‘ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಸತ್ತಿಗೆ ಬಿಟ್ಟ ವಿಚಾರ…’ ರಾಜ್ಯಕ್ಕೆ ಸಹಾಯವಾಗುವಂತೆ ಸುಪ್ರೀಂಗೆ ಕೇಂದ್ರದ ಅರ್ಜಿ, ಉಲ್ಟಾ ಹೊಡೆಯುತ್ತಿರುವ ನಾರಿಮನ್

ಡಿಜಿಟಲ್ ಕನ್ನಡ ಟೀಮ್:

ತನ್ನ ಅಧಿಕಾರ ವ್ಯಾಪ್ತಿಗೂ ಮೀರಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಗೆ ಈಗ ವಿರೋಧ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರ ‘ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ’ ಎಂಬ ವಾದವನ್ನು ಮುಂದಿಟ್ಟಿದೆ. ಇದರೊಂದಿಗೆ ಕಾವೇರಿ ವಿಷಯದಲ್ಲಿ ಸತತ ನಿರಾಸೆಗಳನ್ನೇ ಕಂಡಿದ್ದ ಕರ್ನಾಟಕದ ಜನತೆಗೆ ಈಗ ಹೊಸ ಭರವಸೆ ಮೂಡಿದೆ.

ಇದರೊಂದಿಗೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯದ ಪರವಾಗಿ ನಿಂತಿದ್ದು, ಸೆಪ್ಟೆಂಬರ್ 30 ರಂದು ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಿದೆ. ಈ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ನಾಳೆ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಈ ವಿಚಾರಣೆ ವೇಳೆ ಕೇಂದ್ರದ ಪರ ಅಟಾರ್ನಿ ಜೆನರಲ್ ಮುಕುಲ್ ರೊಹ್ಟಗಿ ವಾದ ಮಂಡಿಸಲಿದ್ದಾರೆ.

ಕೇವಲ ಮೂರು ದಿನಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ತರಾತುರಿಯಲ್ಲಿ ಮಂಡಳಿ ರಚನೆಗೆ ಮುಂದಾಗಿತ್ತು. ಇದಕ್ಕೆ ಪ್ರತಿಯಾಗಿ ತಮ್ಮ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಎರಡು ರಾಜ್ಯಗಳ ನದಿ ನೀರು ಹಂಚಿಕೆ ವಿವಾದಲ್ಲಿ ಸುಪ್ರೀಂ ಕೋರ್ಟಿನ ಹಸ್ತಕ್ಷೇಪ ಮಾಡುವ ಚೌಕಟ್ಟಿನ ಬಗ್ಗೆಯೂ ಕೆಲವು ಅಂಶಗಳನ್ನು ಮುಂದಿಟ್ಟಿದೆ. ‘ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸುವಂತಿಲ್ಲ. ಮಂಡಳಿ ರಚನೆಯು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಈ ಮಂಡಳಿಯನ್ನು ಉಭಯ ಸದನಗಳ ಅನುಮೋದನೆ ಪಡೆದು ರಚಿಸಬೇಕಿದೆ’ ಎಂದು ಅರ್ಜಿಯಲ್ಲಿ ಮನವಿ ಮಾಡಿದೆ ಕೇಂದ್ರ ಸರ್ಕಾರ.

ನಮ್ಮ ಆದೇಶ ಧಿಕ್ಕರಿಸಿದ್ದು ಸಾಕು…

ತಮಿಳುನಾಡಿಗೆ ನೀರು ಬಿಡಿ ಎಂಬ ಆದೇಶವನ್ನು ಧಿಕ್ಕರಿಸಿದ್ದು ಸಾಕು… ನಾಳೆ ಮಧ್ಯಹ್ನ 2 ಗಂಟೆಯ ಒಳಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಿ… ಕರ್ನಾಟಕಕ್ಕೆ ಹೀಗೊಂದು ಖಡಕ್ ಎಚ್ಚರಿಕೆ ನೀಡಿದೆ ಸುಪ್ರೀಂ ಕೋರ್ಟ್. ಸೆಪ್ಟೆಂಬರ್ 30 ರಂದು ನಡೆದ ವಿಚಾರಣೆ ವೇಳೆಯಲ್ಲಿ ಅಕ್ಟೋಬರ್ 1 ರಿಂದ 6 ರವೆರೆಗೂ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಬಿಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಕರ್ನಾಟಕ ಈ ಬಗ್ಗೆ ಸೋಮವಾರ ವಿಶೇಷ ಅಧಿವೇಶನವನ್ನು ಕರೆದಿದ್ದು, ಅಧಿವೇಶನ ಸಾಗುತ್ತಿದೆ. ಈ ನಡುವೆಯೇ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನೀರು ಬಿಡಲು ನಾಳೆ ಮಧ್ಯಾಹ್ನ 2 ಗಂಟೆವರೆಗೂ ಗಡವು ನೀಡಿದೆ.

ತ.ನಾಡಿಗೆ ನೀರು ಬಿಟ್ರೆ ಮಾತ್ರ ವಾದ ಮಾಡ್ತೀನಿ…

ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ವಾದ ಮಾಡಲು ನೇಮಕವಾಗಿರುವ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಈಗ ರಾಜ್ಯಕ್ಕೆ ಉಲ್ಟಾ ಹೊಡೆದಿದ್ದಾರೆ. ‘ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡದಿದ್ದರೆ, ನಾನು ಕರ್ನಾಟಕದ ಪರ ವಾದ ಮಾಡುವುದಿಲ್ಲ’ ಎಂದಿದ್ದಾರೆ.

ರಾಜ್ಯದ ಪರವಾಗಿ ವಾದ ಮಾಡಲೆಂದೇ ಕೋಟಿ ಕೋಟಿ ಸಂಭಾವನೆ ಪಡೆದ ಹಿರಿಯ ವಕೀಲರು ವಿಚಾರಣೆ ಮಹತ್ವದ ಘಟ್ಟದಲ್ಲಿ ಇರುವಾಗಲೇ ಹೀಗೆ ರಾಜ್ಯದ ನಿಲುವಿಗೆ ವಿರುದ್ಧ ನಿರ್ಧಾರ ಪಡೆದು ತಮ್ಮ ಜವಾಬ್ದಾರಿ ನಿಭಾಯಿಸಲು ವಿಫಲರಾಗಿದ್ದಾರೆ. ಇದರೊಂದಿಗೆ ಕಾವೇರಿ ವಿಚಾರದಲ್ಲಿ ನಾರಿಮನ್ ಅವರ ಬದಲಾವಣೆ ಮಾಡಬೇಕು ಎಂಬ ಕೂಗು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ನಾರಿಮನ್ ಅವರ ಈ ನಿರ್ಧಾರದಿಂದ ಸದ್ಯ ಕಿರಿಯ ವಕೀಲರುಗಳೇ ಸುಪ್ರೀಂ ಕೋರ್ಟಿನಲ್ಲಿ ವಾದ ನಡೆಸುತ್ತಾರೊ ಅಥವಾ ಸರ್ಕಾರ ಈ ವಿಷಯವಾಗಿ ಯಾವ ರೀತಿಯ ಪರಿಹಾರ ಕಂಡುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

Leave a Reply