ಜನರಲ್ ವಿಕ್ರಂ ಸಿಂಗ್ ಮಾತುಗಳ ಮೂಲಕ ಬಿಜೆಪಿಯನ್ನು ಹಣಿಯುವ ಕಾಂಗ್ರೆಸ್ ಉಪಾಯದಲ್ಲಿಲ್ಲ ಸತ್ವ, ಮಾಜಿ ಸೇನಾ ಮುಖ್ಯಸ್ಥ ಸಂದರ್ಶನದುದ್ದಕ್ಕೂ ಹೊಗಳಿದ್ದು ಮೋದಿ ನಾಯಕತ್ವ!

ಡಿಜಿಟಲ್ ಕನ್ನಡ ವಿಶೇಷ:

ಸೇನಾ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಮೀರಿ, ಪಾಕಿಸ್ತಾನದ ವಿರುದ್ಧದ ಗುರಿ ನಿರ್ದಿಷ್ಟ ದಾಳಿಯು ರಾಜಕೀಯ ಶ್ರೇಯಸ್ಸಿನ ಚರ್ಚೆಯಾಗಿ ಮಾರ್ಪಾಡಾಗಿಹೋಗಿದೆ. ಬಿಜೆಪಿಯಿಂದ ಎರಡು ಹಾಗೂ ಕಾಂಗ್ರೆಸ್ ನಿಂದ ಎರಡು ಅಂತ ಶುಕ್ರವಾರದ ನಾಲ್ಕು ಸುದ್ದಿಗೋಷ್ಟಿಗಳು ಶಬ್ದಯುದ್ಧವನ್ನೇ ಸೃಷ್ಟಿಸಿವೆ.

ಗುರಿ ನಿರ್ದಿಷ್ಟ ದಾಳಿ ನಡೆಸುವಲ್ಲಿ ರಾಜಕೀಯ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಬಿಂಬಿಸುವುದಕ್ಕೆ ಬಿಜೆಪಿ ಹಾಗೂ ಅಂಥದ್ದೇನೂ ಇಲ್ಲ, ಇವೆಲ್ಲ ನಮ್ಮ ಕಾಲದಲ್ಲೂ ಆಗಿದ್ದವು ಎಂದು ಬಿಂಬಿಸುವುದಕ್ಕೆ ಕಾಂಗ್ರೆಸ್ ಮುಖ್ಯವಾಗಿ ಯತ್ನಿಸುತ್ತಿವೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್, ತನ್ನ ಅವಧಿಯಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿಕ್ರಂ ಸಿಂಗ್ ಟಿವಿ ಸಂದರ್ಶನವೊಂದನ್ನು ಉಲ್ಲೇಖಿಸಿ, ‘ಈ ಹಿಂದೆಯೂ ಗಡಿಯಾಚೆ ದಾಳಿಗಳಾಗಿದ್ದವು’ ಎಂಬ ಅವರ ಹೇಳಿಕೆಯ ಆಶ್ರಯ ಪಡೆಯಿತು. ಇತ್ತ ಬಿಜೆಪಿ ಸಹ ತನ್ನ ಸುದ್ದಿಗೋಷ್ಟಿಯಲ್ಲಿ ತನಗೆ ಪೂರಕವಾಗುವ ಭಾಗವನ್ನು ಪ್ರದರ್ಶಿಸಿತು.

