ಕರ್ನಾಟಕಕ್ಕೊಂದು ಸಮಾಧಾನಕರ ಕಾವೇರಿ ಆದೇಶ: ಮಂಡಳಿ ರಚನೆ ಸದ್ಯಕ್ಕಿಲ್ಲ, ಉಭಯ ರಾಜ್ಯಗಳ ವಾಸ್ತವ ಅಭ್ಯಸಿಸಲಿರುವ ಕೇಂದ್ರ ಸಮಿತಿ, ಅ. 7-18ರವರೆಗೆ 2 ಸಾವಿರ ಕ್ಯುಸೆಕ್ಸ್ ನೀರು ಬಿಡಲು ನಿರ್ದೇಶನ

ಡಿಜಿಟಲ್ ಕನ್ನಡ ಟೀಮ್:

ಅಕ್ಟೋಬರ್ 7 ರಿಂದ 18ರವರೆಗೂ ಪ್ರತಿದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ಸ್ ನೀರನ್ನು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಮೊದಲು ಹೇಳಿದ್ದ ಪ್ರಮಾಣ ಬಿಟ್ಟ ನಂತರ, ಮುಂದಿನ ವಿಚಾರಣೆಯ ಅಂದರೆ, ಅಕ್ಟೋಬರ್ 18ರವರೆಗೆ ಎಷ್ಟು ನೀರು ಬಿಡುವಿರಿ ಎಂದು ಸುಪ್ರೀಂಕೋರ್ಟ್ ಕೇಳಿತ್ತು. ಆಗ ಒಂದೂವರೆ ಸಾವಿರ ಕ್ಯುಸೆಕ್ಸ್ ಬಿಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದ ರಾಜ್ಯಕ್ಕೆ ತೀವ್ರ ವ್ಯತಿರಿಕ್ತ ಪೆಟ್ಟೇನನ್ನೂ ನೀಡದೇ 2 ಸಾವಿರ ಕ್ಯುಸೆಕ್ಸ್ ಪ್ರತಿದಿನ ನೀರು ಬಿಡಲು ಸುಪ್ರೀಂ ಆದೇಶಿಸಿದೆ.

ರಾಜ್ಯದ ಜನತೆಯನ್ನು ಭೂತದಂತೆ ಕಾಡುತ್ತಿದ್ದ ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಷಯ ಈಗ ತಾತ್ಕಾಲಿಕ ಅಂತ್ಯ ಕಂಡಿದೆ. ಈ ಕುರಿತು ಮಂಗಳವಾರ ನಡೆದ ಅರ್ಜಿ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜೆನರಲ್ ಮುಕುಲ್ ರೊಹ್ಟಗಿ, ‘ಸದ್ಯಕ್ಕೆ ಮಂಡಳಿ ರಚನೆ ನಿರ್ಧಾರವನ್ನು ಮುಂದೂಡಿ’ ಎಂದು ಮನವಿ ಮಾಡಿದ್ದಾರೆ.

‘ನ್ಯಾಯಾಧಿಕರಣದ ತೀರ್ಪಿನ ಮೂಲ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ಇದೆ. ಈ ವಿಚಾರ ಅಲ್ಲಿಯೇ ಇತ್ಯರ್ಥವಾಗಬೇಕು. ಇಂತಹ ಪರಿಸ್ಥಿತಿಯಲ್ಲಿ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ನ್ಯಾಯಾಧಿಕರಣವೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಶಿಫಾರಸ್ಸು ಮಾಡಿತ್ತು. ಹೀಗಾಗಿ ಈ ಸಮಿತಿ ರಚಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು. ನ್ಯಾಯಾಧಿಕರಣದ ಐ ತೀರ್ಪನ್ನು ಕೋರ್ಟ್ ಖಚಿತಪಡಿಸಬೇಕು. ಇಲ್ಲವೇ ನ್ಯಾಯಾಧಿಕರಣದ ತೀರ್ಪನ್ನು ಮಾರ್ಪಾಡು ಮಾಡಬೇಕು…’ ಎಂದು ಅಟಾರ್ನಿ ಜೆನರಲ್ ವಾದ ಮಂಡಿಸಿದರು.

