ಡಿಜಿಟಲ್ ಕನ್ನಡ ಟೀಮ್:
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಮುಂದುವರಿದಿದೆ. ಆದರೆ ಅಹೋರಾತ್ರಿ ಎಚ್ಚರ ವಹಿಸಿರುವ ಭದ್ರತಾ ಪಡೆಗಳಿಂದಾಗಿ ಅವರ ಆಟಾಟೋಪಗಳು ಅತಿಯಾಗಿ ನಡೆಯುತ್ತಿಲ್ಲ.
ಸೋಮವಾರ ಬೆಳಗ್ಗೆ 6ರ ಸುಮಾರಿಗೆ ಪ್ಯಾಂಪೋರ್ ನಲ್ಲಿ ಗುಂಡಿನ ಶಬ್ದಗಳು ಕೇಳಿಬಂದವು. ಅಲ್ಲಿನ ನವ ಉದ್ಯಮಿಗಳಿಗೆ ಮೀಸಲಾಗಿರುವ ಕಟ್ಟಡದಲ್ಲಿ ಇಬ್ಬರು ಉಗ್ರರು ಹೊಕ್ಕಿರುವ ಮಾಹಿತಿ ಇದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿ ಅವರನ್ನು ನಿಗ್ರಹಿಸುವುದಕ್ಕೆ ಸೇನೆಯು ತೊಡಗಿಕೊಂಡಿದೆ.
ಈ ಪ್ರಕ್ರಿಯೆಯಲ್ಲಿ ಒಬ್ಬ ಯೋಧನಿಗೆ ಗಾಯಗಳಾಗಿವೆ. ಕಟ್ಟಡವನ್ನು ಸುತ್ತುವರಿದಿರುವ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಏಳು ಅಂತಸ್ತು ಹಾಗೂ ಸುಮಾರು 50 ಕೊಠಡಿಗಳಿರುವ ಕಟ್ಟಡದಲ್ಲಿ ಇನ್ಯಾರೆಲ್ಲ ಇದ್ದಾರೆ ಎಂಬ ಮಾಹಿತಿಗಳು ಲಭ್ಯವಿಲ್ಲ. ಆದರೆ ಉಗ್ರರು ಇಬ್ಬರೇ ಎಂದು ಅಂದಾಜಿಸಲಾಗಿದೆ.
ಕಟ್ಟಡವನ್ನು ಪ್ರವೇಶಿಸುತ್ತಲೇ ಅದರ ಒಂದು ಭಾಗವನ್ನು ಬೆಂಕಿಗೆ ಒಡ್ಡಿದ ಉಗ್ರರು ನಂತರ ಗುಂಡಿನ ಚಕಮಕಿ ಶುರುಮಾಡಿದ್ದಾರೆ. ಇದು ಪ್ರಾರಂಭದಲ್ಲಿ ಗಮನ ಸೆಳೆಯುವ ಪ್ರಕ್ರಿಯೆ ಆಗಿತ್ತು.
ಇತ್ತ, ಸಾಧ್ಯವಾದಾಗಲೆಲ್ಲ ಇಬ್ಬರು-ಮೂವರು ಉಗ್ರರನ್ನು ನುಗ್ಗಿಸುತ್ತಿರುವ ಪಾಕಿಸ್ತಾನಿ ಸೇನೆಯು, ಅತ್ತ ತನ್ನ ನೆಲದಲ್ಲಿ ಉಗ್ರ ಹಫೀಜ್ ಸಯೀದ್ ಗೆ ಹೆಚ್ಚಿನ ರಕ್ಷಣೆ ನೀಡಿ ನಗರ ಪ್ರದೇಶದಿಂದ ಬೇರೆಡೆ ಸ್ಥಳಾಂತರಿಸಿರುವ ಮಾಹಿತಿ ಬಂದಿದೆ. ಪಾಕಿಸ್ತಾನದ ಉಗ್ರ ನಾಯಕರನ್ನೇ ಗುರಿಯಾಗಿಸಿಕೊಂಡು ಭಾರತವು ಪಾಕ್ ನೆಲದಲ್ಲಿ ಇನ್ನೊಂದು ರಹಸ್ಯ ಕಾರ್ಯಾಚರಣೆ ಮಾಡೀತು ಎಂಬ ಆತಂಕವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ಯಾಂಪೋರ್ ಈ ಹಿಂದೆಯೂ ದಾಳಿಗಳಿಗೆ ತುತ್ತಾಗಿದೆ. ಜೀಲಂ ನದಿಗೆ ಹೊಂದಿಕೊಂಡಂತೆ ಇರುವ ಪ್ರದೇಶವಿದು.