ಪ್ಯಾರಿಸ್ ಒಪ್ಪಂದಕ್ಕೆ ಭಾರತದ ಬದ್ಧತೆ, ಇಲ್ಲಿರುವ ಜಾಗತಿಕ ಲೆಕ್ಕಾಚಾರದ ಕತೆ ಗೊತ್ತೇ?

author-ananthramuಈ ಸಲದ ಗಾಂಧಿ ಜಯಂತಿಯ ದಿನ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲೊಂದು ಅಪರೂಪದ ಕಾರ್ಯಕ್ರಮವಿತ್ತು. 1966 ರಲ್ಲಿ ಕರ್ನಾಟಕ ಸಂಗೀತದ ಮೇರು ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು. ಅದಕ್ಕಿಂತಲೂ ಮಿಗಿಲಾಗಿ ಸುಬ್ಬುಲಕ್ಷ್ಮೀ ಅವರ ಜನ್ಮಶತಮಾನೋತ್ಸವ (16ನೇ ಸೆಪ್ಟೆಂಬರ್, 2016). ಆ ಸ್ಮರಣಾರ್ಥ ಸ್ಟ್ಯಾಂಪ್ ಬಿಡುಗಡೆ ಕಾರ್ಯಕ್ರಮವಿತ್ತು. ಈಗಲೂ ಶ್ರೋತ್ರುಗಳನ್ನು ತಣಿಸಿದ್ದು ಕರ್ನಾಟಕ ಸಂಗೀತವೇ. ಪ್ರಸ್ತುತಪಡಿಸಿದ್ದು ಸುಧಾ ರಂಗನಾಥನ್. ಗಾಂಧಿ ಜಯಂತಿ ಎಂದ ಮೇಲೆ ಗಾಂಧಿ ಅವರ ಬದುಕಿನ ಬಗ್ಗೆ ತಳೆದಿದ್ದ ನಿಲುವುಗಳು ವಿಶೇಷವಾಗಿ ಸುಸ್ಥಿರ ಅಭಿವೃದ್ಧಿ ಕುರಿತು ಅವರು ಹೇಳಿದ ಕಿವಿಮಾತುಗಳು ಮತ್ತೆ ಅಲ್ಲಿ ಪ್ರಸ್ತಾವಗೊಂಡವು. ಗಾಂಧಿ ಹುಟ್ಟಿ 147 ವರ್ಷಗಳಾಗಿದ್ದುದನ್ನೂ ಸಭೆ ಸ್ಮರಿಸಿತು. ಒಬಾಮ ಕೂಡ ಗಾಂಧೀಜಿಯವರ ಅಹಿಂಸಾ ನೀತಿಯನ್ನು ಸ್ಮರಿಸಿಕೊಂಡರು.

