ಪ್ರೊ ಲೀಗ್ ಟೂರ್ನಿಯಿಂದ ಮರುಜನ್ಮ ಪಡೆದಿರೋ ಕಬಡ್ಡಿಗೆ ಈ ಬಾರಿಯ ವಿಶ್ವಕಪ್ ಯಶಸ್ಸು ಎಷ್ಟು ಮುಖ್ಯ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಕೆಲವು ವರ್ಷಗಳ ಹಿಂದೆ ಕಬಡ್ಡಿ ಕ್ರೀಡೆ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರೊ ಕಬಡ್ಡಿ ಲೀಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಈ ಕ್ರೀಡೆ ಈಗ ಮತ್ತೊಂದು ಹಂತದಲ್ಲಿ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳಲು ಸಿದ್ಧವಾಗಿದೆ. ಅದೂ ಕಬಡ್ಡಿ ವಿಶ್ವಕಪ್ ಮೂಲಕ…

ಇಂದಿನಿಂದ 15 ದಿನಗಳ ಕಾಲ ಅಂದರೆ, ಅಕ್ಟೋಬರ್ 22ರ ವರೆಗೂ ಅಹ್ಮದಾಬಾದಿನ ಟ್ರಾನ್ಸ್ ಸ್ಟೇಡಿಯಂನಲ್ಲಿ ಕಬಡ್ಡಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಈವರೆಗೂ ನಡೆದಿರುವ ಏಳು ವಿಶ್ವಕಪ್ ಗಳಲ್ಲೂ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಕಬಡ್ಡಿ ಕ್ರೀಡೆಗೆ ಭಾರತದಲ್ಲಿ ಮತ್ತೆ ಅಭೂತಪೂರ್ವ ಬೆಂಬಲ ಸಿಕ್ಕಿರೋದು ಈ ಬಾರಿಯ ವಿಶ್ವಕಪ್ ಟೂರ್ನಿಗೆ ಹೊಸ ಹುರುಪು ತಂದಿದೆ. ಪ್ರೊ ಕಬಡ್ಡಿ ಲೀಗ್ ನಲ್ಲಿ ಫ್ರಾಂಚೈಸಿ ತಂಡಗಳನ್ನು ಬೆಂಬಲಿಸುತ್ತಿದ್ದ ಅಭಿಮಾನಿಗಳು ಈಗ ರಾಷ್ಟ್ರೀಯ ತಂಡವನ್ನು ಬೆಂಬಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಅದೇರೀತಿ ಕಬಡ್ಡಿ ಎಂಬ ದೇಶಿ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಇತರ ದೇಶಗಳು ಯಾವ ರೀತಿ ಆಡುತ್ತವೆ ಎಂಬುದನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಈ ವಿಶ್ವಕಪ್ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಕಳೆದ ಮೂರು ಆವೃತ್ತಿಗಳಲ್ಲಿ ಭಾರತದ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದ ಪಾಕಿಸ್ತಾನ ಈ ಬಾರಿಯ ವಿಶ್ವಕಪ್ ನಲ್ಲಿ ಭಾಗವಹಿಸುತ್ತಿಲ್ಲ. ಉಗ್ರರ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿರುವ ಪರಿಣಾಮ ಈ ಟೂರ್ನಿಯಿಂದ ಪಾಕಿಸ್ತಾನವನ್ನು ಹೊರಗಿಡಲಾಗಿದೆ. ಉಳಿದಂತೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 12 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಅರ್ಜೆಂಟೀನಾ ಇದ್ದರೆ, ‘ಬಿ’ ಗುಂಪಿನಲ್ಲಿ ಇರಾನ್, ಅಮೆರಿಕ, ಪೊಲೆಂಡ್, ಕೀನ್ಯಾ, ಥಾಯ್ಲೆಂಡ್, ಜಪಾನ್ ತಂಡಗಳು ಸ್ಥಾನ ಪಡೆದಿವೆ. ಪ್ರೊ ಕಬಡ್ಡಿ ವೇಳಾಪಟ್ಟಿಯಂತೆ ಈ ಪಂದ್ಯಗಳು ಪ್ರತಿನಿತ್ಯ ರಾತ್ರಿ 8 ಹಾಗೂ 9 ಗಂಟೆಗೆ ಆರಂಭವಾಗಲಿವೆ.

