ಭಾರತೀಯ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಬೆಂಗಳೂರಿನ ಎಎಸ್ ಟಿಇ ಸಂಸ್ಥೆ, 84ರ ಸಂಭ್ರಮದಲ್ಲಿರುವಾಗ ನಾವು ತಿಳಿದಿರಬೇಕಾದ ವಿಶೇಷತೆ

ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಹಾಗೂ ಪರೀಕ್ಷಾರ್ಥ ಹಾರಾಟದಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವ ಎಎಸ್ ಟಿಇ ಕೇಂದ್ರ…

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದಾದ್ಯಂತ ನಮ್ಮ ಸೇನಾ ಬಲದ ಬಗ್ಗೆ ಚರ್ಚೆಯಾಗುತ್ತಿದೆ. ವಿಶ್ವ ಮಟ್ಟದಲ್ಲಿ ಭಾರತದ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗಳು ತನ್ನದೇ ಆದ ರೀತಿಯಲ್ಲಿ ಉನ್ನತ ಸ್ಥಾನಮಾನ ಹೊಂದಿವೆ. ಅದರಲ್ಲೂ ಭಾರತೀಯ ವಾಯು ಪಡೆ ವಿಶ್ವದ ನಾಲ್ಕನೇ ಅತಿ ದೊಡ್ಡ ವಾಯು ಸೇನೆಯಾಗಿದೆ. 1932 ರಲ್ಲಿ ಆರಂಭವಾದ ಭಾರತೀಯ ವಾಯು ಸೇನೆ ಇಂದು ಇಷ್ಟು ದೊಡ್ಡ ಪ್ರಮಾಣಕ್ಕೆ ಬೆಳೆದು ನಿಂತಿರುವ ಹಾದಿ ನಿಜಕ್ಕೂ ಶ್ಲಾಘನೀಯ. ಈ ಬೆಳವಣಿಗೆಯ ಹಾದಿಯಲ್ಲಿ ಹಲವರ ಕೊಡುಗೆ ಮಹತ್ವದ್ದಾಗಿದೆ. ಆ ಪೈಕಿ ಭಾರತೀಯ ವಾಯು ಸೇನೆಗೆ ಮಹತ್ತರವಾದ ಕೊಡುಗೆ ನೀಡಿರೋದು ಬೆಂಗಳೂರಿನಲ್ಲಿರುವ ಏರ್ ಕ್ರಾಫ್ಟ್ ಅಂಡ್ ಸಿಸ್ಟಮ್ ಟೆಸ್ಟಿಂಗ್ ಎಸ್ಟಾಬ್ಲಿಶ್ಮೆಂಟ್ ಸಂಸ್ಥೆ (ಎಎಸ್ ಟಿಇ).

ಭಾರತೀಯ ವಾಯು ಸೇನೆ ಇದೇ ಶನಿವಾರ ಅಂದರೆ ಅಕ್ಟೋಬರ್ 8 ರಂದು ತನ್ನ 84ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇಂದು ಭಾರತೀಯ ವಾಯುಸೇನೆ ತನ್ನಲ್ಲಿರುವ ಅತ್ಯಾಧುನಿಕ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟವನ್ನು ನಡೆಸಿರುವುದು ಅವುಗಳ ಮೇಲ್ದರ್ಜೆಗೆ ಏರಿಸುವ ಪ್ರಯತ್ನಗಳು ಬೆಂಗಳೂರಿನಲ್ಲಿರುವ ಎಎಸ್ ಟಿಇ ಕೇಂದ್ರದಲ್ಲಿ ಎಂಬುದು ಹೆಮ್ಮೆಯ ವಿಷಯ.

ASTE Center (7)

1957ರ ಏಪ್ರಿಲ್‍ನಲ್ಲಿ ವಿಮಾನ ಮತ್ತು ಯುದ್ಧ ಸಾಧನಗಳ ಪರೀಕ್ಷಾ ಘಟಕವಾಗಿ ಈ ಸಂಸ್ಥೆ ಕಾನ್ಪುರದಲ್ಲಿ ಸ್ಥಾಪಿತವಾಯಿತು. ನಂತರ 1972 ರ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಎಎಸ್ ಟಿಇ ಸ್ವರೂಪ ತಾಳಿತು. ಈ ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ ಇದು ಭಾರತದ ಏಕೈಕ ವಿಮಾನ ಪರೀಕ್ಷಾ ಸಂಸ್ಥೆಯಾಗಿದೆ. ಹೀಗಾಗಿ ಈ ಸಂಸ್ಥೆಯ ವಿಶೇಷತೆಗಳೇನು ನೋಡೋಣ ಬನ್ನಿ…

