ನೀರು ಬಿಡುವ ವಿಚಾರದಲ್ಲಿ ಯಾರ್ಯಾರ ವಾದ ಏನೇನು? ಕೇಜ್ರಿವಾಲ್ ಬಾಯಿಂದ ಮೋದಿ ಗುಣಗಾನ, ಭಾರತ-ಪಾಕ್ ಭದ್ರತಾ ಸಲಹೆಗಾರರ ಚರ್ಚೆ, ಜಪಾನ್ ವೈದ್ಯನಿಗೆ ನೊಬೆಲ್ ಪ್ರಶಸ್ತಿ, ಸರಣಿ ಗೆದ್ದು ನಂಬರ್ ಒನ್ ಆದ ಕೊಹ್ಲಿ ಪಡೆ

ಐದು ದಿನಗಳ ಐದನೇ ಅಂತಾರಾಷ್ಟ್ರೀಯ ಬೌದ್ಧ ಸಮಾವೇಶವು ವಾರಾಣಸಿಯಲ್ಲಿ ಸೋಮವಾರ ಆರಂಭವಾಗಿದ್ದು, 47 ದೇಶಗಳ ಸುಮಾರು 300 ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಡಿಜಿಟಲ್ ಕನ್ನಡ ಟೀಮ್:

ಬೆಳೆ ಉಳಿಸುವ ಉದ್ದೇಶಕ್ಕೆ ನೀರು ಬಿಡಲು ವಿಧಾನ ಮಂಡಲ ತೀರ್ಮಾನ

ರೈತರು ಬೆಳೆದ ಫಸಲು ಉಳಿಸಿಕೊಳ್ಳುವ ದೃಷ್ಟಿಯಿಂದ ಕರ್ನಾಟಕ ಜಲಾಶಯಗಳಿಂದ ಕಾವೇರಿ ನೀರು ಹರಿಸಲು ಸೋಮವಾರ ನಡೆದ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸೆ.23 ರಂದು ವಿಧಾನ ಮಂಡಲದ ವಿಶೇಷ ಅಧಿವೇಶನದ ನಿರ್ಣಯಕ್ಕೂ ಧಕ್ಕೆ ಬಾರದ ರೀತಿಯಲ್ಲಿ 2017 ಜೂನ್ ವರೆಗೆ ಅಗತ್ಯವಿರುವ ಕುಡಿಯುವ ನೀರನ್ನು ಅದೇ ಪ್ರಮಾಣದಲ್ಲಿ ಸಂಗ್ರಹಿಸಿ, ಹೆಚ್ಚುವರಿ ನೀರನ್ನು ರಾಜ್ಯದ ಕಾವೇರಿ ಕೊಳ್ಳದ ಭಾಗದಲ್ಲಿ ಒಣಗುತ್ತಿರುವ ಬೆಳೆಗೆ ನೀರು ಹರಿಸುವ ತೀರ್ಮಾನ ಇದಾಗಿದೆ.

ಕಳೆದ ಅಧಿವೇಶನದಲ್ಲಿ ನಿರ್ಣಯ ಕೈಗೊಂಡ ಸಂದರ್ಭದಲ್ಲಿ ರಾಜ್ಯದ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ 27.6 ಟಿಎಂಸಿ ನೀರು ಸಂಗ್ರಹಗೊಂಡಿತ್ತು. ಆನಂತರ ನಿನ್ನೆ ಸಂಜೆಯವರೆಗೂ ನಮ್ಮ ಜಲಾಶಯಗಳಲ್ಲಿ 34.13 ಅಂದರೆ ಹೆಚ್ಚುವರಿಯಾಗಿ ಏಳು ಟಿಎಂಸಿ ನೀರು ಹರಿದು ಬಂದಿದ್ದು, ಆ ನೀರನ್ನು ರೈತರ ಫಸಲಿಗೆ ನೀಡಲಾಗುವುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇಲ್ಲಿ ರೈತರ ಫಸಲಿಗೆ ನೀಡುವ ಸಂದರ್ಭದಲ್ಲಿ ಕೊಳ್ಳ ಮತ್ತು ನಾಲೆಗಳ ಮೂಲಕ ಮೆಟ್ಟೂರು ಜಲಾಶಯಕ್ಕೆ ನಿತ್ಯ 3 ರಿಂದ 4 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದು ಸಹ ಸರ್ಕಾರದ ಮೂಲ ಉದ್ದೇಶ. ನೇರವಾಗಿ ತಮಿಳುನಾಡಿಗೆ ನೀರು ಹರಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ನ್ಯಾಯಾಲಯದ ಆದೇಶದಂತೆ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಳುಗುಂಡ್ಲು ಮಾಪನ ಕೇಂದ್ರಕ್ಕೆ ತಲುಪಲಿಸಿ, ಆ ಮೂಲಕ ತಮಿಳುನಾಡಿಗೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ನೀರು ಬಿಟ್ಟು ನ್ಯಾಯಾಲಯದ ಮನವೊಲಿಸುವ ಪ್ರಯತ್ನ ರಾಜ್ಯ ಸರ್ಕಾರದ್ದಾಗಿದೆ.