ಇವಿಷ್ಟೂ ಟೂರ್ನಿಯ ಬಗೆಗಿನ ವಿವರಗಳು… ಆದರೆ ಪ್ರೊ ಕಬಡ್ಡಿ ಲೀಗ್ ನಿಂದ ಅಭಿಮಾನಿಗಳ ಮನದಲ್ಲಿ ಹೊಸ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿರುವ ಕಬಡ್ಡಿ ಕ್ರೀಡೆಗೆ ಈ ವಿಶ್ವಕಪ್ ಟೂರ್ನಿಯ ಯಶಸ್ಸು ಎಷ್ಟು ಮಹತ್ವದ್ದಾಗಿದೆ ಎಂಬುದು ಮುಖ್ಯ. ಈಗಷ್ಟೇ ಹೊಸ ಫ್ಲೇವರ್ ನಿಂದಾಗಿ ಜನರ ಮನಗೆದ್ದಿರುವ ಕಬಡ್ಡಿ ಈಗ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲೂ ಅದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿದೆ. ಹೀಗಾಗಿ ಟೂರ್ನಿಯ ಯಶಸ್ಸು ಕೇವಲ ಆಯೋಜಕರು, ಆಟಗಾರರ ಪಾಲಿಗೆ ಮಾತ್ರವಲ್ಲದೆ ಸ್ವತಃ ಕಬಡ್ಡಿ ಕ್ರೀಡೆಗೂ ಮಹತ್ವದ್ದಾಗಿದೆ.

ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಸಾಕು ಕಬಡ್ಡಿ ಕ್ರೀಡೆ ಚಿತ್ರಣ ಎಷ್ಟರ ಮಟ್ಟಿಗೆ ಬದಲಾಗಿದೆ ಎಂಬುದು ಅರಿವಾಗುತ್ತದೆ. ಸೂಕ್ತ ಪ್ರೋತ್ಸಾಹ, ಉತ್ತಮ ವೇದಿಕೆ, ಜನರ ಬೆಂಬಲವಿಲ್ಲದೆ ಕೇವಲ ಗ್ರಾಮೀಣ ಆಟವಾಗಷ್ಟೇ ಸೀಮಿತವಾಗಿದ್ದ ಕಬಡ್ಡಿ ಜನರ ಮನಸ್ಸಿನಿಂದ ಬಹುತೇಕ ಮರೆಯಾಗುವ ಹಂತಕ್ಕೆ ತಲುಪಿತ್ತು. ಆದರೆ ಈಗ ಲೀಗ್ ಮಾದರಿಯಿಂದ ಹೊಸ ರೂಪ ತಾಳಿದ್ದು, ಎರಡು ವರ್ಷಗಳ ಅಂತರದಲ್ಲಿ ಭಾರತದಲ್ಲಿ ಕ್ರಿಕೆಟ್ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಕ್ರೀಡೆ ಎನ್ನುವ ಮಟ್ಟಿಗೆ ಬೆಳೆದು ನಿಂತಿದೆ.

ಈ ಮಟ್ಟದ ಯಶಸ್ಸು ಕಂಡ ನಂತರ ಕಬಡ್ಡಿ ಒಲಿಂಪಿಕ್ಸ್ ಭಾಗವಾಗಬೇಕು ಅನ್ನೋದು ಕ್ರೀಡಾಭಿಮಾನಿಗಳ ಆಶಯ. ಅದು ಕಬಡ್ಡಿ ಕ್ರಿಡೆಯ ಗುರಿಯೂ ಹೌದು. ಅನಿರೀಕ್ಷಿತವಾಗಿ ಸಿಕ್ಕಿರುವ ಈ ಯಶಸ್ಸನ್ನು ಸೂಕ್ತವಾಗಿ ಬಳಸಿಕೊಂಡು ಕಬಡ್ಡಿ ಒಲಿಂಪಿಕ್ಸ್ ವರೆಗೂ ಸಾಗಬೇಕಿದೆ. ಹೀಗಾಗಿ ಕಬಡ್ಡಿ ಕ್ರೀಡೆಯನ್ನು ಒಲಿಂಪಿಕ್ಸ್ ಕ್ರೀಡಾಕೂಟ ಸೇರಿಕೊಳ್ಳುವ ದಿಕ್ಕಿನತ್ತ ಕೊಂಡೊಯ್ಯಲು ಕಬಡ್ಡಿ ವಿಶ್ವಕಪ್ ಟೂರ್ನಿಯ ಯಶಸ್ಸು ಮಹತ್ವದ್ದಾಗಿದೆ.

