ಕೇಂದ್ರ ತಾಂತ್ರಿಕ ತಂಡದಿಂದ ನಾಳೆ ಕಾವೇರಿ ಪರಿಸ್ಥಿತಿ ಅಧ್ಯಯನ, ಯಡಿಯೂರಪ್ಪ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು, ವೆಮುಲಾ ಆತ್ಮಹತ್ಯೆಗೆ ವೈಯಕ್ತಿಕ ನೋವು ಕಾರಣ, ಬಿಸಿಸಿಐಗೆ ಸುಪ್ರೀಂ ವಾರ್ನಿಂಗ್

BJP State President B S Yediyurappa affreing sweet to Former DCM Eshwarappa during the breakfast meeting at BSY residence in Bengaluru on Thrusday. --

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಗೂ ಮುನ್ನ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ನಡೆದ ಉಪಾಹಾರಕೂಟದಲ್ಲಿ ನಮ್ಮೆಲ್ಲರ ಕಣ್ಣಿಗೆ ಆಹಾರವಾಗಬಲ್ಲಂಥ ಒಂದು ಬಿಂಬ..

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ಪರಿಸ್ಥಿತಿ ಅಧ್ಯಯನಕ್ಕೆ ನಾಳೆ ತಾಂತ್ರಿಕ ತಂಡದಿಂದ ರಾಜ್ಯ ಪ್ರವಾಸ

ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹಾಗೂ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆ ಹಾಗೂ ಇತರೆ ಪರಿಸ್ಥಿತಿಗಳ ಅಧ್ಯಯನ ನಡೆಸಲು ಕೇಂದ್ರದ ಉನ್ನತಾಧಿಕಾರ ತಾಂತ್ರಿಕ ತಂಡ ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದಲ್ಲಿ ಆಗಮಿಸಲಿರುವ ಕೇಂದ್ರ ತಂಡಕ್ಕೆ ಮಾಹಿತಿ ನೀಡುವುದರ ಜತೆಗೆ ವಾಸ್ತವಸ್ಥಿತಿ ವಿವರಿಸಲು ರಾಜ್ಯದಿಂದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮೈಸೂರು ವಲಯದ ಮುಖ್ಯ ಅಭಿಯಂತರ ಶಿವಶಂಕರ್ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರನ್ನು ನೇಮಿಸಲಾಗಿದೆ. ಈ ತಾಂತ್ರಿಕ ತಂಡ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಸಣ್ಣಪುಟ್ಟ ಜಲಾಶಯಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದೆ.

ಈ ಸಮಿತಿಯು ರಾಜ್ಯದಲ್ಲಿನ ಕೃಷಿ ಚಟುವಟಿಕೆ, ಬೆಳೆದು ನಿಂತಿರುವ ಬೆಳೆ, ಬೆಳೆಗೆ ಅಗತ್ಯ ನೀರು ಪೂರೈಕೆ, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ನಗರ ಪಟ್ಟಣ ಪ್ರದೇಶಗಳಿಗೆ ಮುಂದಿನ ಜೂನ್ ತಿಂಗಳವರೆಗೂ ಅಗತ್ಯವಿರುವ ನೀರಿನ ಪ್ರಮಾಣ, ನಾಲ್ಕು ಜಲಾಶಯಗಳಿಗೆ ನವೆಂಬರ್ ಅಂತ್ಯದವರೆಗೂ ಒಳ ಹರಿವು, ಜಲಾಶಯಗಳ ಹಿನ್ನೇರನ್ನೇ ನಂಬಿಕೊಂಡಿರುವ ಕಾಡು ಪ್ರಾಣಿಗಳಿಗೆ ಅಗತ್ಯವಾದ ನೀರಿನ ಪ್ರಮಾಣ ಮತ್ತು ಜಲಾಶಯಗಳಿಂದ ಆವಿಯಾಗುವ ನೀರಿನ ಪ್ರಮಾಣದ ಬಗ್ಗೆ ಖುದ್ದು ಮಾಹಿತಿ ಪಡೆದು ಪರಿಶೀಲನೆ ನಡೆಸಲಿದೆ.