ಈಗೇಕೆ ಸುಸ್ಥಿರ ಅಭಿವೃದ್ಧಿಯ ಮಾತು? ಸಂದರ್ಭ ಹಾಗಿತ್ತು. ಫ್ರಾನ್ಸಿನಲ್ಲಿ ಇದೇ ವರ್ಷದ ಏಪ್ರಿಲ್ 22ರಂದು ನಡೆದ ಹವಾಗುಣ ಬದಲಾವಣೆ ಕುರಿತು ವಿಶ್ವಸಂಸ್ಥೆ ಆಯೋಜಿಸಿದ್ದ ಸಭೆಗೆ 174 ರಾಷ್ಟ್ರಗಳ ಪ್ರತಿನಿಧಿಗಳು ಬಂದಿದ್ದರು. ಭೂತಾಪದ ಏರಿಕೆಯನ್ನು ನಿಯಂತ್ರಿಸಲೇಬೇಕಾದ ಒಪ್ಪಂದಕ್ಕೆ ಈ ರಾಷ್ಟ್ರಗಳೆಲ್ಲ ಬದ್ಧವಿದ್ದವು. ಆದರೆ ಅಂತಿಮವಾಗಿ ಸಹಿ ಹಾಕಿದರೆ ಮಾತ್ರ ಊರ್ಜಿತ ತಾನೆ? ಗಾಂಧಿ ಜಯಂತಿಯಂದು ಭಾರತ ತಾವು ಬದ್ಧ ಎಂದು ಅಧಿಕೃತವಾಗಿ ಘೋಷಿಸಿಕೊಂಡ ದಿನ. ಪ್ಯಾರಿಸ್ ನ ಹವಾಗುಣ ಬದಲಾವಣೆ ಒಪ್ಪಂದಕ್ಕೆ ಸ್ಪಂದಿಸಿದ ದೇಶಗಳಲ್ಲಿ ಭಾರತ 62ನೆಯದು. ಇಲ್ಲೊಂದು ಸಣ್ಣ ಲೆಕ್ಕಾಚಾರವೊಂದನ್ನು ಪರಿಗಣಿಸಬೇಕು. ಒಪ್ಪಂದ ಜಾರಿ ಬರುವುದು ಯಾವಾಗ? ಅದು ವಾಯುಗೋಳಕ್ಕೆ ಶೇ.55 ಭಾಗದಷ್ಟು ಉಷ್ಣವರ್ಧಕ ಅನಿಲಗಳನ್ನು ಕಡಿತಗೊಳಿಸಲು ಕಾರಣವಾದ 55 ರಾಷ್ಟ್ರಗಳು ಪೂರ್ಣ ಒಪ್ಪಿಕೊಂಡಾಗ. ಭಾರತ 62ನೆಯ ಸಹಿಹಾಕಿದ ರಾಷ್ಟ್ರ ಎಂದಾಗ ಈ ತೊಡಕು ನಿವಾರಣೆಯಾಗಬೇಕಾಗಿತ್ತು. ಆದರೆ 62 ದೇಶಗಳಲ್ಲಿ ಎಲ್ಲವೂ ಅತಿ ವಾಯುಮಾಲಿನ್ಯಕಾರಕ ದೇಶವಲ್ಲ. ಸಂಯುಕ್ತ ಸಂಸ್ಥಾನ ಇದಕ್ಕಾಗಿ ಕಾದಿತ್ತು. ಇನ್ನು ಮೂರು ಭಾಗ ತಲಪಬೇಕೆಂದರೆ ಪ್ಯಾರಿಸ್ ಒಪ್ಪಂದ ಕಡ್ಡಾಯವಾಗುತ್ತದೆ. ಈ `ಶಾರ್ಟೇಜ್’ ತುಂಬಿದವರು ಯಾರು? ಭಾರತದ ಉಷ್ಣವರ್ಧಕ ಅನಿಲಗಳ ಉತ್ಸರ್ಜನೆಯ ಪ್ರಮಾಣ ಜಾಗತಿಕ ಮಟ್ಟದಲ್ಲಿ 4.5, ಆದರೆ ಇದು ಕೂಡ ತಕ್ಕಡಿಯನ್ನು ಏರಿಸಲಿಲ್ಲ.