ವಾಸ್ತವಿಕ ಅಂಶಗಳನ್ನು ನೋಡುವುದಾದರೆ ಈ ವಿಶ್ವಕಪ್ ಯಶಸ್ಸಿನಿಂದ ಕಬಡ್ಡಿ ಕ್ರೀಡೆ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡುಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಒಲಿಂಪಿಕ್ಸ್ ಎಂಬ ಶಿಖರವನ್ನು ಏರುವ ಪ್ರಯತ್ನದಲ್ಲಿ ಈ ವಿಶ್ವಕಪ್ ಯಶಸ್ಸು ಒಂದು ಮಹತ್ತರ ಘಟ್ಟವಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ. ಅದು ಹೇಗೆ ಅಂದರೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಯಾವುದೇ ಕ್ರೀಡೆಯನ್ನು ಸೇರಿಸಿಕೊಳ್ಳಬೇಕು ಎಂದರೂ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಆ ಪ್ರಕಾರ, ಒಂದು ಕ್ರೀಡೆ ಒಲಿಂಪಿಕ್ಸ್ ಕ್ರೀಡಾಕೂಟದ ಭಾಗವಾಗಬೇಕಾದರೆ ಪುರುಷರ ವಿಭಾಗದಲ್ಲಿ ನಾಲ್ಕು ಖಂಡಗಳಲ್ಲಿ ಹಾಗೂ ಕನಿಷ್ಠ 75 ದೇಶಗಳು ಆ ಕ್ರೀಡೆಯನ್ನು ಸಕ್ರಿಯವಾಗಿ ಆಡಬೇಕು. ಇನ್ನು ಮಹಿಳೆಯರ ವಿಭಾಗದಲ್ಲಿ 3 ಖಂಡಗಳಲ್ಲಿ ಕನಿಷ್ಠ 40 ದೇಶಗಳು ಆ ಕ್ರೀಡೆ ಆಡಬೇಕು.

ಹೀಗಾಗಿ ಕಬಡ್ಡಿ ಕ್ರೀಡೆಯೂ ಒಲಿಂಪಿಕ್ಸ್ ಭಾಗವಾಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯಬೇಕಿದೆ. ವಿಶ್ವಕಪ್ ಟೂರ್ನಿಗಳು ಯಶಸ್ವಿಯಾದರೆ ಸಹಜವಾಗಿಯೇ ಇತರೆ ದೇಶಗಳು ಆ ಕ್ರೀಡೆಯತ್ತ ಒಲವು ತೋರುತ್ತವೆ. ಆಗ ಕ್ರಮೇಣವಾಗಿ ಹೆಚ್ಚು ರಾಷ್ಟ್ರಗಳಲ್ಲಿ ಕಬಡ್ಡಿ ಪರಿಚಯವಾಗುತ್ತದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಜಪಾನ್, ಇಂಗ್ಲೆಂಡ್, ಇರಾನ್ ನಂತಹ ವಿಭಿನ್ನ ಖಂಡಗಳ ಪ್ರಮುಖ ದೇಶಗಳು ಭಾಗವಹಿಸುತ್ತಿವೆ. ಹೀಗಾಗಿ ಆ ದೇಶಗಳಲ್ಲಿ ಈ ಕ್ರೀಡೆ ಮತ್ತಷ್ಟು ಜನಪ್ರಿಯವಾಗಬೇಕು ಅಂದರೆ ವಿಶ್ವಕಪ್ ಟೂರ್ನಿ ಯಶಸ್ವಿಯಾಗಬೇಕು. ಆಗ ಕಬಡ್ಡಿ ಕ್ರೀಡೆ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿರುವಂತೆಯೇ, ಇತರೆ ಖಂಡಗಳಾದ ಅಮೆರಿಕ, ಯುರೋಪ್, ಆಫ್ರಿಕಾ ಖಂಡಗಳ ಪ್ರಮುಖ ಕ್ರೀಡಾಕೂಟಗಳಲ್ಲಿ ಸ್ಥಾನ ಪಡೆಯುತ್ತದೆ. ಈ ರೀತಿಯಾಗಿ ಹಂತ ಹಂತವಾದ ಬೆಳವಣಿಗೆಯಿಂದ ಕಬಡ್ಡಿಯು ಒಲಿಂಪಿಕ್ಸ್ ಭಾಗವಾಗಲು ನೆರವಾಗಲಿದೆ.

ಸದ್ಯ ಫ್ರಾಂಚೈಸಿ ಮಾದರಿಯಿಂದ ಕಬಡ್ಡಿ ಭಾರತದಲ್ಲಿ ಖ್ಯಾತಿ ಪಡೆದಿರುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಗಳಿಸಬೇಕಿದೆ. ಅದಕ್ಕೆ ವೇದಿಕೆಯಾಗಿರೋ ಈ ವಿಶ್ವಕಪ್ ಪ್ರೇಕ್ಷಕರು, ಜಾಹೀರಾತು ಸೇರಿದಂತೆ ಪ್ರತಿಯೊಂದು ಕ್ಷೇತ್ರದಿಂದಲೂ ಉತ್ತಮ ಬೆಂಬಲ ಪಡೆಯುವುದು ಬಹಳ ಮುಖ್ಯ.

Leave a Reply