ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಸಾಕ್ಷ್ಯ ಸರ್ಕಾರಕ್ಕೆ ಸಲ್ಲಿಸಿದ ಸೇನೆ, ಎಕ್ಸ್ಪ್ರೆಸ್ ವರದಿ ಬಿಚ್ಚಿಟ್ಟಿರುವ ದಾಳಿ ಚಿತ್ರಣ, ಭಾರತಕ್ಕೆ ಐರೋಪ್ಯ ಸಂಸತ್ತಿನ ಬೆಂಬಲ… ಇಷ್ಟಾಗಿಯೂ ಪುರಾವೆ ಬೇಕೆಂಬ ಬೊಬ್ಬೆ ಮುಂದುವರಿದಿರೋದೇಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಕಳೆದ ವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದ ಕಾರ್ಯಾಚರಣೆಯ ಖಚಿತತೆ ಬಗ್ಗೆ ರಾಜಕೀಯ ಬೊಬ್ಬೆಗಳು ಕೇಳಿಬಂದಿದೆ. ಈ ಕುರಿತ ಚರ್ಚೆ ದೊಡ್ಡದಾಗುತ್ತಿರುವ ಸಂದರ್ಭದಲ್ಲೇ ಕಾರ್ಯಾಚರಣೆಗೆ ಪೂರಕವಾದ ಹಲವು ವಿದ್ಯಮಾನಗಳು ನಡೆದಿವೆ. ಆ ಪೈಕಿ ದಾಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ಭಾರತೀಯ ಸೇನೆ ಸರ್ಕಾರಕ್ಕೆ ನೀಡಿರುವುದು ಒಂದಾದರೆ, ಮತ್ತೊಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರವೀಣ್ ಸ್ವಾಮಿ ಅವರು ಈ ದಾಳಿಯನ್ನು ಕಂಡ ಪ್ರತ್ಯಕ್ಷದರ್ಶಿಗಳ ಅಭಿಪ್ರಾಯದ ಮೇಲೆ ನೀಡಿರುವ ವರದಿ. ಇನ್ನೊಂದೆಡೆ, ಯುರೋಪಿಯನ್ ಸಂಸತ್ತು ಭಾರತದ ಗುರಿ ನಿರ್ದಿಷ್ಟ ದಾಳಿಯನ್ನು ಪ್ರಶಂಸಿಸುವ ಮೂಲಕ ಮತ್ತಷ್ಟು ಬಲ ತುಂಬಿದೆ.

ಭಾರತೀಯ ಸೇನಾ ಪಡೆ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿಯೇ ಇಲ್ಲ ಎಂದು ಪಾಕಿಸ್ತಾನ ಬೊಗಳೆ ಬಿಡುತ್ತಿದ್ದಂತೆ, ಇತ್ತ ಭಾರತದಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಈ ದಾಳಿಯ ಖಚಿತತೆಯನ್ನು ಪ್ರಶ್ನಿಸುವ ಮೂಲಕ ಈ ವಿಷಯವನ್ನು ತಮ್ಮ ರಾಜಕೀಯ ಗುದ್ದಾಟಕ್ಕೆ ಅಸ್ತ್ರವಾಗಿಸಿಕೊಂಡಿವೆ. ಈ ಅನುಮಾನ ಹಾಗೂ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆ ಸರ್ಕಾರಕ್ಕೆ ಹಲವು ವಿಡಿಯೋಗಳು ಹಾಗೂ ದತ್ತಾಂಶ ಮಾಹಿತಿಗಳನ್ನು ನೀಡಿದೆ ಎಂದು ಇಂಡಿಯಾ ಟುಡೆ ಹಾಗೂ ಎಕನಾಮಿಕ್ ಟೈಮ್ಸ್ ಅಂತರ್ಜಾಲ ಆವೃತ್ತಿಗಳು ವರದಿ ಮಾಡಿವೆ. ಬುಧವಾರ ಭದ್ರತೆ ಕುರಿತ ಸಂಪುಟ ಸಭೆ ನಡೆದಿದ್ದು, ಅದಕ್ಕೂ ಪೂರ್ವದಲ್ಲಿ ಪ್ರಧಾನಿ ಕಚೇರಿಗೆ ಸೇನೆ ತನ್ನಲ್ಲಿನ ದಾಖಲೆಗಳನ್ನು ನೀಡಿ, ಅದನ್ನು ಬಹಿರಂಗಗೊಳಿಸುವ ಅಥವಾ ಹಾಗೆಯೇ ಇಟ್ಟುಕೊಳ್ಳುವ ನಿರ್ಧಾರ ಸರ್ಕಾರಕ್ಕೇ ಬಿಟ್ಟಿದೆಂದು ಹೇಳಿರುವುದಾಗಿ ವರದಿಯಾಗಿದೆ.