ಈ ಜಿದ್ದಾಜಿದ್ದಿಯಿಂದಾಗಿಯೇ ನ್ಯೂಸ್ 24 ವಾಹಿನಿಗೆ ಜನರಲ್ ವಿಕ್ರಂ ಸಿಂಗ್ ನೀಡಿದ್ದ ಸಂದರ್ಶನ ಚರ್ಚೆಗೆ ಬರುವಂತಾಗಿದೆ. ಆದರೆ ಈ ಹೇಳಿಕೆಯ ಮೇಲೆಯೇ ಕಾಂಗ್ರೆಸ್ ತನ್ನ ವಾದವನ್ನು ಕಟ್ಟುವುದಾದರೆ ಖಂಡಿತ ಅದಕ್ಕೆ ನಷ್ಟವೇ ಹೆಚ್ಚೆಂಬುದು ಸ್ಪಷ್ಟ. ಏಕೆಂದರೆ ಸುಮಾರು 25 ನಿಮಿಷಗಳ ಈ ಸಂದರ್ಶನದಲ್ಲಿ, ನಿವೃತ್ತ ಸೇನಾಧಿಕಾರಿ ಜನರಲ್ ವಿಕ್ರಂ ಸಿಂಗ್ ಅಡಿಗಡಿಗೂ ಮೋದಿ ಸರ್ಕಾರದ ರಾಜಕೀಯ ನಾಯಕತ್ವವನ್ನು ಪ್ರಶಂಸಿಸುತ್ತ ಹೋಗುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಭಾರತ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾವೇ ಇಂಥದೊಂದು ನಾಯಕತ್ವಕ್ಕೆ ಕಾದಿತ್ತು ಅಂತ ಅತ್ಯಂತ ಭಾವಪರವಶರಾಗಿ ಬಣ್ಣಿಸಿದ್ದಾರೆ ವಿಕ್ರಂ ಸಿಂಗ್.

ಹಾಗಾದರೆ ಇಡೀ ಸಂದರ್ಶನದಲ್ಲಿ ಧ್ವನಿಸುವ ಸಾರವೇನು? ಸಾರವಿಷ್ಟೆ- ‘ಈ ಹಿಂದೆಯೂ ಗಡಿ ದಾಟಿ ಸೇನೆ ಕೆಲವು ದಾಳಿಗಳನ್ನು ಮಾಡಿತ್ತು. ಅದರಲ್ಲಿ ನಮ್ಮ ಯೋಧರು ಹತರಾಗಿರುವುದೂ ಹೌದು. ಆದರೆ ಸೇನೆ ಇದನ್ನು ತನ್ನದೇ ಜವಾಬ್ದಾರಿಯಲ್ಲಿ ಮಾಡಿತ್ತೇ ಹೊರತು, ರಾಜಕೀಯ ನಾಯಕತ್ವವವೂ ಜತೆಗೂಡಿ ದಾಳಿ ಯೋಜನೆ ರೂಪಿಸಿರಲಿಲ್ಲ’ ಎಂಬುದು ಜನರಲ್ ವಿಕ್ರಂ ಸಿಂಗ್ ಮಾತುಗಳಲ್ಲಿ ಸ್ಪಷ್ಟವಾಗುತ್ತ ಹೋಗುತ್ತದೆ. ಅರ್ಥಾತ್, ಕಾಂಗ್ರೆಸ್ ತನ್ನ ಹೋಮ್ವರ್ಕ್ ಮಾಡುವಲ್ಲಿ ಎಡವಿದೆ. ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಅವರು ಶುಕ್ರವಾರ ಸಂಜೆ ತುರ್ತು ಸುದ್ದಿಗೋಷ್ಟಿ ನಡೆಸಿ, ‘ಬಿಜೆಪಿ ವೇದಿಕೆಯಲ್ಲಿ ಜನರಲ್ ಸಿಂಗ್ ಅವರ ಸಂದರ್ಶನವನ್ನು ಪ್ರಸ್ತಾಪಿಸುವ ಮೂಲಕ ರವಿಶಂಕರ್ ಪ್ರಸಾದ್ ಅವರು ತಮ್ಮ ಪಕ್ಷದ ಸುಳ್ಳುಗಳನ್ನು ತಾವೇ ಬೆತ್ತಲಾಗಿಸಿಕೊಂಡಿದ್ದಾರೆ. ಈ ಹಿಂದೆ ಗಡಿ ದಾಟಿ ನಡೆಸಿದ ಕಾರ್ಯಾಚರಣೆಗಳೇ ಆಗಿರಲಿಲ್ಲ ಎಂಬ ಅಮಿತ್ ಶಾ ಮಾತಿಗೆ ವಿಕ್ರಂ ಸಿಂಗ್ ಮಾತುಗಳೇ ಉತ್ತರವಾಗಿವೆ’ ಎಂದರು.