ಈ ವೇಳೆ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದ ತಮಿಳುನಾಡು ಪರ ವಕೀಲರಾದ ಶೇಖರ್ ನಫಾಡೆ, ಈ ನಿರ್ವಹಣಾ ಮಂಡಳಿ ರಚನೆಗೆ ಎಲ್ಲರಿಗೂ ಒಪ್ಪಿಗೆ ಇದೆ ಎಂದು ವಾದ ಮಾಡುವ ಮೂಲಕ ಸುಪ್ರೀಂ ಮನವೊಲಿಸುವ ಪ್ರಯತ್ನ ಮಾಡಿದರು. ಆಗ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಪರ ವಕೀಲರಾದ ನಾರಿಮನ್, ‘ಈ ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕ ಒಪ್ಪಿಗೆ ನೀಡಿಲ್ಲ’ ಎಂದರು.

ಇದಾದ ನಂತರ ಸೆ.30 ರಂದು ಸುಪ್ರೀಂ ಕೋರ್ಟು ನೀಡಿದ್ದ ಮತ್ತೊಂದು ತೀರ್ಪು ಅ.1 ರಿಂದ 6 ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಹರಿಸುವ ಆದೇಶ ಪಾಲನೆ ಬಗ್ಗೆ ವಿಚಾರಣೆ ನಡೆಯಿತು. ಈ ವೇಳೆ ರಾಜ್ಯದ ಪರ ವಾದ ಮಂಡಿಸಿದ ನಾರಿಮನ್, ‘ನ್ಯಾಯಾಲಯದ ಈ ಆದೇಶವನ್ನು ಕರ್ನಾಟಕ ಪಾಲಿಸುತ್ತಿದೆ. ಆರಂಭಿಕ ಎರಡು ದಿನಗಳ ಕಾಲ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆಯಿಂದ ನೀರು ಬಿಡಲಾಗಿದ್ದು, ಆರಂಭಿಕ ಎರಡು ದಿನ ಬಿಡದ ನೀರನ್ನು ನಾಳೆ ಮತ್ತು ನಾಡಿದ್ದು ದುಪ್ಪಟ್ಟು ಹರಿಸುವ ಮೂಲಕ ನ್ಯಾಯಾಲಯದ ಆದೇಶದಂತೆ ಒಟ್ಟು 36 ಸಾವಿರ ಕ್ಯುಸೆಕ್ಸ್ ನೀರು ಬಿಡುತ್ತೇವೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಕೋರ್ಟ್ ಆದೇಶವನ್ನು ಪಾಲಿಸುವಂತೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ನಾರಿಮನ್ ಅವರನ್ನು ಶ್ಲಾಘಿಸಿತು. ನಂತರ ವಾದ ಮುಂದುವರಿಸಿದ ನಾರಿಮನ್, ಕೋರ್ಟಿನ ಮುಂದೆ ಬಿರುಸಿನ ದಾಟಿಯಲ್ಲಿ ವಾದ ಮಾಡಿದರು. ‘ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದ್ದ ತೀರ್ಪನ್ನೇ ನಾವು ಪ್ರಶ್ನಿಸಿದ್ದೆವು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ವಾದವನ್ನು ಆಲಿಸದೇ ಇನ್ನು ಹೆಚ್ಚಿನ ಪ್ರಮಾಣದ ನೀರು ಬಿಡುವಂತೆ ಆದೇಶ ನೀಡಿದಿರಿ. ಮತ್ತೆ ಕರ್ನಾಟಕದ ವಿರುದ್ಧವಾದ ಇಂತಹ ಕಠಿಣ ತೀರ್ಪು ನೀಡಬೇಡಿ’ ಎಂದರು.

ಈ ವೇಳೆ ನಾರಿಮನ್ ಅವರಿಗೆ ಉತ್ತರಿಸಿದ ಪೀಠ, ‘ನಾವು ಲೆಕ್ಕಾಚಾರದಂತೆಯೇ ಆದೇಶ ನೀಡಿದ್ದೇವೆ’ ಎಂದು ಪ್ರತಿಕ್ರಿಯಿಸಿತು. ಇದಕ್ಕೆ ಪ್ರತಿಯಾಗಿ ಉತ್ತರ ನೀಡಿದ ನಾರಿಮನ್, ‘ನೀರು ಬಿಡುಗಡೆ ಆದೇಶ ನೀಡುವಾಗ ಕೇವಲ ಲೆಕ್ಕಾಚಾರವಷ್ಟೇ ಮುಖ್ಯವಲ್ಲ. ವಾಸ್ತವ ಸ್ಥಿತಿಯನ್ನು ಪರಿಗಣಿಸಬೇಕು’ ಅಂತಾ ಹೇಳಿದರು.