ಅಕ್ಟೋಬರ್ 18 ರಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ದಾಖಲಿಸಿರುವ ಎಸ್ಎಲ್ಪಿ ಅರ್ಜಿ ವಿಚಾರಣೆ ನಡೆಯಲಿದ್ದು, ಈ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಮುಂದೆ ರಾಜ್ಯದ ವರ್ಚಸ್ಸು ಕಾಪಾಡುವ ನೀಟ್ಟಿನಲ್ಲಿ ಈಗ ನ್ಯಾಯಾಲಯ ನೀಡಿರುವ ಆದೇಶವನ್ನು ಪರೋಕ್ಷವಾಗಿ ಪಾಲಿಸುವ ಉದ್ದೇಶದಿಂದ ವಿಧಾನ ಮಂಡಲದ ಉಭಯ ಸದನಗಳಲ್ಲೂ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಸುಪ್ರೀಂ ಕೋರ್ಟಿನ ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸರ್ಕಾರದ್ದಾಗಿದೆ.

ಈ ನಿರ್ಣಯದ ಮೇಲೆ ವಿಧಾನ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿವಿಧ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿಂದ ನಡೆದ ಹಲವು ವಿದ್ಯಾಮಾನಗಳನ್ನು ವಿವರಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸುವುದರ ಜತೆಗೆ, ನ್ಯಾಯಾಲಯದಲ್ಲಿ ಕರ್ನಾಟಕದ ಪರ ವಾದ ಮಾಡದೇ ಪರಿಸ್ಥಿತಿ ಕೈಚೆಲ್ಲಿದ ವಕೀಲ ನಾರಿಮನ್ ಅವರ ನಡೆಗೆ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನೀಡಿದ ಆದೇಶವನ್ನು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದರು.

ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಅಕ್ಟೋಬರ್ 18ರಂದು ನಡೆಯಲಿರುವ ಅರ್ಜಿಯ ವಿಚಾರಣೆಯ ಮಹತ್ವವನ್ನು ವಿವರಿಸಿದರು. ಅಲ್ಲದೆ ನ್ಯಾಯಾಧಿಕರಣದ ತೀರ್ಪಿನಲ್ಲಿ ಆಗಿರುವ ಲೋಪಗಳು ಹಾಗೂ ವಿಚಾರಣೆಯಿಂದ ರಾಜ್ಯಕ್ಕೆ ಆಗಬಹುದಾದ ಲಾಭಗಳನ್ನು ಹೇಳಿದರು. ಈ ಎಲ್ಲ ಉದ್ದೇಶಗಳಿಂದಲೇ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರಕ್ಕೆ ಆರಂಭದಲ್ಲಿ ನೀರು ಬಿಡಿ ಎಂದು ಹೇಳಿದ್ದರು. ಅವರ ಈ ಸಲಹೆ ಹಿಂದೆ ರಾಜ್ಯದ ಜನರ ಹಿತರಕ್ಷಣೆಯ ದೂರದೃಷ್ಠಿ ಇದೆ ಎಂದು ಸಮರ್ಥಿಸಿಕೊಂಡರು. ಅಲ್ಲದೆ ರೈತರಿಗೆ ಕನಿಷ್ಠ ₹ 25 ಸಾವಿರ ಪರಿಹಾರ ಘೋಷಿಸಬೇಕು ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನವಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು, ಅವರ ಮೇಲಿನ ಪ್ರಕರಣ ಕೈಬಿಡಬೇಕು ಅಂತಲೂ ಆಗ್ರಹಿಸಿದರು.