  • ಈ ಸಂಸ್ಥೆ ಭಾರತೀಯ ಸಶಸ್ತ್ರ ಪಡೆಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಟ್ (ಎಚ್ಎಎಲ್), ಡಿಆರ್ ಡಿಒ ಹಾಗೂ ಇಸ್ರೋದ ಅಗತ್ಯಗಳಿಗನುಗುಣವಾಗಿ ಪ್ರಾಥಮಿಕ ಮೂರು ಪ್ರಕಾರಗಳಲ್ಲಿ ವಿಮಾನ ಪರೀಕ್ಷಾ ಕಾರ್ಯ ನಡೆಸುತ್ತದೆ. ಆ ಪೈಕಿ, ಮೊದಲನೆಯದು ನೂತನ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳುವ ಮುನ್ನ ಅದರ ಹಾರಾಟ ಕ್ಷಮತೆ ಮತ್ತು ವ್ಯವಸ್ಥೆಗಳ ಪರೀಕ್ಷೆ. ಎರಡನೇಯದು ವಿಮಾನವನ್ನು ಮೇಲ್ದರ್ಜೆಗೇರಿಸುವುದರ ಭಾಗವಾಗಿ ಶಸ್ತ್ರಾಸ್ತ್ರಗಳು ಮತ್ತು ಏವಿಯಾನಿಕ್ಸ್ ವ್ಯವಸ್ಥೆಗಳ ಅಳವಡಿಕೆಗೆ ಸಂಬಂಧಿಸಿ ಹಾರಾಟ ಪರೀಕ್ಷೆ ಮತ್ತು ವಿಮಾನಗಳ ಮೂಲರೂಪ ಹಾಗೂ ವ್ಯವಸ್ಥೆಗಳ ದೇಶೀಯ ಅಭಿವೃದ್ಧಿಗೆ ಸಂಬಂಧಿಸಿ ಹಾರಾಟ ಪರೀಕ್ಷೆ. ಮೂರನೆಯದು ವಿಮಾನಗಳ ಹಾರಾಟ ಪರೀಕ್ಷೆಯ ಜತೆಗೆ ಇಂತಹ ಪರೀಕ್ಷೆಗಳನ್ನು ನಡೆಸುವ ಸಿಬ್ಬಂದಿಗೆ ತರಬೇತಿ ನೀಡುವುದು ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.
  • ಈ ಸಂಸ್ಥೆಯಲ್ಲಿ 1957ರಲ್ಲಿ ಗ್ನಾಟ್ ಎಂಬ ವಿಮಾನವನ್ನು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ವಾಂಪೈರ್, ಮಿಸ್ಟೇರ್, ಹಂಟರ್, ಎಚ್ಎಫ್-24 ಮಾರುತ್, ಎಚ್ಎಫ್ ಟಿ-32, ಎಚ್ ಜೆಟಿ-16, ಆವ್ರೋ ಅಂಡ್ ಎಂಬ್ರೇರ್ ಎಡಬ್ಲ್ಯುಎಸಿಎಸ್ ಪ್ಲಾಟ್‍ಫಾರಂ, ಸರಸ್ ಸಾರಿಗೆಯ ವಿಮಾನ ಸೇರಿದಂತೆ ಅನೇಕ ಮೂಲರೂಪ ವಿಮಾನಗಳ ಪರೀಕ್ಷೆಯನ್ನು ನಡೆಸಲಾಗಿದೆ. ಈ ವಿಮಾನಗಳ ಪರೀಕ್ಷೆಯ ವೇಳೆ ಅನೇಕ ಪರೀಕ್ಷಾ ಸಿಬ್ಬಂದಿಗಳು ಪ್ರಾಣತ್ಯಾಗ ಮಾಡಿರುವುದು ಸ್ಮರಣೀಯ.
    ASTE Center training
  • ಭಾರತೀಯ ವಾಯುಪಡೆಗಾಗಿ ಪೈಲಟಸ್ ಪಿಸಿ-7 ಬೇಸಿಕ್ ಟ್ರೈನರ್, ಎಎಚ್-64ಡಿ ಅಪಾಚೆ ವಾರ್ ಹೆಲಿಕಾಪ್ಟರ್ ಹಾಗೂ ಸಿಎಚ್-47 ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಳ ಪರೀಕ್ಷೆಯಲ್ಲಿಯೂ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದಾರೆ. ಅಂತರಿಕ್ಷಯಾನ ಮಾಡಿದ ಮೊದಲ ಭಾರತೀಯ ವಿಂಗ್ ಕಮಾಂಡರ್ ಹಾಗೂ ಅಶೋಕ ಚಕ್ರ ಪುರಸ್ಕೃತ ರಾಕೇಶ್ ಶರ್ಮಾ ಸಹ ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದು ಇಲ್ಲಿ ಸೇವೆ ಸಲ್ಲಿಸಿದ್ದು ಗಮನಾರ್ಹ ಅಂಶ.
  • ಭಾರತೀಯ ವಾಯುಪಡೆಯ ಅನೇಕ ವಿಮಾನಗಳ ಹಾರಾಟ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲು ಈ ಸಂಸ್ಥೆ ಪ್ರಮುಖ ಕೇಂದ್ರವಾಗಿದೆ. ಈ ಸಂಸ್ಥೆಯು ವಾಯುಪಡೆ ಪರೀಕ್ಷಾ ಪೈಲಟ್ ಶಾಲೆ (ಎಎಫ್ ಟಿಪಿಎಸ್) ಎಂಬ ತರಬೇತಿ ಕೇಂದ್ರವನ್ನು ಹೊಂದಿದ್ದು, ಈ ಕೇಂದ್ರ ಯುದ್ಧ ವಿಮಾನಗಳ ಪ್ರಯೋಗಾತ್ಮಕ ಪರೀಕ್ಷೆ ನಡೆಸುವ ಪೈಲೆಟ್ ಗಳು ಮಕ್ಕು ಹಾರಾಟ ಪರೀಕ್ಷಾ ಎಂಜಿನಿಯರ್ ಗಳಿಗೆ ಈ ಸಂಸ್ಥೆ ಪ್ರತಿ ವರ್ಷ ವಿಶೇಷವಾಗಿ 46 ವಾರಗಳ ತರಬೇತಿ ನೀಡುತ್ತದೆ. ಅಲ್ಲದೆ ಈ ರೀತಿಯಾಗಿ ಪೈಲೆಟ್ ಗಳಿಗೆ ತರಬೇತಿ ನೀಡುವ ವಿಶ್ವದ ಆರು ಶಾಲೆಗಳ ಪೈಕಿ ಎಎಫ್ ಟಿಪಿಎಸ್ ಸಹ ಒಂದು. ಈ ಶಾಲೆಯು ಎಸ್ಇಟಿಪಿ ಮತ್ತು ಎಸ್ಎಫ್ ಟಿಇ ಸಂಸ್ಥೆಗಳ ಮಾನ್ಯತೆಯನ್ನು ಪಡೆದಿದೆ.
  • ಈ ಶಾಲೆಯಲ್ಲಿ ವಾಯುಪಡೆಯ ಯುದ್ಧ ವಿಮಾನಗಳ ಪರಿಕ್ಷಾ ಹಾರಾಟ ನಡೆಸುವ ಸಿಬ್ಬಂದಿಗೆ ಮಾತ್ರವಲ್ಲದೆ ಇತರೆ ಸಹಾಯಕ ಸೇವೆಗಳಿಗೂ ತರಬೇತಿ ನೀಡುತ್ತದೆ. ಈ ಶಾಲೆಯಿಂದ ಈವರೆಗೂ ಸುಮಾರು 500ಕ್ಕೂ ಹೆಚ್ಚು ಮಂದಿ ತರಬೇತಿ ಹೊಂದಿದ್ದು, ಇವರು ಎಸ್ ಟಿಇ, ಬೇಸ್ ರಿಪೇರ್ ಡಿಪೊ, ಎಡಿಎ, ಡಿಆರ್ ಡಿಒ, ಎಚ್ಎಎಲ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಈ ಸಂಸ್ಥೆ ಕಳೆದ 59 ವರ್ಷಗಳಲ್ಲಿ 1500ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿದ್ದು, ದೇಶದ ಯುದ್ಧ ವಿಮಾನಗಳ ಪರಿಕ್ಷಾ ಹಾರಾಟದ ಚಿತ್ರಣವನ್ನೇ ಬದಲಿಸಿದೆ. ಈ ಸಂಸ್ಥೆಯ ಅಗಾಧ ಸೇವೆಗೆ ರಾಷ್ಟ್ರಪತಿ ಧ್ವಜ ಪ್ರಶಸ್ತಿ ನೀಡಲಾಗಿದೆ.

