ಎರಡು ವರ್ಷದಲ್ಲಿ ಪಾಕ್ ಗಡಿ ಬಂದ್, ತಲಾಖ್ ವಿರುದ್ಧ ಕೇಂದ್ರದ ವಾದ, ಬಿಸಿಸಿಐಗೆ ಸುಪ್ರೀಂ ಬ್ರೇಕ್, ಸ್ಯಾಂಟೊಸ್ ಗೆ ಒಲಿದ ನೊಬೆಲ್ ಶಾಂತಿ ಗರಿ

Meeting on Cauvery Basin Visit at Vidhan Soudha in Bengaluru on Friday.

ಡಿಜಿಟಲ್ ಕನ್ನಡ ಟೀಮ್:

ತಾಂತ್ರಿಕ ಸಮಿತಿಗೆ ಸರ್ಕಾರದ ಮನವಿ…

ನಮ್ಮಲ್ಲೇ ಕುಡಿಯಲು ನೀರಿಲ್ಲ.. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಬೆಳೆಗೆ ನೀರು ಬಿಡಿ ಎಂದು ಶಿಫಾರಸ್ಸು ಮಾಡಬೇಡಿ… ಇದು ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ತಾಂತ್ರಿಕ ಸಮಿತಿ ಮುಂದೆ ಮಾಡಿಕೊಂಡ ಮನವಿ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಂಡ ಇಂದು ಕಾವೇರಿ ಜಲಾನಯನದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಲ್ಲದೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಾಗೂ ಇತರೆ ಅಧಿಕಾರಿಗಳು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯದ ಪರಿಸ್ಥಿತಿಯ ಕುರಿತ ಸಾಕ್ಷ್ಯ ಚಿತ್ರವನ್ನು ತೋರಿಸಿ ಸಮಸ್ಯೆಯನ್ನು ವಿವರಿಸಿದರು.

ರಾಯಣ್ಣ ಬ್ರಿಗೇಡ್ ಸಮಾವೇಶ ಮುಂದೂಡಿದ ಈಶ್ವರಪ್ಪ

ರಾಜ್ಯ ಉಸ್ತುವಾರಿ ಹೊತ್ತಿರುವ ಬಿಜೆಪಿ ಹಿರಿಯ ನಾಯಕ ರಾಮಲಾಲ್ ಅವರು ರಾಜ್ಯ ನಾಯಕರಲ್ಲಿನ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು ಗೊತ್ತಿರುವ ವಿಚಾರ. ಈಗ ರಾಮಲಾಲ್ ಅವರ ಮಾತಿಗೆ ಬೆಲೆ ಕೊಟ್ಟಿರುವ ಕೆ.ಎಸ್ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ಮುಂದೂಡಿದ್ದು, ಬಿ.ಎಸ್ ಯಡಿಯೂರಪ್ಪ ಜತೆಗೆ ಮಾತುಕತೆಗೆ ಮುಂದೆ ಬಂದಿದ್ದಾರೆ. ‘ಸದ್ಯ ಉದ್ಭವಿಸಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಯಡಿಯೂರಪ್ಪ ಅವರ ಜತೆಗೆ ಸದ್ಯದಲ್ಲೇ ಮಾತುಕತೆ ನಡೆಸುತ್ತೇನೆ. ಆದರೆ ರಾಯಣ್ಣ ಬ್ರಿಗೇಡ್ ಅನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಹಿಂದ ಸಮುದಾಯಗಳನ್ನು ಸಂಘಟಿಸಿ ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವುದು ಮಾತ್ರವಲ್ಲ. ಅಧಿಕಾರಕ್ಕೆ ಬಂದ ನಂತರ ಆ ಸಮುದಾಯಗಳ ಅನುಕೂಲಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ ಈಶ್ವರಪ್ಪ. ಇನ್ನು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ವಿಸರ್ಜನೆಯಾಗದ ಹೊರತು ಈಶ್ವರಪ್ಪ ಅವರ ಜತೆ ಮಾತುಕತೆ ಸಾಧ್ಯವಿಲ್ಲ ಎಂದು ಬಿಎಸ್ ವೈ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

