ನೀರು ಬಿಡೋಣ… ಕರ್ನಾಟಕದ ನಿರ್ಧಾರ, ಹಂಗಾದ್ರೆ ಕಾವೇರಿ ಕದನದಲ್ಲಿ ಗೆದ್ದವರು ಯಾರು?

ಡಿಜಿಟಲ್ ಕನ್ನಡ ಟೀಮ್:

ಕೆಲವನ್ನು ಕಪ್ಪು-ಬಿಳುಪುಗಳಲ್ಲಿ ಇದಮಿತ್ಥಂ ಅಂತ ಹೇಳಲಾಗುವುದಿಲ್ಲ. ಕಾವೇರಿ ವಿಷಯವೂ ಹೀಗೆಯೇ ಅನ್ನಬಹುದು. ಏಕೆಂದರೆ ಯಾವ ಸದನ ಆಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುವುದು ಅಂತ ತೀರ್ಮಾನ ತೆಗೆದುಕೊಂಡು ಆ ಮೂಲಕ ತಮಿಳುನಾಡಿಗೆ ನೀರು ಬಿಡದಿರುವ ನಿರ್ಧಾರ ತೆಗೆದುಕೊಂಡಿತ್ತೋ, ಅದೇ ಸದನವು ಸೋಮವಾರದ ವಿಶೇಷ ಅಧಿವೇಶನದಲ್ಲಿ ‘ಜಲಾಶಯಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಕುಡಿಯುವ ನೀರಿನ ಜತೆ ರೈತರಿಗೆ ಕೃಷಿಗೂ ನೀರು ಹರಿಸಲಾಗುವುದು’ ಎಂಬ ನಿರ್ಣಯಕ್ಕೆ ಬಂದಿದೆ.

ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಬ ನಿರ್ಣಯ ಈ ಮೊದಲೂ ಇರಲಿಲ್ಲ ಹಾಗೂ ಈ ನಿರ್ಣಯದಲ್ಲೂ ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ ಎಂಬುದಿಲ್ಲ. ಆದರೆ ಪರೋಕ್ಷ ಪರಿಣಾಮ ಅಷ್ಟೆ. ಸದನವು ಕೃಷಿಗೆ ಮಾತ್ರ ನೀರು ಎಂದು ಹೇಳಿದ್ದಾಗ ಜಲಾಶಯಗಳಲ್ಲಿ ಸುಮಾರು 27 ಟಿಎಂಸಿ ನೀರಷ್ಟೇ ಸಂಗ್ರಹವಾಗಿತ್ತು, ಆದರೀಗ 35 ಟಿಎಂಸಿಯಷ್ಟು ನೀರು ಸಂಗ್ರಹವಾಗಿರುವುದರಿಂದ ಈ ತೀರ್ಮಾನ ಎಂದು ಹೇಳಲಾಗಿದೆ.

ನೀರು ಬಿಡಲ್ಲ ಎಂದು ಪ್ರಾರಂಭವಾಗಿದ್ದ ಕದನ, ಬಿಡೋಣ ಎಂಬಲ್ಲಿ ಸಮಾಪ್ತಿಯಾಗಿದೆ. ಹಾಗಾದರೆ ಏನಿಲ್ಲಿಯ ಮುಖ್ಯಾಂಶ?

