ ಸಹಿಷ್ಣುತೆಯ ಉಪದೇಶ ನೀಡುವುದಕ್ಕೆ ಶುರು ಮಾಡಿದೆ. ಈ ನಿಟ್ಟಿನಲ್ಲಿ ಕೆಲವು ಮುಖ್ಯ ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು.

ಸಂಘರ್ಷಗಳು ತೆರೆದುಕೊಂಡಾಗ ಎರಡು ದೇಶಗಳ ನಡುವಿನ ವಿನಿಮಯಗಳು ಕಲೆ ಸೇರಿದಂತೆ ಹಲವು ವಿಭಾಗಗಳಲ್ಲಿ ವ್ಯತ್ಯಯಗೊಳ್ಳುತ್ತವೆ. ಇದೇನೂ ಅಂತಿಮ ಪರಿಸ್ಥಿತಿ ಅಲ್ಲ, ಸಮಯ ಕಳೆಯುತ್ತಲೇ ಈ ಬಿಗು ಕರಗುವುದೆಂದು ಸರ್ಕಾರಕ್ಕೆ, ಈ ವಿಷಯದಲ್ಲಿ ಚರ್ಚೆ ಮಾಡುತ್ತಿರುವ ನಮ್ಮೆಲ್ಲರಿಗೆ ಹಾಗೂ ಬಾಲಿವುಡ್ ಗೆ ಗೊತ್ತು. ದೇಶವೆಂಬ ವ್ಯವಸ್ಥೆಯಲ್ಲಿ ಅಷ್ಟುಮಟ್ಟದ ವ್ಯತ್ಯಯವನ್ನೂ ತಾಳಿಕೊಳ್ಳಲಾಗದವರು ಹೇಗೆ ಹೆಮ್ಮೆಯ ಪ್ರಜೆಯಾದಾರು?

ಆದರೆ, ಶಾಂತಿಯ ಸೋಗಿನಲ್ಲಿ, ಕಲೆಯ ಸಂರಕ್ಷಕರಂತೆ (ವಾಸ್ತವದಲ್ಲಿ ಇವರು ತಮ್ಮ ಬಿಸಿನೆಸ್ ಸಂರಕ್ಷಕರು) ‘ನಮ್ಮದು ಉಗ್ರವಾದದ ವಿರುದ್ಧ ಸಮರವಿರಬೇಕೇ ಹೊರತು ಕಲೆಯ ವಿರುದ್ಧವಲ್ಲ’ ಎನ್ನುವವರ ಧೋರಣೆಯನ್ನು ಸೇನಾ ಪಡೆ ಮಾಜಿ ಸದಸ್ಯ ಮೇಜರ್ ಗೌರವ್ ಆರ್ಯ, ತಮ್ಮ ಫೇಸ್ಬುಕ್ ಬರಹದಲ್ಲಿ ಸೂಕ್ತವಾಗಿ ಖಂಡಿಸಿದ್ದಾರೆ. ಅದರ ಸಂಗ್ರಹಾನುವಾದ.

ಗಡಿಯಾಚೆಗೆ ಗುರಿ ನಿರ್ದಿಷ್ಟ ದಾಳಿಯನ್ನು ಯಶಸ್ವಿಯಾಗಿ ಮುಗಿಸಿಬಂದಿದ್ದಾರೆ ನಮ್ಮ ಹುಡುಗರು. ಇಡೀ ರಾಷ್ಟ್ರ ಈ ಬಗ್ಗೆ ಆನಂದತುಂದಿಲವಾಗಿದ್ದರೆ ಕೆಲವರಿಗೆ ಮಾತ್ರ ಖುಷಿಯಾಗುತ್ತಿಲ್ಲ.

ಜೆಎನ್ಯುದ ವಿಚಾರ ವೇದಿಕೆಯೊಂದರಲ್ಲಿ ನಾನು ‘ಬೌದ್ಧಿಕ ಭಯೋತ್ಪಾದನೆ’ ಎಂಬ ವಿಷಯದ ಬಗ್ಗೆ ಮಾತನಾಡಿದ್ದೆ. ಅಂಥದೇ ಒಂದು ಬೌದ್ಧಿಕ ಭಯೋತ್ಪಾದನೆಯನ್ನು ನಾನಿಲ್ಲಿ ಚರ್ಚಿಸುತ್ತೇನೆ.

