ಬಾಲಿವುಡ್ ಚಿತ್ರಗಳನ್ನು ಬ್ಯಾನ್ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನಿ ಚಿತ್ರರಂಗದ ಸ್ಥಿತಿ ಹೇಗಿದೆ ಗೊತ್ತೆ?

author-ssreedhra-murthyಪಾಕಿಸ್ತಾನಿ ಕಲಾವಿದರನ್ನು ಬ್ಯಾನ್ ಮಾಡಿದ ಭಾರತೀಯ ಚಿತ್ರರಂಗದ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನದಲ್ಲಿ ಬಾಲಿವುಡ್ ಚಿತ್ರಗಳನ್ನು ಬ್ಯಾನ್ ಮಾಡಲಾಗಿದೆ. ಈ ಸುದ್ದಿಯನ್ನು ಮೊದಲು ಪ್ರಕಟಿಸಿದ ‘ಲಾಹೂರ್ ಸೂಪರ್ ಸಿನಿಮಾ’ ‘ಪಾಕಿಸ್ತಾನಿ ಸೈನಿಕರಿಗೆ ಬೆಂಬಲ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತನ್ನ ವೆಬ್‍ಸೈಟಿನಲ್ಲಿ ಹೇಳಿಕೊಂಡಿತ್ತು. ಇದನ್ನು ಕರಾಚಿಯ ನೂಪ್ಲಕ್ಸ್ ನಿನಿಮಾ ಕಾಂಪ್ಲಕ್ಸ್ ಅನುಮೋದಿಸಿತು. ಅಲ್ಲಿಂದ ಭಾವಾವೇಶದ ಹೇಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಬ್ಯಾನ್ ನಿಂದ ಬಾಲಿವುಡ್ ನಡುಗಿ ಹೋಗಲಿದೆ ಎನ್ನುವ ಭ್ರಮೆ ಈ ಮಾತುಗಳಲ್ಲಿದೆ. ವಾಸ್ತವವೆಂದರೆ ಬಾಲಿವುಡ್‍ ಚಿತ್ರಗಳು ವಿಶ್ವದ 90 ದೇಶಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಬಾಲಿವುಡ್‍ನಲ್ಲೇ ವರ್ಷಕ್ಕೆ 200 ಚಿತ್ರಗಳು ನಿರ್ಮಾಣವಾದರೆ ಒಟ್ಟು ಭಾರತದಲ್ಲಿ ಪ್ರತಿವರ್ಷವೂ ಎಲ್ಲಾ ಭಾಷೆಗಳೂ ಸೇರಿ ಸಾವಿರ ಚಿತ್ರಗಳು ನಿರ್ಮಾಣವಾಗುತ್ತವೆ. ಇದು ಹಾಲಿವುಡ್ ನ ಎರಡು ಪಟ್ಟು. 155 ಬಿಲಿಯನ್ ರೂಪಾಯಿಗಳಷ್ಟು ಬೃಹತ್ ಉದ್ಯಮ ಭಾರತೀಯ ಚಿತ್ರರಂಗ. ಇದಕ್ಕೆ ಪ್ರತಿಯಾಗಿ ಈ ವರ್ಷ ಪಾಕಿಸ್ತಾನದಲ್ಲೇ ನಿರ್ಮಾಣವಾಗಿರುವ ಚಿತ್ರಗಳು ಕೇವಲ ನಾಲ್ಕು. ಕಳೆದ ವರ್ಷ ಕೂಡ ಕೇವಲ ಹನ್ನೊಂದು ಚಿತ್ರಗಳು ಪಾಕಿಸ್ತಾನದಲ್ಲಿ ನಿರ್ಮಾಣಗೊಂಡಿದ್ದವು. ಆದರೆ ಕಳೆದ ವರ್ಷ ಬಾಲಿವುಡ್‍ನ 42 ಮತ್ತು ಈ ವರ್ಷ 16 ಚಿತ್ರಗಳು ಪಾಕಿಸ್ತಾನದಲ್ಲಿ ತೆರೆ ಕಂಡಿದ್ದವು.