ಇದಕ್ಕೂ ಮುನ್ನ ಅಧಿವೇಶನ ಆರಂಭವಾದಾಗ ಕಾವೇರಿ ವಿಚಾರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಡೆಸಿದ ಹೋರಾಟಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವಹಿಸಿದ ಕಾಳಜಿಗೆ ವಿಧಾನಸಭೆಯಲ್ಲಿಂದು ಅಭಿನಂದನೆ ಸಲ್ಲಿಸಲಾಯಿತು.

ಅಪರೂಪಕ್ಕೆ ಕೇಜ್ರಿ ಬಾಯಲ್ಲಿ ಮೋದಿ ಗುಣಗಾನ

ಮೋದಿ ವಿರುದ್ಧ ಮಾತಿನ ಪ್ರಹಾರ ಮಾಡುತ್ತಲೇ ಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಈಗ ಅವರನ್ನು ಹೊಗಳಿದ್ದಾರೆ. ಕಳೆದ ಗುರುವಾರ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಕಾರ್ಯಚರಣೆಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಅರವಿಂದ ಕೇಜ್ರಿವಾಲ್, ‘ಪ್ರಧಾನಿ ಮೋದಿ ವಿರುದ್ಧ ನೂರಾರು ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಈ ವಿಚಾರ ಅವರು ತೋರಿದ ದಿಟ್ಟತನಕ್ಕೆ ನನ್ನ ನಮನಗಳು. ಪಾಕಿಸ್ತಾನ ಈ ಕಾರ್ಯಾಚರಣೆಯಿಂದ ಕಂಗೆಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸುಳ್ಳು ಆರೋಪಗಳಿಂದ ಕಳಂಕ ತರುತ್ತಿದೆ. ಹೀಗಾಗಿ ಪಾಕಿಸ್ತಾನದ ಮುಖವಾಡವನ್ನು ನೀವು ಕಳಚಬೇಕು’ ಎಂದು ಸಲಹೆ ನೀಡಿದರು.

ಗಡಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಭಾರತ-ಪಾಕ್ ಭದ್ರತಾ ಸಲಹೆಗಾರರ ಚರ್ಚೆ

ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಉಗ್ರರಿಂದ ದಾಳಿಯ ನಂತರ ತೀವ್ರವಾಗಿ ಹದಗೆಟ್ಟಿದ್ದ ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿನ ಪರಿಸ್ಥಿತಿ ಸುಧಾರಣೆಗೆ ಉಭಯ ದೇಶಗಳು ಮುಂದಾಗಿವೆ. ಎರಡೂ ದೇಶಗಳ ಭದ್ರತಾ ಸಲಹೆಗಾರರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಸುಧಾರಿಸಲು ನಿರ್ಧರಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪಾಕಿಸ್ತಾನ ರಾಯಭಾರಿ ಸರ್ತಾಜ್ ಅಜೀಜ್ ಮಾಹಿತಿ ನೀಡಿದ್ದು, ಉರಿ ಮೇಲಿನ ದಾಳಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆ ನಂತರ ನಡೆದ ಮೊದಲ ಮಾತುಕತೆ ಇದಾಗಿದೆ. ‘ ಪಾಕಿಸ್ತಾನ ಭದ್ರತಾ ಸಲಹೆಗಾರ ನಾಸಿರ್ ಜಂಜುವಾ ಭಾರತದ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರನ್ನು ಸಂಪರ್ಕಿಸಿದ್ದು, ಗಡಿ ನಿಯಂತ್ರಣ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಣೆಗೆ ಒಪ್ಪಿಗೆ ನೀಡಿದ್ದಾರೆ. ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಸುಧಾರಣೆಗೆ ಆದ್ಯತೆ ನೀಡುವುದರ ಜತೆಗೆ ಕಾಶ್ಮೀರದ ಬಗ್ಗೆ ಹೆಚ್ಚು ಗಮನ ಹರಿಸಲು ಮುಂದಾಗಿದೆ’ ಎಂದು ಅಜೀಜ್ ಹೇಳಿಕೆ ನೀಡಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ. ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಉಲ್ಭಣಗೊಳಿಸಿ ಭಾರತವು ಜಾಗತಿಕ ಮಟ್ಟದಲ್ಲಿ ಕಾಶ್ಮೀರ ವಿಷಯವನ್ನು ಮರೆಮಾಚುವ ಪ್ರಯತ್ನ ನಡೆಸಿದೆ ಎಂದೂ ಆರೋಪಿಸಿದ್ದಾರೆ.

