ಬೋಫೋರ್ಸ್, 2ಜಿ ಅಂತ ಉದ್ದಕ್ಕೂ ದಲ್ಲಾಳಿ ಮಾಡಿಕೊಂಡು ಬಂದಿದ್ದು ಕಾಂಗ್ರೆಸ್ಸೇ ತಾನೇ? ಮೋದಿ ‘ರಕ್ತದ ದಲ್ಲಾಳಿ’ ಎಂಬ ರಾಹುಲ್ ಹೇಳಿಕೆಗೆ ಅಮಿತ್ ಶಾ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಸೈನಿಕರ ತ್ಯಾಗದ ರಕ್ತವನ್ನು ಮಾರಿಕೊಳ್ಳುವ ದಲ್ಲಾಳಿಯಾಗಿದ್ದಾರೆ ಅಂತ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಶುಕ್ರವಾರದ ಪತ್ರಿಕಾಗೋಷ್ಟಿಯನ್ನು ರಾಹುಲ್ ಗಾಂಧಿಗೆ ಉತ್ತರಿಸುವುದಕ್ಕೆ ಹಾಗೂ ಸೇನೆಯ ಗುರಿ ನಿರ್ದಿಷ್ಟ ದಾಳಿ ಬಗ್ಗೆ ಪಕ್ಷದ ನಿಲುವನ್ನು ಗಟ್ಟಿಗೊಳಿಸುವುದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳಸಿಕೊಂಡರು.

ರಾಹುಲ್ ಗಾಂಧಿಯವರ ದಲ್ಲಾಳಿ ಹೇಳಿಕೆಯನ್ನು ಅಮಿತ್ ಶಾ ಖಂಡಿಸಿದ್ದು ಹೀಗೆ-

‘ರಾಹುಲ್ ಗಾಂಧಿಯವರಿಗೆ ದಲ್ಲಾಳಿ ಶಬ್ದದ ಮೋಹ ಇರುವುದು ಅರ್ಥವಾಗುವಂಥದ್ದೇ. ಬೋಫೋರ್ಸ್ ನಿಂದ ಹಿಡಿದು 2ಜಿಯವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ದಲ್ಲಾಳಿತನವನ್ನೇ ಮಾಡಿಕೊಂಡುಬಂದಿತು. ಯುಪಿಎ ಅಧಿಕಾರದಲ್ಲಿದ್ದ ಹತ್ತು ವರ್ಷಗಳ ಕಾಲ ಸೇನೆಯ ಯಾವ ಅವಶ್ಯವನ್ನೂ ಪೂರೈಸದೇ ದಲ್ಲಾಳಿತನ ಮಾಡಿದರು. ಈಗಿನ ಸರ್ಕಾರ ಸೇನೆಯ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ಅವಶ್ಯಗಳನ್ನು ತ್ವರಿತಗತಿಯಲ್ಲಿ ಪೂರೈಸುತ್ತಿದೆ’ ಎಂದರು.

ಬಿಜೆಪಿ ರಾಜಕೀಯದ ಪ್ರಶ್ನೆಯೇ ಇಲ್ಲ, ಹಾಗೆಂದೇ ಹೇಳಿಕೆ ಸೇನೆಯಿಂದ ಬಂತು

ಗುರಿ ನಿರ್ದಿಷ್ಟ ದಾಳಿಯನ್ನು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ಭಾರತೀಯ ಸೇನೆಗೆ ಸಲ್ಲಬೇಕು. ನಾವು ಈ ವಿಷಯದಲ್ಲಿ ಮೊದಲಿನಿಂದಲೂ ಎಚ್ಚರಿಕೆ ವಹಿಸಿ ರಾಜಕಾರಣದಿಂದ ದೂರವಿದ್ದೇವೆ. ಹಾಗೆಂದೇ ಗುರಿ ನಿರ್ದಿಷ್ಟ ದಾಳಿಯ ಕುರಿತ ಪತ್ರಿಕಾಗೋಷ್ಟಿಯನ್ನು ರಕ್ಷಣಾ ಮಂತ್ರಿ ನಡೆಸಲಿಲ್ಲ ಬದಲಿಗೆ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥರು ನಡೆಸಿ ವಿವರಣೆ ಕೊಟ್ಟರು.

ಸುದ್ದಿಗೋಷ್ಟಿಯಲ್ಲಿ ಕೆಲ ಪತ್ರಕರ್ತರು, ಉತ್ತರಪ್ರದೇಶದಲ್ಲಿ ಮೋದಿಯವರನ್ನು ಹೀರೋವಾಗಿಸಿ ಪೋಸ್ಟರುಗಳು ಕಾಣಿಸಿರುವ ಬಗ್ಗೆ ಪ್ರಶ್ನಿಸಿದಾಗ ಅಮಿತ್ ಶಾ ಉತ್ತರ ಹೀಗಿತ್ತು- ‘ಬಿಜೆಪಿಯ ಯಾವುದೋ ತಾಲೂಕು ಘಟಕ ಮಾಡಿದ ಕಾರ್ಯವನ್ನು ಹೀಗೆ ಬೆಳೆಸಬೇಡಿ. ಬಿಜೆಪಿನ್ನು ಗುರುತಿಸುವುದು ನರೇಂದ್ರ ಮೋದಿ, ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್…ಇಂಥ ಅನೇಕ ನಾಯಕರುಗಳ ಮೂಲಕ. ಉನ್ನತ ಮಟ್ಟದ ಯಾವ ನಾಯಕರೂ ಸಹ ಗುರಿ ನಿರ್ದಿಷ್ಟ ದಾಳಿ ತಮ್ಮದೇ ಶ್ರೇಯಸ್ಸು ಎಂಬರ್ಥದ ಹೇಳಿಕೆಗಳನ್ನು ನೀಡಿಲ್ಲ. ಬಿಜೆಪಿ ಮತ್ತು ಎನ್ಡಿಎ ಸರ್ಕಾರ ಯಾವತ್ತೂ ಸೇನೆಯ ಮನೋಬಲವನ್ನು ಹೆಚ್ಚಿಸುವ ಪಕ್ಷದಲ್ಲಿದೆ.’