ಫವಾದ್ ಖಾನ್ ನನ್ನು ಪಾಕಿಸ್ತಾನಕ್ಕೆ ಹಿಂತಿರುಗಿ ಹೋಗುವಂತೆ ಮಾಡುವ ಮೂಲಕ ಉಗ್ರವಾದವನ್ನು ನಿಲ್ಲಿಸಲು ಸಾಧ್ಯವೇ ಎಂದು ಕರಣ್ ಜೋಹರ್ ಕೇಳುತ್ತಾರೆ. ಮಹೇಶ್ ಭಟ್ ಇದಕ್ಕೆ ಧ್ವನಿಗೂಡಿಸಿ, ‘ಉಗ್ರವಾದ ನಿಲ್ಲಿಸಿ, ಮಾತುಕತೆಯನ್ನಲ್ಲ’ ಎನ್ನುತ್ತ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಯಲಿ ಅಂತ ಸೂಚಿಸುತ್ತಾರೆ. ಕ್ರಿಕೆಟ್ ಬೋರ್ಡ್ ಪಾಕಿಸ್ತಾನದೊಂದಿಗೆ ಪಂದ್ಯವಾಡುತ್ತಲೇ ಇರಬೇಕು, ಕೆಲವು ಉದ್ಯಮಗಳು ಪಾಕಿಸ್ತಾನದೊಂದಿಗೆ ವ್ಯವಹಾರ ಮುಂದುವರಿಸಿಕೊಂಡೇ ಇರುತ್ತವೆ. ಇವೆಲ್ಲ ಆಗುವುದು ಗಡಿಯಲ್ಲಿ ನಮ್ಮ ಸೈನಿಕರು ಸಾಯುತ್ತಿರುವಾಗಲೇ.

ಪಾಕಿಸ್ತಾನಿ ಕಲಾವಿದರನ್ನು ಹಿಂದಕ್ಕೆ ಕಳುಹಿಸುವುದರಿಂದ, ಕ್ರಿಕೆಟ್ ನಿಲ್ಲಿಸುವುದರಿಂದ, ಪಾಕಿಸ್ತಾನದೊಂದಿಗೆ ಆರ್ಥಿಕ ವ್ಯವಹಾರ ನಿಲ್ಲಿಸುವುದರಿಂದ ಪಾಕಿಸ್ತಾನದ ಉಗ್ರವಾದಕ್ಕೆ ಅಂತ್ಯ ಹಾಡಲಾಗುವುದೇ? ಉತ್ತರ-ಇಲ್ಲ. ಆದರೆ ಇಲ್ಲೊಂದು ಭಾವನೆ ಇದೆಯಲ್ಲ, ಒಂದಾಗಿ ನಿಲ್ಲುವುದು ಎಂಬ ಭಾವವಿದೆಯಲ್ಲ… ನೀವು ಸಿನಿಮಾ ಮಾಡಿಕೊಂಡು, ಕ್ರಿಕೆಟ್ ಆಡಿಕೊಂಡು, ವಹಿವಾಟು ನಡೆಸಿಕೊಂಡು ಎಲ್ಲವೂ ಚೆನ್ನಾಗಿದೆ ಎಂಬಂತೆ ಬದುಕಲಾಗದು. ಏಕೆಂದರೆ ಎಲ್ಲವೂ ಚೆನ್ನಾಗಿಲ್ಲ. ಈ ಧೋರಣೆ ಯೋಧನಾದವನಿಗೆ ಅಚ್ಚರಿಯ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತದೆ- ‘ಸಂಘರ್ಷದ ಭಾರವನ್ನು ನಾನೊಬ್ಬನೇ ಏಕೆ ಹೊರಬೇಕು?’

