‘ಯಾವುದೇ ಸಂದರ್ಭದಲ್ಲೂ ದೇಶದ ರಕ್ಷಣೆಗೆ ವಾಯುಪಡೆ ಸಿದ್ಧ…’ ಭಾರತೀಯ ವಾಯುಪಡೆ 84ನೇ ವಾರ್ಷಿಕೋತ್ಸವಕ್ಕೆ ನಮ್ಮಿಂದಲೂ ಇರಲೊಂದು ಅರಿವಿನ ಸೆಲ್ಯೂಟ್

ಡಿಜಿಟಲ್ ಕನ್ನಡ ಟೀಮ್:

ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬೆನ್ನಲ್ಲೇ ಭಾರತೀಯ ವಾಯು ಸೇನೆ ತನ್ನ 84ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡಿದೆ. ಈ ವೇಳೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, ‘ಯಾವುದೇ ಪರಿಸ್ಥಿತಿ ಎದುರಾದರೂ ದೇಶದ ರಕ್ಷಣೆಗೆ ಸನ್ನದ್ಧವಾಗಿದೆ. ನಮ್ಮ ವಾಯು ಪಡೆಯ ಕಾರ್ಯತಂತ್ರವನ್ನು ಮಾತಿನಲ್ಲಿ ಹೇಳುವುದಿಲ್ಲ.. ಸಂದರ್ಭ ಬಂದಾಗ ಮಾಡಿ ತೋರಿಸುತ್ತೇವೆ’ ಎಂದು ದೇಶದ ಜನರಿಗೆ ಅಭಯ ನೀಡಿದ್ದಾರೆ.

ಶನಿವಾರ ವಾಯು ಸೇನೆಯ ವಾರ್ಷಿಕೋತ್ಸವ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ಮಾಡಿದರು… ‘ಕಳೆದ ಎಂಟು ದಶಕಗಳಿಂದ ಭಾರತೀಯ ವಾಯು ಸೇನೆಯು ಎಂಥಹುದೇ ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸಲು ಸಿದ್ಧವಾಗಿ ವೃತ್ತಿಪರತೆಯಲ್ಲಿ ಅತ್ಯುತ್ತಮ ಬೆಳವಣಿಗೆ ಕಂಡುಕೊಳ್ಳುತ್ತಾ ಬಂದಿದೆ. ಐಎಎಫ್ ನಲ್ಲಿರುವ ಸ್ಪರ್ಧಾತ್ಮಕತೆ ಮತ್ತು ಸಾಮರ್ಥ್ಯ ದೇಶವೇ ಹೆಮ್ಮೆ ಪಡುವಂತಹದ್ದು. ವಾಯುಸೇನೆ ಆಗಸದಲ್ಲಿ ನಮ್ಮ ರಕ್ಷಣೆಯನ್ನು ಮಾಡುವುದರ ಜತೆಗೆ ವಿಪತ್ತು ಸಂದರ್ಭದಲ್ಲಿ ಮಾನವೀಯತೆಯನ್ನು ಮೆರೆಯುತ್ತಿದೆ’ ಎಂದು ರಾಷ್ಟ್ರಪತಿ ಅವರು ಸೇನೆಯ ಕಾರ್ಯವನ್ನು ಸ್ಮರಿಸಿದರು.

ಅದೇರೀತಿ ‘ಈ ವಾಯು ಸೇನಾ ದಿನಾಚರಣೆ ದಿನ ಪ್ರತಿಯೊಬ್ಬ ಹೋರಾಟಗಾರನಿಗೂ ಹಾಗೂ ಅವರ ಕುಟುಂಬದವರಿಗೂ ನಮನ ಸಲ್ಲಿಸುತ್ತೇನೆ. ನಮ್ಮ ಆಕಾಶವನ್ನು ಎದುರಾಳಿಗಳಿಂದ ರಕ್ಷಿಸುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಧೈರ್ಯ ನಮ್ಮ ಹೆಮ್ಮೆ’ ಎಂದಿದ್ದಾರೆ ಪ್ರಧಾನಿ ಮೋದಿ.

ಭಾರತೀಯ ವಾಯು ಸೇನೆಯ ಈ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ ಅದರ ಹಿನ್ನೆಲೆ ಹಾಗೂ ವಿಶೇಷತೆಗಳನ್ನು ತಿಳಿಯೋಣ ಬನ್ನಿ…

