ಗೋರಕ್ಷಕರಿಂದ ದೌರ್ಜನ್ಯ ಎಂದು ಸುಳ್ಳುಕತೆ ಪೊಣಿಸಿದನೇ ಸಿನಿಮಾದವ? ಇಂಥ ಸೋಗಲಾಡಿಗಳು ನಕಲಿ ಗೋರಕ್ಷಕರಷ್ಟೇ ಅಪಾಯಕಾರಿ

ಡಿಜಿಟಲ್ ಕನ್ನಡ ಟೀಮ್:

ಎರಡು ತಿಂಗಳ ಹಿಂದೆ ಗೋರಕ್ಷಕರ ವಿಚಾರವಾಗಿ ದೇಶದಾದ್ಯಂತ ಸಾಕಷ್ಟು ಚರ್ಚೆಗಳಾಗಿದ್ದು ಗೊತ್ತಿರುವ ಸಂಗತಿ. ಗೋ ರಕ್ಷಣೆ ಹೆಸರಿನಲ್ಲಿ ನಡೆದ ಹಲವು ದೌರ್ಜನ್ಯ ಪ್ರಕರಣಗಳಲ್ಲಿ ಗೋರಕ್ಷಕರು ವ್ಯಾಪಕ ಖಂಡನೆಗೂ ಗುರಿಯಾಗಿದ್ದರು. ಆದರೆ, ಈಗ ತಿಳಿದುಬಂದಿರುವ ವಿಷಯ ಏನಂದ್ರೆ, ಗೋರಕ್ಷಕರ ವಿಚಾರವಾಗಿ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದ್ದ ಸಂದರ್ಭವನ್ನೇ ಬಳಸಿಕೊಂಡು ಎರಡು ಕೋಮಿನ ನಡುವೆ ದ್ವೇಷ ಬಿತ್ತುವ ಪ್ರಚಾರ ಪಡೆಯುವುದಕ್ಕೆ ಸುಳ್ಳುಕತೆ ಕಟ್ಟುವ ಪ್ರಕರಣವು ಬೆಳಕಿಗೆ ಬಂದಿದೆ. ಅದಕ್ಕೆ ತಾಜಾ ಉದಾಹರಣೆ ಮುಂಬೈ ಮೂಲದ, ಸಿನಿಮಾ ತಂತ್ರಜ್ಞ ಬರುನ್ ಕಶ್ಯಪ್ ಪ್ರಕರಣ.

ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿದ್ದ ಸಂದರ್ಭದಲ್ಲೇ ಕಶ್ಯಪ್ ತಾನು ಸಹ ಗೋರಕ್ಷಕರ ದಾಳಿಗೆ ಒಳಗಾಗಿದ್ದೇನೆ ಎಂದು ಮುಂಬೈನಲ್ಲಿ ಪೊಲೀಸರಿಗೆ ದೂರು ನೀಡಿದ. ಇದರ ಬೆನ್ನಲ್ಲೇ ಉದಾರವಾದಿ ಬುದ್ಧಿಜೀವಿಗಳೆಲ್ಲ, ‘ಗೋರಕ್ಷಣೆಯ ಅಜೆಂಡಾದಿಂದ ನಾವು ಸಮಾಜದಲ್ಲಿ ಬದುಕುವುದಕ್ಕೇ ಆಗದ ವಾತಾವರಣ ನೆಲೆಗೊಂಡಿದೆ’ ಅಂತ ಬೊಬ್ಬೆ ಎಬ್ಬಿಸಿದರು.