2018ರ ವೇಳೆಗೆ ಇಂಡೋ-ಪಾಕ್ ಗಡಿ ಸಂಪೂರ್ಣ ಬಂದ್

ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ನಿರಂತರವಾಗಿ ನುಸುಳುಕೋರರ ಆಕ್ರಮಣ ಹೆಚ್ಚಾಗುತ್ತಿದ್ದು, 2018 ರ ವೇಳೆಗೆ ಈ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್. ಈ ವಿಷಯವಾಗಿ ಶುಕ್ರವಾರ ರಾಜಸ್ಥಾನದ ಜೈಸಾಲ್ಮರ್ ನಲ್ಲಿ ಸಭೆ ನಡೆಸಿದ ಗೃಹ ಸಚಿವರು ಭಾರತ ಮತ್ತು ಪಾಕಿಸ್ತಾನ ನಡುವಣ ಸುಮಾರು 3,323 ಕಿ.ಮೀ ಉದ್ದದ ಗಡಿ ಪ್ರದೇಶವನ್ನು 2018 ರ ಡಿಸೆಂಬರ್ ವೇಳೆಗೆ ಬಂದ್ ಮಾಡಲಾಗುವುದು. ಈ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದ್ದು, ಆಧುನಿಕ ತಂತ್ರಜ್ಞಾನ ಬಳಕೆಯಿಂದ ಅತ್ಯುತ್ತಮ ಯೋಜನೆ ಮಾಡಿ ಈ ಗಡಿ ಮುಚ್ಚುವ ಕಾರ್ಯ ನಡೆಯಲಿದೆ. ಈ ಕಾಮಗಾರಿಯ ಪ್ರಗತಿಯನ್ನು ಮಾಸಿಕ ತ್ರೈಮಾಸಿಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ತಲಾಖ್ ಪದ್ಧತಿ ವಿರುದ್ಧ ನಿಂತ ಕೇಂದ್ರ

ಇಸ್ಲಾಂ ಸಮುದಾಯದಲ್ಲಿ ಆಚರಣೆಯಲ್ಲಿರುವ ‘ತಲಾಖ್’ ವಿವಾಹ ವಿಚ್ಛೇದನ ಪದ್ಧತಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಈ ಪದ್ಧತಿಯಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದ್ದು, ಈ ಪದ್ಧತಿಯನ್ನು ನಿಷೇಧಿಸಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸುತ್ತಿದೆ. ಈಗಾಗಲೇ ತಲಾಖ್ ಕುರಿತಂತೆ ಅರ್ಜಿದಾರರು ಹಾಗೂ ಇಸ್ಲಾಂ ವೈಯಕ್ತಿಕ ಕಾನೂನು ಮುಖಂಡರ ಪರ ಹಾಗೂ ವಿರೋಧ ವಾದವನ್ನು ಕೋರ್ಟ್ ಆಲಿಸಿದೆ. ಇತ್ತೀಚೆಗಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅದಕ್ಕೆ ಅನುಸಾರವಾಗಿ ತನ್ನ ಅಭಿಪ್ರಾಯ ಹೇಳಿರುವ ಕೇಂದ್ರ ಸರ್ಕಾರ ‘ಲಿಂಗ ಸಮಾನತೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆಯಾಗುವಂತಹ ವಿಷಯಗಳ ಜತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕೇವಲ ಮೂರು ಬಾರಿ ತಲಾಖ್ ಹೇಳುವುದರಿಂದ ವಿವಾಹವನ್ನು ಮುರಿದುಕೊಳ್ಳುವ ಪದ್ಧತಿ ಮಹಿಳೆಯರಿಗೆ ವಿರುದ್ಧವಾದುದು. ಹೀಗಾಗಿ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ’ ಎಂದಿದೆ.

ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ಹಣ ನೀಡುವುದಕ್ಕೆ ಸುಪ್ರಿಂ ಬ್ರೆಕ್

