ಗುರಿ ನಿರ್ದಿಷ್ಟ ದಾಳಿ: ವಿಡಿಯೋ ಏಕೆ, ಸುದ್ದಿವಾಹಿನಿಯ ಕುಟುಕಿನಲ್ಲಿ ಮೀರ್ಪುರದ ಪೊಲೀಸ್ ಅಧಿಕಾರಿ ಬಾಯ್ಬಿಟ್ಟ ದಾಳಿ ಸತ್ಯ…

ಡಿಜಿಟಲ್ ಕನ್ನಡ ಟೀಮ್:

ಕಳೆದ ವಾರ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಲಾಂಚಿಂಗ್ ಪ್ಯಾಡ್ ಗಳ ಮೇಲೆ ನಡೆಸಿದ ಗುರಿ ನಿರ್ದಿಷ್ಟ ದಾಳಿಯ ಖಚಿತತೆ ಬಗ್ಗೆ ಎದ್ದಿರುವ ಚರ್ಚೆಗೆ ಅಂತ್ಯವಾಡಲು ಈಗ ಪ್ರಬಲ ಸಾಕ್ಷ್ಯವೊಂದು ಲಭಿಸಿದೆ. ಅದೇನಂದ್ರೆ, ನ್ಯೂಸ್ 18 ಸುದ್ದಿ ಜಾಲತಾಣ ನಡೆಸಿದ ದೂರವಾಣಿ ರಹಸ್ಯ ಕಾರ್ಯಾಚರಣೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪೊಲೀಸ್ ಅಧಿಕಾರಿ ಈ ದಾಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಬಾಯ್ಬಿಟ್ಟಿದ್ದಾರೆ.

ಗುರುವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಮಾತನಾಡುತ್ತ, ರಕ್ಷಣಾ ಮಂತ್ರಿ ಮನೋಹರ ಪಾರಿಕರ್ ಅವರು, ‘ಭಾರತವೇನೂ ವಿಡಿಯೊ ಬಿಡುಗಡೆ ಮಾಡಬೇಕಿಲ್ಲ. ಟಿವಿ ಪತ್ತೆದಾರಿಕೆಯಲ್ಲೇ ಅದು ಬಹಿರಂಗವಾಗಿದೆ’ ಎಂದಿದ್ದಾರೆ.

ಹಾಗಾದರೆ ಟಿವಿ ಕಾರ್ಯಾಚರಣೆಯಲ್ಲಿ ನಡೆದಿದ್ದೇನು?

ಸಿಎನ್ಎನ್ ನ್ಯೂಸ್ 18 ಸಂಸ್ಥೆಯ ತನಿಖಾ ವರದಿಯ ಸಂಪಾದಕ ಮನೋಜ್ ಗುಪ್ತಾ ಅವರು ಪಿಒಕೆಯ ಉನ್ನತ ಪೊಲೀಸ್ ಅಧಿಕಾರಿ (ಐಜಿ) ಮುಷ್ತಾಕ್ ಅವರ ಹೆಸರಿನಲ್ಲಿ ಮೀರ್ ಪುರದ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ವಿಶೇಷ ವಿಭಾಗ) ಘುಲಾಮ್ ಅಕ್ಬರ್ ಅವರಿಗೆ ಕರೆ ಮಾಡುತ್ತಾರೆ. ಈ ಎಸ್ಪಿ ದಾಳಿ ನಡೆದ ಪ್ರದೇಶಗಳಲ್ಲಿ ಉಸ್ತುವಾರಿಯಲ್ಲಿರುವಾತ. ಹೀಗಾಗಿ ಸ್ಥಳೀಯ ಮಾಹಿತಿ ಆತನಲ್ಲಿ ಲಭ್ಯವಿರುತ್ತದೆ.

ಫೋನ್ ಮಾಡಿರುವುದು ತನ್ನ  ಮೇಲಧಿಕಾರಿ ಎಂದು ತಿಳಿದುಕೊಂಡು ಮೀರ್ಪುರದ ಎಸ್ಪಿ ತನ್ನಲ್ಲಿರುವ ಮಾಹಿತಿಯನ್ನೆಲ್ಲ ಹೊರಹಾಕಿರುವುದು ಕುತೂಹಲಕಾರಿಯಾಗಿದೆ.

