ಮುಂದುವರಿದಿದೆ ಪಾಕ್ ಪರೋಕ್ಷ ಸಮರ, ಬಾರಾಮುಲ್ಲಾದಲ್ಲಿ ಬಿಎಸ್ಎಫ್ ಯೋಧ ಅಮರ, ಉರಿಯಂಥದೇ ಯೋಜಿತ ದಾಳಿಯ ಪ್ರಯತ್ನವಾಗಿತ್ತೇ ಇದು?

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಭಾನುವಾರ ರಾತ್ರಿ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಸೈನಿಕ ಶಿಬಿರದ ಮೇಲಿನ ಉಗ್ರದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಭಾರತೀಯ ಪಡೆ ಯಶಸ್ವಿಯಾಗಿದೆಯಾದರೂ ದಾಳಿ ನಡೆಸಿದ ಉಗ್ರರು ಸಿಕ್ಕಿಲ್ಲ. ಸೇನೆ ತೀವ್ರ ಶೋಧ ಕಾರ್ಯ ನಡೆಸಿದೆಯಾದರೂ, ಹತ್ತಿರದ ಜೇಲಂ ನದಿ ಹರಿವನ್ನು ಉಪಯೋಗಿಸಿಕೊಂಡು ದಾಳಿಕೋರ ಉಗ್ರರು ಪರಾರಿಯಾಗಿದ್ದಾರೆ.

ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕಾನ್ಸ್ಟೇಬಲ್ ನಿತಿನ್ ಹುತಾತ್ಮರಾಗಿದ್ದು, ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.

ಆದರೆ ದೊಡ್ಡ ದಾಳಿಯೊಂದಕ್ಕೆ ಪಾಕಿಸ್ತಾನ ಯೋಜಿಸಿತ್ತು, ಆದರೆ ಸಾಕಾರವಾಗಿಲ್ಲ ಎಂಬುದು ಸ್ಪಷ್ಟ. ಏಕೆಂದರೆ ಬಾರಾಮುಲ್ಲಾದಲ್ಲಿ 19 ಇನ್ ಫ್ಯಾಂಟ್ರಿ ವಿಭಾಗ ಹಾಗೂ 46 ರಾಷ್ಟ್ರೀಯ ರೈಫಲ್ಸ್ ಮುಖ್ಯ ಕಚೇರಿಗಳೆರಡೂ ಇವೆ.

ಇಲ್ಲಿ ಆಶ್ಚರ್ಯದ ವಿಷಯ ಏನೆಂದರೆ, ಜಮ್ಮು-ಕಾಶ್ಮೀರದಲ್ಲಿ ಎರಡೂವರೆ ದಶಕಗಳ ಪಾಕ್ ಪ್ರೇರಿತ ಉಗ್ರವಾದದಲ್ಲಿ ಬಾರಾಮುಲ್ಲಾ ಗುರಿಯಾಗಿದ್ದು ಕಡಿಮೆ.

ಇಲ್ಲಿ ಸೇನೆ ಹತ್ತಿರದ ಪ್ರದೇಶಗಳನ್ನೆಲ್ಲ ವಿದ್ಯುದೀಕರಣಗೊಳಿಸಿ ಬೆಳಗುವಂತೆ ಮಾಡಿತ್ತು. ಅಲ್ಲದೇ ಕಾಶ್ಮೀರಿಗರೊಂದಿಗೆ ಸದ್ಭಾವನೆ ಬೆಸೆಯುವ ಅಂಗವಾಗಿ, ಸೇನಾ ಕ್ಯಾಪ್ ಒಳಗಿನ ಮೈದಾನವನ್ನು ಸ್ಥಳೀಯರಿಗೆ ಕ್ರಿಕೆಟ್ ಆಡುವುದಕ್ಕೆ ಬಿಟ್ಟುಕೊಡುವ, ಸ್ಥಳೀಯ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸುವುದರಲ್ಲಿ ತೊಡಗಿಸಿಕೊಂಡಿತ್ತು. ಬಾರಾಮುಲ್ಲಾ- ಕುಪ್ವಾರಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಪ್ರದೇಶವನ್ನು ಈ ಬಾರಿ ಗುರಿಯಾಗಿಸಿಕೊಂಡಿದ್ದಾರೆ ಪಾಕಿಸ್ತಾನಿ ಉಗ್ರರು.

ಗಡಿ ನಿಯಂತ್ರಣಾ ರೇಖೆಯಿಂದ ಸುಮಾರು 50 ಕೀ.ಮೀ. ದೂರವೇ ಇರುವ ಈ ಪ್ರದೇಶವನ್ನು ಉರಿಯಷ್ಟು ಸುಲಭದಲ್ಲಿ ನುಗ್ಗಲಾಗುವುದಿಲ್ಲ. ಹಾಗಾದರೆ ಈ ದಾಳಿಯಲ್ಲಿ ಸ್ಥಳೀಯರನ್ನೇನಾದರೂ ಬಳಸಿಕೊಳ್ಳಲಾಗಿದೆಯೇ? ಪಿಒಕೆ ಮೇಲೆ ಭಾರತದ ಗುರಿ ನಿರ್ದಿಷ್ಟ ದಾಳಿ ನಂತರ, ಪಾಕಿಸ್ತಾನದಿಂದ ಮತ್ತೊಂದು ಮರು ಆಘಾತ ನಿರೀಕ್ಷಿತವೇ ಆಗಿತ್ತು. ಬಿಎಸ್ಎಫ್ ಗಂಭೀರ ಹಾನಿ ತಡೆದು ದಾಳಿಕೋರರನ್ನು ಹಿಮ್ಮೆಟ್ಟಿಸಿದ್ದು ಹೌದಾದರೂ, ದಾಳಿಗೆ ಅನುವು ಮಾಡಿಕೊಟ್ಟ ಲೋಪವಾಗಿದ್ದೆಲ್ಲಿ ಎಂಬುದೀಗ ತನಿಖೆಯ ವಿಷಯ.

ಈ ನಡುವೆ, ಹಿಂದೆಯೇ ನಿಗದಿಯಾಗಿದ್ದಂತೆ ಗೃಹ ಸಚಿವ ರಾಜನಾಥ ಸಿಂಗ್ ಸ್ಥಳೀಯರೊಂದಿಗಿನ ವಿಶ್ವಾಸವೃದ್ಧಿ ಕ್ರಮಕ್ಕೆ ಕಾಶ್ಮೀರಕ್ಕೆ ತೆರಳಿದ್ದಾರೆ. ಬಾರಾಮುಲ್ಲಾ ದಾಳಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಸೇನೆ ಇದಕ್ಕೆ ಉತ್ತರ ಕೊಡುತ್ತದೆ ಎಂದಿದ್ದಾರೆ.

ಅತ್ತ, ಪಾಕಿಸ್ತಾನದಲ್ಲಿ ಸೋಮವಾರ ಪ್ರಧಾನಿ ನವಾಜ್ ಷರೀಫ್ ಸರ್ವಪಕ್ಷಗಳ ಸಂಸತ್ ಮುಖ್ಯಸ್ಥರ ಸಭೆ ಕರೆದು, ಭಾರತದ ಆಕ್ರಮಕ ಧೋರಣೆ ವಿರುದ್ಧ ಪಾಕಿಸ್ತಾನವು ಒಂದಾಗಿರುವುದಾಗಿ ಹೇಳಿದ್ದಾರೆ.

Leave a Reply