ASTE Center (10)

ಆರಂಭದಲ್ಲಿ ವಾಂಪೈರ್, ತೂಫಾನಿ ಮತ್ತು ಸ್ಪಿಟ್‍ಫೈರ್‍ಗಳಂತಹ ಯುದ್ಧ ವಿಮಾನಗಳನ್ನು ಹೊಂದಿದ್ದ ಭಾರತೀಯ ವಾಯುಸೇನೆ ಇಂದು ಅತ್ಯಾಧುನಿಕ ಸುಖೋಯಿ-30, ಮಿರಾಜ್, ಎಲ್‍ಸಿಎ, ಎಎಲ್‍ಎಚ್, ಸಿ-130 ಮತ್ತು ಸಿ-17 ಯುದ್ಧವಿಮಾನಗಳನ್ನು ಹೊಂದಿದೆ. ಈ ಯುದ್ಧ ವಿಮಾನಗಳ ಪರೀಕ್ಷಾ ಹಾರಾಟಗಳನ್ನು ಇದೇ ಸಂಸ್ಥೆ ನಿರ್ವಹಿಸುತ್ತಿದೆ. ಹೀಗೆ ಭಾರತೀಯ ವಾಯು ಪಡೆಯ ಬಲ ಹೆಚ್ಚುವಲ್ಲಿ ಬೆಂಗಳೂರಿನಲ್ಲಿರುವ ಎಎಸ್ ಟಿಇ ಸಂಸ್ಥೆಯ ಕೊಡುಗೆ ಪ್ರಶಂಸನೀಯ.

Leave a Reply