ಈ ರಹಸ್ಯ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿ ಘುಲಾಮ್ ಅಕ್ಬರ್ ಭಾರತೀಯ ಸೇನೆಯ ದಾಳಿಯ ಬಗ್ಗೆ ನೀಡಿದ ಸಂಪೂರ್ಣ ಮಾಹಿತಿ ಇಲ್ಲಿದೆ…

‘ಸರ್.. ಅಂದು ರಾತ್ರಿ ಸರಿ ಸುಮಾರು 2 ಗಂಟೆಯಿಂದ 5 ಗಂಟೆವರೆಗೂ ಅಂದಾಜು 3-4 ತಾಸುಗಳ ಕಾಲ ನಿರಂತರವಾಗಿ ಈ ಕಾರ್ಯಾಚರಣೆ ನಡೆದಿತ್ತು. ಭಾರತೀಯ ಸೇನೆಯು ಬಿಂಬರ್ ಪ್ರದೇಶದ ಸಮನಾ, ಪೂಂಚ್ ಪ್ರದೇಶದ ಹಜಿರಾ, ನೀಲಮ್ ನ ದುದ್ನಿಯಾಲ್ ಮತ್ತು ಹತಿಯನ್ ಬಾಲಾದಲ್ಲಿರುವ ಕಯಾನಿ ಪ್ರದೇಶಗಳು ಸೇರಿದಂತೆ ಹಲವೆಡೆ ದಾಳಿ ಮಾಡಿತ್ತು. ಈ  ದಾಳಿ ನಡೆಯುತ್ತಿದ್ದಂತೆ ಪಾಕಿಸ್ತಾನ ಸೇನೆಯು ಉಗ್ರರ ರಕ್ಷಣೆಗೆ ನಿಂತು ಪ್ರತಿ ದಾಳಿ ನಡೆಸಿತು. ಈ ವೇಳೆ ಪಾಕ್ ಸೇನೆಯ 5 ಯೋಧರು ಸತ್ತಿದ್ದಾರೆ. ಉಗ್ರರೂ ಸೇರಿದರೆ 12 ಜನ ಆಗಬಹುದು. ನಂತರ ಬೆಳಗ್ಗೆ ಪಾಕ್ ಸೈನಿಕರು ಮೃತದೇಹಗಳನ್ನು ಆ್ಯಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದರು. ಪಾಕಿಸ್ತಾನ ಸೇನೆಯೇ ಜಿಹಾದಿಗಳನ್ನು ಇಲ್ಲಿಗೆ ಕರೆತರುತ್ತಾರೆ. ಅವರಿಗೆ ತರಬೇತಿ ನೀಡಿದ ನಂತರ ಭಾರತದ ಗಡಿಯೊಳಗೆ ನುಸುಳಲು ಅವರೇ ಸಹಾಯ ಮಾಡುತ್ತಾರೆ.’

ಹೀಗೆ ಘುಲಾಮ್ ಅಕ್ಬರ್ ನೀಡಿರುವ ಪ್ರತಿಯೊಂದು ಮಾಹಿತಿಯು, ಸೆಪ್ಟೆಂಬರ್ 30ರಂದು ಭಾರತೀಯ ಸೇನಾ ಕಾರ್ಯಾಚರಣೆ ಮುಖ್ಯಸ್ಥ (ಡಿಜಿಎಂಒ) ರಣ್ಬೀರ್ ಸಿಂಗ್ ಮಾಧ್ಯಮಗಳಿಗೆ ನೀಡಿದ ಮಾಹಿತಿಗೆ ಸರಿಯಾಗಿ ಹೊಂದಿದೆ. ಅಲ್ಲದೆ, ಡಿಜಿಎಂಒ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದ ಪ್ರತಿಯೊಂದು ಮಾಹಿತಿಯನ್ನು ಘುಲಾಮ್ ಅಕ್ಬರ್ ನಿಜ ಖಚಿತಪಡಿಸಿದರು.

ಈ ರಹಸ್ಯ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿ ಮತ್ತಷ್ಟು ಖಚಿತವಾಗಿದೆ. ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನದ ಮೊಂಡು ವಾದಕ್ಕೆ ಸೊಪ್ಪು ಹಾಕಿ ಕೇಂದ್ರ ಸರ್ಕಾರ ಸಾಕ್ಷಿ ಬಿಡುಗಡೆ ಮಾಡಬೇಕೆಂದು ಹರಚುತ್ತಿದ್ದ ಕಾಂಗ್ರೆಸ್ ಹಾಗೂ ಎಎಪಿಯ ಕೆಲವು ನಾಯಕರಿಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

Leave a Reply