ಕೇಜ್ರಿವಾಲ್ ವಿರುದ್ಧವೂ ವಾಗ್ದಾಳಿ

ಪಾಕಿಸ್ತಾನದಲ್ಲಿ ನಾವು ಕೇಜ್ರಿವಾಲ್ ಜತೆಗಿದ್ದೇವೆ ಎಂಬ ಸಂಗತಿ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದೆ. ಇದರಿಂದಲೇ ಇಂಥವರ ಹೇಳಿಕೆಗಳು ಯಾರಿಗೆ ಸಹಾಯ ಮಾಡುತ್ತಿವೆ ಎಂಬುದು ಸ್ಪಷ್ಟವಾಗಿದೆ ಎಂದು ಹರಿಹಾಯ್ದರು ಅಮಿತ್ ಶಾ. ರಾಜಕೀಯ ನೇತಾರರ ಇಂಥ ಎಲ್ಲ ಹೇಳಿಕೆಗಳು ಸೇನೆಗೆ ಮಾಡುವ ಅಪಮಾನ ಎಂದಿದ್ದಾರೆ. ಗುರಿ ನಿರ್ದಿಷ್ಟ ದಾಳಿ ನಂತರ ಪಾಕಿಸ್ತಾನದಲ್ಲಿ ಆಗುತ್ತಿರುವ ಅಲ್ಲೋಲಕಲ್ಲೋಲವನ್ನು ವಿಶ್ಲೇಷಿಸಿದರೆ ಸಾಕು ಪುರಾವೆ ಸಿಗುತ್ತದೆ ಎಂದಿರುವ ಅಮಿತ್ ಶಾ, ಪರೋಕ್ಷವಾಗಿ ವಿಡಿಯೋ ಬಿಡುಗಡೆಯನ್ನು ತಳ್ಳಿಹಾಕಿದಂತಾಗಿದೆ.

ಇತ್ತ ಅಮಿತ್ ಶಾ ಹೀಗೆ ಹರಿಹಾಯುತ್ತಿದ್ದರೆ, ಅತ್ತ ಮುಖ್ಯಮಂತ್ರಿ ಕೇಜ್ರಿವಾಲ್, ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಇಂಥ ಹೇಳಿಕೆಗಳು ಸೇನೆಯನ್ನು ಅವಮಾನಿಸುವ ಮಾತುಗಳಾಗುತ್ತವೆ. ನಾವೆಲ್ಲರೂ ರಾಜಕೀಯ ಭಿನ್ನಾಭಿಪ್ರಾಯ ಮರೆತು ಪ್ರಧಾನಿ ಹಾಗೂ ಸೇನೆಯ ಪರ ನಿಲ್ಲಬೇಕು’ ಎಂದು ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ಗುರಿ ನಿರ್ದಿಷ್ಟ ದಾಳಿ ಆಗಿತ್ತೇ?

ಕಾಂಗ್ರೆಸ್ ಹೀಗೆ ಹೇಳಿಕೊಳ್ಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದ್ದು ಹೀಗೆ- ‘ಗುರಿ ನಿರ್ದಿಷ್ಟ ದಾಳಿ ಎಂಬುದು ಸರ್ಕಾರದ ಹೇಳಿಕೆ ಅಲ್ಲ. ಅದು ಸೇನೆಯದ್ದು. ಈ ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥರೇ ಅಂಥದ್ದೇನೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ. ಈಗ ನಡೆದಿದೆ ಎಂದು ಹೇಳಿರುವುದು ಸೇನೆಯೇ ಆಗಿದೆ.’

ಅಪರೂಪದ ಮಾಧ್ಯಮ ಪ್ರಶಂಸೆ

ಅಮಿತ್ ಶಾ ಸಾಮಾನ್ಯವಾಗಿ ಮಾಧ್ಯಮಗಳಿಗೆ ಕಟು ಪ್ರತಿಪ್ರಶ್ನೆ ಕೇಳುವುದೇ ಹೆಚ್ಚು. ಆದರೆ ಶುಕ್ರವಾರದ ಸುದ್ದಿಗೋಷ್ಟಿ ನಡೆದಿದ್ದೇ ಮಾಧ್ಯಮ ಪ್ರಶಂಸೆ ಮೂಲಕ. ಗುರಿ ನಿರ್ದಿಷ್ಟ ದಾಳಿ ಮೂಲಕ ಸೇನೆಯ ಸಾಧನೆಯನ್ನು ಮಾಧ್ಯಮಗಳೆಲ್ಲ ಪ್ರಶಂಸಿಸಿ ಸೇನೆಯ ಮನೋಬಲ ಹಾಗೂ ಜನರ ಉತ್ಸಾಹ ಹೆಚ್ಚಿಸಿದ್ದೀರಿ. ಅಲ್ಲದೇ ಕೆಲ ಮಾಧ್ಯಮಗಳು ಗಡಿಯ ಆಚೆಗೆ ಏನು ನಡೆಯುತ್ತಿದೆ ಎಂಬುದನ್ನೂ ವರದಿ ಮಾಡಿ ದಾಳಿ ನಡೆದಿರುವುದನ್ನು ಸಾಬೀತುಗೊಳಿಸಿವೆ ಎಂದು ಅಮಿತ್ ಶಾ ಪ್ರಶಂಸಿಸಿದ್ದಾರೆ.

Leave a Reply