ಈಗ ಯೂರೋಪಿಯನ್ ಒಕ್ಕೂಟ ಸಹಿ ಹಾಕಿ ಬದ್ಧತೆ ತೋರಿಸಿತು. ಪರಿಣಾಮವಾಗಿ ಈ ವರ್ಷದ ನವೆಂಬರ್ 4ರಿಂದ ಪ್ಯಾರಿಸ್ ಒಪ್ಪಂದ ಜಾರಿಯಲ್ಲಿರುತ್ತದೆ. ಇದರಲ್ಲಿ ಎರಡು ಮುಖ್ಯ ಉದ್ದೇಶಗಳನ್ನು ಅಳವಡಿಸಲಾಗಿದೆ. ಯಾವುದೇ ಕಾರಣಕ್ಕೂ ಭೂತಾಪ ಇನ್ನು 2 ಡಿಗ್ರಿ ಸೆಂ. ಹೆಚ್ಚದಂತೆ ನೋಡಿಕೊಳ್ಳಲೇಬೇಕು. ಈ ಹೊಣೆ ಸದಸ್ಯ ರಾಷ್ಟ್ರಗಳದ್ದು. ಇದಲ್ಲದೆ ಉಷ್ಣವರ್ಧಕ ಅನಿಲಗಳ ಬಿಡುಗಡೆಯ ನಿಯಂತ್ರಣ ಸಾಧಿಸಿದ ರಾಷ್ಟ್ರಗಳಿಗೆ ಧನಸಹಾಯವೂ ಸೇರಿದೆ. ಭಾರತ ಈ ಸಂದರ್ಭ ಬಳಸಿಕೊಂಡು ತನ್ನ ಅಹವಾಲನ್ನು ಮುಂದಿಟ್ಟಿದೆ. `ನಮಗೆ ನೂರು ಬಿಲಿಯನ್ ಡಾಲರ್ ಕೊಡಿ. ಎಲ್ಲ ತಾಂತ್ರಿಕ ವಿಧಾನಗಳನ್ನೂ ಬಳಸಿ ಉಷ್ಣವರ್ಧಕ ಅನಿಲಗಳ ಪ್ರಮಾಣವನ್ನು ತಗ್ಗಿಸುತ್ತೇವೆ’ ಎಂದಿದೆ. ಈ ಮಾತು ಹೇಳಲು ತಾಕತ್ತು ಬೇಕು. ಏಕೆಂದರೆ ನಾವು ಪ್ರಧಾನವಾಗಿ ಕಲ್ಲಿದ್ದಲು ಉರಿಸಿ ಶಕ್ತಿ ಪಡೆಯುತ್ತಿದ್ದೇವೆ. ಅಂದಮೇಲೆ ವಾಯುಗೋಳ ಮಾಲಿನ್ಯದ ಮೇಲೆ ಇದರ ಪ್ರಭಾವ ಹೆಚ್ಚೆಂದು ಹೇಳಬೇಕಾಗಿಲ್ಲ. ಪರಮಾಣು ಶಕ್ತಿ ಬಿಡಿ, ಅದೇನೂ ನಮ್ಮ ದೇಶದಲ್ಲಿ ವಿದ್ಯುತ್ತಿಗೆ ದೊಡ್ಡ ಪ್ರಮಾಣದ ಕೊಡುಗೆಯನ್ನೇನೂ ಕೊಟ್ಟಿಲ್ಲ, ಶೇ. 4ರಿಂದ 5 ಅಷ್ಟೇ. ಓಝೋನ್ ಸ್ತರವನ್ನು ಕದಡುವ ಕ್ಲೋರೋ ಫ್ಲೂರೋ ಕಾರ್ಬನ್(CFC) ಎಂಬ ರಾಸಾಯನಿಕದ ಉತ್ಪಾದನೆಯನ್ನು ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಭಾರತ ಹಂತಹಂತವಾಗಿ ತಗ್ಗಿಸಿ, ಈಗ ನಿಲ್ಲಿಸಿದೆ. ರಸಗೊಬ್ಬರದಲ್ಲಿ, ರೆಫ್ರಿಜಿರೇಟರ್‍ಗಳಲ್ಲಿ, ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಧಾರಾಳವಾಗಿ ಈ ಕ್ಲೋರಿನ್ ಮೂಲದ ರಾಸಾಯನಿಕ ವಸ್ತು ಬಿಡುಗಡೆಯಾಗಿ ವಿಜ್ಞಾನಿಗಳನ್ನೇ ನಿದ್ದೆಗೆಡಿಸಿತ್ತು. ವಿಶೇಷವಾಗಿ ಫ್ರಿಜ್ ನಲ್ಲಿ ಶೈತ್ಯಕಾರಿಯಾಗಿ ದಶಕಗಳಿಂದಲೂ ಅದು ಬಳಕೆಯಾಗುತ್ತಿತ್ತು. ತಂತ್ರಜ್ಞರು ಪರ್ಯಾಯ ಹುಡುಕಲೇಬೇಕಾಗಿತ್ತು. ಆಗ ಸೃಷ್ಟಿಸಿದ್ದು ಹೈಡ್ರೋ ಕ್ಲೋರೋ ಫ್ಲೂರೋ ಕಾರ್ಬನ್ (HCFC). ಇದೂ ಕೂಡ ಓಝೋನ್ ಪದರವನ್ನು ಛಿದ್ರಗೊಳಿಸುತ್ತದೆ ಎಂದು ಪತ್ತೆಯಾದಾಗ ಮತ್ತೆ ಇದರ ಉತ್ಪಾದನೆಗೆ ನಿಯಂತ್ರಣ ಹೇರಬೇಕಾಯಿತು. ಆದರೆ ಇದಕ್ಕೊಂದು ರಿಯಾಯತಿ ಇದೆ. 2030ರವರೆಗೆ ಗಡುವುಕೊಟ್ಟಿದೆ.

ವಿಚಿತ್ರವೆಂದರೆ ಹೈಡ್ರೋ ಕ್ಲೋರೋ ಫ್ಲೂರೋ ಕಾರ್ಬನ್ ಉತ್ಪಾದಿಸುವಾಗ ಅದರ ಜೊತೆ ಅನಿವಾರ್ಯವಾಗಿ ಹೈಡ್ರೋಫ್ಲೂರೋಕಾರ್ಬನ್ (HFC) ಕೂಡ ಬಿಡುಗಡೆಯಾಗುತ್ತದೆ. ಇದನ್ನು ತಡೆಯಲು ಕಾನೂನು ರೂಪಿಸಿಲ್ಲ. ಇದರಿಂದ ಓಝೋನ್ ಸ್ತರಕ್ಕೇನೂ ಅಂಥ ಗಂಡಾಂತರವಿಲ್ಲ. ಆದರೆ ಕಾರ್ಬನ್ ಡೈ ಆಕ್ಸೈಡ್‍ಗಿಂತ ಇದು 14,800 ಪಟ್ಟು ಉಷ್ಣ ಹಿಡಿದಿಡುವ ಸಾಮರ್ಥ್ಯವುಳ್ಳದ್ದು. ಇದು ಎರಡು ಅಲಗಿನ ಕತ್ತಿಯಂತೆ. ಇದೀಗ `ಡೌನ್ ಟು ಅರ್ಥ್’ ಪತ್ರಿಕೆ ನಮ್ಮ ದೇಶದಲ್ಲಿ ಫ್ಲೂರೋ ರಾಸಾಯನಿಕಗಳನ್ನು ಉತ್ಪಾದಿಸುವ ಕಂಪನಿಗಳ ಮರ್ಮವನ್ನು ಬಯಲಿಗೆಳೆದಿದೆ. ಭಾರತದಲ್ಲಿ ಹೈಡ್ರೋ ಕ್ಲೋರೋ ಫ್ಲೂರೊ ಕಾರ್ಬನ್ ಉತ್ಪಾದಿಸುವ ಐದು ಕಂಪನಿಗಳಿವೆ. ಇವು ಉತ್ಪಾದಿಸುತ್ತಿರುವ ಹೈಡ್ರೋ ಫ್ಲೂರೋ ಕಾರ್ಬನ್ ಉಷ್ಣವರ್ಧಕ ಅನಿಲವೆಂದು