ಸರಣಿ ಗೆದ್ದ ಟೀಂ ಇಂಡಿಯಾ ನಂಬರ್ ಒನ್ ಪಟ್ಟಕ್ಕೆ

ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 178 ರನ್ ಗಳ ಭರ್ಜರಿ ಜಯ ಸಂಪಾದಿಸಿದೆ. ಅದರೊಂದಿಗೆ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಸರಣಿ ಗೆದ್ದ ಹಿನ್ನೆಲೆಯಲ್ಲಿ ಭಾರತ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲೂ ಏರಿಕೆ ಕಂಡಿದ್ದು, ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಜಿಗಿದಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 316ರನ್ ಗಳಿಸಿತ್ತು. ಪ್ರತಿಯಾಗಿ ನ್ಯೂಜಿಲೆಂಡ್ 204 ರನ್ ಗಳಿಸಲಷ್ಟೇ ಶಕ್ತವಾಯ್ತು. 112 ರನ್  ಮುನ್ನಡೆಯೊಂದಿಗೆ ದ್ವಿತಿಯ ಇನಿಂಗ್ಸ್ ನಲ್ಲಿ 263 ರನ್ ಪೇರಿಸಿದ ಭಾರತ ಕಿವೀಸ್ ಪಡೆಗೆ 376 ರನ್ ಗಳ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ 197 ರನ್ ಗಳಿಗೆ ಆಲೌಟ್ ಆಗಿ ಪರಾಭವಗೊಂಡಿತು. ಪಂದ್ಯದ ಎರಡೂ ಇನಿಂಗ್ಸ್ ನಲ್ಲೂ ಅಜೇಯ ಅರ್ಧ ಶತಕ ದಾಖಲಿಸಿದ ವೃದ್ಧಿಮಾನ್ ಸಾಹ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತದಲ್ಲಿ ನಡೆದ 250ನೇ ಪಂದ್ಯ ಇದಾಗಿದ್ದು, ಈ ಗೆಲವು ಮತ್ತಷ್ಟು ವಿಶೇಷವಾಯ್ತು.

ಜಪಾನ್ ವೈದ್ಯನಿಗೆ ನೊಬೆಲ್ ಪ್ರಶಸ್ತಿ

ವೈದ್ಯಕೀಯ ಕ್ಷೇತ್ರದಲ್ಲಿನ ಅಸಾಮಾನ್ಯ ಸಾಧನೆ ಮಾಡಿರುವ ಜಪಾನಿನ ವಿಜ್ಞಾನಿ ಯೊಶಿನೊರಿ ಒಸುಮಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಲ್ ಸೈಕ್ಲಿಂಗ್ (ಜೀವಕೋಶ ಮರುಬಳಕೆ) ಹಾಗೂ ಮನುಷ್ಯನ ಜೀವಕೋಶಗಳು ತನ್ನನ್ನು ತಾನೇ ತಿಂದು ಮದುಮೇಹಕ್ಕೆ ಕಾರಣವಾಗುವ ಆಟೊಫಗಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಸುಮಿ ಅವರ ಮಹತ್ವದ ಕೊಡುಗೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. 71 ವರ್ಷದ ಒಸುಮಿ ಅವರು 1974 ರಲ್ಲಿ ಟೊಕಿಯೊ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದು, ಸದ್ಯ ಟೊಕಿಯೊ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply