ಸೇನೆಗೆ ಸವಲತ್ತು ಸ್ಪೂರ್ತಿ ನೀಡುವಲ್ಲಿ ನಿರತ ಗೃಹ ಸಚಿವ, ಗಡಿಗಳಲ್ಲೆಲ್ಲಾ ಮೆರೆಯುತ್ತಿದೆ ಭಾರತದ ಮಿಲಿಟರಿ ಬಲ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದ ಪರಿಸ್ಥಿತಿ ಬೆಂಕಿ ಮುಚ್ಚಿದ ಕೆಂಡದಂತಿದೆ. ಪಾಕಿಸ್ತಾನದ ಬೆಂಬಲದೊಂದಿಗೆ ಉಗ್ರರು ದೇಶದೊಳಗೆ ನುಸುಳುತ್ತಿರುವ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿ ಯೋಧರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲಿರುಳು ನಮ್ಮನ್ನು ಕಾಯುತ್ತಿದ್ದರೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿರುವ ನಮ್ಮ ಯೋಧರಿಗೆ ಹೊಸ ಉತ್ಸಾಹ ಹಾಗೂ ಆತ್ಮಸ್ಥೈರ್ಯ ತುಂಬುವ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರ ಪ್ರಯತ್ನ ನಿಜಕ್ಕೂ ಉತ್ತಮ ಹೆಜ್ಜೆ.

ಭಾರತದ ಗಡಿ ನಿಯಂತ್ರಣ ಪ್ರದೇಶಗಳಲ್ಲಿ ಭದ್ರತೆಯ ಪರಿಶೀಲನೆಗೆ ತೆರಳಿರುವ ರಾಜನಾಥ್ ಸಿಂಗ್, ಪ್ರತಿಯೊಂದು ಹಂತದಲ್ಲೂ ಯೋಧರನ್ನು ಹುರಿದುಂಬಿಸುತ್ತಿದ್ದಾರೆ. ಶನಿವಾರ ರಾಜಸ್ಥಾನದ ಮುನಾಬಾವ್ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್, ಭಾರತದ ಗಡಿಯನ್ನು ಸದೃಢವಾಗಿ ಮಾರ್ಪಡಿಸಲು ಬೇಕಾದ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ರಾಜನಾಥ್ ಸಿಂಗ್ ಅವರು ಕೇವಲ ಭರವಸೆಗಳನ್ನು ನೀಡಲಷ್ಟೇ ತಮ್ಮ ಮಾತುಗಳನ್ನು ಸೀಮಿತವಾಗಿಸಲಿಲ್ಲ. ಅವರ ಮಾತುಗಳಲ್ಲಿ ಭಾರತೀಯ ಸೇನೆಯ ಸಂಯಮ ಹಾಗೂ ಅದರ ತಾಕತ್ತನ್ನು ಒತ್ತಿ ಹೇಳುವ ಮೂಲಕ ಯೋಧರಲ್ಲಿ ಹೊಸ ಉತ್ಸಾಹ ತುಂಬಿದರು. ಈ ವೇಳೆ ಯೋಧರಿಗೆ ಸ್ಫೂರ್ತಿ ತುಂಬಿದ ರಾಜನಾಥ್ ಸಿಂಗ್ ಅವರ ಮಾತುಗಳು ಹೀಗಿದ್ದವು…

‘ನಮ್ಮದು ವಸುದೈವ ಕುಟುಬಕಂ ಎಂಬ ತತ್ವವನ್ನು ಪಾಲಿಸುವ ಸಂಸ್ಕೃತಿ. ಇಡೀ ವಿಶ್ವವೇ ಒಂದು ಕುಟುಂಬ ಎಂದು ನಂಬುತ್ತೇವೆ. ನಾವು ಬೇರೆಯವರ ಪ್ರದೇಶವನ್ನು ಅನಗತ್ಯವಾಗಿ ದಾಳಿ ಮಾಡಿ ಆಕ್ರಮಿಸಿಕೊಳ್ಳಲು ಇಚ್ಛಿಸುವುದಿಲ್ಲ. ಅಲ್ಲದೆ ನಾವಾಗಿಯೇ ಯಾರ ಮೇಲೂ ಮೊದಲು ಆಕ್ರಮಣ ಮಾಡುವುದಿಲ್ಲ. ಆದರೆ, ಬೇರೆಯವರು ನಮ್ಮನ್ನು ಅನಗತ್ಯವಾಗಿ ಕೆಣಕಿದರೆ ಸುಮ್ಮನಿರುವುದಿಲ್ಲ. ಭಾರತ ದಾಳಿ ಆರಂಭಿಸಿದರೆ, ತಮ್ಮ ಬಂದೂಕಿನಿಂದ ಎಷ್ಟು ಗುಂಡುಗಳು ಹಾರಿದವು ಎಂಬ ಲೆಕ್ಕ ಇಡುವುದಿಲ್ಲ. ಇಲ್ಲಿನ ಮರುಭೂಮಿ ಪ್ರದೇಶದ ಅತಿಯಾದ ಬಿಸಿಲಿನ ನಡುವೆಯೂ ಗಡಿ ಭದ್ರತಾ ಸಿಬ್ಬಂದಿ ನಮ್ಮ ದೇಶದ ಗಡಿ ಕಾಯುತ್ತಿರುವುದು ನಿಜಕ್ಕೂ ಶ್ಲಾಘನೀಯ.’

ಹೀಗೆ ಯೋಧರಿಗೆ ಪ್ರಶಂಸೆ ಮಾಡುತ್ತಲೇ ರಾಜನಾಥ್ ಸಿಂಗ್, ಸೇನೆ ಹಾಗೂ ಸೇನಾ ತುಕಡಿಗಳಲ್ಲಿ ಅಗತ್ಯವಿರುವ ಸೌಲಭ್ಯಗಳ ಪೂರೈಕೆಗೆ ಸೂಚನೆ ನೀಡಿದರು. ರಾಜನಾಥ್ ಸಿಂಗ್ ಸೇನೆ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಹೀಗಿತ್ತು…

ಕೆಲವು ಔಟ್ ಪೋಸ್ಟ್ ಗಳಲ್ಲಿ ಸರಿಯಾದ ದೂರವಾಣಿ ಸಂಪರ್ಕಗಳಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚು ಮೊಬೈಲ್ ಸಂಪರ್ಕ ಸೇವೆ ಕಲ್ಪಿಸಿ ಯೋಧರಿಗೆ ಮೊಬೈಲ್ ಹಾಗೂ ಸ್ಯಾಟಲೈಟ್ ಫೋನ್ ಗಳ ಸೌಲಭ್ಯ ಒದಗಿಸಲು ಒಪ್ಪಿಗೆ ನೀಡಿದರು ರಾಜನಾಥ್ ಸಿಂಗ್. ಇನ್ನು ಗಡಿ ರೇಖೆಯಲ್ಲಿ ದುರಸ್ಥಿಯಾಗಿರುವ ಗಡಿ ಬೇಲಿಯನ್ನು ತಕ್ಷಣವೇ ಸರಿಪಡಿಸಲು ಹಾಗೂ ಅವುಗಳನ್ನು ಆಗಾಗ್ಗೆ ಪರಿಶೀಲಿಸಲೂ ಸೂಚಿಸಿದ್ದಾರೆ.

ಈ ಪ್ರದೇಶದಲ್ಲಿ ಯೋಧರಿಗೆ ಕೊರತೆ ಇರುವ ಬುಲೆಟ್ ಪ್ರೂಫ್ ಜಾಕೆಟ್, ಹಾಗೂ ಮರುಭೂಮಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಶೀಘ್ರದಲ್ಲೇ ಪರಿಹಾರ ನೀಡಲು ಆದೇಶ ನೀಡಿದ್ದಾರೆ. ಈ ಪ್ರದೇಶದಲ್ಲಿರುವ ಸೇನಾ ಔಟ್ ಪೋಸ್ಟ್ ಗಳಿಗೆ ಪೈಪ್ ಲೈನ್ ಮೂಲಕ ನೀರು ಒದಗಿಸುವುದಾಗಿ ಹೇಳಿದರು. ಅಲ್ಲದೆ ಬಿಸಿಲಿನ ತಾಪದಲ್ಲಿ ಯೋಧರಿಗೆ ಭಾರಿ ಗಾತ್ರದ ಸಮವಸ್ತ್ರಗಳನ್ನು ಧರಿಸುವುದು ಸಮಸ್ಯೆಯಾಗಿದ್ದು ಇದಕ್ಕೂ ಸದ್ಯದಲ್ಲೇ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಹೀಗೆ ಮಾತಿನ ಮೂಲಕ ಉತ್ಸಾಹ ಹೆಚ್ಚಿಸುವುದರ ಜತೆಗೆ ಯೋಧರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರಾಜನಾಥ್ ಸಿಂಗ್ ಅವರು ಭಾರತದ ಗಡಿ ಕಾಯುತ್ತಿರುವ ಯೋಧರಿಗೆ ಸ್ಪಂದಿಸಿದ ರೀತಿ ಗಮನಾರ್ಹ.

Leave a Reply