ದೇವೇಗೌಡರು ಗೆದ್ದರು: ಪ್ರಾರಂಭದಲ್ಲಿ ದೇವೇಗೌಡರದ್ದೇನೂ ನೀರು ಬಿಡಬಾರದೆಂಬ ಕ್ರಾಂತಿಕಾರಿ ನಿಲುವೇನೂ ಆಗಿರಲಿಲ್ಲ. ಅಲ್ಲದೇ ಈ ಸರ್ಕಾರ ನಾರಿಮನ್ ವಿಷಯದಲ್ಲಿ ಇಟ್ಟುಕೊಂಡಿರುವ ಸಾಫ್ಟ್ ಕಾರ್ನರ್ ಗೌಡರಿಗೂ ಡಿಟ್ಟೊ ಇದೆ. ಆದರೆ ಒಟ್ಟಾರೆ ಪ್ರಕರಣವನ್ನು ಜನರ ಎದುರು ನಿಭಾಯಿಸಿದ ರೀತಿಗೆ ಹಾಗೂ ಮನೆಯ ಹಿರಿ ಯಜಮಾನ ಮನುಷ್ಯನಂತೆ ಘನ ವರ್ತನೆ ತೋರಿದ್ದಕ್ಕೆ ಹೀರೋ ಆದರು. ಕಾಂಗ್ರೆಸ್ ಪ್ರಾರಂಭದಿಂದಲೂ ಇಡೀ ಪ್ರಕರಣವನ್ನು ಕೇಂದ್ರಕ್ಕೆ ಹಾಗೂ ಮೋದಿಗೆ ತಗುಲಿಸಿ ನಿರಾಳವಾಗುವುದಕ್ಕೇ ಪ್ರಯತ್ನಿಸಿಕೊಂಡುಬಂತು. ಆ ಮೂಲಕ ಕಾನೂನು ಹೋರಾಟದಲ್ಲಿ ತನ್ನ ಲೋಪಗಳನ್ನು ಮುಚ್ಚಿಟ್ಟುಕೊಳ್ಳುವ ಯತ್ನ ಅದರದ್ದಾಗಿತ್ತು. ಬಿಜೆಪಿಯ 17 ಜನ ಸಂಸದರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರಾದ್ದರಿಂದ ಜನರ ಭಾವನೆಯೂ ಬಿಜೆಪಿ ಮೇಲಿನ ಒತ್ತಡವನ್ನೇ ಹೆಚ್ಚು ಸೃಷ್ಟಿಸಿತು. ಆದರೆ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನೂ ನಿಂದಿಸುವುದಕ್ಕೆ ಹೋಗಲಿಲ್ಲ, ರಾಜ್ಯ ಸರ್ಕಾರಕ್ಕಂತೂ ಹೆಗಲಿಗೆ ಹೆಗಲು ಕೊಟ್ಟರು, ಸುಪ್ರೀಂಕೋರ್ಟ್ ವಿರುದ್ಧ ಜನಾಕ್ರೋಶವಿದ್ದಾಗಲೂ ಪ್ರಾರಂಭದಲ್ಲಿ ಗೌಡರು ಅಲ್ಲೂ ಬಯ್ಯುವುದು ಬೇಡ ಅಂದರು. ಪ್ರಧಾನಿ ಜತೆಗೆ ಉಳಿದವರು ಮಾತಾಡುವುದಕ್ಕಿಂತ ಹೆಚ್ಚಾಗಿ ಒಬ್ಬ ಹಿರಿ ಮನುಷ್ಯನಾಗಿ ದೇವೇಗೌಡರ ಮಾತಿಗೆ ತೂಕವಿತ್ತು. ಅದನ್ನವರು ನಿಭಾಯಿಸಿದರು.