ಈ ವಿಷಯದಲ್ಲಿ ಬಿಜೆಪಿ-ಕಾಂಗ್ರೆಸ್ ಗಳೆರಡೂ ರಾಜಕೀಯಕ್ಕೆ ಮುಂದಾಗಿರುವುದು ಸ್ಪಷ್ಟವೇ ಆದರೂ, ಜನರಲ್ ವಿಕ್ರಂ ಸಿಂಗ್ ಸಂದರ್ಶನವನ್ನು ಪೂರ್ತಿ ನೋಡಿದ್ದೇ ಆದರೆ, ಈ ಹಿಂದಿನ ಯುಪಿಎ ನಾಯಕತ್ವಕ್ಕೆ ಅವರ ಮಾತುಗಳಲ್ಲಿ ಯಾವ ರಾಜಕೀಯ ಇಚ್ಛಾಶಕ್ತಿಯ ಹೊಗಳಿಕೆಗಳೂ ಸಂದಿಲ್ಲ.

ಹಾಗಂತ, ಜನರಲ್ ವಿಕ್ರಂ ಸಿಂಗ್ ಈ ಹಿಂದಿನ ಸರ್ಕಾರಗಳ ಮೇಲೆ ಅಸಮಾಧಾನವನ್ನೇನೂ ವ್ಯಕ್ತಪಡಿಸಿಲ್ಲ. ಆದರೆ, ಇಂಥದೊಂದು ರಾಜಕೀಯ ನಾಯಕತ್ವವನ್ನು ನಾವು ಕಂಡಿರಲಿಲ್ಲ ಎಂದು ಸಂದರ್ಶನದುದ್ದಕ್ಕೂ ಪದೇ ಪದೆ ಹೇಳುವ ಮೂಲಕ, ಇದಕ್ಕೂ ಮೊದಲು ರಾಜಕೀಯ ಇಚ್ಛಾಶಕ್ತಿಯ ಅಭಾವವಿತ್ತು ಎಂಬುದನ್ನು ಸ್ಪಷ್ಟಪಡಿಸಿಬಿಟ್ಟಿದ್ದಾರೆ.

‘ಆಪರೇಷನ್ ಪರಾಕ್ರಮದ ನಂತರ ಈಮಟ್ಟದ ರಾಜಕೀಯ ಇಚ್ಛಾಶಕ್ತಿಯನ್ನೊಳಗೊಂಡ ಮಿಲಿಟರಿ ಕಾರ್ಯತಂತ್ರ ಇದೇ ಮೊದಲು ಕಾಣಸಿಗುತ್ತಿದೆ. ಹಾಗಂತ ಇದಕ್ಕೂ ಮೊದಲು ಮಿಲಿಟರಿ ಕಾರ್ಯತಂತ್ರದಲ್ಲಿ ಕುಂದಿತ್ತು ಅಂತಲ್ಲ. ಆದರೆ ರಾಜಕೀಯ ನಾಯಕತ್ವ ಇಷ್ಟು ಬಿರುಸಾಗಿರಲಿಲ್ಲ’ ಎನ್ನುತ್ತಾರೆ ವಿಕ್ರಂ ಸಿಂಗ್. ಆಪರೇಷನ್ ಪರಾಕ್ರಮವು ವಾಜಪೇಯಿ ಸರ್ಕಾರದ ಅವಧಿಯಲ್ಲಿ ನಡೆದಿದ್ದು ಹಾಗೂ ಗುರಿ ನಿರ್ದಿಷ್ಟ ದಾಳಿ ಮೋದಿ ಅವಧಿಯಲ್ಲಿ ನಡೆಯುತ್ತಿರುವುದು ಎಂಬುದನ್ನು ಗಮನಿಸಿದಾಗ, ಜನರಲ್ ಹೇಳುವ ರಾಜಕೀಯ ಇಚ್ಛಾಶಕ್ತಿ ಕೊರತೆ ನಡುವಿನ ಯುಪಿಎ ಅವಧಿಯದ್ದು ಎಂಬುದು ಪೂರ್ತಿ ಸಂದರ್ಶನ ನೋಡಿದ ಯಾರಿಗಾದರೂ ಪಕ್ಕಾ ಆಗಿಬಿಡುತ್ತದೆ.