ಆದರೆ ಒಂದು ಕಾಲದಲ್ಲಿ ಸ್ಥಿತಿ ಹೀಗಿರಲಿಲ್ಲ. ದೇಶ ವಿಭಜನೆಯ ನಂತರ ಲಾಲಿವುಡ್ ಎಂದು ಕರೆಸಿಕೊಳ್ಳುವ ಪಾಕಿಸ್ತಾನಿ ಚಿತ್ರರಂಗ ಬಾಲಿವುಡ್‍ಗೆ ಸಮನಾಗಿ ಚಿತ್ರಗಳನ್ನು ನಿರ್ಮಿಸುತ್ತಿತ್ತು. 1965ರ ಸೆಪ್ಟೆಂಬರ್ ನಲ್ಲಿ ಮೊದಲ ಸಲ ಬಾಲಿವುಡ್‍ ಚಿತ್ರಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತು. ಇದನ್ನು ಆಗಿನ ಸರ್ವಾಧಿಕಾರಿ ಅಯೂಬ್ ಖಾನ್ ಪಾಕಿಸ್ತಾನಿ ಚಿತ್ರಗಳ ಬೆಳವಣಿಗೆಗೆ ಬಳಸಿಕೊಂಡರು. 1960-70ರ ದಶಕಗಳನ್ನು ಪಾಕಿಸ್ತಾನಿ ಚಿತ್ರರಂಗದ ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಉರ್ದುವಿನಲ್ಲಿ ಮಾತ್ರವಲ್ಲದೆ ಹಿಂದಿ, ಇಂಗ್ಲೀಷ್, ಪಂಜಾಬಿ ಮತ್ತು ಬಲೂಚಿ ಸಿಂಧಿ ಭಾಷೆಗಳಲ್ಲಿ ಕೂಡ ಪಾಕಿಸ್ತಾನದಲ್ಲಿ ಚಿತ್ರಗಳು ನಿರ್ಮಾಣಗೊಂಡವು. ಲಾಹೋರ್, ಕರಾಚಿ, ಡಾಕಾಗಳು ಪ್ರಮುಖ ಚಿತ್ರ ನಿರ್ಮಾಣದ ಕೇಂದ್ರಗಳಾಗಿದ್ದವು. ಆಗ ವಿಶ್ವದ ಇಪ್ಪತ್ತು ಪ್ರಮುಖ ಸಿನಿಮಾ ನಿರ್ಮಿಸುವ ದೇಶಗಳಲ್ಲಿ ಪಾಕಿಸ್ತಾನ ಕೂಡ ಒಂದಾಗಿತ್ತು. ಬಾಂಗ್ಲ ವಿಮೋಚನೆ ಪಾಕಿಸ್ತಾನಿ ಚಿತ್ರರಂಗಕ್ಕೆ ಬಿದ್ದ ಮೊದಲ ಹೊಡೆತ. ನಂತರ ಜಿಯಾ ಉಲ್ ಹಕ್ ಸರ್ವಾಧಿಕಾರಿಯಾಗಿ ಹೊರಡಿಸಿದ ಅನೇಕ ನಿರ್ಬಂಧಗಳು ಚಿತ್ರರಂಗದ ಅವನತಿಗೆ ಕಾರಣವಾದವು. ಬಹುತೇಕ ಚಿತ್ರಮಂದಿರಗಳು ವಾಣಿಜ್ಯ ಮಳಿಗೆಗಳಾದವು. ಚಿತ್ರ ನಿರ್ಮಾಣದ ಕುರಿತ ಆಸಕ್ತಿ ಕೂಡ ಕಡಿಮೆಯಾಗಿ ದೇಶದಲ್ಲಿ ಮೂಲಭೂತವಾದ ಬೆಳೆಯಿತು. ‘ಬಾಲಿವುಡ್ ನಿಷೇಧಿಸಿ’ ಎಂದು ಹೋರಾಟ ಮಾಡಿದ್ದ ಸೈಯದ್ ನೂರ್ ಮತ್ತು ಸಂಗೀತಾ ಬೇಗಂರೇ ಈಗ ‘ನಾವು ಬದುಕಲು ಬಾಲಿವುಡ್‍ ಚಿತ್ರಗಳನ್ನು ತನ್ನಿ’ ಎಂದು ಕೇಳಲಾರಂಭಿಸಿದರು. 2005ರಲ್ಲಿ ಕೊನೆಗೂ ಜನರಲ್ ಮುಷರಾಫ್ ಬಾಲಿವುಡ್ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ಪೂರ್ಣಪ್ರಮಾಣದ ಪ್ರವೇಶ ನೀಡಿದರು.