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷ ಯೋಧನ ಖಾಸಗಿ ಯುದ್ಧವಲ್ಲ. ಈ ಕರಣ್ ಜೋಹರ್ ಮತ್ತು ಮಹೇಶ್ ಭಟ್ ಅವರಂತೆಯೇ ಯೋಧನೂ ವರ್ತನೆಗೆ ಮುಂದಾದರೆ, ಆ ಸನ್ನಿವೇಶ ಕಲ್ಪಿಸಿಕೊಳ್ಳಿ. ತನ್ನ ಅಧಿಕಾರಿ ಬಳಿ ಸಾರಿ ಯೋಧನೊಬ್ಬ ಹೀಗೆ ಹೇಳಬಹುದಲ್ಲವೇ- ‘ಸರ್.. ಗಡಿ ನಿಯಂತ್ರಣ ರೇಖೆ ಬಳಿ ನಾವು ಸಾಯುತ್ತಿರುವಾಗ ಜನ ಮಾತ್ರ ಎರಡು ದೇಶಗಳ ನಡುವೆ ಎಲ್ಲವೂ ಸರಿಯಾಗಿದೆ ಎಂಬಂತೆ ವ್ಯವಹರಿಸುತ್ತಿದ್ದಾರಲ್ಲ?’ ಬೇರೆಯವರು ಮಜವಾಗಿರುವಾಗ ನಾನು ಮಾತ್ರ ಏಕೆ ತ್ಯಾಗ ಮಾಡಬೇಕೆಂದು ಯೋಧನೊಬ್ಬ ಗಡಿಗೆ ಹೋಗಿ ಪಾಕಿಸ್ತಾನಿ ಸೈನಿಕನಿಗೆ ಕೈಕುಲುಕುವುದನ್ನು ಎಷ್ಟುಮಂದಿ ಇಷ್ಟಪಡುತ್ತೇವೆ?

ಇಂಥ ವಿದ್ರೋಹದ ಯೋಚನೆಗಳಿಗಿಂತ ಒಬ್ಬ ಸೈನಿಕ ಸಾವನ್ನೇ ಆಯ್ದುಕೊಳ್ಳುತ್ತಾನೆ ಎಂಬುದು ವಾಸ್ತವ. ಆದರೆ ನಾವು ಯೋಚಿಸಬೇಕಲ್ಲವೇ?

1980 ರಲ್ಲಿ ಅಮೆರಿಕವು ಮಾಸ್ಕೊ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿತ್ತು. 1984ರಲ್ಲಿ ರಷ್ಯನ್ನರು ಲಾಸ್ ಏಂಜಲೀಸ್ ಒಲಿಂಪಿಕ್ಸ್ ಬಹಿಷ್ಕರಿಸಿದ್ದರು. ರಾಷ್ಟ್ರೀಯ ಹಿತಾಸಕ್ತಿಯೇ ಪರಮೋಚ್ಛ ಎಂಬ ಭಾವನೆ ಇದ್ದಾಗ ಹೀಗೆಯೇ ಆಗುತ್ತದೆ, ಈಗಲೂ ಹಾಗಾಗಬೇಕು.

ಎಪ್ಪತ್ತು ವರ್ಷಗಳಿಂದ ಪಾಕಿಸ್ತಾನವು ಭಾರತೀಯರನ್ನು ಕೊಲ್ಲುತ್ತ ಬಂದಿದೆ. ನಮಗೆ ಯೋಧನ ಮನೆಯ ಸೂತಕಕ್ಕಿಂತ, ಅವರ ನೋವಿಗಿಂತ, ಸಿನಿಮಾ-ಕ್ರಿಕೆಟ್ ಸಂಬಂಧಗಳೇ ಮುಖ್ಯವಾಗುತ್ತವೆಯೇನು? ಯೋಧರ ಕುಟುಂಬ ಗಾಜಿನಂತೆ ಛಿದ್ರವಾದಾಗ ಬಾಲಿವುಡ್ ಕಡೆಯಿಂದ ಒಂದು ಮಾತೂ ಬರಲಿಲ್ಲ. ಆದರೆ ನಟ ಫವಾದ್ ಖಾನ್ ಪಾಕಿಸ್ತಾನಕ್ಕೆ ಮರಳುವ ನೋವನ್ನು ಇವರಿಗೆ ಭರಿಸಲಾಗುತ್ತಿಲ್ಲ. ಪಾಕಿಸ್ತಾನಿ ಕಲಾವಿದರ ಪರ ಟ್ವೀಟ್ ಮಾಡುವುದು ಇವರಿಗೆ ಕಡ್ಡಾಯವಾಗಿಬಿಟ್ಟಿದೆ.