ಇತ್ತ ಇಂಡಿಯನ್ ಎಕ್ಸ್ ಪ್ರೆಸ್ ಜಾಲತಾಣದಲ್ಲಿ ಪ್ರವೀಣ್ ಸ್ವಾಮಿ ಅವರು ಈ ದಾಳಿಯ ಕುರಿತು ಪ್ರತ್ಯಕ್ಷದರ್ಶಿಗಳ ವಿವರ ಆಧರಿಸಿ ವರದಿಯನ್ನು ಮಾಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವವರು ನೀಡಿರುವ ಮಾಹಿತಿ ಈ ದಾಳಿಯನ್ನು ಖಚಿತಪಡಿಸುತ್ತಿವೆ. ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿರುವ ಭಾರತೀಯ ನಿವಾಸಿಗಳನ್ನು ಸಂಪರ್ಕಿಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಅವರ ಸಂಬಂಧಿಗಳಿಂದ ಈ ದಾಳಿಯ ಬಗ್ಗೆ ವಿವರವನ್ನು ಕಲೆ ಹಾಕಿ ಈ ವರದಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಕ್ ಆಕ್ರಮಿತ ಪ್ರದೇಶದ ಸ್ಥಳೀಯ ನಿವಾಸಿ ಹಾಗೂ ಭಾರತೀಯ ಸೇನೆಯ ಸೀಮಿತ ದಾಳಿಯ ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಗಳು ಹೀಗಿವೆ…

‘ಗುರುವಾರ ಬೆಳಗಿನ ಜಾವ ದೊಡ್ಡ ಪ್ರಮಾಣದ ಸ್ಫೋಟ ಹಾಗೂ ಗುಂಡಿನ ಸುರಿಮಳೆಯ ಸದ್ದು ಕೇಳಿತು. ಈ ದಾಳಿಯ ಪ್ರಮಾಣ ಕಂಡು ಭಯ ಭೀತರಾದ ಜನ ಮನೆಯಿಂದ ಹೊರಗೆ ಬರಲಿಲ್ಲ. ನಂತರ ಆ ದಾಳಿಯಲ್ಲಿ ಸತ್ತವರ ದೇಹವನ್ನು ರಹಸ್ಯ ಅಂತ್ಯ ಸಂಸ್ಕಾರಕ್ಕೆ ಟ್ರಕ್ ಗಳಲ್ಲಿ ತುಂಬಿಕೊಂಡು ಸಾಗಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದು ಹೀಗೆ.. ‘ದಾಳಿ ನಡೆದ ಮರುದಿನ ಶುಕ್ರವಾರ ಮಸೀದಿ ಬಳಿ ಗುಂಪು ಸೇರಿದ್ದ ಲಷ್ಕರ್ ಮಂದಿ ಈ ಬಗ್ಗೆ ಚರ್ಚೆ ನಡೆಸಿದ್ದರು. ಆ ವೇಳೆ ಗಡಿಯನ್ನು ಕಾಯುವಲ್ಲಿ ವಿಫಲವಾಗಿದ್ದಕ್ಕೆ ಪಾಕ್ ಸೇನೆ ವಿರುದ್ಧ ಟೀಕೆ ಮಾಡುತ್ತಿದ್ದರು. ಅದೇ ವೇಳೆ ಭಾರತ ಮುಂದೆಂದೂ ಮರೆಯದಂತಹ ತಿರುಗೇಟು ನೀಡುವುದಾಗಿಯೂ ಮಾತನಾಡಿಕೊಳ್ಳುತ್ತಿದ್ದರು.’ ದಾಳಿ ನಡೆದ ಮರುದಿನ ನೀಲಮ್ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿಯೊಬ್ಬ, ಈ ದಾಳಿಯಲ್ಲಿ ಹಲವು ಲಷ್ಕರ್ ವ್ಯಕ್ತಿಗಳು ಸತ್ತಿದ್ದು, ಮತ್ತೆ ಕೆಲವರು ಗಾಯಗೊಂಡಿದ್ದು, ಅವರನ್ನು ಬೇರೆಡೆ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಮಾತುಕತೆ ನಡೆದಿದ್ದನ್ನು ಕೇಳಿಸಿಕೊಂಡಿದ್ದಾಗಿ ವಿವರಿಸಿದ್ದಾರೆ.

