ಖಿನ್ನತೆ ಆಘಾತದಲ್ಲಿ ತತ್ತರಿಸಿದ್ದ ಆಕೆಯ ಬದುಕಿಗೆ ಜೀವಂತಿಕೆಯ ಪುಕ್ಕ ಕಟ್ಟಿತು ಈ ಪುಟ್ಟ ಪಕ್ಷಿ!

ಡಿಜಿಟಲ್ ಕನ್ನಡ ಟೀಮ್:

ಭೂಮಿಯ ಮೇಲೆ ಮನುಷ್ಯ ಮತ್ತು ಪ್ರಾಣಿಯ ನಡುವಣ ಸಂಘರ್ಷವನ್ನು ನಾವು ನೋಡುತ್ತಾ ಟೀಕಿಸುತ್ತಲೇ ಬಂದಿದ್ದೇವೆ. ಅದೇರೀತಿ ಪ್ರಾಣಿ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಹೊಂದುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ, ಓದಿದ್ದೇವೆ ಹಾಗೂ ಕೇಳಿದ್ದೇವೆ. ಇಂತಹ ಅಪರೂಪದ ಸಂಬಂಧಗಳ ಬೆಸುಗೆಯ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಪ್ರಾಣಾಪಾಯದಿಂದ ಪಾರು ಮಾಡಿದ ವ್ಯಕ್ತಿಯ ಜತೆಗೆ ಒಂದು ಪೆಂಗ್ವಿನ್ ಹೊಂದಿದ್ದ ಅನ್ಯೋನ್ಯ ಸಂಬಂಧವನ್ನು ನಾವೇ ನಿಮಗೆ ಹೇಳಿದ್ದೆವು. ಈಗಲೂ ನಾವು ಅಂತಹುದೇ ಅಂತಹುದೇ ಒಂದು ಸ್ಫೂರ್ತಿದಾಯಕ ಸಂಬಂಧದ ಕತೆಯನ್ನು ಹೇಳುತ್ತಿದ್ದೇವೆ.

ಮ್ಯಾಗ್ಪೈ (ಪೆಂಗ್ವಿನ್ ರೀತಿಯ ಪಕ್ಷಿ) ಎಂಬ ಪಕ್ಷಿ ಜತೆಗಿನ ಸ್ನೇಹ ಸಂಬಂಧದ ಪರಿಣಾಮ ಪಾರ್ಶ್ವವಾಯುವಿಗೆ ಸಿಲುಕಿ ಖಿನ್ನತೆ ಎದುರಿಸಿದ್ದ ಮಹಿಳೆಯ ಜೀವನ ಹಾಗೂ ಆಕೆಯ ಕುಟುಂಬದಲ್ಲಿ ಹೊಸ ಚೈತನ್ಯ ಮೂಡಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾದ ಘಟನೆಯೇ ಇದು. ಹೌದು, ಸ್ಯಾಮ್ ಬ್ಲೂಮ್ ಎಂಬಾಕೆಯ ಬಾಳಿನಲ್ಲಿ ಹೊಸ ಉತ್ಸಾಹ, ಸ್ಫೂರ್ತಿಯ ಚಿಲುಮೆಯಾದ ಹೆಗ್ಗಳಿಕೆ ಈ ಪಕ್ಷಿಯದು… ಸ್ಯಾಮ್ ಜೀವನದಲ್ಲಿ ಏನಾಯ್ತು… ಈ ಪಕ್ಷಿ ಆಕೆಯ ಜೀವನದಲ್ಲಿ ಹೊಸ ಉತ್ಸಾಹ ತುಂಬಿದ್ದು ಹೇಗೆ? ಎಂಬ ವಿವರಗಳು ಇಲ್ಲಿವೆ ನೋಡಿ…

ಆಸ್ಟ್ರೇಲಿಯಾದ ಸ್ಯಾಮ್ ಬ್ಲೂಮ್ ಮತ್ತು ಆಕೆಯ ಪತಿ ಕೆಮರೂನ್ ಬ್ಲೂಮ್ ದಂಪತಿಯು 2013ರ ಜನವರಿಯಲ್ಲಿ ತಮ್ಮ ಮೂವರು ಮಕ್ಕಳೊಂದಿಗೆ ಥಾಯ್ಲೆಂಡಿಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ತಂಗಿದ್ದ ಹೊಟೇಲಿನ ಮಹಡಿ ಮೇಲೆ ನಿಂತು ಪ್ರಕೃತಿ ಸೌಂದರ್ಯ ಅನುಭವಿಸುವ ಉತ್ಸಾಹದಲ್ಲಿ ಮೈಮರೆತ ಸ್ಯಾಮ್ 2ನೇ ಮಹಡಿಯಿಂದ ಕೆಳಗೆ ಬಿದ್ದರು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಯಾಮ್ ಪಾರ್ಶ್ವವಾಯುವಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಪಾರ್ಶ್ವವಾಯುವಿನ ಪರಿಣಾಮದಿಂದಾಗಿ ಸ್ಯಾಮ್ ತಮ್ಮ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ಸ್ವಾದೀನ ಕಳೆದುಕೊಂಡಿತು. ಈಕೆ ಅಪಘಾತಕ್ಕೆ ಸಿಲುಕಿದ ನಂತರ ಮೊದಲ ಬಾರಿಗೆ ಪ್ರಜ್ಞೆ ಬಂದ ನಂತರ ಆಕೆ ವೈದ್ಯರನ್ನು ಕೇಳಿದ್ದು ನಾನು ಮತ್ತೆ ಮೊದಲಿನ ಹಾಗೇ ನಡೆಯಬಲ್ಲೆನೇ ಎಂದು. ಆಕೆಯ ಈ ಪ್ರಶ್ನೆಗೆ ಇಲ್ಲ ಎಂಬ ಉತ್ತರವನ್ನು ಸ್ವೀಕರಿಸಲು ಸ್ಯಾಮ್ ನಿಂದ ಸಾಧ್ಯವಾಗಲಿಲ್ಲ.

sam bloom 2

ತನ್ನ ಜೀವನದಲ್ಲಿ ಇಷ್ಟುದಿನಗಳ ಕಾಲ ಸ್ವಿಮ್ಮಿಂಗ್, ಸರ್ಫಿಂಗ್ ಮತ್ತು ಕಯೋಕಿಂಗ್ ಮಾಡುತ್ತಾ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಸ್ಯಾಮ್ ಏಕಾಏಕಿ ಗಾಲಿ ಕುರ್ಚಿ ಅವಲಂಬಿಸುವ ಪರಿಸ್ಥಿತಿ ಎದುರಾದಾಗ ಆಕೆಗೆ ಅದನ್ನು ಸಹಿಸಲು ಸಾಧ್ಯವಾಗಲೇ ಇಲ್ಲ. ಪರಿಣಾಮ ತನ್ನ ಜೀವನವನ್ನು ಇದೇ ವೀಲ್ ಚೇರ್ ಮೇಲೆ ಕಳೆಯಬೇಕಲ್ಲ ಎಂಬ ಬೇಸರದಿಂದ, ಆ ಅಪಘಾತದಲ್ಲಿ ತನ್ನ ಪ್ರಾಣವೇ ಹೋಗಿದ್ದರೆ ಎಷ್ಟೋ ಚೆನ್ನಾಗಿರ್ತಿತ್ತು ಎಂಬ ಭಾವನೆಯಲ್ಲೇ ಮುಳುಗಿದಳು.

ಕ್ರಮೇಣ ಸ್ಯಾಮ್ ಖಿನ್ನತೆಗೆ ಜಾರಿದಳು. ಹೀಗೆ ಸ್ಯಾಮ್ ತನ್ನ ಜೀವನದ ಮೇಲೆ ಆಸಕ್ತಿ ಕಳೆದುಕೊಂಡ ಸಂದರ್ಭದಲ್ಲಿ ಅನಿರೀಕ್ಷಿತ ತಿರುವೊಂದು ಪಡೆಯಿತು. ಒಂದು ದಿನ ಸ್ಯಾಮ್ ತನ್ನ ಮಕ್ಕಳೊಂದಿಗೆ ಹೊರಗೆ ಹೋಗಿ ಮನೆಗೆ ಮರಳುವಾಗ ಅತಿಯಾದ ಗಾಳಿಯಿಂದಾಗಿ ಮರದ ಮೇಲಿದ್ದ ಗೂಡಿನಿಂದ ಮ್ಯಾಗ್ಪೈ ಪಕ್ಷಿಯ ಮರಿಯೊಂದು ಕೆಳಗೆ ಬಿದ್ದಿತ್ತು. ಸ್ಯಾಮ್ ಕಿರಿಯ ಮಗ ಅದನ್ನು ನೋಡಿದ ನಂತರ ಆ ಪಕ್ಷಿಯ ಮರಿಯನ್ನು ಮನೆಗೆ ಕರೆದೊಯ್ದರು. ಆರಂಭದಲ್ಲಿ ಈ ಪಕ್ಷಿಯ ರೆಕ್ಕೆ ಮುರಿದಿದೆ ಎಂದು ಭಾವಿಸಿದ್ದ ಸ್ಯಾಮ್ ಕುಟುಂಬದವರಿಗೆ ಮೂರು ತಿಂಗಳ ನಂತರ ಈ ಪಕ್ಷಿ ಹಾರಾಟ ನಡೆಸುವ ಮೂಲಕ ಅಚ್ಚರಿ ಮೂಡಿಸಿತು. ಇನ್ನು ಈ ಪಕ್ಷಿ ಪೆಂಗ್ವಿನ್ ನಂತೆ ಕಾಣುವ ಕಾರಣ ಈ ಪಕ್ಷಿಯನ್ನು ಸ್ಯಾಮ್ ಕುಟುಂಬ ‘ಪೆಂಗ್ವಿನ್’ ಅಂತಲೇ ಕರೆಯಲಾರಂಭಿಸಿದರು. ಇವರು ಈ ಪಕ್ಷಿಯನ್ನು ತಮ್ಮ ಮನೆಯಲ್ಲೇ ಕೇವಲ ಒಂದು ಪ್ರಾಣಿಯನ್ನು ಸಾಕುವಂತೆ ಸಾಕಲಿಲ್ಲ. ಬದಲಿಗೆ ತಮ್ಮ ಮನೆಯ ಸದಸ್ಯನನ್ನಾಗಿ ಪರಿಗಣಿಸಿದರು. ಆರಂಭದಲ್ಲಿ ಸ್ಯಾಮ್ ತೊಡೆಯ ಮೇಲೆ ಕೂತು ಆಡುತ್ತಿದ್ದ ಪೆಂಗ್ವಿನ್ ಕ್ರಮೇಣ ಎಲ್ಲರ ಜತೆ ಬೆರೆಯುತ್ತಾ ಊಟ, ಆಟ, ನಿದ್ದೆ ಎಲ್ಲವೂ ಮನೆಯಲ್ಲೇ ಆಗುವ ಮಟ್ಟಿಗೆ ಬೆರೆತುಹೋಯಿತು. ಅದೂ ಎಷ್ಟರ ಮಟ್ಟಿಗೆ ಅಂದರೆ ಕೆಲವೊಮ್ಮೆ ಮನೆ ಸದಸ್ಯರ ಪಕ್ಕದಲ್ಲೇ ಹಾಸಿಗೆಯ ಮೇಲೆ ಪೆಂಗ್ವಿನ್ ಮಲಗುತ್ತಿತ್ತು. ಹೀಗೆ ಈ ಪಕ್ಷಿ ಜತೆಗೆ ಹೊಸ ಬಾಂಧವ್ಯ ಬೆಳೆಸಿಕೊಂಡ ಸ್ಯಾಮ್ ತಮ್ಮ ಖಿನ್ನತೆಯಿಂದ ಕ್ರಮೇಣವಾಗಿ ಹೊರಬಂದರು.

ಹೀಗೆ ಪೆಂಗ್ವಿನ್ ದೊಡ್ಡದಾದ ನಂತರ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಯಿತು. ಆಗ ಮನೆಯ ಸದಸ್ಯರೆಲ್ಲರೂ ಪೆಂಗ್ವಿನ್ ಬೆಳೆದಿದ್ದಾಯ್ತು, ತನ್ನ ಮುಂದಿನ ಜೀವನವನ್ನು ತನಗೆಬೇಕಾದಂತೆ ಬದುಕಲು ಹಾರಿಹೋಗಿದೆ ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ, ನಾಲ್ಕು ತಿಂಗಳ ಬಳಿಕ ಸ್ಯಾಮ್ ಕಿರಿಯ ಮಗನ ಹುಟ್ಟುಹಬ್ಬದ ದಿನ ಮತ್ತೆ ಮನೆಗೆ ಆಗಮಿಸಿದ ಪೆಂಗ್ವಿನ್ ಎಲ್ಲರ ಮುಖದಲ್ಲು ಅಚ್ಚರಿ ಹಾಗೂ ಸಂತೋಷವನ್ನು ತಂದಿತು. ನಂತರ ಎಂಟು ತಿಂಗಳು ಕಾಲ ಮನೆಯವರ ಜತೆಯಲ್ಲೇ ಉಳಿಯುವ ಪೆಂಗ್ವಿನ್ ಆಗಾಗ್ಗೆ ತನ್ನ ಬೇರೆ ಪ್ರಪಂಚವನ್ನೊಮ್ಮೆ ಸುತ್ತಿ ಮತ್ತೆ ಈ ಸ್ಯಾಮ್ ಕುಟುಂಬದ ಪ್ರಪಂಚಕ್ಕೆ ಮರಳುತ್ತದೆ. ಈ ಪೆಂಗ್ವಿನ್ ಜತೆಗಿನ ಸ್ನೇಹವನ್ನು ತೀರಾ ಹಚ್ಚಿಕೊಂಡ ಸ್ಯಾಮ್, ತನ್ನೆಲ್ಲಾ ಭಾವನೆಗಳನ್ನು ಅದರೊಂದಿಗೆ ಹಂಚಿಕೊಂಡಿದ್ದಾಳೆ. ಸ್ಯಾಮ್ ಹೇಳುವ ಪ್ರಕಾರ, ತನ್ನ ಪತಿ ಕೆಮರೂನ್ ಗಿಂತ ಪೆಂಗ್ವಿನ್ ಜತೆಗೆ ಹೆಚ್ಚು ತನ್ನ ಭಾವನೆಯನ್ನು ಹಂಚಿಕೊಂಡಿದ್ದಾಳಂತೆ. ಕೆಮರೂನ್ ಗೆ ಗೊತ್ತಿರದ ವಿಚಾರವೆಲ್ಲವೂ ಈ ಪೆಂಗ್ವಿನ್ ಗೆ ಗೊತ್ತಿದೆಯಂತೆ.

sam bloom 3

ಹೀಗೆ ಪೆಂಗ್ವಿನ್ ಜತೆಗಿನ ಸ್ನೇಹದ ನಂತರ ಮತ್ತೆ ಜೀವನದಲ್ಲಿ ಹೊಸ ಉತ್ಸಾಹ ಕಂಡುಕೊಂಡ ಸ್ಯಾಮ್ ಮತ್ತೆ ತನ್ನ ಕಯಾಕಿಂಗ್ ಅಭ್ಯಾಸ ಆರಂಭಿಸಿದಳು. ಅಲ್ಲದೆ ಸ್ಯಾಮ್ ಆಸ್ಟ್ರೇಲಿಯಾದ ವಿಕಲಚೇತನ ಕಯಾಕಿಂಗ್ ತಂಡದ ಭಾಗವಾದಳು. ಆ ಮೂಲಕ ಖಿನ್ನತೆಯಿಂದ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದ ಸ್ಯಾಮ್ ಬಾಳಲ್ಲಿ ಈ ಪೆಂಗ್ವಿನ್ ಮಹತ್ತರ ಬದಲಾವಣೆಯನ್ನು ತಂದಿತ್ತು.

ಹಲವು ವರ್ಷಗಳ ಈ ಮಧುರ ಸಂಬಂಧದ ಅಪೂರ್ವ ಕ್ಷಣಗಳನ್ನು ಸ್ಯಾಮ್ ಪತಿ ಕೆಮರೂನ್ ಬ್ಲೂಮ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈವರೆಗೂ ಕೆಮರೂನ್ ಪೆಂಗ್ವಿನ್ ಕುಟುಂಬದ ಸದಸ್ಯನಾಗಿರುವ ಕ್ಷಣಗಳನ್ನು ಬರೋಬ್ಬರಿ 14 ಸಾವಿರ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ. ಈ ಚಿತ್ರಗಳನ್ನು ಹಾಗೂ ಸ್ಯಾಮ್ ಬದುಕಿನ ಹಾದಿ ಹಾಗೂ ಅದರಲ್ಲಿ ಪೆಂಗ್ವಿನ್ ಪಾತ್ರ ಎಲ್ಲವನ್ನು ವಿವರಿಸಿ ಲೇಖಕ ಬ್ರಾಡ್ಲೆ ಕ್ರೆವೊರ್ ಗ್ರೀವ್ ‘ಪೆಂಗ್ವಿನ್ ಬ್ಲೂಮ್’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಅಲ್ಲದೆ ಈ ಪೆಂಗ್ವಿನ್ ಹೆಸರಲ್ಲಿ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದು, ಸಾವಿರಾರು ಜನರು ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಆ ಮೂಲಕ ಪೆಂಗ್ವಿನ್ ಸೆಲೆಬ್ರಿಟಿಯಾಗಿದೆ. ಒಟ್ಟಿನಲ್ಲಿ ಸ್ಯಾಮ್ ಅಪಘಾತಕ್ಕೆ ಸಿಲುಕಿದ ನಂತರ ಅವರ ಕುಟುಂಬಕ್ಕೆ ಕತ್ತಲು ಆವರಿಸಿದ್ದ ಸಂದರ್ಭದಲ್ಲಿ ಅವರ ಬದುಕಿಗೆ ಬೆಳಕಾಗಿದ್ದು ಈ ಮ್ಯಾಗ್ಪೈ ಎಂಬುದನ್ನು ಸ್ವತಃ ಕೆಮರೂನ್ ಒಪ್ಪುತ್ತಾರೆ.

ಪೆಗ್ವಿನ್ ಬ್ಲೂಮ್ ಪುಸ್ತಕದ ಬಗೆಗಿನ ಪ್ರಚಾರದ ವಿಡಿಯೋ ಇಲ್ಲಿದೆ ನೋಡಿ…

Leave a Reply