ಡಿಜಿಟಲ್ ಕನ್ನಡ ವಿಶೇಷ:
ಒಂದು ಕಡೆ ಭಾರತ-ಪಾಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಯತ್ನಿಸಿದೆ. ಇನ್ನೊಂದೆಡೆ ರಜೌರಿ- ಪೂಂಚ್ ಗಳಲ್ಲಿ ಪಾಕಿಸ್ತಾನದ ಕಡೆಯಿಂದ ಚಕಮಕಿ ವರದಿಯಾಗುತ್ತಲೇ ಇದೆ. ಬಾರಾಮುಲ್ಲಾದಲ್ಲಿ ಭಾನುವಾರ ದಾಳಿ ನಡೆದಿದೆ.
ಜಾಗತಿಕ ರಾಜಕಾರಣದ ಒತ್ತಡಗಳ ನಡುವೆ ಯುದ್ಧ ತೆರೆದುಕೊಳ್ಳುವುದು ಅಷ್ಟೇನೂ ಸರಳವಲ್ಲದಿದ್ದರೂ ಪಾಕಿಸ್ತಾನದಿಂದ ಇನ್ನು ಕೆಲ ತಿಂಗಳುಗಳವರೆಗೆ ಒಂದಿಲ್ಲೊಂದು ಕಡೆ ಆಕ್ರಮಣದ ಪ್ರಯತ್ನವಾಗುತ್ತಲೇ ಹೋಗುತ್ತದೆ, ಅದಕ್ಕೆ ಭಾರತೀಯರೆಲ್ಲ ಮಾನಸಿಕವಾಗಿ ಸಿದ್ಧರಾಗಿರಬೇಕು ಎಂಬುದು ವಾಸ್ತವ.
ಪಾಕಿಸ್ತಾನದಿಂದ ಯಾವತ್ತೂ ಭಾರತಕ್ಕೆ ಶಾಂತಿ ಸಿಕ್ಕಿಲ್ಲವಾದರೂ, ಇನ್ನು ಕೆಲ ತಿಂಗಳುಗಳ ಕಾಲ ಮಾತ್ರ ನಿರಂತರ ಹಾಗೂ ತೀವ್ರ ದಾಳಿ ಪ್ರಯತ್ನಗಳಾಗಲಿವೆ ಎಂಬುದಕ್ಕೆ ಒಂದು ಪ್ರಬಲ ಕಾರಣವಿದೆ.
ಆ ಕಾರಣವೇ ಪಾಕ್ ಸೇನಾ ಮುಖ್ಯಸ್ಥ ರಾಹಿಲ್ ಶರೀಫ್!
ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ತೀವ್ರ ಪೆಟ್ಟು ಬಿದ್ದಿರೋದು ಹಾಗೂ ಈ ಪೆಟ್ಟಿಗೆ ಪ್ರತಿಕಾರ ತೀರಿಸಿಕೊಳ್ಳಲು ಪಾಕ್ ಹವಣಿಸುತ್ತಿರೋದು ಗೊತ್ತಿರುವ ವಿಚಾರವೇ. ಆದರೆ ಪಾಕಿಸ್ತಾನದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲುವ ತವಕದಲ್ಲಿರುವುದು ಪಾಕ್ ಸೇನಾ ಮುಖ್ಯಸ್ಥ ರಾಹಿಲ್ ಶರೀಫ್ ಎಂಬುದು ಭಾರತೀಯ ಭದ್ರತಾ ಸಂಸ್ಥೆಗಳ ಅಭಿಪ್ರಾಯ.
ನವೆಂಬರ್ ನಲ್ಲಿ ನಿವೃತ್ತನಾಗಲಿರುವ ಈತ, ತಾನು ಕೊನೆಕಾಲದಲ್ಲಿ ಭಾರತಕ್ಕೊಂದು ಪೆಟ್ಟು ಕೊಟ್ಟೇ ಹೋದೆ ಎಂಬುದನ್ನು ಪಾಕಿಸ್ತಾನದ ಮಿಲಿಟರಿ ಚರಿತ್ರೆಯೊಳಗೆ ದಾಖಲಿಸುವುದಕ್ಕೆ ಉತ್ಸುಕನಾಗಿದ್ದಾನೆ. ಈತನ ಇಗೊ ಮಟ್ಟ ಸಹ ಹಾಗೆಯೇ ಇದೆ. ಈ ಹಿಂದಿನ ಪಾಕ್ ಸೇನಾ ಮುಖ್ಯಸ್ಥರಿಗಿಂತ ಭಿನ್ನವಾದ ಆಡಳಿತಾತ್ಮಕ ಜಂಬ ಹೊಂದಿದವನೀತ. ಸೇನಾ ಮುಖ್ಯಸ್ಥನಾಗಿ ತಾನು ಯಾವುದೇ ದೇಶದ ಮುಖ್ಯಸ್ಥನನ್ನು ಹೊರತುಪಡಿಸಿ ಅದಕ್ಕಿಂತ ಕೆಳಗಿನ ಯಾವ ಹಂತದವರೊಂದಿಗೂ ಮಾತನಾಡುವುದಿಲ್ಲ ಎಂಬುದನ್ನು ಪಾಲಿಸಿಕೊಂಡುಬಂದಿರುವ ವ್ಯಕ್ತಿ.