  • 1932ರ ಅಕ್ಟೋಬರ್ 8ರಂದು ರಾಯಲ್ ಏರ್ ಫೋರ್ಸ್ ಎಂಬ ಹೆಸರಿನ ಮೂಲಕ ಭಾರತೀಯ ವಾಯು ಸೇನೆ ಬ್ರಿಟೀಷರ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ಅಲ್ಲಿಂದ ತನ್ನ ಪಯಣ ಆರಂಭಿಸಿದ ವಾಯು ಸೇನೆ ಇಂದು 1500ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಒಳಗೊಂಡಿದ್ದು, ಅಮೆರಿಕ, ಚೀನ ಮತ್ತು ರಷ್ಯಾದ ನಂತರ ಅತಿದೊಡ್ಡ ವಾಯು ಪಡೆಯಾಗಿ ಬೆಳೆದು ನಿಂತಿದೆ.
  • 1945 ರ ಎರಡನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ವಾಯು ಸೇನೆ, 1947 ರಲ್ಲಿ ಭಾರತ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತದ ಸೇನೆಯ ಅಂಗವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು.ಭಾರತ ಮತ್ತು ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ವಾಯು ಸೇನೆಯ ಕಾರ್ಯ ಮಹತ್ತರದ್ದಾಗಿತ್ತು. ದೇಶ ವಿಭಜನೆಯಾದ ನಂತರ ಪಾಕಿಸ್ತಾನ ಗಡಿಯೊಳಗೆ ಮೂರು ಕಾರ್ಯಾಚರಣ ಕೇಂದ್ರಗಳಿದ್ದವು. ಅವುಗಳನ್ನು ರಾಯಲ್ ಪಾಕಿಸ್ತಾನ್ ಏರ್ ಫೋರ್ಸ್ ಹೆಸರಿನಲ್ಲಿ ಬೇರ್ಪಡಿಸಲಾಯಿತು. ಭಾರತದಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ ಹೆಸರಿನಲ್ಲೇ ಮುಂದುವರಿಯಿತು.
  • ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾಯತೀಯ ವಾಯು ಸೇನೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ವಿರುದ್ಧದ ನಾಲ್ಕು ಹಾಗೂ ಚೀನಾ ವಿರುದ್ಧದ 1 ಯುದ್ಧಗಳಲ್ಲಿ ಭಾಗವಹಿಸಿದೆ. ಕೇವಲ ಯುದ್ಧವಲ್ಲದೇ, ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈನಂತಹ ಬೇರೆ ಬೇರೆ ಕಾರ್ಯಾಚರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಅಲ್ಲದೆ ವಿಶ್ವಸಂಸ್ಥೆಯ ಶಾಂತಿಕಾಪಾಡುವ ಕಾರ್ಯದಲ್ಲಿ ಭಾರತೀಯ ವಾಯು ಸೇನೆ ಸಕ್ರಿಯವಾಗಿ ಭಾಗವಹಿಸುತ್ತಲೇ ಬಂದಿದೆ.
  • ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಇದ್ದ ವಾಯು ಸೇನೆ ಇಂದು 1.20 ಲಕ್ಷ ಸಿಬ್ಬಂದಿಗಳನ್ನು ಹೊಂದಿದೆ. ಇನ್ನು ಸುಕೋಯ್ ಸು-30ಎಂಕೆಐ, ಮಿಕೊಯನ್ ಮಿಗ್-29 (ಬಾಜ್), ಮಿರಾಜ್ 2000 (ವಜ್ರ), ತೇಜಸ್ ಸರಣಿ ಯುದ್ಧ ವಿಮಾನಗಳನ್ನು ಹೊಂದಿದ್ದು, ಇತ್ತೀಚೆಗೆ ಫ್ರಾನ್ಸ್ ಜತೆಗಿನ ಒಪ್ಪಂದದ ಮೂಲಕ ಅತ್ಯುನ್ನತ ತಂತ್ರಜ್ಞಾನದ ರಾಫೆಲ್ ಯುದ್ಧ ವಿಮಾನವನ್ನು ಹೊಂದಿದ್ದು, ಪ್ರಬಲ ವಾಯು ಸೇನಾಪಡೆಯಾಗಿ ಬೆಳೆದು ನಿಂತಿದೆ. ಈ ಯುದ್ಧ ವಿಮಾನಗಳ ಜತೆಗೆ ಬೇರೆ ಬೇರೆ ಮಾದರಿಯ ತರಬೇತಿ ವಿಮಾನ, ಯುದ್ಧ ಹೆಲಿಕಾಪ್ಟರ್ ಗಳು, ವಾಯು ಕ್ಷಿಪಣಿಗಳನ್ನು ಹೊಂದಿದೆ. ಇನ್ನು ಭವಿಷ್ಯದಲ್ಲಿ ಎಚ್ಎಎಲ್ ಹಾಗೂ ಡಿಆರ್ ಡಿಒ ಸಹಯೋಗದಲ್ಲಿ ಸ್ವದೇಶಿ ಯುದ್ಧವಿಮಾನಗಳ ನಿರ್ಮಾಣಕ್ಕೆ ಹಲವು ತಯಾರಿ ನಡೆಯುತ್ತಿವೆ.

ಹೀಗೆ 8 ದಶಕಕ್ಕೂ ಹೆಚ್ಚು ಕಾಲ ಹಂತಹಂತವಾಗಿ ಬೆಳೆಯುತ್ತಾ ದೇಶವನ್ನು ಸುರಕ್ಷಿತವಾಗಿಡಲು ಪ್ರತಿ ಕ್ಷಣವೂ ಸನ್ನದ್ಧವಾಗಿರುವ ಭಾರತೀಯ ವಾಯು ಪಡೆಗೆ ನಾವೆಲ್ಲರೂ ಧನ್ಯವಾದ ಹೇಳೋಣ…

Leave a Reply