ಈತನ ದೂರಿನ ಪ್ರಕಾರವಾಗಿಯೇ ಸುದೀರ್ಘ ಒಂದೂವರೆ ತಿಂಗಳು ತನಿಖೆ ನಡೆಸಿರುವ ಪೊಲೀಸರಿಗೆ ಈತನದು ಕಟ್ಟು ಕತೆ ಎಂದು ಗೊತ್ತಾಗಿದೆ. ಪರಿಣಾಮ ಈ ರೀತಿಯಾಗಿ ಸುಳ್ಳು ಆರೋಪ ಮಾಡಿದ ಕಾರಣಕ್ಕೆ ಕಶ್ಯಪ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ…

ಗೋ ರಕ್ಷಕರಿಂದ ದೌರ್ಜನ್ಯವಾಗಿದೆ ಎಂದು ಕಶ್ಯಪ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಆ ದೂರಿನಲ್ಲಿ ಅವರು ಮಾಡಿರುವ ಆರೋಪ ಹೀಗಿದೆ… ‘ನಾನು ಆಗಸ್ಟ್ 19 ರಂದು ಕೆಲಸಕ್ಕೆ ಆಟೋದಲ್ಲಿ ತೆರಳುತ್ತಿದ್ದೆ. ನನ್ನ ವಿಭಿನ್ನ ಶೈಲಿಯ ಉಡುಗೆ ನೋಡಿದ ಆಟೋ ಚಾಲಕ ಕೆಲವು ಪ್ರಶ್ನೆಗಳನ್ನು ಕೇಳಲಾರಂಭಿಸಿದ. ಕೈಯಲ್ಲಿದ್ದ ಲೆದರ್ ಬ್ಯಾಗ್ ನೋಡಿ ಚಾಲಕ ಅನುಮಾನ ಪಟ್ಟ. ಅದನ್ನು ನಾನು ಕೆಲ ತಿಂಗಳ ಹಿಂದಷ್ಟೇ ಪುಷ್ಕರದಿಂದ ತಂದಿದ್ದು, ಒಂಟೆ ಚರ್ಮದಿಂದ ಮಾಡಲಾಗಿತ್ತು. ಆದರೆ ಚಾಲಕ ತನ್ನ ಬ್ಯಾಗಿಗೆ ಕೈ ಹಾಕಿ ಅದು ಗೋವಿನ ಚರ್ಮದಿಂದ ಮಾಡಲಾಗಿದೆಯೇ ಎಂದು ಪರಿಶೀಲಿಸಿದ. ಸ್ವಲ್ಪ ದೂರ ಹೋದ ನಂತರ ಆಟೋ ಅನ್ನು ದೇವಸ್ಥಾನದ ಬಳಿ ನಿಲ್ಲಿಸಿ ತನಗೆ ಗೊತ್ತಿರುವ ವ್ಯಕ್ತಿಗಳನ್ನು ಕರೆದ. ನಂತರ ಅವರೆಲ್ಲರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದು, ಆಟೋದಲ್ಲಿ ದೂರ ಕರೆದೊಯ್ಯಲು ಪ್ರಯತ್ನಿಸಿದರು. ಆಗ ಸಿಗ್ನಲ್ ಬಳಿ ಆಟೋವಿನಿಂದ ಜಿಗಿದು ತಾನು ಪರಾರಿಯಾದೆ.’

ಈತನ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡ್ರು. ಈ ಪ್ರಕರಣದ ವಿಚಾರಣೆಯ ಜವಾಬ್ದಾರಿಯನ್ನು ಎನ್ ಕೌಂಟರ್ ಖ್ಯಾತಿಯ ದಯಾನಾಯಕ್ ಅವರಿಗೆ ವಹಿಸಲಾಯ್ತು. ಈ ತನಿಖೆಯಲ್ಲಿ ಪೊಲೀಸರು ದೂರಿನಲ್ಲಿ ಹೇಳಲಾದ ಪ್ರದೇಶದಲ್ಲಿರುವ ಸ್ಥಳೀಯ ಜನರ ಹೇಳಿಕೆ, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದರು. ನಂತರ ಕಶ್ಯಪ್ ಹೇಳಿದ ರೀತಿಯಲ್ಲೇ ಆರೋಪಿಯ ರೇಖಾಚಿತ್ರ ಬರೆಸಿ ಎಲ್ಲೆಡೆ ಹುಡುಕಿದರು. ಆ ಆಟೋವಿನ ನೋಂದಣಿ ಸಂಖ್ಯೆ ಖಚಿತವಿಲ್ಲದಿದ್ದರೂ ಕಶ್ಯಪ್ ಹೇಳಿದ ಸಂಖ್ಯೆಗೆ ಹೊಂದುವ ಸುಮಾರು 40ಕ್ಕೂ ಹೆಚ್ಚು ಇತರೆ ಆಟೋಗಳನ್ನು ಪರಿಶೀಲಿಸಿದರು. ಆದರೆ ಆ ರೀತಿಯಾದ ಆಟೋ ಚಾಲಕನನ್ನು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.

