ಭಾರತದ ಮಿಲಿಟರಿ-ಡಿಪ್ಲೊಮಸಿ ಹೊಡೆತಕ್ಕೆ ಪಾಕ್ ಸರ್ಕಾರ ಮತ್ತು ಸೇನೆಯ ನಡುವೆಯೇ ಶುರುವಾಗಿದೆ ಮುಸುಕಿನ ಗುದ್ದಾಟ, ಪಾಕಿಸ್ತಾನ ಪತ್ರಿಕೆ ಬಿಚ್ಚಿಟ್ಟಿರುವ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ತಾನು ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗುತ್ತಿರುವುದು ಹೌದು ಅಂತ ಪಾಕಿಸ್ತಾನವೇ ಒಪ್ಪಿಕೊಂಡು ತಲ್ಲಣಿಸಿರುವುದರ ಚಿತ್ರಣವಿದು. ಪಾಕಿಸ್ತಾನದ ಮುಖ್ಯ ಮಾಧ್ಯಮವಾದ ‘ಡಾನ್’ ವರದಿಯ ಪ್ರಕಾರ, ಪಾಕಿಸ್ತಾನದ ರಾಜಕೀಯ ನಾಯಕತ್ವವು ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ಮಿಲಿಟರಿ ನಾಯಕತ್ವದ ಮೇಲೆ ಹರಿಹಾಯ್ದಿದೆ. ಕೆಲವು ಉಗ್ರರನ್ನು ನಿಯಂತ್ರಣದಲ್ಲಿಡುವ ಸರ್ಕಾರದ ಕ್ರಮಕ್ಕೆ ಸೇನೆ ಅಡ್ಡಬರಬಾರದು, ಬಂದಿದ್ದೇ ಆದರೆ ಪಾಕಿಸ್ತಾನವು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ಹೋಗಲಿದೆ ಎಂದು ಸರ್ಕಾರ ತನ್ನ ಆಂತರಿಕ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೋಮವಾರ ಪ್ರಧಾನಿ ನವಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಗುಪ್ತಚರ ಸಂಸ್ಥೆ ಐಎಸ್ಐ ಪ್ರಧಾನ ನಿರ್ದೇಶಕ ಜನರಲ್ ರಿಜ್ವಾನ್ ಅಖ್ತರ್ ಹಾಗೂ ಸರ್ಕಾರ ಮತ್ತು ಮಿಲಿಟರಿಗೆ ಸಂಬಂಧಿಸಿದ ಕೆಲವೇ ವ್ಯಕ್ತಿಗಳಿದ್ದರು. ಅಲ್ಲಿ ವಿದೇಶ ಸಚಿವ ಅಜಿಜ್ ಚೌಧರಿ ಎಲ್ಲರೆದುರು ಪ್ರಸ್ತುತಿಯೊಂದನ್ನು ಕೊಡುತ್ತಾರೆ. ಪಾಕಿಸ್ತಾನವು ಜಾಗತಿಕವಾಗಿ ಹೇಗೆ ಮೂಲೆಗೆ ತಳ್ಳಿಸಿಕೊಳ್ಳುತ್ತಿದೆ ಎಂಬುದರ ವಿವರಣೆ ಅದು. ಆ ವಿವರಣೆಯಾದ ನಂತರ ಪಾಕ್ ಸರ್ಕಾರವು ಸಭೆಯಲ್ಲಿದ್ದ ಮಿಲಿಟರಿ ಮತ್ತು ಗೂಢಚರ ಪ್ರತಿನಿಧಿಗಳಿಗೆ ಸೂಚಿಸಿರುವ ಅಂಶಗಳು ಇವು.

  • ವಿಶ್ವಾಸವೃದ್ಧಿ ಪ್ರಯತ್ನವಾಗಿ ನಾವು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಪಠಾನ್ಕೋಟ್ ವಿಷಯದಲ್ಲಿ ತನಿಖಾ ವರದಿಯನ್ನು ಅಂತಿಮಗೊಳಿಸಬೇಕು. ಹಾಗೆಯೇ ಮುಂಬಯಿ ದಾಳಿ ಸಂಬಂಧ ಕ್ರಮ ಕೈಗೊಂಡಿದ್ದೇವೆಂಬುದನ್ನು ತೋರಿಸುವುದಕ್ಕೆ ಕೆಲವಾದರೂ ಬಂಧನಗಳಾಗಬೇಕು.
  • ಹಕ್ಕಾನಿ ಉಗ್ರ ಜಾಲದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಬಯಸುತ್ತಿದೆ. ಇದನ್ನು ಪುರಸ್ಕರಿಸದಿದ್ದರೆ ನಾವು ಮತ್ತಷ್ಟು ಮೂಲೆಗೆ ತಳ್ಳಲ್ಪಡುತ್ತೇವೆ.
  • ಸದ್ಯಕ್ಕೇನೋ ಚೀನಾ ನಮ್ಮ ಜತೆ ನಿಂತಿದೆ. ಆದರೆ ಅದೂ ಸೂಚನೆ ನೀಡಿದೆ. ಜೈಷೆ ಮೊಹ್ಮದ್ ನಾಯಕ ಮಸೂದ್ ಅಜರ್ ಮೇಲಿನ ನಿಷೇಧಕ್ಕೆ ತಾಂತ್ರಿಕ ತಡೆಯನ್ನೇನೋ ಅದು ನೀಡಿದೆಯಾದರೂ, ಪದೇ ಪದೆ ಹೀಗೆ ಮಾಡಬೇಕಾಗಿರುವುದಕ್ಕೆ ತರ್ಕವೇನು ಅಂತಲೂ ಕೇಳುತ್ತಿದೆ.