ಯುರೋಪಿಯನ್ ಸಂಸತ್ತಿನ ಉಪಾಧ್ಯಕ್ಷರು ತಮ್ಮ ಸಹಿ ಮಾಡಿದ ಲೇಖನದಲ್ಲಿ ಹೇಳಿರುವುದರ ಸಾರ ಹೀಗಿದೆ-  ಪಾಕ್ ನಿಯಂತ್ರಣದಲ್ಲಿದ್ದ ಪ್ರದೇಶದಲ್ಲಿ ಇಷ್ಟು ನಿರ್ಣಾಯಕವಾಗಿ ಭಾರತ ದಾಳಿ ನಡೆಸಿದ್ದು ಇದೇ ಮೊದಲಿದ್ದಿರಬಹುದು. ಈ ಮೂಲಕ ಭಾರತವು ಪಾಕಿಸ್ತಾನಕ್ಕೆ ಅದರ ನೆಲವನ್ನು ಉಗ್ರವಾದಕ್ಕೆ ಬಳಸಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ. ಉಗ್ರರನ್ನಷ್ಟೇ ಗುರಿಯಾಗಿಸಿಕೊಂಡು ಭಾರತೀಯ ಸೇನೆ ಇಂಥದೊಂದು ವೃತ್ತಿಪರತೆ ಮೆರೆದಿರುವುದು ಅಭಿನಂದನಾರ್ಹ. ಉಗ್ರವಾದದ ವಿರುದ್ಧದ ಭಾರತದ ಈ ಹೋರಾಟಕ್ಕೆ ಜಾಗತಿಕ ಸಮುದಾಯ ಬೆನ್ನಿಗೆ ನಿಲ್ಲಬೇಕು. ಪಾಕಿಸ್ತಾನದಲ್ಲಿ ಉಗ್ರರು, ಉಗ್ರರ ಗುಂಪುಗಳನ್ನು ಬೆಳೆಯಲು ಬಿಟ್ಟಿದ್ದೇ ಆದರೆ ಅವರಿಂದ ನಾಳೆ ಯುರೋಪ್ ಹಾಗೂ ಜಗತ್ತು ಸಹ ದಾಳಿ ಎದುರಿಸಬೇಕಾಗುತ್ತದೆ.

ಹೀಗೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದು ಜಗತ್ತಿಗೇ ಮನವರಿಕೆ ಆಗಿದೆ. ಇವ್ಯಾವುದೂ ಸಾಲದೆಂದು ನಾಳೆ ಸರ್ಕಾರ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದರೂ ಮಾಧ್ಯಮದ ಒಂದು ವರ್ಗ ಮತ್ತು ಕೆಲ ರಾಜಕೀಯ ನೇತಾರರು ಚರ್ಚೆಗಳನ್ನೇನೂ ನಿಲ್ಲಿಸುವುದಿಲ್ಲ. ಇದು ಪಿಒಕೆ ನೆಲವೇ ಎಂದು ಸಾಬೀತು ಮಾಡಬೇಕು, ವಿಡಿಯೋ ಅಸಲಿ ಎಂದು ಹೇಗೆ ನಂಬುವುದು… ಹೀಗೆಲ್ಲ ಕುತರ್ಕ ಮಾಡುವವರಿಗೆ ನೂರು ದಾರಿಗಳು ಇದ್ದೇ ಇವೆ. ಈ ಎಲ್ಲ ಚರ್ಚೆಗಳಲ್ಲಿ ಬಿಸಿ ಹುಟ್ಟುಹಾಕಿ ವೀಕ್ಷಕರನ್ನು ಸೆಳೆದು ರೇಟಿಂಗ್ ಪಾಯಿಂಟ್ ಹೆಚ್ಚಿಸಿಕೊಳ್ಳುವುದು ಮಾಧ್ಯಮಕ್ಕೆ ಸಹ ಲಾಭದಾಯಕವಾದುದ್ದೇ ಆಗಿದೆ.

ಇನ್ನೊಂದೆಡೆ ವಿಡಿಯೋ ದೃಶ್ಯಾವಳಿಗಳನ್ನು ನೋಡಿ ಪಾಕಿಸ್ತಾನವು ನಮ್ಮ ವಿಶೇಷ ದಳದ ಬಲ, ಅದರ ನಡೆ, ಬಳಸಿದ ಸಾಧನ ಇಂಥ ಹಲವು ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕಿ, ಇನ್ನು ಮುಂದೆ ನಡೆಸುವ ಕಾರ್ಯಾಚರಣೆಗಳಿಗೆ ಪ್ರತಿತಂತ್ರ ಹೆಣೆಯುವ ಅವಕಾಶ ಇದ್ದೇ ಇದೆ.

ಸಾಕ್ಷ್ಯದ ಬೊಬ್ಬೆಯನ್ನು ಈ ಎಲ್ಲ ಆಯಾಮಗಳಲ್ಲಿ ನೋಡುವ ಅಗತ್ಯವಿದೆ.

Leave a Reply