ಕೇಂದ್ರ ತಂಡಕ್ಕೆ ಅಗತ್ಯ ಮಾಹಿತಿ ನೀಡುವ ಸಂಬಂಧ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಇಂದು ಮಧ್ಯಾಹ್ನ ನೀರಾವರಿ ಮತ್ತು ಹವಾಮಾನ ಇಲಾಖೆಯ ಅಧಿಕಾರಿಗಳೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಕೇಂದ್ರ ತಂಡದಲ್ಲಿ ಜಿ.ಎಸ್.ಝಾ ಅವರ ಜತೆಗೆ ಕೃಷ್ಣಾ-ಗೋದಾವರಿ ವ್ಯಾಪ್ತಿಯ ಮುಖ್ಯ ಅಭಿಯಂತರ ಆರ್.ಕೆ.ಗುಪ್ತ, ಜಲ ಆಯೋಗದ ಸದಸ್ಯ ಎಸ್.ಮಸೂದ್ ಹುಸೇನ್ ಹಾಗೂ ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳ ಪ್ರತಿನಿಧಿಗಳಿರುತ್ತಾರೆ.

ರಾಜ್ಯ ಬಿಜೆಪಿ ನಾಯಕರಿಗೆ ರಾಮಲಾಲ್ ವಾರ್ನಿಂಗ್

ಪಕ್ಷ ತೆಗೆದುಕೊಳ್ಳುವ ತೀರ್ಮಾನವನ್ನು ಹಾದಿ ಬೀದಿಯಲ್ಲಿ ಪ್ರಶ್ನಿಸಿ ಚರ್ಚೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದಶಿ ರಾಮ್‍ಲಾಲ್ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಛೇರಿಯಲ್ಲಿ ಗುರುವಾರ ನಡೆದ ಕೋರ್ ಕಮೀಟಿ ಸಭೆಯಲ್ಲಿ ಭಾಗವಹಿಸಿದ ರಾಮಲಾಲ್ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದು ಹೀಗೆ… ‘2018ರ ಚುನಾವಣೆ ವೇಳೆ ಪಕ್ಷವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮವಹಿಸಬೇಕು. ಪಕ್ಷ ಈಗಾಗಲೇ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಲ್ಲದೆ, ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದೆ. ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಅವರ ನಾಯಕತ್ವದಲ್ಲೇ ಪಕ್ಷ ಸಂಘಟನೆಯಾಗಬೇಕು. ಏನೇ ಸಣ್ಣಪುಟ್ಟ ದೋಷಗಳಿದ್ದರೂ, ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಿ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳು ವರಿಷ್ಠರ ಗಮನಕ್ಕೆ ಬಂದಿದೆ. ಇದನ್ನು ನೀವಾಗಿಯೇ ಅರ್ಥೈಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಿ. ಅಧಿಕಾರಕ್ಕೆ ಬರುವ ಮೊದಲೇ ಕಾಲೆಳೆಯುವ ಕೆಲಸ ಬೇಡ. ವರಿಷ್ಠರು ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ. ನಮಗೆ ಕರ್ನಾಟಕದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು.

ಕೆಲವು ನಾಯಕರ ಜತೆ ರಾಂಲಾಲ್ ಪ್ರತ್ಯೇಕವಾಗಿಯೂ ಮಾತುಕತೆ ನಡೆಸಿದರು.

ಸಭೆಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಆರ್.ಅಶೋಕ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ರವಿಕುಮಾರ್ ಸೇರಿದಂತೆ ಪಕ್ಷದ ಕೆಲ ಪ್ರಮುಖರು ಭಾಗಿಯಾಗಿದ್ದರು.

ಡಿನೋಟಿಫಿಕೇಶನ್ ಪ್ರಕರಣ: ಯಡಿಯೂರಪ್ಪ ವಿರುದ್ಧ ಲೋಕಾಯುಕ್ತಕ್ಕೆ ಮತ್ತೆ ದೂರು

ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ  ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮತ್ತೆ ದೂರು ದಾಖಲಾಗಿದೆ. ಈ ಹಿಂದಿನ ರಾಜ್ಯಪಾಲರಾದ ಹಂಸರಾಜ ಭಾರಧ್ವಾಜ್ ಅವರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಯಡಿಯೂರಪ್ಪ ವಿರುದ್ಧದ ಐದೂ ಪ್ರಕರಣಗಳನ್ನು ವಜಾಗೊಳಿಸಿತ್ತು. ಈ ಪ್ರಕರಣಗಳ ರದ್ದತಿಯನ್ನು ಪ್ರಶ್ನಿಸಿ ವಕೀಲರಾದ ಸಿರಾಜಿನ್ ಬಾಷಾ ಮತ್ತೆ ದೂರು ದಾಖಲಿಸಿದ್ದಾರೆ.