ಸುಪ್ರೀಂಕೋರ್ಟ್ ಇಗೋ ಗೆತ್ತು: ಕರ್ನಾಟಕವು ತನ್ನ ಆದೇಶ ಪಾಲಿಸಬೇಕೆಂದು ಮಂಗಳವಾರದ ಡೆಡ್ಲೈನ್ ಕೊಟ್ಟು ಗರಂ ಆಗಿತ್ತು ಸುಪ್ರೀಂಕೋರ್ಟ್. ಕೋಟಿ ಕೋಟಿ ಜೇಬಿಗಿಳಿಸಿಕೊಂಡು, ಸಾಮಾನ್ಯರಿಗೂ ಗೊತ್ತಾಗುವಂತೆ ಅಡಿಗಡಿಗೆ ಎಡವಿದ ನಮ್ಮ ವಕೀಲರ ತಂಡದ ಅಸಾಮರ್ಥ್ಯವೋ, ಅಥವಾ ಉದಯ್ ಲಲಿತ್ ಅವರಂಥ ನ್ಯಾಯಮೂರ್ತಿಗಳನ್ನು ಪೀಠ ಹೊಂದಿರುವುದು ತಮಿಳುನಾಡಿನ ಅದೃಷ್ಟವೋ ಸುಪ್ರೀಂಕೋರ್ಟ್ ತನ್ನ ನಿರ್ದೇಶನ ಗೆಲ್ಲುವಂತೆ ಭಾರಿ ಅಸ್ತ್ರ ಪ್ರಯೋಗಿಸಿತು. ದ್ವಿಸದಸ್ಯಪೀಠದ ವ್ಯಾಪ್ತಿಯಲ್ಲೇ ಇರದ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶ ಕೊಡುತ್ತಿದ್ದಂತೆ, ನಮಗೆ ದೊಡ್ಡ ಗುಮ್ಮ ಎದುರಾಯಿತು. ನೀರು ಬಿಟ್ಟರೂ ಪರವಾಗಿಲ್ಲ ಈ ಮಂಡಳಿಯಿಂದ ಪಾರಾಗೋಣ ಎಂಬ ಸವಾಲು ಕರ್ನಾಟಕಕ್ಕೆ ಎದುರಾಗಿದ್ದೇ ಈ ನಿರ್ಣಯಕ್ಕೆ ದೂಡಿದೆ. ಇದೊಂದು ವ್ಯಹವಾಗಿದ್ದಂತೆ ತೋರುತ್ತಿದೆ.

ಬಿಜೆಪಿಗೆ ಸಮಾಧಾನಕರ ಬಹುಮಾನ: ಕರ್ನಾಟಕದ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಏನೂ ಮಾತನಾಡುವುದಿಲ್ಲ ಎಂಬ ಅಸಮಾಧಾನ ಎದ್ದಿತ್ತು. ಕಾವೇರಿ ನಿರ್ವಹಣಾ ಮಂಡಳಿಗೆ ಆದೇಶಿಸಿದಾಗ ಯಾವ ಅಟಾರ್ನಿ ಜನರಲ್ ಸುಮ್ಮನಿದ್ದರೋ ಅವರೇ ಈಗ ಕೇಂದ್ರದ ಪರವಾಗಿ ಅಫಿಡವಿಟ್ ಸಲ್ಲಿಸಿ, ‘ಮಂಡಳಿ ರಚನೆ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆಯೇ ಹೊರತು, ಸುಪ್ರೀಂ ವ್ಯಾಪ್ತಿಗಲ್ಲ’ ಎಂದಿದೆ. ಮೊನ್ನೆಯೇ ಏಕೆ ಹೇಳಲಿಲ್ಲ ಎಂಬ ಸುಪ್ರೀಂ ಪ್ರಶ್ನೆಗೆ- ಹೌದು ತಪ್ಪಾಗಿತ್ತು ಎಂದಿದೆ.