ಇಲ್ಲಿ ಕೂಡ ಬಾಲಿವುಡ್ ಚಿತ್ರಗಳು ಪ್ರವೇಶಿಸುವಾಗ ಕೂಡ ಆಡಳಿತ ಮಂಡಳಿ ತಪಾಸಣೆ ನಂತರವೇ ಒಳ ಬರುತ್ತಿದ್ದವು. ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾಗಿದೆ ಎನ್ನಿಸಿದ ಚಿತ್ರಗಳಿಗೆ ಬ್ಯಾನ್ ಎಂಬ ಕತ್ತರಿ ಸಿದ್ಧವಾಗಿರುತ್ತಿತ್ತು. ಏಕ್‍ ತಾ ಟೈಗರ್, ಜಬ್‍ ತಕ್ ಹೈ ಜಾನ್, ಚೆನ್ನೈ ಎಕ್ಸ್ಪ್ರೆಸ್‍, ಏಜೆಂಟ್ ವಿನೋದ್, ತೇರೆ ಬಿನ್ ಲಾಡನ್‍, ಬಾಗ್ ಮಿಲ್ಕಾ ಬಾಗ್, ಡೇವಿಡ್ , ಲಾಹೋರ್. ಹೀಗೆ ಬ್ಯಾನ್ ಆದ ಬಾಲಿವುಡ್‍ ಚಿತ್ರಗಳ ಪಟ್ಟಿ ಕೊಡ ಉದ್ದವಾಗಿಯೇ ಇದೆ. ಹೀಗಿದ್ದರೂ ನಾಮಾವಶೇಷದ ಸ್ಥಿತಿಯನ್ನು ತಲುಪಿದ್ದ ಪಾಕಿಸ್ತಾನಿ ಚಿತ್ರರಂಗವನ್ನು ಬದುಕಿಸಿದ್ದು ಬಾಲಿವುಡ್ ಚಿತ್ರಗಳೇ. ಪಾಕಿಸ್ತಾನಿ ಚಿತ್ರ ಪ್ರದರ್ಶನದ ಶೇ.70 ರಷ್ಟು ಆದಾಯ ಬರುತ್ತಿರುವುದು ಬಾಲಿವುಡ್ ಚಿತ್ರಗಳಿಂದಲೇ. ಪಾಕಿಸ್ತಾನದ ಒಟ್ಟು ಶೇ.20 ರಷ್ಟು ಸಿನಿಮಾ ಆದಾಯವನ್ನು ತಂದು ಕೊಡುವ ಕರಾಚಿಯ ನ್ಯೂಪ್ಲಕ್ಸ್ ಕಾಂಪ್ಲೆಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನವಾಗುವುದೆಲ್ಲಾ ಬಾಲಿವುಡ್ ಚಿತ್ರಗಳೇ!

Pakistaani film 1

ಪಾಕಿಸ್ತಾನದಲ್ಲಿನ ಸಿನಿಮಾ ಗಳಿಕೆ ಪಟ್ಟಿಯನ್ನು ನೋಡಿದರೂ ಬಾಲಿವುಡ್‍ನ ಪಿಕೆ 23.5 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ ಭಜರಂಗಿ ಬೈಜಾನ್ 22.5 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನಿ ಆರ್ಥಿಕ ವ್ಯವಸ್ಥೆಯನ್ನು ಗಮನಿಸಿದರೆ ಇದನ್ನು ಶತಕೋಟಿ ಕ್ಲಬ್ ಎನ್ನಬಹುದು. ಪಾಕಿಸ್ತಾನಿ ಚಿತ್ರವೊಂದು ಉತ್ತಮ ಗಳಿಕೆ ಸಾಧಿಸಿದ್ದು ವಾರ್ ಮೂಲಕ ಅದು ಗಳಿಸಿದ್ದು 18 ಕೋಟಿ ರೂಪಾಯಿಗಳು. ಪಾಕಿಸ್ತಾನಿ ಚಿತ್ರಗಳು ಬಾಲಿವುಡ್‍ನೊಂದಿಗೆ ಪೈಪೋಟಿಗೆ ಇಳಿಯದೆ ವಿಭಿನ್ನ ನಿರೂಪಣಾ ವಿಧಾನವನ್ನು ಬಳಸಿಕೊಳ್ಳುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆದ ಪಾಕಿಸ್ತಾನಿ ಚಿತ್ರಗಳಾದ ಕುದಾ ಕೇಲಿಯೆ, ದೇಖ್ ಮಗರ್ ಪ್ಯಾರ್‍ಸೆ, ಮೂರ್‍, ಷಾ ಎಲ್ಲವೂ ಇರಾನಿ ಚಿತ್ರಗಳ ಶೈಲಿಯಲ್ಲಿದ್ದವು. ಪಾಕಿಸ್ತಾನದ ಮೊದಲ ಬಯೋಪಿಕ್ ಎನ್ನಿಸಿಕೊಂಡ ಮಾಂಟೋ ಕೂಡ ಯೂರೋಪಿಯನ್ ಶೈಲಿಯಲ್ಲಿತ್ತು. ರಾಜಕಾರಣಿಗಳು ವೀರಾವೇಶದಿಂದ ಮಾತನಾಡುತ್ತಿದ್ದರೂ ಅಲ್ಲಿನ ಚಿತ್ರರಂಗದವರಿಗೆ ತಾವು ಬಾಲಿವುಡ್‍ನೊಂದಿಗೆ ಪೈಪೋಟಿ ನಡೆಸಲಾರೆವು ಎನ್ನುವುದು ಖಚಿತವಾಗಿಯೇ ಗೊತ್ತಿದೆ. ಅಷ್ಟೇ ಅಲ್ಲ. ಈಗ ಇಡೀ ಪಾಕಿಸ್ತಾನದಲ್ಲಿರುವುದು ಎಪ್ಪತ್ತು ಚಿತ್ರಮಂದಿರಗಳು ಮತ್ತು ಮೂರು ಮಲ್ಟಿಪ್ಲೆಕ್ಸ್ ಗಳು. ವರ್ಷಕ್ಕೆ 10-12 ಪಾಕಿಸ್ತಾನಿ ಚಿತ್ರಗಳು ನಿರ್ಮಾಣವಾಗುತ್ತಿರುವಾಗ ಅವುಗಳು ತುಂಬುವ ಬಗೆ ಹೇಗೆ?