ಬಾಲಿವುಡ್ ಗಾಗಿ ರಾಹತ್ ಫತೆ ಅಲಿ ಖಾನ್ ಹಾಡುವುದಕ್ಕೂ ಮುಂಚೆ ಹಿಂದಿ ಚಿತ್ರೋದ್ಯಮದಲ್ಲಿ ಮುಖ್ಯ ಸಂಗೀತವೇ ಒಸರಿರಲಿಲ್ಲವೇನೋ ಎಂಬಂತೆ ಇವರು ನಮ್ಮನ್ನು ನಂಬಿಸುತ್ತಾರೆ. ಕ್ರಿಕೆಟ್ ಬೋರ್ಡ್ ಗಳು ಹಣ ಮಾಡುವಲ್ಲಿ ಎಷ್ಟು ವ್ಯಸ್ತವಾಗಿವೆ ಎಂದರೆ ಅವಕ್ಕೆ ಸೈನಿಕನ ವಿಧವೆಯ ಬಿಕ್ಕಳಿಕೆ, ಮಕ್ಕಳ ಅಳು ಕೇಳುವುದಿಲ್ಲ.

ಗಡಿ ನಿಯಂತ್ರಣ ರೇಖೆಯಿಂದ ಸಾವಿ ಮೈಲು ದೂರ ನಿಂತು ಶಾಂತಿಗಾಗಿ ಒತ್ತಾಯಿಸುವುದು ತುಂಬ ಸುಲಭ. ಇಷ್ಟಕ್ಕೂ ನಿಮ್ಮ ಪ್ರಾಥಮಿಕ ಕಾಳಜಿಯೇ ಇವತ್ತು ರಾತ್ರಿ ಯಾವ ಪಾರ್ಟಿಗೆ ಹೋಗಬೇಕು, ಮುಂದಿನ ಚಿತ್ರಕ್ಕೆ ಎಲ್ಲಿಂದ ಹಣ ಎತ್ತಬೇಕು ಅನ್ನೋದು. ಶಾಂತಿ ಅನ್ನೋದು ಪಂಚ್ ಲೈನ್ ಅಲ್ಲ. ಯುದ್ಧ ಕೊಡುವ ಫಲಿತಾಂಶ ಅದು.

ಅದಿತಿ ಎಂಬ 10 ವರ್ಷದ ಹುಡುಗಿ ದೇಶದ ಭಾವನೆಯನ್ನು ಮಹೇಶ್ ಭಟ್, ಕರಣ್ ಜೋಹರ್ ಗಿಂತ ಚೆನ್ನಾಗಿ ಅಭಿವ್ಯಕ್ತಿಸಿದ್ದಾಳೆ. ಸೈನಿಕ ಚೈತನ್ಯವನ್ನು ಬಿಂಬಿಸುವ ಅದಿತಿ ಪರ ನಾನಿದ್ದೇನೆ. ನೀವ್ಯಾರ ಪರವೋ ನಿರ್ಧರಿಸಿ.

ಮೇಜರ್ ಗೌರವ್ ಆರ್ಯ (ಸೇನಾಪಡೆ ಮಾಜಿ ಸದಸ್ಯ)

ಅದಿತಿ ಪತ್ರಸಾರ…

ಪ್ರಿಯ ಪ್ರಧಾನಿ ಸರ್,

ನಮ್ಮನ್ನು ಕೆಣಕುವವರನ್ನು ಸಹಿಸಿಕೊಳ್ಳಬೇಕಿಲ್ಲ, ಅವರು ಯಾವತ್ತೂ ನಮ್ಮನ್ನು ಒಳ್ಳೆಯದಾಗಿ ನಡೆಸಿಕೊಳ್ಳುವುದಿಲ್ಲ ಎಂದು ನನಗೆ ಶಾಲೆಯಲ್ಲಿ ಕಲಿಸಿದ್ದಾರೆ. ನಮ್ಮ ಭಾರತೀಯ ಯೋಧರು ಯಾವತ್ತೂ ನಮ್ಮನ್ನು ವೈರಿಗಳಿಂದ ರಕ್ಷಿಸಿದ್ದಾರೆ. ಅವರಿಗೆ ಸೆಲ್ಯೂಟ್ ಹಾಗೂ ಅವರನ್ನು ಬೆಂಬಲಿಸುವ ಮೂಲಕ ನಮ್ಮ ಸಹಕಾರ ನೀಡಬಹುದು.

ನಮ್ಮನ್ನು ಬೆದರಿಕೆಗಳ ಮೂಲಕ ಮಣಿಸುತ್ತೇವೆನ್ನುವ ದುಷ್ಟರೊಂದಿಗೆ ಮಾತುಕತೆ ನಿಲ್ಲಿಸಿ. ಭಾರತವೇ ಮೊದಲು. ಸೈನಿಕರಿಗೆ ನಮನ. ಜೈ ಹಿಂದ್…

Leave a Reply