ಸ್ಥಳದಲ್ಲೇ ಈ ರಾಸಾಯನಿಕವನ್ನು ದಮನಮಾಡುತ್ತಿವೆ. ಈ ಕೆಲಸಕ್ಕೆ ಅವು ಪಡೆಯುತ್ತಿರುವ ಧನಸಹಾಯ ಹತ್ತಿರ ಹತ್ತಿರ ಒಂದು ಬಿಲಿಯನ್ ಡಾಲರ್. ಅಷ್ಟೇ ಅಲ್ಲ, ಹೀಗೆ ಮಾಡಿದರೆ ಎಷ್ಟು ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಗೆ ಇದು ಸಮ ಎಂದು ಲೆಕ್ಕಹಾಕಲೂಬಹುದು. ಈ ಲೆಕ್ಕವನ್ನು `ಕಾರ್ಬನ್ ಕ್ರೆಡಿಟ್’ ಅಂದರೆ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯ ಪ್ರಮಾಣವನ್ನು ತಗ್ಗಿಸಿದಾಗ ಪಾಯಿಂಟ್‍ಗಳು ಸಿಕ್ಕುತ್ತವೆ-ಇದನ್ನು ಬೇರೆ ದೇಶಗಳಿಗೆ ಮಾರಿಕೊಂಡು ಲಾಭವನ್ನೂ ಪಡೆಯಬಹುದು. ಅಂದರೆ ಈಗ `ಕಾರ್ಬನ್ ಡೈ ಆಕ್ಸೈಡ್’ ಒಂದು ವಹಿವಾಟಿನ ವಸ್ತುವಾಗಿದೆ.

ಚೀನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದೆಂದರೆ ಅತಿ ಹೆಚ್ಚು ಪ್ರಮಾಣದ ಹೈಡ್ರೋ ಕ್ಲೋರೋ ಫ್ಲೂರೋ ಕಾರ್ಬನ್ ಉತ್ಪಾದಿಸುವುದು. ಹಾಗೆ ಮಾಡಿದಾಗ ಹೈಡ್ರೋ ಫ್ಲೂರೋ ಕಾರ್ಬನ್ ಕೂಡ ಹೆಚ್ಚುತ್ತದೆ ತಾನೆ? ಈಗ ಇದನ್ನು ದಮನಮಾಡಿ ಹೆಚ್ಚುವರಿ ಕಾರ್ಬನ್ ಕ್ರೆಡಿಟ್ ಸಂಪಾದಿಸುವುದು, ಅದನ್ನು ಮಾರಿಕೊಳ್ಳುವುದು. ಚೀನದ ಈ ದುರಾಸೆಯನ್ನು ನ್ಯೂಜಿಲೆಂಡ್ ಮತ್ತು ಯೂರೋಪಿಯನ್ ಒಕ್ಕೂಟ ಬಲುಬೇಗ ಅರ್ಥಮಾಡಿಕೊಂಡು ಕಾರ್ಬನ್ ಕ್ರೆಡಿಟ್ಟನ್ನೇ ನಿಲ್ಲಿಸಿಬಿಟ್ಟವು. ಇವೆಲ್ಲದರ ಪರಿಣಾಮವೆಂದರೆ ಅಂತಿಮವಾಗಿ 2020ರ ವೇಳೆಗೆ ವಾಯುಗೋಳದಲ್ಲಿ ಎರಡು ಶತಕೋಟಿ ಟನ್ನು ಹೈಡ್ರೋ ಫ್ಲೂರೋ ಕಾರ್ಬನ್ ಜಮಾಯಿಸಿರುತ್ತದೆ ಎಂದು ಲೆಕ್ಕಹಾಕಿದೆ.

