ಪಾಕ್ ಬಣ್ಣ ಬಯಲು ಮಾಡಿದ ಪಿಒಕೆ ಪ್ರತಿಭಟನೆ: ‘ಉಗ್ರರ ಕ್ಯಾಂಪ್ ಗಳಿಂದ ನಮ್ಮ ಬದುಕು ನರಕವಾಗಿದೆ, ಪಾಕ್ ಸರ್ಕಾರ ಎಚ್ಚರಗೊಳ್ಳದಿದ್ದರೆ ನಾವೇ ಕ್ರಮ ಕೈಗೊಳ್ತೇವೆ…’

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೇನೆ ಗುರಿ ನಿರ್ದಿಷ್ಟ ದಾಳಿಗೈದು ಉಗ್ರರನ್ನು ನಾಶಗೊಳಿಸಿರುವ ಬಗ್ಗೆ ಜಗತ್ತೇ ವಿಸ್ಮಯದಲ್ಲಿ ಮುಳುಗಿರುವಾಗಲೇ, ಅದೇ ನೆಲದ ಜನ ಬೀದಿಗಿಳಿದು ಪಾಕಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ಉಗ್ರ ನಿಗ್ರಹಕ್ಕೆ ಆಗ್ರಹಿಸಿದ್ದಾರೆ. ಪಿಒಕೆಯನ್ನು ಪಾಕಿಸ್ತಾನವು ಉಗ್ರರ ಲಾಂಚಿಂಗ್ ಪ್ಯಾಡ್ ಆಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಅಲ್ಲಿನ ಸ್ಥಳೀಯರೇ ಜಗತ್ತಿಗೆ ಸಾರುತ್ತಿರುವ ವಿದ್ಯಮಾನವಿದು.

ಅಫ್ಘಾನಿಸ್ತಾನ ಗಡಿ ಪ್ರದೇಶ ಸೇರಿದಂತೆ ಇತರೆ ಕಡೆಗಳಲ್ಲಿ ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಮಾಹಿತಿ ಆಗಿದ್ದಾಗೆ ಕೇಳಿಬರುತ್ತಿತ್ತು. ಆದರೆ ಈಗ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಉಗ್ರರ ಕೇಂದ್ರವಾಗಿ ಮಾರ್ಪಾಡು ಮಾಡುತ್ತಿರುವ ವಿಷಯ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಅದರಲ್ಲೂ ಪಿಒಕೆ ಪ್ರದೇಶದ ನಿವಾಸಿಗಳೇ ‘ಪಾಕಿಸ್ತಾನ ಸೇನೆ ಉಗ್ರರಿಗೆ ಇಲ್ಲಿ ತರಬೇತಿ ನೀಡುತ್ತಿದ್ದು, ಅದರಿಂದ ನಮ್ಮ ಬದುಕು ನರಕವಾಗುತ್ತಿದೆ’ ಎಂದು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದರಿಂದ ಪಿಒಕೆ ಉಗ್ರರ ತರಬೇತಿ ಶಿಬಿರವಾಗುತ್ತಿರೋದು ಖಚಿತವಾಗಿದೆ.

