ಲೋಧಾ ಸಮಿತಿ ವರ್ಸಸ್ ಬಿಸಿಸಿಐನ ಗುದ್ದಾಟದಲ್ಲಿ ಸೊರಗಬಾರದು ಕ್ರಿಕೆಟ್… ಇಬ್ಬರು ಜವಾಬ್ದಾರಿ ಅರಿತರಷ್ಟೇ ಕ್ರೀಡೆ ಬೆಳೆಯೋದು

ಡಿಜಿಟಲ್ ಕನ್ನಡ ಟೀಮ್:

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಲೋಧಾ ಸಮಿತಿ ಮತ್ತು ಬಿಸಿಸಿಐ ನಡುವಣ ಗುದ್ದಾಟ ಯಾವ ರೀತಿ ಕ್ರೀಡೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೊ ಎಂಬ ಆತಂಕ ಸೃಷ್ಟಿಯಾಗಿದೆ.

ಭಾರತ ಕ್ರಿಕೆಟ್ ಸದ್ಯ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಜಯ… ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವಶ… ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟ… ಹೀಗೆ ಉತ್ತಮ ಪ್ರದರ್ಶನಗಳು ಭಾರತೀಯ ಕ್ರಿಕೆಟ್ ಭವಿಷ್ಯ ಉಜ್ವಲಿಸುವ ಸೂಚನೆ ನೀಡುತ್ತಿವೆ. ಮೈದಾನದಲ್ಲಿ ಭಾರತೀಯ ಕ್ರಿಕೆಟ್ ಯಶಸ್ಸು ಕಾಣುತ್ತಿದ್ದರೆ, ಮತ್ತೊಂದೆಡೆ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಹಗ್ಗಜಗ್ಗಾಟ ಕ್ರೀಡೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.

ಬಿಸಿಸಿಐನ ಆಡಳಿತ ಸುಧಾರಣೆ ಹಾಗೂ ಪಾರದರ್ಶಕತೆ ತಂದು ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನ್ಯಾ. ಆರ್.ಎಂ ಲೋಧಾ ಅವರ ನೇತೃತ್ವದ ಸಮಿತಿ ರಚಿಸಿತು. ಆ ಸಮಿತಿ ಅಧ್ಯಯನ ನಡೆಸಿದ್ದು, ಬಿಸಿಸಿಐ ಸುಧಾರಣೆಗೆ ಹಲವು ಶಿಫಾರಸ್ಸುಗಳನ್ನು ನೀಡಿದ್ದು ಗೊತ್ತಿರುವ ವಿಚಾರ. ಆದರೆ, ಈ ಶಿಫಾರಸ್ಸುಗಳನ್ನು ಒಪ್ಪಲು ಬಿಸಿಸಿಐ ಬಿಲ್ ಕುಲ್ ಸಿದ್ಧವಿಲ್ಲ. ತನ್ನ ಶಿಫಾರಸ್ಸು ಜಾರಿ ಮಾಡದ ಬಿಸಿಸಿಐ ದರ್ಪವನ್ನು ಲೋಧಾ ಸಮಿತಿ ಸಹಿಸುತ್ತಿಲ್ಲ. ಹೀಗೆ ಈ ವಿಷಯ ಬಿಸಿಸಿಐ ಹಾಗೂ ಲೋಧಾ ಸಮಿತಿಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಜಟಾಪಟಿ ಕ್ರಿಕೆಟ್ ಮೈದಾನದಿಂದ ಆಚೆಗಿದ್ದರೆ ಉತ್ತಮ. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಲೋಧಾ ಸಮಿತಿ ಮಂಡಳಿಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿದೆ ಹಾಗೂ ಈ ಕ್ರಮದಿಂದ ಬಿಸಿಸಿಐ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳ ಸರಣಿ ರದ್ದಾಗುವ ಭೀತಿ ಇದೆ ಎಂಬ ವರದಿಗಳು ಮಂಗಳವಾರ ಸದ್ದು ಮಾಡಿದ್ದವು.

ನಂತರ ಲೋಧಾ ಸಮಿತಿ ನಾವು ಬಿಸಿಸಿಐ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡಿಲ್ಲ, ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಮ್ಮ ಅಡ್ಡಿ ಇಲ್ಲ ಎಂದು ಸ್ಪಷ್ಟನೆ ನೀಡಿತು. ಈ ಒಂದು ಬೆಳವಣಿಗೆಯಿಂದ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಪ್ರತಿಷ್ಠೆಯ ಯುದ್ಧದಿಂದ ಕ್ರೀಡೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ಗೋಚರವಾಗಿದೆ. ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಯಾವುದೇ ಅಡ್ಡಿ ಇಲ್ಲ ಅಂತಾ ಲೋಧಾ ಸಮಿತಿ ಹೇಳಿದರೂ, ಮುಂದಿನ ದಿನಗಳಲ್ಲಿ ಈ ಇಬ್ಬರ ತಿಕ್ಕಾಟ ಭವಿಷ್ಯದ ಸರಣಿಗಳನ್ನು ಬಲಿ ಪಡೆಯುವ ಸಾಧ್ಯತೆಗಳ ಬಗ್ಗೆ ಸೂಚನೆ ಸಿಕ್ಕಂತಾಗಿದೆ.