ಪತ್ರಕರ್ತೆ ಅನುರಾಧಾ ಪ್ರಸಾದ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಜನರಲ್ ವಿಕ್ರಂ ಸಿಂಗ್ ಹೇಳಿರುವ ಕೆಲ ಮಾತುಗಳು ಹೀಗಿವೆ.

  • ಗಡಿಯಾಚೆಗಿನ ದಾಳಿಗಳನ್ನು ಸೇನೆಯ ನಾನಾ ಕಮಾಂಡ್ ಗಳು ಅವರವರ ವ್ಯಾಪ್ತಿಯಲ್ಲಿ ಹಿಂದೆಯೂ ಮಾಡಿದ್ದವು. ವ್ಯತ್ಯಾಸ ಹೇಳುತ್ತೇನೆ ಕೇಳಿ. ಇವತ್ತಿನ ಸರ್ಕಾರ, ನಾವು ನಿಮ್ಮ ಜತೆಗಿದ್ದೇವೆ ಮಾಡಿ ಎಂದು ಬಹಿರಂಗವಾಗಿ ಬಲ ತುಂಬುತ್ತಿದೆ. ಉರಿಯಲ್ಲಿ ನಮ್ಮ ಸೈನಿಕರ ಹತ್ಯೆ ಆದಾಗಲೇ ಸರ್ಕಾರದ ಕಡೆಯಿಂದ ತುಂಬ ಸ್ಪಷ್ಟ ನಿಲುವು ವ್ಯಕ್ತವಾಗಿಬಿಟ್ಟಿತು. ಈ ಕೃತ್ಯಕ್ಕೆ ಉತ್ತರ ನೀಡಿಯೇ ನೀಡುತ್ತೇವೆ ಅಂತ. ಅದರಂತೆ ಪಾಕಿಸ್ತಾನಕ್ಕೆ ಉತ್ತರ ನೀಡಿಯಾಗಿದೆ. ಇಂಥ ಕಾರ್ಯಶೈಲಿಯ ನಾಯಕತ್ವಕ್ಕಾಗಿಯೇ ದೇಶ ಕಾದಿತ್ತು. ನಮ್ಮ ಪ್ರಧಾನಿಯ ರಾಜಕೀಯ ನಾಯಕತ್ವ ಬಹಳ ದೊಡ್ಡದು. ಇದರ ಬಗ್ಗೆ ಶಂಕೆಯೇ ಬೇಡ.
  • (ಸೌರಭ್ ಕಾಲಿಯಾ ಅವರನ್ನು ಪಾಕಿಸ್ತಾನ ಶಿರಚ್ಛೇದನ ಮಾಡಿದಾಗ, ನಾವು ಮುಖ್ಯಸ್ಥರಾಗಿದ್ದಾಗಲೇ ಪ್ರತಿಕಾರವಾಗಿ 10 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿತ್ತು. ಇದರ ಬಗ್ಗೆ ಈಗಿನಂತೆ ಪ್ರಚಾರವಾಗಿರಲಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ..) ನೋಡಿ, ಆವಾಗಿನ ಕಾರ್ಯತಂತ್ರ ಏನಾಗಿತ್ತೆಂದರೆ- ಸರ್ಕಾರಕ್ಕೊಂದು ನಿರಾಕರಣೆಗೆ ಅವಕಾಶವಿರಬೇಕು ಎಂದಾಗಿತ್ತು. ಅದು ಪ್ರಚಾರವಾದರೆ ರಾಜತಾಂತ್ರಿಕ ಸಂಬಂಧಗಳಿಗೆ ಎಲ್ಲಿ ಕುತ್ತು ಬರುವುದೋ ಎಂಬ ಭಯವಿತ್ತು. ಆದರೆ ಈಗಿನ ಸರ್ಕಾರ ಹೇಳುತ್ತಿದೆ- ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಡಿ ಅಂತ. ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಅದಾಗಲೇ ಹೇಗೆ ಮೂಲೆಗುಂಪುಮಾಡಿಬಿಟ್ಟಿದ್ದೇವೆ ನೋಡಿ!