‘ನ್ಯಾಯಾಲಯ ಈವರೆಗೂ 15 ಸಾವಿರ, 12 ಸಾವಿರ, 6 ಸಾವಿರ  ಕ್ಯುಸೆಕ್ಸ್ ನೀರು ಬಿಡಲು ತೀರ್ಪು ನೀಡಿದೆ. ಮತ್ತೆ ಈವರೆಗೂ ನಿಮ್ಮ ಆದೇಶ ಪಾಲಿಸಿದ್ದೇವೆ. ಮತ್ತೆ ನೀರು ಬಿಡುವಂತೆ ಆದೇಶ ನೀಡಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ನ್ಯಾಯಾಲಯ ಈಗಾಗಲೇ ನೀಡಿರುವ ತೀರ್ಪಿನಿಂದ ತಾನು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಮತ್ತೆ ಕರ್ನಾಟಕ ಪಾಲಿಸಲಾಗದಂತಹ ತೀರ್ಪು ನೀಡಿ ಮತ್ತೆ ನನ್ನನ್ನು ಮುಜುಗರಕ್ಕೊಳಗಾಗುವಂತೆ ಮಾಡಬೇಡಿ’ ಎಂದು ಮನವಿ ಮಾಡಿದರು ನಾರಿಮನ್. ಅವರ ಮನವಿಗೆ ಸ್ಪಂದಿಸಿದ ಕೋರ್ಟ್, ಹಾಗಾದರೆ ಅ.7 ರಿಂದ 18ರವರೆಗೂ ಏನು ಮಾಡ್ತೀರಿ? ಈ ಅವಧಿಯಲ್ಲಿ ಎಷ್ಟುಪ್ರಮಾಣದಲ್ಲಿ ನೀರು ಬಿಡಲು ಸಾಧ್ಯ ಎಂಬುದನ್ನು ಕರ್ನಾಟಕದ ಜತೆ ಚರ್ಚಿಸಿ ನಮಗೆ ಮಾಹಿತಿ ಕೊಡಿ ಎಂದು 15 ನಿಮಿಷಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು.

ಮತ್ತೊಂದು ಮುಖ್ಯ ಅಂಶವೆಂದರೆ, ಕೇಂದ್ರದ ತಾಂತ್ರಿಕ ಉನ್ನತಾಧಿಕಾರ ತಂಡದ ಪರಿಶೀಲನೆಗೂ ಸುಪ್ರೀಂ ಅಸ್ತು ಎಂದಿದೆ. ಇದು ಕರ್ನಾಟಕದ ಒತ್ತಾಯವೂ ಆಗಿತ್ತು. ಈ ಬೇಡಿಕೆಯನ್ನು ಕೇಂದ್ರವು ಸುಪ್ರೀಂಕೋರ್ಟ್ ಮುಂದೆ ಇಟ್ಟಾಗ ಅದಕ್ಕೆ ಸಮ್ಮತಿ ಸಿಕ್ಕಿದೆ. ಇದರಂತೆ ಕೇಂದ್ರದ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ಕಾವೇರಿ ಕಣಿವೆಯ ನಾಲ್ಕೂ ರಾಜ್ಯಗಳ ಎಂಜಿನಿಯರ್ ಗಳ ಉಪಸ್ಥಿತಿಯಲ್ಲಿ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಯಲಿದೆ. ಈ ತಾಂತ್ರಿಕ ಉನ್ನತಾಧಿಕಾರಿಗಳ ತಂಡವು ಉಭಯ ರಾಜ್ಯಗಳಿಗೆ ಭೇಟಿ ನೀಡಿ ಅಕ್ಟೋಬರ್ 17ಕ್ಕೆ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಲಿದ್ದಾರೆ.

Leave a Reply