ಬಿಸಿಸಿಐ ಎರಡು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡಿರುವ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದು, ಆ ವಹಿವಾಟನ್ನು ಮಾತ್ರ ತಡೆಯುವ ಬಗ್ಗೆ ಲೋಧಾ ಸಮಿತಿಯು ಬಿಸಿಸಿಐಗೆ ನಿರ್ದೇಶನ ನೀಡಿದೆ. ಆದರೆ ಬಿಸಿಸಿಐ ಸರಣಿಯನ್ನೇ ರದ್ದು ಮಾಡುವುದಾಗಿ ಬೆದರಿಕೆ ಹಾಕಿರುವುದು ನಿಜಕ್ಕೂ ಕ್ರೀಡೆಗೆ ಮಾರಕವಾಗುವ ಬೆಳವಣಿಗೆ.

ಈಗಾಗಲೇ ಲೋಧಾ ಸಮಿತಿಯು ನೀಡಿರುವ ಶಿಫಾರಸ್ಸಿನಲ್ಲಿ ಐಪಿಎಲ್ ಟೂರ್ನಿ ನಡೆಯುವ ಮುನ್ನ ಹಾಗೂ ನಡೆದ ನಂತರ ಆಟಗಾರರಿಗೆ 15 ದಿನಗಳ ಕಾಲ ವಿರಾಮ ನೀಡಬೇಕು ಎಂದಿದೆ. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಒಂದನ್ನು ಬಿಸಿಸಿಐ ಆಯ್ಕೆ ಮಾಡಿಕೊಳ್ಳಬೇಕು. ಕಾರಣ ಐಪಿಎಲ್ ಮೇ ಅಂತಿಮ ವಾರದಲ್ಲಿ ಮುಗಿಯುತ್ತಿದ್ದಂತೆ ಜೂನ್ 1ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಇನ್ನು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನಾಡಲಿದ್ದು, ಈ ಸರಣಿ ಮುಗಿದ 15 ದಿನಗಳ ನಂತರ ಐಪಿಎಲ್ ಆರಂಭಿಸಬೇಕಿದೆ.

ಹೀಗೆ ಲೋಧಾ ಸಮಿತಿಯ ಶಿಫಾರಸ್ಸನ್ನು ತಾಂತ್ರಿಕ ಕಾರಣಗಳ ಮೂಲಕ ದೂರವಿಡುವ ಪ್ರಯತ್ನ ಮಾಡುತ್ತಿದೆ ಬಿಸಿಸಿಐ. ಹೀಗಾಗಿ ಈ ಕಾದಾಟ ಹೀಗೆ ಮುಂದುವರಿದರೆ ಕ್ರೀಡೆಗೆ ಪೆಟ್ಟು ಬೀಳುವುದು ಖಂಡಿತಾ. ಇಲ್ಲಿ ಲೋಧಾ ಸಮಿತಿ ಹಾಗೂ ಬಿಸಿಸಿಐ ತಮ್ಮ ಪ್ರತಿಷ್ಠೆಗಳನ್ನು ಪಕ್ಕಕ್ಕಿಟ್ಟು ವಿವಾದವನ್ನು ಉತ್ತಮ ರೀತಿಯಲ್ಲಿ ಬಗೆ ಹರಿಸಿಕೊಳ್ಳಬೇಕಿದೆ. ಶಿಫಾರಸ್ಸುಗಳಲ್ಲಿನ ಲೋಪವನ್ನು ಬಗೆಹರಿಸುವ ಬಗ್ಗೆ ಬಿಸಿಸಿಐ ನ್ಯಾಯಾಲಯದ ಮುಂದೆ ಮನವಿ ಮಾಡಬೇಕೆ ಹೊರತು ಶಿಫಾರಸ್ಸುಗಳನ್ನು ಧಿಕ್ಕರಿಸಿ ಉದ್ಧಟತನ ಪ್ರದರ್ಶಿಸುವುದು ಸೂಕ್ತವಲ್ಲ.

ಎರಡೂ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಮಾಡಬೇಕಿದೆ ಸುಪ್ರೀಂ ಕೋರ್ಟ್. ಹೀಗಾಗಿ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯ ಹೆಜ್ಜೆ ಇಡುತ್ತದೆ ಎಂಬುದು ಸದ್ಯದ ಕುತೂಹಲ.

Leave a Reply