  • ಈ ಸರ್ಕಾರ ಮಾಡಿದ ಅದ್ಭುತ ಕೆಲಸ ಯಾವುದು ಗೊತ್ತೇ? ವಿದೇಶಿ ಹಣ ಉಪಯೋಗಿಸಿಕೊಂಡು ನಮ್ಮಲ್ಲಿ ದೇಶ ವಿರೋಧಿ ಅಭಿಪ್ರಾಯಗಳನ್ನು ರೂಪಿಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳನ್ನು ನಿಯಂತ್ರಿಸಿದೆ. ಪಾಕಿಸ್ತಾನದ ಅಣ್ವಸ್ತ್ರ ಪ್ರಯೋಗದ ಬೊಬ್ಬೆಗೂ ಇವೇ ಎನ್ಜಿಒಗಳು ಪೂರಕವಾಗಿದ್ದವು.
  • ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ನಾವು ಬೆಲೆ ಕೊಡಬೇಕಿಲ್ಲ. ಮೊದಲಿಗೆ ನಾವು ಉಪಯೋಗಿಸುವುದಿಲ್ಲ ಎಂಬ ತತ್ವ ಭಾರತದ್ದಾದರೂ, ನಮ್ಮ ಮೇಲೆ ಉಪಯೋಗವಾದರೆ ತೀವ್ರ ಪ್ರತಿಘಾತದ ಅಣ್ವಸ್ತ್ರ ಬಳಸುತ್ತೇವೆ ಎಂಬುದು ನಮ್ಮ ಸಿದ್ಧಾಂತವಾಗಿದೆ. ಹೀಗಾಗಿ ಪಾಕಿಸ್ತಾನವು ನಮ್ಮ ಮೇಲೆ ಅದರ ಸೀಮಿತ ಅಣ್ವಸ್ತ್ರ ಉಪಯೋಗಿಸಿದ ಮರುಕ್ಷಣವೇ ನಮ್ಮ ಅಣ್ವಸ್ತ್ರ ದಾಳಿಗೆ ಪಾಕಿಸ್ತಾನವೇ ಇಲ್ಲವಾಗಿಬಿಡುತ್ತದೆ. ನಮ್ಮ ಎಲ್ಲ ಸೇನಾ ಕಾರ್ಯತಂತ್ರಗಳು ಅಣ್ವಸ್ತ್ರ ಬಲದ ಅರಿವನ್ನು ಬೆನ್ನಿಗಿರಿಸಿಕೊಂಡೇ ರೂಪುಗೊಳ್ಳುತ್ತವೆ.
  • ಈ ಗುರಿ ನಿರ್ದಿಷ್ಟ ದಾಳಿಗಳು ಒಂದು ಕಾರ್ಯತಂತ್ರವಾಗಿ 4-5 ವರ್ಷ ಮುಂದುವರಿಸಬೇಕಾಗುತ್ತದೆ. ನಮಗೆ ಖಂಡಿತ ಯುದ್ಧೋನ್ಮಾದ ಬೇಕಿಲ್ಲ. ಆದರೆ ನಮ್ಮ ಗುರಿ ಪಾಕಿಸ್ತಾನವನ್ನು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಒತ್ತಡ ಸೃಷ್ಟಿಸುವುದಾಗಬೇಕು. ಇದಕ್ಕೆ ಕೇವಲ ಸೈನಿಕ ಬಲ ಮಾತ್ರವಲ್ಲ ರಾಜತಾಂತ್ರಿಕ, ಸಾಫ್ಟ್ ಪವರ್ ಎಲ್ಲವನ್ನೂ ಉಪಯೋಗಿಸಬೇಕು. ಖಂಡಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಬದಲಾಗಬೇಕಾದ ಒತ್ತಡ ರೂಪುಗೊಳ್ಳಲಾಗುತ್ತದೆ.

ಯೂಟ್ಯೂಬಿನಲ್ಲಿ ಲಭ್ಯವಿರುವ ಹಿಂದಿ ಸಂದರ್ಶನ ಇದು..

Leave a Reply