ಬಾಲಿವುಡ್‍ ಬಿಟ್ಟರೆ ಪಾಕಿಸ್ತಾನಕ್ಕಿರುವ ಆಯ್ಕೆ ಹಾಲಿವುಡ್‍ ಮಾತ್ರ. ಜಪಾನ್, ಚೀನಾದ ಚಿತ್ರಗಳನ್ನು ತೋರಿಸುವ ಯತ್ನ ಈಗಾಗಲೇ ವಿಫಲವಾಗಿದೆ. ಪ್ರಮುಖ ಪಾಕಿಸ್ತಾನಿ ನಟ ಹುಮಾಯೂನ್ ಸೈಯದ್ ಹೇಳುತ್ತಾರೆ ‘ಗಡಿಯಲ್ಲಿ ಏನಾಗುತ್ತದೋ ಗೊತ್ತಿಲ್ಲ.. ಆದರೆ ಸಿನಿಮಾ ವಿಷಯದಲ್ಲಂತೂ ಬಾಲಿವುಡ್ ಪಾಕಿಸ್ತಾನವನ್ನು ಗೆದ್ದಿದ್ದಾಗಿದೆ. ಈ ಆಧುನಿಕ ತಾಂತ್ರಿಕ ಯುಗದಲ್ಲಿ ಬ್ಯಾನ್ ಎಂಬ ಪದಕ್ಕೆ ಅರ್ಥವೇ ಇಲ್ಲ. ನೀವು ಬೇಡ ಎಂದಿದ್ದು ಪೈರಸಿ ಮೂಲಕ ಬಂದಿಳಿಯುತ್ತದೆ..’ ಎಂದು. ಬಾಲಿವುಡ್‍ನಲ್ಲಿನ ಪಾಕಿಸ್ತಾನಿ ಕಲಾವಿದರ ಸಂಖ್ಯೆ ಬೆರಳೆಣಿಕೆಯಷ್ಟು. ಅವರಿಲ್ಲದಿದ್ದರೆ ಚಿತ್ರರಂಗಕ್ಕೆ ನಷ್ಟವೇನು ಇಲ್ಲ. ಹೀಗಾಗಿ ಈ ಬಹಿಷ್ಕಾರ ಕೇವಲ ಭಾವನಾತ್ಮಕವಾದದ್ದು. ಆದರೆ ಬಾಲಿವುಡ್ ಚಿತ್ರಗಳನ್ನು ನಿಷೇಧಿಸಿವುದರಿಂದ ಈಗಾಗಲೇ ಅಸ್ತಿತ್ವ ಕಳೆದು ಕೊಳ್ಳುವ ಭೀತಿಯಲ್ಲಿರುವ ಪಾಕಿಸ್ತಾನಿ ಚಿತ್ರರಂಗ ಇನ್ನಷ್ಟು ಕಷ್ಟಕ್ಕೆ ಸಿಲುಕಲಿದೆ.

Leave a Reply