ಡಾನ್ ವರದಿ ಹೇಳುವ ಪ್ರಕಾರ ಇದೀಗ ಐಎಸ್ಐ ಮುಖ್ಯಸ್ಥ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಜತೆಯಾಗಿ ಪಾಕಿಸ್ತಾನದ ಪ್ರಾಂತ್ಯಗಳಿಗೆ ಪ್ರವಾಸ ಮಾಡಲಿದ್ದಾರೆ. ಆ ಮೂಲಕ, ಪಾಕ್ ಸರ್ಕಾರ ಉಗ್ರರ ಮೇಲೆ ಕ್ರಮಗಳನ್ನು ಕೈಗೊಳ್ಳುವ ಸಂದರ್ಭ ಬಂದರೆ ಐಎಸ್ಐ ನೆಟ್ವರ್ಕ್ ಹೇಗೆ ವರ್ತಿಸಬೇಕು ಎಂಬ ಸೂಚನೆ ನೀಡಲಿದ್ದಾರೆ.

ವರದಿ ಹೇಳುವಂತೆ, ಒಂದು ಹಂತದಲ್ಲಿ ಸಭೆಯಲ್ಲಿದ್ದ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ಹಾಗೂ ಐಎಸ್ಐ ಮುಖ್ಯಸ್ಥನಿಗೆ ಮಾತಿನ ಚಕಮಕಿಯೇ ನಡೆದಿದೆ. ಯಾರನ್ನು ಬೇಕಾದರೂ ಬಂಧಿಸಿ ಅದಕ್ಕೆ ನಮ್ಮನೇಕೆ ಕೇಳುತ್ತೀರಿ ಎಂದು ಐಎಸ್ಐ ಹರಿಹಾಯ್ದಾಗ, ಪಂಜಾಬ್ ಮುಖ್ಯಮಂತ್ರಿಯು- ಸ್ಥಳೀಯ ಪೊಲೀಸರು ಬಂಧಿಸಿದವರನ್ನು ಐಎಸ್ಐ ಬಿಡಿಸಿದ ಬಹಳ ಉದಾಹರಣೆಗಳಿವೆ ಎಂದು ಮರುಮಾತು ಹೇಳಿದ್ದಾರೆ.

ಇವೆಲ್ಲ ‘ಡಾನ್’ ವರದಿಯ ಪ್ರಮುಖಾಂಶಗಳು. ಇದರರ್ಥ ಪಾಕಿಸ್ತಾನದ ಸರ್ಕಾರಕ್ಕೆ ಬುದ್ಧಿ ಬಂದಿ ಎಂತಲೇ? ಹಾಗೇನೂ ಅರ್ಥೈಸಿಕೊಳ್ಳಬೇಕಿಲ್ಲ. ಉಗ್ರ ನಿಗ್ರಹದಲ್ಲಿ ಪಾಕಿಸ್ತಾನವೂ ಪ್ರಯತ್ನಕ್ಕಿಳಿದಿದೆ ಅಂತ ತೋರಿಸಿಕೊಂಡು ಜಾಗತಿಕ ಸಮುದಾಯದ ಒತ್ತಡವನ್ನು ತುಸು ತಾಳಿಕೊಳ್ಳಬೇಕಿರುವ ದರ್ದು ಅಲ್ಲಿನ ಸರ್ಕಾರಕ್ಕಿದೆ. ಹಾಗೆಂದೇ ಈ ಸರ್ಕಸ್ಸು. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತವು ಪಾಕಿಸ್ತಾನವನ್ನು ಖಂಡಿಸಿದ ರೀತಿ, ಉಳಿದೆಲ್ಲ ರಾಷ್ಟ್ರಗಳನ್ನು ತನ್ನ ಪರವಾಗಿರಿಸಿಕೊಂಡ ಭಾರತದ ನಡೆ ಇವೆಲ್ಲದರಿಂದ ಪಾಕಿಸ್ತಾನ ಎಷ್ಟು ಕಂಗೆಟ್ಟಿದೆಯೆಂದರೆ, ಇದೇ ಒತ್ತಡ ಮುಂದುವರಿದರೆ ಮಿತ್ರ ಚೀನಾ ಸಹ ತಮ್ಮಿಂದ ದೂರ ಸರಿದೀತೆಂಬ ಹೆದರಿಕೆ ಅದಕ್ಕೆ ಶುರುವಾಗಿರುವುದು ಸ್ಪಷ್ಟ.

ಇದರ ಜತೆಯಲ್ಲೇ ನಿವೃತ್ತಿ ಅಂಚಲ್ಲಿರುವ ಸೇನಾ ಮುಖ್ಯಸ್ಥರಾಹಿಲ್ ಷರೀಫ್ ನಿಯಂತ್ರಣವನ್ನು ತಗ್ಗಿಸಿ, ಮತ್ತೆ ಮುಂದುವರಿಯುವುದನ್ನು ತಪ್ಪಿಸಿ, ತನ್ನ ಜನರನ್ನು ತಂದು ಕೂರಿಸಿಕೊಳ್ಳುವ ಪ್ರಧಾನಿ ಷರೀಫ್ ಆಶಯವೂ ಇಲ್ಲಿ ತಕ್ಕಮಟ್ಟಿಗೆ ಕೆಲಸ ಮಾಡಿದೆ.

Leave a Reply