ಹೀಗಾಗಿ ಕಶ್ಯಪ್ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ನಿರ್ಧರಿಸಿದ ಪೊಲೀಸರು. ದೂರು ನೀಡಿ ಒಂದೂವರೆ ತಿಂಗಳಾದ ನಂತರ ಸುಳ್ಳು ಕತೆಕಟ್ಟಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕಶ್ಯಪ್ ವಿರುದ್ಧ ಕೋಮುಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ, ಪೊಲೀಸ್ ಇಲಾಖೆ ಹಾಗೂ ಕಾನೂನಿನ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಸೆಕ್ಷನ್ 153, 182 ಮತ್ತು 505 ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಂತರ ಮಾಧ್ಯಮದವರ ಜತೆ ಮಾತನಾಡಲು ನಿರಾಕರಿಸಿರುವ ಕಶ್ಯಪ್, ‘ಪೊಲೀಸರು ನನ್ನನ್ನು ನಂಬುತ್ತಿಲ್ಲ. ನಾನು ಪ್ರಚಾರಕ್ಕಾಗಿ ಹೀಗೆ ಮಾಡಿದ್ದೇನೆ ಎಂದು ಭಾವಿಸಿದ್ದಾರೆ. ನಾನು ಈಗ ಸಂದರ್ಶನ ನೀಡಿದರೆ ಅವರು ನನ್ನನ್ನು ನಂಬುವುದಿಲ್ಲ. ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಹೇಳಿಯೇ ಇಲ್ಲ. ಆಟೋ ಚಾಲಕನನ್ನು ಪತ್ತೆ ಹಚ್ಚಲಾಗದ ಕಾರಣ ಅವರು ನನ್ನನ್ನು ಯಾವುದೇ ವಿಚಾರಣೆ ನಡೆಸಿಲ್ಲ. ಹಬ್ಬಗಳ ಹಿನ್ನೆಲೆಯಲ್ಲಿ ಅವರು ಬೇರೆ ಕೆಲಸದಲ್ಲಿ ನಿರತರಾಗಿರಬೇಕು’ ಎಂದಷ್ಟೇ ಹೇಳಿದ್ದಾನೆ.

ಒಟ್ಟಿನಲ್ಲಿ ಈತನ ದೂರಿಗೂ ವಿಚಾರಣೆಯಲ್ಲಿ ಕಂಡು ಬಂದಿರುವ ಅಂಶಗಳಿಗೂ ಯಾವುದೇ ರೀತಿಯಲ್ಲೂ ಹೋಲಿಕೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಕಟ್ಟುಕತೆ ಎಂದು ನಿರ್ಧರಿಸಿದ್ದಾರೆ. ಸಮಾಜದಲ್ಲಿ ಕೋಮುಗಲಭೆ ಎಂಬ ಬೆಂಕಿ ಕಾಣಿಸಿಕೊಂಡರೆ ಸಾಕು ಅದನ್ನು ನಂದಿಸುವ ಬದಲಿಗೆ ಆ ಬೆಂಕಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವವರು ಸಾಕಷ್ಟಿದ್ದಾರೆ. ಆ ಪೈಕಿ ಸಿಕ್ಕ ಒಂದು ತಾಜಾ ಉದಾಹರಣೆ ಇದಾಗಿದೆ.

Leave a Reply