PARIS 1

ಭಾರತದಲ್ಲಿ ಯಾವ ಪ್ರಮಾಣದಲ್ಲಿ ಹೈಡ್ರೋ ಫ್ಲೂರೋ ಕಾರ್ಬನ್ ಉತ್ಪನ್ನವಾಗುತ್ತದೆ ಎಂಬುದನ್ನು ಕರಾರುವಾಕ್ಕಾಗಿ ತಿಳಿಯಲು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಕಳೆದ ವರ್ಷ ಪರಿಸರ ಇಲಾಖೆಗೆ ಸೂಚಿಸಿತ್ತು. ಅಧ್ಯಯನದ ಪರಿಣಾಮವಾಗಿ ಸೋಜಿಗ ಸಂಗತಿಯೊಂದು ಹೊರಬಿತ್ತು. ಒಂದು ಟನ್ ಕಾರ್ಬನ್ ಡೈ ಆಕ್ಸೈಡ್ ಗೆ ಸಮನಾದ ಹೈಡ್ರೋಫ್ಲೂರೋಕಾರ್ಬನ್ ದಹಿಸಲು ತಗಲುತ್ತಿರುವ ವೆಚ್ಚ ಕೇವಲ ₹ 15ರಿಂದ 20. ವರ್ಷದಲ್ಲಿ ಹೆಚ್ಚೆಂದರೆ ಈ ದೊಡ್ಡ ಕಂಪನಿಗಳಿಗೆ ₹ 300 ಲಕ್ಷ ಖರ್ಚಾಗಬಹುದು, ಅವು ಪಡೆಯುತ್ತಿರುವ ಲಾಭಾಂಶದ ಶೇ.0.2 ಕೂಡ ಅಷ್ಟೇ.

ಭಾರತ ಉಳಿದ ದೇಶಗಳಿಗೆ ಮಾದರಿಯಾಗಬೇಕಾದರೆ ಒಂದು ನೀತಿ ಅನುಸರಿಸಬೇಕು. ಅದೆಂದರೆ ಹೈಡ್ರೋ ಫ್ಲೂರೋ ಕಾರ್ಬನ್ ಅನ್ನು ದಹಿಸಿ ಲಾಭಮಾಡಿಕೊಳ್ಳುವ ದಂಧೆಗಿಂತ ಯಾವ ಕಂಪನಿ ಹೀಗೆ ಉಷ್ಣವರ್ಧಕ ಅನಿಲಗಳನ್ನು ಬಿಡುಗಡೆ ಮಾಡುತ್ತವೋ ಅವೇ ದಂಡ ಕಟ್ಟಬೇಕು ಎನ್ನುವ ಕಾನೂನು ಜಾರಿಯಾಗಬೇಕು. ಇದು `ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‍ಮೆಂಟ್’ ಸಂಸ್ಥೆಯ ಕಿವಿಮಾತು. ಚೀನದ ಉದಾಹರಣೆಯನ್ನು ಅನುಸರಿಸುವುದು ಸಲ್ಲದು ಎಂದೂ ಹೇಳಿದೆ. ಹವಾಗುಣ ಬದಲಾವಣೆಯಿಂದ ಆರೋಗ್ಯದ ಮೇಲೆ ಆಗುವ ಪ್ರತಿಕೂಲವೆಂದರೆ ಭಾರತ ಮತ್ತು ಚೀನ 2030ರ ಹೊತ್ತಿಗೆ ವಾರ್ಷಿಕ 450 ಮಿಲಿಯನ್ ಡಾಲರ್ ಹೆಚ್ಚುವರಿ ಮೊತ್ತವನ್ನು ತೆರಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಅಂಶ ಮೊರಾಕ್ಕೋದಲ್ಲಿ ಬರುವ ನವೆಂಬರ್ ತಿಂಗಳಲ್ಲಿ ಆಗುವ ಸಮಾವೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗಲಿವೆ. ಈಗ ಎಲ್ಲ ದೇಶಗಳೂ ನಿಜವಾದ ಬದ್ಧತೆಯನ್ನು ತೋರಿಸಲೇಬೇಕಾದ ಅನಿವಾರ್ಯತೆ ಉಂಟಾಗಿದೆ; ಭೂಮಿಗೆ ಬಂದಿರುವ ಜ್ವರ ಶಮನವಾಗಲೇಬೇಕು.

Leave a Reply