ರಾಹಿಲ್ ಷರೀಫ್ ಗೆ ಈ ‘ಗೌರವ’ ಕಾಯ್ದುಕೊಳ್ಳುವ ಪ್ರಶ್ನೆ ಒಂದೆಡೆ ಕಾಡುತ್ತಿದ್ದರೆ, ಭಾರತದ ವಿರುದ್ಧ ಕುದಿಯುವುದಕ್ಕೆ ಈತಗೆ ವೈಯಕ್ತಿಕ ಕಾರಣಗಳಿವೆ. ರಾಹಿಲ್ ಶರೀಫ್ ಅವರ ಸೋದರ ಸಂಬಂಧಿ ರಾಜಾ ಅಜೀಜ್ ಭಾಟಿ, ಪಾಕಿಸ್ತಾನ ಸೇನೆಯ ಪರಮೋಚ್ಚ ಪದಕ ನಿಶಾನ್ ಇ ಹೈದರ್ ಪಡೆದವರು. 1965 ರ ಯುದ್ಧದಲ್ಲಿ ಭಾರತೀಯ ಯೋಧರ ಕೈಯಿಂದ ಸತ್ತಿವರು ಇವರು. ಇನ್ನು ರಾಹಿಲ್ ಹಿರಿಯ ಸಹೋದರ ರಾಣಾ ಶಬ್ಬೀರ್ ಶರೀಫ್ 1971 ರ ಯುದ್ಧದಲ್ಲಿ ಭಾರತೀಯ ಸೇನೆಯ ಗುಂಡೇಟಿಗೆ ಬಲಿಯಾಗಿದ್ದಾರೆ.
ಉಭಯ ದೇಶಗಳ ನಡುವೆ ಉದ್ವಿಗ್ನ ಕವಿದಿರುವಾಗ, ಪಾಕಿಸ್ತಾನದ ಜನರು ತಮ್ಮ ಸೇನೆಯ ಯಾವುದೇ ಕಾರ್ಯವನ್ನು ಶ್ಲಾಘಿಸುವ ಮನಸ್ಥಿತಿ ರೂಪುಗೊಂಡಿರುವಾಗ, ಸೇನೆಯ ಮುಖ್ಯಸ್ಥ ಸ್ಥಾನದಲ್ಲಿ ನಿಂತು ತನ್ನೆದೆಯ ಸೇಡು ಬರಿದಾಗಿಸಿಕೊಳ್ಳಲು ರಾಹಿಲ್ ಷರೀಫ್ ಗೆ ಇದು ಮಾಗಿದ ಕಾಲ.
ರಾಹಿಲ್ ಶರೀಫ್ ಪಾಕಿಸ್ತಾನ ಸೇನಾ ಮುಖ್ಯಸ್ಥನಾಗಿದ್ದರೂ ಸಾಕಷ್ಟು ಸಂದರ್ಭಗಳಲ್ಲಿ ಪ್ರಧಾನಿ ನವಾಜ್ ಶರೀಫ್ ಅವರ ತೀರ್ಮಾನವನ್ನೆ ಧಿಕ್ಕರಿಸಿದ ಉದಾಹರಣೆಗಳಿವೆ. ಹೀಗಾಗಿ ಪಾಕಿಸ್ತಾನದಲ್ಲಿ ಜೆನರಲ್ ರಾಹಿಲ್ ಶರೀಫ್ ಸಾಮರ್ಥ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಪಾಕಿಸ್ತಾನದಲ್ಲಿ ರಾಹಿಲ್ ಶರೀಫ್ ಖ್ಯಾತಿ ದೊಡ್ಡ ಪ್ರಮಾಣದಲ್ಲಿಯೇ ಇದೆ. ‘ಪಾಕಿಸ್ತಾನದ ರಕ್ಷಕ’ ಎಂದೇ ಸ್ವಯಂ ಘೋಷಿತ ಹಣೆಪಟ್ಟಿ ಹೊತ್ತಿದ್ದಾರೆ ರಾಹಿಲ್. ಇವರ ಭಾವಚಿತ್ರವಿರುವ ಟಿಶರ್ಟ್, ಬ್ಯಾಡ್ಜ್ ಹಾಗೂ ಸ್ಟಿಕ್ಕರ್ ಗಳಿಗೆ ಪಾಕ್ ಯುವಕರಿಂದ ಭಾರಿ ಬೇಡಿಕೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಥ್ಯಾಂಕ್ಯೂರಾಹಿಲ್ ಶರೀಫ್ ಎಂಬ ಹ್ಯಾಶ್ ಟ್ಯಾಗ್ ಸಾಮಾನ್ಯವಾಗಿ ಕಂಡು ಬರುತ್ತದೆ.
ಇಂತಿಪ್ಪ ರಾಹಿಲ್, ಭಾರತ ಕೊಟ್ಟಿರುವ ಏಟು ತಿಂದು ನಿವೃತ್ತಿ ಪಡೆದು ಸುಮ್ಮನೆ ಮನೆಗೆ ಹೋಗುವ ಜಾಯಮಾನದವರಲ್ಲ ಎಂಬ ವಾದಗಳು ಕೇಳಿಬರ್ತಿವೆ. ಈ ಎಲ್ಲ ಹಿನ್ನೆಲೆಗಳಲ್ಲಿ ಭಾರತವು ಎಚ್ಚರಿಕೆಯಿಂದಲೇ ಪಾಕಿಸ್ತಾನಿ ಷರೀಫನ ಹೆಜ್ಜೆಗಳನ್ನು ಗಮನಿಸುತ್ತಿದೆ. ಷರೀಫ್ ಎಂದರೆ ನವಾಜ್ ಅಲ್ಲ, ರಾಹಿಲ್.