ಭಾರತದ ಎದುರು ನೇರವಾಗಿ ದಾಳಿ ಮಾಡಿದರೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿರುವ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ದಾಳಿ ನಡೆಸಲು ಉಗ್ರರನ್ನು ಬಳಸಿಕೊಳ್ಳುತ್ತಿದೆ. ಪಾಕಿಸ್ತಾನದ ಈ ಕುತಂತ್ರದ ಸಿದ್ಧತೆಗೆ ವೇದಿಕೆಯಾಗುತ್ತಿರೋದು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ಈ ಕ್ರಮದ ವಿರುದ್ಧ ಈಗ ಪಿಒಕೆ ಜನರು ತಿರುಗಿ ಬಿದ್ದಿದ್ದಾರೆ. ‘ಪಾಕ್ ಸರ್ಕಾರ ತನ್ನ ನಿಲುವನ್ನು ಬದಲಿಸಿ, ಪಿಒಕೆ ಪ್ರದೇಶದಿಂದ ಉಗ್ರರ ಕ್ಯಾಂಪ್ ಗಳನ್ನು ನಿರ್ಮೂಲನೆ ಮಾಡದಿದ್ದರೆ, ನಾವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪಾಕ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ಪಾಕಿಸ್ತಾನ ವಿರುದ್ಧ ಮುಜಾಫರಾಬಾದ್, ಕೊಟ್ಲಿ, ಚಿನಾರಿ, ಮೀರ್ ಪುರ್, ಗಿಲ್ಗಿಟ್, ದಿಯಾಮೆರ್ ಮತ್ತು ನೀಲಮ್ ಕಣಿವೆ ಪ್ರದೇಶಗಳ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಅವರು ಹೇಳಿರೋದಿಷ್ಟು…

‘ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಗಳು ನಿಷೇಧಿತ ಉಗ್ರ ಸಂಘಟನೆಗೆ ಪಾಕ್ ಆಶ್ರಮಿತ ಕಾಶ್ಮೀರದಲ್ಲಿ ಆಶ್ರಯ ನೀಡಿ, ಅವರಿಗೆ ದಾಳಿಗೆ ಬೇಕಾದ ತರಬೇತಿ ನೀಡುತ್ತಿವೆ. ಇದರಿಂದ ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ನಮ್ಮ ಜೀವನ ನರಕವಾಗಿದೆ. ಉಗ್ರರಿಗೆ ಇಲ್ಲಿ ಆಶ್ರಯ ನೀಡುವ ಜತೆಗೆ ಆಹಾರ ನೀಡಿ ಸಾಕುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂಬುದು ಮುಜಾಫರಾಬಾದಿನ ಸ್ಥಳೀಯ ನಾಯಕನ ಆಕ್ರೋಶ.

‘ಉಗ್ರವಾದವನ್ನು ಬೇರು ಸಮೇತ ಕಿತ್ತುಹಾಕಬೇಕು. ಉಗ್ರರಿಗೆ ಆಶ್ರಯ ನೀಡುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ..’ ಅಂತಲೂ ಕೊಟ್ಲಿಯಲ್ಲಿನ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ, ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡಿ ಭಾರತದ ಒಳಗೆ ನುಸುಳಲು ನೆರವು ನೀಡುತ್ತಿದೆ ಎಂಬ ಭಾರತದ ವಾದಕ್ಕೂ ಪಿಒಕೆ ಜನರು ಹೌದು ಎಂದು ಧ್ವನಿಗೂಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಅಮೆರಿಕ ಸರ್ಕಾರದ ವಕ್ತಾರ ಮಾರ್ಕ್ ಟಿ ಟೊನರ್, ಪಿಒಕೆಯಲ್ಲಿನ ಪರಿಸ್ಥಿತಿಯನ್ನು ಕಟುವಾಗಿ ಖಂಡಿಸಿದ್ದು, ‘ಪಿಒಕೆ ಪ್ರದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವುದನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಹಲವು ವರ್ಷಗಳಿಂದಲೂ ಮಾನವ ಹಕ್ಕು ವರದಿಯಲ್ಲೂ ತಿಳಿಸಲಾಗಿದೆ’ ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಉಗ್ರರ ಮೂಲಕ ಭಾರತದ ವಿರುದ್ಧ ಹೇಡಿತನದ ದಾಳಿಗೆ ಪಿಒಕೆ ಉಪಯೋಗವಾಗ್ತಿದೆ ಎಂಬುದು ಖಚಿತವಾಗಿದೆ. ಅಲ್ಲದೆ ಉಗ್ರರನ್ನು ಪೋಷಿಸುವ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ.

Leave a Reply