ಕಾಂಗ್ರೆಸ್ ಕಾಲರ್ ಜಗ್ಗಬಹುದೇ?: ಕೇಂದ್ರವನ್ನು ದೂರುವುದರಲ್ಲಿರುವ ಉತ್ಸಾಹವು ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಂದೇನು ಮಾಡಬೇಕೆಂಬುದರಲ್ಲಿಲ್ಲ. ಅಟಾರ್ನಿ ಜನರಲ್ ಅಫಡವಿಟ್ ಹಾಕಿ, ಮಂಡಳಿ ರಚನೆ ಸುಪ್ರೀಂ ವ್ಯಾಪ್ತಿಗೆ ಬರದು ಎನ್ನುವ ಮೂಲಕ ಕರ್ನಾಟಕದ ಜನರ ಆಕ್ರೋಶ ಅರ್ಥ ಮಾಡಿಕೊಂಡು ತಪ್ಪು ತಿದ್ದಿಕೊಂಡಿತು ಸರಿ. ಆದರೆ, ಅವತ್ತು ಈ ನಿರ್ಣಯವನ್ನು ಕರ್ನಾಟಕದ ವಕೀಲರೇಕೆ ಪ್ರಶ್ನಿಸಲಿಲ್ಲ? ಅಂದಿನ ವ್ಯತಿರಿಕ್ತ ತೀರ್ಪಿನಲ್ಲಿ ಕಾನೂನು ಹೋರಾಟದ ಲೋಪ ಪ್ರಶ್ನಿಸಿದ ಸಂದರ್ಭದಲ್ಲಿ ಟಿವಿ9ಗೆ ವಕೀಲರ ತಂಡದ ಬ್ರಿಜೇಶ್ ಕಾಳಪ್ಪ ಹೀಗೆ ಹೇಳಿದ್ದರು- ‘ನೀವಿದನ್ನು ಕಾನೂನು ಚೌಕಟ್ಟಿನಲ್ಲಿ ಮಾತ್ರ ನೋಡುತ್ತಿದ್ದೀರಿ. ಇಲ್ಲೊಂದು ರಾಜಕೀಯ ಸೂತ್ರ-ಸಮೀಕರಣ ಇದೆ. ಅದರ ಬಗ್ಗೆ ಮಾತಾಡಬೇಕು.’ ನಿಜ, ರಾಜಕೀಯ ಸೇರಿದಂತೆ ಹಲವು ಆಯಾಮಗಳು ಪರಿಹಾರಕ್ಕಿರಬಹುದು. ಆದರೆ ವಕೀಲನಾಗಿ ನಿಮ್ಮ ಜವಾಬ್ದಾರಿ ಏನು ಸ್ವಾಮಿ? ಅದನ್ನು ತಪ್ಪಿಸಿಕೊಂಡು ಇದ್ದವರ ಮೇಲೆಲ್ಲ ಗೂಬೆ ಕೂರಿಸಿದರೇನು ಬಂತು? ಹೀಗಾಗಿ ಇನ್ನು ಮುಂದಾದರೂ ಕಾನೂನು ವಾದದ ಅಡಿಪಾಯಗಳನ್ನು ಬಲಪಡಿಸಿಕೊಳ್ಳದಿದ್ದರೆ, ಕಾಂಗ್ರೆಸ್ ಸರ್ಕಾರ ಈಗೇನೋ ಕಾವೇರಿ ವಿಚಾರ ನಿಭಾಯಿಸಿಬಿಟ್ಟೆ ಎಂದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ.

ಅಕ್ಟೋಬರ್ 18ಕ್ಕೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದೆದುರು ಮುಖ್ಯ ವಿಚಾರಣೆ ಬರಲಿಕ್ಕಿದೆ. ಈಗ ನೀರು ಬಿಡುವುದೂ ಅದಕ್ಕೆ ಪೂರಕ ಎಂಬ ವಾದವಿದೆ. ಆದರೆ, ಈ ಸದಾಶಯ ತೋರ್ಪಡಿಕೆ ಆಚೆಗೆ ಸಶಕ್ತ ವಾದ ಕಟ್ಟಿ, ಸಂಕಷ್ಟ ಸಮಯದಲ್ಲಿ ರಾಜ್ಯಕ್ಕೆ ಪೂರಕವಾಗುವ ತೀರ್ಪು ತರುವುದಕ್ಕೆ ಈ ಸರ್ಕಾರ ಶಕ್ತವಾದರೆ ಆಗ ನಿಜ ಸಾಧನೆ. ಎಲ್ಲರ ತಥಾಕಥಿತ ಮುತ್ಸದ್ದಿತನ, ನಾಡು-ಜಲ ಕಾಳಜಿಯೆಲ್ಲ ಅಭಿವ್ಯಕ್ತಗೊಳ್ಳಬೇಕಿರುವುದು ಇಲ್ಲಿಯೇ ಹೊರತು ರಾಜಕೀಯ ಭಾಷಣಗಳಲ್ಲಿ ಹಾಗೂ ಹೇಳಿಕೆಗಳಲ್ಲಲ್ಲ.

Leave a Reply