‘ಲೋಧಾ ಸಮಿತಿ ನೀಡಿರುವ ಶಿಫಾರಸ್ಸನ್ನು ಬಿಸಿಸಿಐ ಅಳವಡಿಸಿಕೊಳ್ಳಲೇ ಬೇಕು. ಅಲ್ಲಿಯವರೆಗೂ ಮಂಡಳಿ ಯಾವುದೇ ಕಾರಣಕ್ಕೂ ರಾಜ್ಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವಂತಿಲ್ಲ…’ ಬಿಸಿಸಿಐಗೆ ಹೀಗೊಂದು ಕಡೇಯ ಎಚ್ಚರಿಕೆ ನೀಡಿದೆ ಸುಪ್ರೀಂ ಕೋರ್ಟ್. ಅಷ್ಟೇ ಅಲ್ಲ, ಈಗಾಗಲೇ ಹಣ ಪಡೆದಿರುವ ರಾಜ್ಯ ಸಂಸ್ಥೆಗಳು ತಾವು ಲೋಧಾ ಸಮಿತಿ ಶಿಫಾರಸ್ಸನ್ನು ಪಾಲಿಸುತ್ತೇವೆ ಎಂಬ ಅಫಿಡೆವಿಟ್ ಸಲ್ಲಿಸುವವರೆಗೂ ಆ ಹಣವನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಕೊಟ್ಟಿದೆ. ಇದರೊಂದಿಗೆ ಬಿಸಿಸಿಐ ಲೋಧಾ ಸಮಿತಿ ಶಿಫಾರಸ್ಸನ್ನು ಅಳವಡಿಸಿಕೊಳ್ಳಲೇಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದು, ಶಿಫಾರಸ್ಸುಗಳು ಜಾರಿಯಾದರೆ, ಬಿಸಿಸಿಐನ ಪ್ರಮುಖ ಬಾಸ್ ಗಳು ಮಂಡಳಿಯಿಂದ ಗೇಟ್ ಪಾಸ್ ಪಡೆಯಬೇಕಾಗುತ್ತದೆ. ಈ ಬಗ್ಗೆ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.17ಕ್ಕೆ ಮುಂದೂಡಿದೆ.

ಕೊಲಂಬಿಯಾ ಅಧ್ಯಕ್ಷ ಮ್ಯಾನ್ಯುಯೆಲ್ ಮುಡಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಸುದೀರ್ಘ ಐದು ದಶಕಗಳ ಕಾಲ ಯುದ್ಧಗ್ರಸ್ಥ ಭೂಮಿಯಾಗಿದ್ದ ಕೊಲಂಬಿಯಾದಲ್ಲಿ ಮತ್ತೆ ಶಾಂತಿ ನೆಲುಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಅಧ್ಯಕ್ಷ ಜುವಾನ್ ಮ್ಯಾನ್ಯುಯೆಲ್ ಸ್ಯಾಂಟೋಸ್ ಅವರಿಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ. ಕೊಲಂಬಿಯಾದಲ್ಲಿ ನಡೆದಿರುವ ನಾಗರೀಯ ಯುದ್ಧದಲ್ಲಿ ಸರಿಸುಮಾರು 2 ಲಕ್ಷ ಮಂದಿ ಸಾವನ್ನಪ್ಪಿದ್ದರು. ಪ್ರಶಸ್ತಿ ಆಯ್ಕೆಯಲ್ಲಿ ಕೊಲಂಬಿಯಾದ ಮತದಾರರೇ ಈ ಕ್ರಮವನ್ನು ನಿರಾಕರಿಸಿದ್ದರೂ, ಪ್ರಶಸ್ತಿ ಆಯ್ಕೆ ಸಮಿತಿಯು ಸ್ಯಾಂಟೋಸ್ ಅವರ ಪರಿಶ್ರಮವನ್ನು ಮನಗಂಡು ಈ ಗೌರವವನ್ನು ನೀಡಿದೆ. ಈ ಪ್ರಶಸ್ತಿ ಆಯ್ಕೆಗೆ ಕೆಲವರು ಮತ ನೀಡಲು ನಿರಾಕರಿಸಿರುವುದನ್ನು ಪರಿಗಣಿಸಿ ಮ್ಯಾನ್ಯುಯೆಲ್ ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಪ್ರಶಸ್ತಿ ನಿರಾಕರಣೆ ಮಾಡಿರುವವರು ಕೊಲಂಬಿಯಾದಲ್ಲಿ ಶಾಂತಿ ನೆಲೆಸುವುದನ್ನು ಇಚ್ಛಿಸದೇ ಇರಬಹುದು ಎಂದು ಪ್ರಶಸ್ತಿ ಸಮಿತಿ ಅಭಿಪ್ರಾಯಪಟ್ಟಿದೆ.

Leave a Reply