ವೆಮುಲಾ ದಲಿತ ಎಂಬುದಕ್ಕೆ ಸಾಕ್ಷಿ ಇಲ್ಲ, ಜಾತಿಯಲ್ಲ ವೈಯಕ್ತಿಕ ನೋವೇ ಸಾವಿಗೆ ಕಾರಣ

ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರು ದಲಿತ ವರ್ಗಕ್ಕೆ ಸೇರುತ್ತಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ… ಇನ್ನು ಅವರು ವೈಯಕ್ತಿಕ ಕಾರಣಗಳಿಂದ ಮೃತಪಟ್ಟಿದ್ದಾರೆ… ಎಂದಿದೆ ನ್ಯಾಯಮೂರ್ತಿ ರೂಪನ್ವಾಲ್ ಅವರ ಸಮಿತಿ. ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಈ ಸಮಿತಿಯು ಎಲ್ಲ ರೀತಿಯ ತನಿಖೆ ನಡೆಸಿದ್ದು, ತನ್ನ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಒಪ್ಪಿಸಿದ್ದಾರೆ. ಈ ವರದಿಯಲ್ಲಿ ಕೇಂದ್ರ ಸಚಿವರುಗಳಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ವರದಿಗಳು ಬಂದಿವೆ. ಈ ಸಮಿತಿಯು ತನ್ನ ವರದಿಯಲ್ಲಿ ವೆಮುಲಾ ಅವರು ದಲಿತ ವರ್ಗಕ್ಕೆ ಸೇರಿರುವ ಬಗ್ಗೆ ದಾಖಲೆ ಇಲ್ಲ ಎಂದು ಹೇಳಿದ್ದು, ಅವರ ತಾಯಿ ವಿ.ರಾಧಿಕಾ ಅವರು ಮಾಲಾ ಸಮುದಾಯಕ್ಕೆ ಸೇರಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೆ ಅವರ ತಾಯಿ ತಮ್ಮ ಜನ್ಮಕ್ಕೆ ಕಾರಣರಾದ ಪೋಷಕರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಗಳು ಬಂದಿವೆ.

ಬಿಸಿಸಿಐ vs ಲೋಧಾ ಸಮಿತಿ: ಶಿಫಾರಸ್ನಾಸು ಜಾರಿಗೊಳಿಸುವವರೆಗೂ ದೇಶಿ ಟೂರ್ನಿ ನಿಲ್ಲಿಸಿ ಎಂದ ಸುಪ್ರೀಂ, ನಾಳೆ ತೀರ್ಪು ಪ್ರಕಟ

ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿತ ಆರ್.ಎಂ ಲೋಧಾ ಸಮಿತಿಯ ಯಾವುದೇ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಇದರಿಂದ ಬಿಸಿಸಿಐ ವಿರುದ್ಧ ಕಿಡಿ ಕಾರಿದ ಸುಪ್ರೀಂ ನ್ಯಾಯಾಲಯದ ಆದೇಶ ಪಾಲಿಸುವವರೆಗೂ ರಣಜಿ ಟೂರ್ನಿ ಸೇರಿದಂತೆ ದೇಶೀಯ ಟೂರ್ನಿಗಳಿಗೆ ಹಣ ನೀಡಬೇಡಿ ಎಂದು ಸೂಚನೆ ನೀಡಿದೆ. ಗುರುವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಬಿಸಿಸಿಐ ನಿರ್ಧಾರಕ್ಕೆ ಅಸಮಾಧಾನಗೊಂಡ ಸುಪ್ರೀಂ ಕೋರ್ಟ್, ಲೋಧಾ ಸಮಿತಿ ಶಿಫಾರಸ್ಸಿನಂತೆ ಮಂಡಳಿಯ ಆಡಳಿತ ಸಮಿತಿಯನ್ನು ಕಿತ್ತು ಹಾಕಿ ಹಂಗಾಮಿ ಆಡಳಿತ ಸಮಿತಿ ನೇಮಿಸುವುದಾಗಿಯೂ ಎಚ್ಚರಿಕೆ ನೀಡಿದೆ. ಈ ಪ್ರಕರಣದ ಬಗ್ಗೆ  ಶುಕ್ರವಾರ ತೀರ್ಪು ನೀಡಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಅದರೊಂದಿಗೆ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಗುದ್ದಾಟದಲ್ಲಿ ಗೆಲ್ಲೋರ್ಯಾರು ಎಂಬುದು ನಾಳೆ ಗೊತ್ತಾಗಲಿದೆ.

Release of Kannada Film "Jaguar" at Santhosh Talkies in Bengalur

ನಿಖಿಲ್ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಮೊದಲ ಚಿತ್ರ ಜಾಗ್ವಾರ್… ಮೊಮ್ಮಗನಿಗೆ ಶುಭಹಾರೈಕೆಯ ಆಶೀರ್ವಾದವೆಂಬಂತೆ ದೇವೇಗೌಡರು ಚಿತ್ರ ವೀಕ್ಷಣೆಗೆ ಬಂದರು…

Leave a Reply